4 ಜನ ಸ್ನೇಹಿತರು ಖರೀದಿಸಿದ್ದರು 100 ವರ್ಷ ಹಳೆಯ ಹಾಳಾದ ಬಂಗಲೆ: ಈಗ ಅಲ್ಲಿ ಉಳಿಯಲು 1 ರಾತ್ರಿಗೆ ಜನ 1 ಲಕ್ಷ ಬಾಡಿಗೆ ನೀಡುತ್ತಾರೆ!
ದೃಢ ವಿಶ್ವಾಸದಿಂದ ನಂಬಿಕೆ ಇಟ್ಟು ಶ್ರಮ ವಹಿಸಿದರೆ ಕಲ್ಲನ್ನು ಕೂಡಾ ಅಂದವಾದ ಶಿಲ್ಪವನ್ನಾಗಿ ಮಾಡಬಹುದು ಹಾಗೂ ಮಣ್ಣಿನಿಂದ ಬಂಗಾರವನ್ನು ಪಡೆಯಬಹುದು ಎನ್ನುವ ಮಾತುಗಳನ್ನು ನಾವೆಲ್ಲರೂ ಕೇಳಿದ್ದೇವೆ. ಇಂಟೀರಿಯರ್ ಡಿಸೈನರ್ ಡೀನ್ ಶಾರ್ಪ್ ಅವರ ವಿಚಾರದಲ್ಲಿ ಈ ಮಾತುಗಳು ಅಕ್ಷರಶಃ ಸತ್ಯ ಎಂದು ಹೇಳಬಹುದಾಗಿದೆ. ಡೀನ್ ಶಾರ್ಪ್ ಅವರಿಗೆ ಅರಣ್ಯದಲ್ಲಿ ಹಾಳು ಬಿದ್ದ, ಸ್ಮಾರಕದಂತೆ ಆಗಿದ್ದ ಒಂದು ಹಳೆಯ ಬಂಗಲೆಯು ಬಹಳಷ್ಟು ಆಕರ್ಷಣೀಯವಾಗಿ ಕಂಡಿತ್ತು. ಅವರು ತನ್ನನ್ನು ಆಕರ್ಷಿಸಿದ ಆ ಪುರಾತನ ಸ್ಮಾರಕ ದಂತಹ ಬಂಗಲೆಯನ್ನು ಖರೀದಿಸಲು ನಿರ್ಧಾರವೊಂದನ್ನು ಮಾಡಿದರು. ತಮ್ಮ ಮೂರು ಜನ ಸ್ನೇಹಿತರ ಜೊತೆಗೆ ಸೇರಿಸಿಕೊಂಡು ಆ ಹಳೆಯದಾದ ಬಂಗಲೆಯನ್ನು ಖರೀದಿ ಮಾಡಿದರು. ಡೀನ್ ಶಾರ್ಪ್ ಮತ್ತು ಅವರ ಸ್ನೇಹಿತರು ಈ ಬಂಗಲೆಯನ್ನು ಖರೀದಿ ಮಾಡಿದಾಗ ಬಹಳಷ್ಟು ಜನರು ಅವರು ಜೀವನದಲ್ಲಿ ಮಾಡಿದಂತಹ ಬಹು ದೊಡ್ಡ ತಪ್ಪು ನಿರ್ಣಯ ಆ ಬಂಗಲೆಯನ್ನು ಖರೀದಿ ಮಾಡಿದ್ದು ಎಂದು ಟೀಕಿಸಿದರು.
ಡೀನ್ ಶಾರ್ಕ್ ಮತ್ತು ಅವರ ಸ್ನೇಹಿತರು ಜನರ ಮಾತಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ತಾವು ಖರೀದಿಸಿದ ಬಂಗಲೆಯನ್ನು ದುರಸ್ತಿ ಮಾಡಿಸಲು ತೀರ್ಮಾನಿಸಿ, ನವೀಕರಣದ ಮೂಲಕ ಅದಕ್ಕೆ ಹೊಸ ರೂಪವನ್ನು ನೀಡಿದರು. ಈಗ ನಾಲ್ಕು ವರ್ಷಗಳ ನಂತರ ಆ ಬಂಗಲೆಯಲ್ಲಿ ಒಂದು ರಾತ್ರಿ ಕಳೆಯಲು ಜನರು ಒಂದು ಲಕ್ಷ ರೂಪಾಯಿ ನೀಡಲು ಸಿದ್ಧರಾಗಿದ್ದಾರೆ. ಈ ಐಷಾರಾಮಿ ಮ್ಯಾನ್ಷನ್ ಶ್ರೀಲಂಕಾದ ವೆಲಗಮಾ ಎನ್ನುವ ಸ್ಥಳದಲ್ಲಿ ಇದ್ದು, 1912 ರಲ್ಲಿ ಶ್ರೀಮಂತ ವ್ಯಕ್ತಿಯೊಬ್ಬರು ಈ ಬಂಗಲೆಯನ್ನು ತಮ್ಮ ಪತ್ನಿಗಾಗಿ ಕಟ್ಟಿಸಿದರು ಎನ್ನಲಾಗುತ್ತದೆ. 2010 ರಲ್ಲಿ ಡೀನ್ ಶಾರ್ಪ್ ಮತ್ತು ಅವರ ಸ್ನೇಹಿತರು ಈ ಬಂಗಲೆಯನ್ನು ಖರೀದಿ ಮಾಡಿದ್ದಾರೆ.

ಅವರು ಈ ಕಟ್ಟಡವನ್ನು ದುರಸ್ತಿ ಮಾಡಿಸಿ ಅದಕ್ಕೆ ಹೊಸ ರೂಪವನ್ನು ನೀಡಿದ ಮೇಲೆ ಬಂಗಲೆಗೆ ಈಗ ಒಂದು ಹೊಸ ಕಳೆ ಬಂದಿದೆ. ಈ ಐಷಾರಾಮಿ ಮ್ಯಾನ್ಷನ್ ಗೆ ಹಲಾಲಾ ಕಾಂಡ ಎನ್ನುವ ಹೆಸರನ್ನು ನೀಡಲಾಗಿದೆ. ಡೀನ್ ಮತ್ತು ಅವರ ಸ್ನೇಹಿತರು ರಜಾ ದಿನಗಳನ್ನು ಕಳೆಯಲು ಬಯಸುವ ಪ್ರವಾಸಿಗರಿಗೆ ಈ ಮ್ಯಾನ್ಷನ್ ಅನ್ನು ಬಾಡಿಗೆಗೆ ನೀಡುತ್ತಾರೆ. ಒಮ್ಮೆಗೆ ಇಲ್ಲಿ ಹನ್ನೆರಡು ಜನರು ಉಳಿದುಕೊಳ್ಳುವ ಅವಕಾಶವಿದೆ. ಈ ಬಂಗಲೆಯಲ್ಲಿ ಐದು ಬೆಡ್ರೂಮ್ ಗಳು, ಐದು ಬಾತ್ರೂಂ ಗಳು ಹಾಗೂ ಇನ್ನಿತರ ವಿಶೇಷ ಸೌಲಭ್ಯಗಳು ಇವೆ. ಪ್ರವಾಸಿಗರು ಇಲ್ಲಿ ಒಂದು ರಾತ್ರಿಯನ್ನು ಇಲ್ಲಿ ಕಳೆಯಲು ಒಂದು ಲಕ್ಷ ರೂ. ಬಾಡಿಗೆಯನ್ನು ನೀಡಬೇಕಾಗಿದೆ.
2010ರಲ್ಲಿ ಡೀನ್ ಹಾಗೂ ಅವರ ಸ್ನೇಹಿತರು ಈ ಮನೆಯನ್ನು ಖರೀದಿ ಮಾಡಿದಾಗ ಅದರ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಮನೆ ಯಾವ ದುಃಸ್ಥಿತಿಗೆ ತಲುಪಿತ್ತು ಎಂದರೆ, ಅದರ ಛಾವಣಿಯಲ್ಲಿ ಮಳೆ ಬೆಳೆದುಕೊಂಡಿತ್ತು. ಮನೆಯ ಪೀಠೋಪಕರಣಗಳಿಗೆ ಗೆದ್ದಲು ಹಿಡಿದು ಹಾಳಾಗಿತ್ತು. ಕೊಠಡಿಗಳಲ್ಲಿ ಬಾವಲಿಗಳು ವಾಸವಾಗಿದ್ದವು. ಅಡುಗೆ ಮನೆಯ ಗೋಡೆಗಳಿಗೆ ಹಾಕಿದ್ದ ಟೈಲ್ಸ್ ಕಿತ್ತು ಕೆಳಗೆ ಬೀಳುತ್ತಿದ್ದವು. ಆಗ ಡೀನ್ ಮತ್ತು ಅವರ ಗೆಳೆಯರು ಮನೆಯನ್ನು ಸಂಪೂರ್ಣವಾಗಿ ವೀಕ್ಷಿಸಿದ ನಂತರ ಮನೆಯನ್ನು ನವೀಕರಣ ಮಾಡಲು ಯೋಜನೆಯೊಂದನ್ನು ಸಿದ್ಧ ಮಾಡಿಕೊಂಡರು.

ಮೊದಲ ನಾಲ್ಕು ತಿಂಗಳ ಸಮಯ ಹಾಳಾಗಿದ್ದ ಭಾಗಗಳನ್ನು ಕೆಡವುದರಲ್ಲೇ ಕಳೆದುಹೋಯಿತು. ಅನಂತರ ಮನೆಯ ನವೀಕರಣದ ಕಾರ್ಯ ಪ್ರಾರಂಭವಾಯಿತು. ಅದರಲ್ಲಿ ಮನೆಗೆ ನೀರಿನ ಪೂರೈಕೆ, ವಿದ್ಯುತ್ ಪೂರೈಕೆಗೆ ಅಗತ್ಯ ಸಿದ್ಧತೆಗಳು ಮುಂತಾದ ಕೆಲಸಗಳನ್ನು ಮಾಡಿಸಲಾಯಿತು. ಇದಕ್ಕಿಂತ ಮೊದಲು ಬಂಗಲೆಯ ಹೊರಗೆ ಇದ್ದಂತಹ ಬಾವಿಯಿಂದ ನೀರನ್ನು ಬಂಗಲೆಗೆ ಪೂರೈಕೆ ಮಾಡಲಾಗುತ್ತಿತ್ತು. ಡೀನ್ ಮತ್ತು ಅವರ ಸ್ನೇಹಿತರು ಮನೆಯವರ ಭಾಗದ ವಿನ್ಯಾಸವನ್ನು ಬಹಳ ಸರಳವಾಗಿ ಮಾಡಿಸಿದ್ದಾರೆ.

ಮನೆಯ ಒಳಗೆ ಒಂದು ಅಡುಗೆ ಕೋಣೆ ಇದೆ. ಬೆಡ್ ರೂಂ ಗಳು ವಿಶಾಲವಾಗಿದ್ದು, ಗಾಳಿ ಹಾಗೂ ಬೆಳಕು ಸಮೃದ್ಧವಾಗಿ ಬರುತ್ತದೆ. ಮನೆಯ ಹೊರಗೆ 23 ಮೀಟರ್ ನ ಈಜುಕೊಳವನ್ನು ಸಹ ನಿರ್ಮಾಣ ಮಾಡಿಸಿದ್ದಾರೆ. ನಾಲ್ವರು ಸ್ನೇಹಿತರು ಮೂರು ಕೋಟಿ 22 ಲಕ್ಷ ರೂಪಾಯಿಗಳನ್ನು ನೀಡಿ ಆ ಬಂಗಲೆ ಖರೀದಿ ಮಾಡಿದ್ದರು. ಇವರು ಮನೆ ಖರೀದಿ ಮಾಡಿದಾಗ ಯಾರೆಲ್ಲಾ ಅವರನ್ನು ಟೀಕೆ ಮಾಡಿದ್ದರೋ, ಇಂದು ಅವರೇ ಇವರನ್ನು ಹಾಡಿ ಹೊಗಳುತ್ತಿದ್ದಾರೆ. ಜನ ಡೀನ್ ಮತ್ತು ಅವರ ಸ್ನೇಹಿತರ ಯಾವ ನಿರ್ಧಾರ ತಪ್ಪು ಎಂದಿದ್ದರೋ,ಇಂದು ಅದೇ ನಿರ್ಧಾರ ಆ ನಾಲ್ಕು ಜನ ಸ್ನೇಹಿತರಿಗೆ ಬಹಳಷ್ಟು ಲಾಭವನ್ನು ತಂದು ಕೊಡುತ್ತಿದೆ ಎಂಬುದು ಸತ್ಯವಾಗಿದೆ.