ಏರುತ್ತಿರುವ ಪೆಟ್ರೋಲ್ ಬೆಲೆಗೆ ಬೇಸತ್ತು ಮೋಟಾರ್ ಸೈಕಲನ್ನು ಎಲೆಕ್ಟ್ರಿಕ್ ಬೈಕ್ ಮಾಡಿದ ವ್ಯಕ್ತಿ: ಈಗ ಕೇವಲ 10 ರೂ.ಗೆ 50 ಕಿಮೀ ಚಲಿಸುತ್ತದೆ!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿದೆ. ಅವುಗಳ ದುಬಾರಿ ಬೆಲೆಯು ಆಕಾಶವನ್ನು ಮುಟ್ಟುವಂತಿದೆ. ಇಂದು ಜನರ ಪರಿಸ್ಥಿತಿ ಹೇಗಿದೆಯೆಂದರೆ 80 ಪೈಸೆ ಸಂಪಾದನೆ ಮಾಡಿದರೆ ಒಂದು ರೂಪಾಯಿ ಖರ್ಚು ಮಾಡುವಂತಾಗಿದೆ. ಪೆಟ್ರೋಲ್ ನ ಏರುತ್ತಿರುವ ಬೆಲೆಯಿಂದ ಬೇಸತ್ತ ತೆಲಂಗಾಣದ ಕುರಪತಿ ವಿದ್ಯಾಸಾಗರ್ ಎನ್ನುವವರು ತಮ್ಮ ಪೆಟ್ರೋಲ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ವಾಸ್ತವವಾಗಿ ವಿದ್ಯಾಸಾಗರ್ ಅವರ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ, ಅದರ ನಡುವೆ ಲಾಕ್ ಡೌನ್ ಆದ ಮೇಲೆ ಕುಟುಂಬದ ಅಗತ್ಯಗಳನ್ನು ಪೂರೈಸುವುದು ಅವರಿಗೆ ಇನ್ನಷ್ಟು ಕಷ್ಟವಾಗಿತ್ತು. ಈ ಸಂಕಷ್ಟದ ನಡುವೆ ನಿರಂತರವಾಗಿ ಏರುತ್ತಿರುವ ಪೆಟ್ರೋಲ್ ಬೆಲೆಯು ಅವರಿಗೆ ಇನ್ನಷ್ಟು ಸಮಸ್ಯೆಯನ್ನು ತಂದೊಡ್ಡಿತು. ಏಕೆಂದರೆ ಕೆಲಸದ ನಿಮಿತ್ತ ಪ್ರತಿದಿನ ಅವರ ಬೈಕ್ ಗೆ ಎರಡು ಲೀಟರ್ ಪೆಟ್ರೋಲ್ ಅವಶ್ಯಕತೆಯಿತ್ತು.

ಯಾವಾಗ ತೈಲ ಬೆಲೆಯು ಏರಲು ಪ್ರಾರಂಭಿಸಿತೋ ಆಗ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿರುವುದನ್ನು ಕಂಡು ಅವರು ತಮ್ಮ ರಿಪೇರಿಂಗ್ ಸೆಂಟರನ್ನು ಮುಚ್ಚುವ ನಿರ್ಧಾರವನ್ನು ಮಾಡಿದರು. ಆದರೆ ಕೆಲವೇ ದಿನಗಳಲ್ಲಿ ಅದನ್ನು ಬಿಟ್ಟು ತನಗೆ ಬೇರೆ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಅವರು ಅರಿತುಕೊಂಡರು. ನಂತರ ಕಡಿಮೆ ಖರ್ಚಿನಲ್ಲಿ ಬೈಕನ್ನು ಓಡಿಸಲು ಏನಾದರೂ ಉಪಾಯವಿದೆಯೇ ಎನ್ನುವುದರ ಕುರಿತಾಗಿ ಆಲೋಚನೆ ಮಾಡಲು ಪ್ರಾರಂಭಿಸಿದರು. ಅವರ ಅಂತಹ ಆಲೋಚನೆಯ ಫಲವಾಗಿ ಅವರು ಕಂಡುಕೊಂಡ ಮಾರ್ಗ, ಮಾಡಿದಂತಹ ಕೆಲಸ ಮಾಧ್ಯಮಗಳಲ್ಲಿ ಸುದ್ದಿಯಾಯಿತು.

ವಿದ್ಯಾಸಾಗರ್ ಅವರು ಹೇಗೋ ಕಷ್ಟಪಟ್ಟು ಒಂದಷ್ಟು ಹಣವನ್ನು ಸಂಗ್ರಹಿಸಿ ತಮ್ಮ ಮೋಟಾರ್ಸೈಕಲ್ ಅನ್ನು ಎಲೆಕ್ಟ್ರಿಕ್ ಬೈಕಾಗಿ ಪರಿವರ್ತಿಸುವ ಯಂತ್ರವೊಂದನ್ನು ಖರೀದಿ ಮಾಡಿದರು. ಈ ಯಂತ್ರವನ್ನು ಅವರು 7500 ರೂಪಾಯಿಗಳನ್ನು ಕೊಟ್ಟು ಆನ್ ಲೈನ್ ನಲ್ಲಿ ಖರೀದಿಸಿದರು. ಆ ಯಂತ್ರವನ್ನು ಬೈಕ್ ಇದೆ ಪೆಟ್ರೋಲ್ ಟ್ಯಾಂಕ್ ನ ಕೆಳಗಡೆ ಅಳವಡಿಸಲಾಗಿದೆ ಅದಕ್ಕೆ 30 ಎಂಎಎಸ್ ಬ್ಯಾಟರಿಯನ್ನು ಸೇರಿಸಲಾಗಿದೆ. ವಿದ್ಯಾಸಾಗರ್ ಅವರು ಬ್ಯಾಟರಿಯನ್ನು ಐದು ಗಂಟೆಗಳ ಕಾಲ ಚಾರ್ಜ್ ಮಾಡುತ್ತಾರೆ. ಇದಕ್ಕಾಗಿ ಒಂದು ಯೂನಿಟ್ ವಿದ್ಯುತ್ ಖರ್ಚಾಗುತ್ತದೆ ಎಂದು ವಿದ್ಯಾಸಾಗರ್ ಹೇಳುತ್ತಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತಾ ವಿದ್ಯಾಸಾಗರ್ ಅವರು ತಮ್ಮ ಬೈಕನ್ನು ಒಂದು ಸಲ ಚಾರ್ಜ್ ಮಾಡಿದರೆ ಅದರಿಂದ ಐವತ್ತು ಕಿಲೋಮೀಟರ್ ದೂರವನ್ನು ಕ್ರಮಿಸಸಬಹುದು ಎಂದು ಹೇಳಿದ್ದಾರೆ. ಅವರು ಈ ಬೈಕನ್ನು ಸಿದ್ದಪಡಿಸಲು ಮೋಟಾರ್ ವಾಹನ ಮೆಕ್ಯಾನಿಕ್ ಆಗಿರುವ ಅವರ ಗೆಳೆಯ ಅನಿಲ್ ಅವರಿಗೆ ಬಹಳ ಸಹಾಯವನ್ನು ಮಾಡಿದರು ಎಂದು ನೆನಪಿಸಿಕೊಳ್ಳುತ್ತಾರೆ. ಮತ್ತೊಂದು ಒಳ್ಳೆಯ ವಿಷಯ ಏನೆಂದರೆ ಬೈಕ್ ಚಾಲನೆಯಲ್ಲಿರುವಾಗ ಡೈನಮೋಗಳ ಸಹಾಯದಿಂದ ಬ್ಯಾಟರಿ ತನ್ನಷ್ಟಕ್ಕೆ ತಾನೇ ಚಾರ್ಜ್ ಆಗುತ್ತದೆ.

ವಿದ್ಯಾಸಾಗರ್ ಅವರು ಈ ಹಿಂದೆ ಪ್ರತಿದಿನ ಪೆಟ್ರೋಲ್ ಗಾಗಿ ಇನ್ನೂರು ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರು. ಆದರೆ ಈಗ ಅದು ಪ್ರತಿ ಯೂನಿಟ್ ಗೆ 10 ರೂಪಾಯಿಗಳಿಗೆ ಇಳಿದಿದೆ. ವಿದ್ಯಾಸಾಗರ್ ಅವರಿಗೆ ಸರ್ಕಾರ ಅಥವಾ ಚಾರಿಟಬಲ್ ಟ್ರಸ್ಟ್ ಗಳು ಸಹಾಯವನ್ನು ಮಾಡಬೇಕು ಎಂದು ಸಾರ್ವಜನಿಕರು ಹೇಳುತ್ತಾರೆ. ವಿದ್ಯಾಸಾಗರ್ ಅವರು ತಮ್ಮ ಬಜಾಜ್ ಡಿಸ್ಕವರಿ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತನೆ ಮಾಡಿಕೊಂಡು ಬಳಸುತ್ತಿದ್ದಾರೆ. ಅವರ ಈ ಸಾಧನೆ ಎಲ್ಲರ ಗಮನ ಸೆಳೆದಿದೆ.