ವರ್ಷಕ್ಕೆ 65 ಕೋಟಿ ರೂಪಾಯಿ ವ್ಯವಹಾರಕ್ಕೆ ಮೂಲವಾಗಿತ್ತು ಈ ಭಾರತದ ಹೆಣ್ಣು ಹುಲಿ: ಮಚಲಿಯ ಕಥೆ ನಿಜಕ್ಕೂ ರೋಚಕ!
ರಣಥಂಬೋರ್ ನ್ಯಾಷನಲ್ ಪಾರ್ಕ್ ನ ಒಂದು ಹೆಣ್ಣು ಹುಲಿ ವಿಶ್ವ ಪ್ರಸಿದ್ಧವಾಗಿದೆ. ಈ ಹೆಣ್ಣು ಹುಲಿಯ ಹೆಸರು ಮಚಲಿ. ಇದೊಂದ ಬೆಂಗಾಲ್ ಟೈಗರ್ ಆಗಿದ್ದು, 2000 ದಲ್ಲಿ ಇದನ್ನು ಹುಲಿಗಳ ರಾಣಿ, ಲೇಡಿ ಆಫ್ ಲೇಕ್ , ಮೊಸಳೆಯನ್ನು ಕೊಂದ ಹೆಣ್ಣು ಹುಲಿ ಹೀಗೆ ನಾನಾ ವಿಧವಾದ ವಿಶೇಷಣಗಳನ್ನು ನೀಡಿ ಕರೆಯಲಾಗುತ್ತಿತ್ತು. ಇಂದು ನಾವು ಈ ಹುಲಿಯ ಕಥೆಯನ್ನು ಕುರಿತಾದ ಆಸಕ್ತಿಕರ ಕಥೆಯನ್ನು ನಾವು ಹೇಳಲು ಹೊರಟಿದ್ದೇವೆ. ನಿಜ ಹೇಳಬೇಕೆಂದರೆ ವಿಶ್ವದಲ್ಲಿ ಇಂದಿಗೂ ಕೂಡಾ ಬೇರೆಲ್ಲಾ ಹುಲಿಗಳಿಗಿಂತ ಹೆಚ್ಚಿನ ಜನಪ್ರಿಯತೆ ಪಡೆದಿರುವ ಹುಲಿ ಇದಾಗಿದೆ ಎನ್ನುವುದು. ಇಂತಹ ಒಂದು ಹೆಸರನ್ನು ಗಳಿಸಿ, ಜನಪ್ರಿಯತೆ ಪಡೆದಿರುವ ಈ ಹುಲಿಯ ಕುರಿತಾದ ಮಾಹಿತಿಗಳು ಸಹಾ ಬಹಳ ಆಸಕ್ತಿಕರವಾಗಿದೆ ಎಂದು ಹೇಳಬಹುದಾಗಿದೆ.

ಹಿಂದಿ ಭಾಷೆಯ ಮಚಲಿ ಎಂದರೆ ಕನ್ನಡದಲ್ಲಿ ಮೀನು ಎಂದರ್ಥ. ಹೆಣ್ಣು ಹುಲಿಗೇಕೆ ಮಚಲಿ ಎನ್ನುವ ಹೆಸರನ್ನು ಇಡಲಾಯಿತು ಎನ್ನುವುದಾದರೆ ಅದಕ್ಕೂ ಸಹಾ ಕಾರಣವಿದೆ. ಈ ಹೆಣ್ಣು ಹುಲಿಯ ಮುಖದ ಮೇಲೆ ಮೀನಿನಂತಹ ಆಕಾರದ ಗುರುತು ಇದ್ದ ಕಾರಣ ಮಚಲಿ ಎನ್ನುವ ಹೆಸರನ್ನು ಇಡಲಾಗಿತ್ತು. ಈ ಗುರುತು ಹುಲಿಯ ಅಂದಕ್ಕೆ ಇನ್ನಷ್ಟು ಮೆರುಗನ್ನು ನೀಡಿತ್ತು ಎನ್ನುವುದು ಕೂಡಾ ಸತ್ಯವಾದ ವಿಷಯವಾಗಿತ್ತು. ಮಚಲಿಯ ಮುಖದ ಪ್ರಮುಖ ಆಕರ್ಷಣೆಯೇ ಇದಾಗಿತ್ತು. ವಿಕಿಪೀಡಿಯ ದ ಪ್ರಕಾರ ಈ ಹುಲಿಯ ಜನ್ಮ 1996 ಅಥವಾ 97 ರಲ್ಲಿ ಆಗಿತ್ತು ಎನ್ನಲಾಗಿದೆ. ಎರಡು ವರ್ಷ ವಯಸ್ಸಿಗೆ ಈ ಹುಲಿ ತನ್ನ ತಾಯಿಯ ಪ್ರದೇಶವನ್ನು ಬಿಟ್ಟಿತು.

ಎರಡನೇ ವಯಸ್ಸಿನಲ್ಲೇ ಮಚಲಿ ಬೇಟೆ ಆಡಲು ಆರಂಭಿಸಿದ ತನ್ನದೇ ವ್ಯಾಪ್ತಿಯ ಪ್ರದೇಶವನ್ನು ಮಾಡಲು ತೊಡಗಿಕೊಂಡಳು. ಮಚಲಿ ತನ್ನ ಜೀವಿತ ಕಾಲದಲ್ಲಿ ಒಟ್ಟು 11 ಮರಿಗಳಿಗೆ ಜನ್ಮ ನೀಡಿದ್ದಾಳೆ. ಅದರಲ್ಲಿ 7 ಹೆಣ್ಣು ಹಾಗೂ 4 ಗಂಡು ಹುಲಿಗಳಾಗಿವೆ. ರಣಥಂಬೋರ್ ನ್ಯಾಷನಲ್ ಪಾರ್ಕ್ ನಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲು ಮಚಲಿಯ ಕೊಡುಗೆ ಬಹಳ ಇದೆ ಎನ್ನಲಾಗುತ್ತದೆ. ಇಲ್ಲಿನ 60% ಹುಲಿಗಳು ಮಚಲಿ ವಂಶದ ಕುಡಿಗಳೇ ಆಗಿವೆ. ಅಲ್ಲದೇ ಮಚಲಿಯು ಜನ್ಮ ನೀಡಿದ ಎರಡು ಹೆಣ್ಣು ಹುಲಿಗಳನ್ನು ಸರಿಸ್ಕಾ ರಾಷ್ಟ್ರೀಯ ಉದ್ಯಾನಕ್ಕೆ, ಅಲ್ಲಿ ಹುಲಿಗಳ ಸಂಖ್ಯೆ ಅಭಿವೃದ್ಧಿ ಮಾಡಲು ಕಳುಹಿಸಲಾಗಿತ್ತು.

ಮಚಲಿ ಬೇಟೆಯಾಡುವ ವಿಧಾನದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಳು. 2003 ರಲ್ಲಿ ಮಚಲಿ ಒಂದು 14 ಅಡಿ ಉದ್ದದ ಮೊಸಳೆಯೊಂದಿಗೆ ಸಂಘರ್ಷಕ್ಕೆ ಇಳಿದಿದ್ದಳು. ಆಗ ಆ ಹೋರಾಟದಲ್ಲಿ ಮಚಲಿಯ ಕೆಲವು ಹಲ್ಲುಗಳಿಗೆ ಆ ಘಾ ತವಾಗಿತ್ತು. ಆದರೆ ಮೊಸಳೆಯನ್ನು ಕೊಲ್ಲುವರೆಗೂ ಸಹಾ ಮಚಲಿ ಅದನ್ನು ಬಿಟ್ಟಿರಲಿಲ್ಲ. ರಣಥಂಬೋರ್ ನ್ಯಾಷನಲ್ ಪಾರ್ಕ್ ನಲ್ಲಿ ಮಚಲಿ ಪ್ರಮುಖ ಆಕರ್ಷಣೆಯ ಕೇಂದ್ರ ವಾಗಿದ್ದಳು. ತನ್ನ ಮರಿಗಳನ್ನು ರಕ್ಷಿಸಲು ಮಚಲಿ ಗಂಡು ಹುಲಿಗಳು ಹಾಗೂ ಇತರೆ ಪ್ರಾಣಿಗಳ ಜೊತೆ ಭೀ ಕರವಾದ ಕಾಳಗ ಮಾಡಲು ಸಜ್ಜಾಗುತ್ತಿದ್ದಳು.
ಮತ್ತೊಂದು ನಿಮಗೆ ಆಶ್ಚರ್ಯವನ್ನು ಉಂಟು ಮಾಡುವ ಸಂಗತಿ ಏನೆಂದರೆ ಮಚಲಿಗೆ ಜೀವಮಾನ ಸಾಧನೆಯ ಪ್ರಶಸ್ತಿಯೂ ಸಿಕ್ಕಿದೆ. ಟ್ರಾವೆಲ್ ಟೂರ್ ಆಪರೇಟರ್ಗಳ ಪ್ರಕಾರ, ಅವಳು ಪ್ರತಿವರ್ಷ ಸುಮಾರು 65 ಕೋಟಿ ವ್ಯವಹಾರವನ್ನು ಮಾಡಲು ನೆರವಾಗಿದ್ದಳು. ಮಚಲಿಯ ಅನೇಕ ಫೋಟೋಗಳನ್ನು ಸೆರೆಹಿಡಿಯಲಾಗಿದ್ದು ಅದು ವಿಶ್ವದ ನಾನಾ ಭಾಗಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ. ಅಧ್ಯಯನ ಗಳ ಪ್ರಕಾರ ಬಂಗಾಳದ ಹುಲಿಯ ಜೀವಿತಾವಧಿ 10 ರಿಂದ 15 ವರ್ಷಗಳು ಮಾತ್ರ. ಆದರೆ ಮಚಲಿ ಇಪ್ಪತ್ತು ವರ್ಷಗಳ ಕಾಲ ಜೀವಿಸಿದ್ದಳು. ವಯಸ್ಸಾದ ಮೇಲೆ ಹಲ್ಲು ಉದುರಿ ದುರ್ಬಲವಾದ ಮಚಲಿಗೆ ಬೇಟೆಯಾಡಲಹ ಆಗದ ಕಾರಣ ಅದರ ಮುಂದೆ ಅದರ ಬೇಟೆಯನ್ನು ಕಟ್ಟಿ ಹಾಕುವ ಮೂಲಕ ಆಹಾರ ನೀಡಲಾಗುತ್ತಿತ್ತು.

ಕಾನೂನಿನ ಪ್ರಕಾರ ಹಾಗೆ ಮಾಡುವುದು ತಪ್ಪಾದರೂ ಮಚಲಿಗಾಗಿ ಅಂತಹುದೊಂದು ಬದಲಾವಣೆ ಮಾಡಲಾಗಿತ್ತು. ಆ ವೇಳೆಗೆ ಮಚಲಿಯ ಮಗಳು ಸುಂದರಿ ತಾಯಿಯ ಹಾಗೆ ಬೆಳೆದಿದ್ದಳು. ಹೀಗೆ ಅರಣ್ಯದ ಪ್ರಮುಖ ಆಕರ್ಷಣೆ ಆಗಿ, ಪ್ರಶಸ್ತಿ ಪಡೆದು, ದೇಶ ವಿದೇಶಗಳಲ್ಲೂ ಹೆಸರಾದ ಮಚಲಿ ಹುಲಿಯು 18 ಆಗಸ್ಟ್ 2016 ರಲ್ಲಿ ಸಾವನ್ನಪ್ಪಿತು. ಕಾಡಿನ ರಾಣಿಯ ಅಧ್ಯಾಯ ಮುಗಿದಿತ್ತು. ಹಿಂದೂ ವಿಧಿ ವಿಧಾನಗಳನ್ನು ಅನುಸರಿಸಿ ಮಚಲಿಯ ಶವ ಸಂಸ್ಕಾರವನ್ನು ಮಾಡಲಾಯಿತು. ಮಚಲಿ ಪ್ರಕೃತಿಯಲ್ಲಿ ಲೀನವಾದಳು ಆದರೂ ಅವಳ ಜೀವನ ಮಾತ್ರ ಇಂದಿಗೂ ಹಸಿರಾಗಿದೆ.