ಇದ್ದಕ್ಕಿದ್ದಂತೆ ಮೂರು ವರ್ಷದ ಮಗುವಿನ ಆರೋಗ್ಯದಲ್ಲಾಯ್ತು ಏರುಪೇರು: ಎಕ್ಸ್ ರೇ ಮಾಡಿದ ವೈದ್ಯರಿಗೆ ಕಾದಿತ್ತು ಶಾಕ್
ಮನೆಗಳಲ್ಲಿ ಸಣ್ಣ ಮಕ್ಕಳು ಇದ್ದರೆ ಅವರ ಆಟ ಪಾಠಗಳನ್ನು ನೋಡುತ್ತಾ, ತುಂಟಾಟಗಳನ್ನು ಮೆಚ್ಚುತ್ತಾ ಮನೆಯ ಸದಸ್ಯರೆಲ್ಲರೂ ಖುಷಿಪಡುತ್ತಾರೆ. ಆದರೆ ಇದೇ ವೇಳೆ ಸಣ್ಣ ಮಕ್ಕಳ ಆಟ ಹಾಗೂ ಇನ್ನಿತರ ಚಟುವಟಿಕೆಗಳ ಕುರಿತಾಗಿ ಕುಟುಂಬದ ಸದಸ್ಯರು ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ಏಕೆಂದರೆ ಆಡುವ ಮಕ್ಕಳಿಗೆ ಸಣ್ಣಪುಟ್ಟ ವಸ್ತುಗಳಿಂದ ಸಹಾ ತಮಗೆ ಹಾನಿ ಉಂಟಾಗಬಹುದು ಎನ್ನುವ ವಿಚಾರವಾಗಲೀ ಅಥವಾ ಯಾವ ವಸ್ತುಗಳನ್ನು ತಾವು ಬಳಸಬಾರದು ಎನ್ನುವ ವಿಚಾರವಾಗಲೀ ತಿಳಿದಿರುವುದಿಲ್ಲ. ಮಕ್ಕಳು ಪ್ರತಿಯೊಂದು ವಸ್ತುವನ್ನು ಕೂಡಾ ಆಟದ ಸಾಮಾನಿನಂತೆ ನೋಡುತ್ತಾರೆ. ಅವುಗಳನ್ನು ಆಟ ಆಡಲು ಬಳಸಿಕೊಳ್ಳುತ್ತಾರೆ. ಸಣ್ಣ ಮಕ್ಕಳು ಕೈಗೆ ಸಿಕ್ಕಿದ ವಸ್ತುಗಳನ್ನು ಬಾಯಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ದರಿಂದಲೇ ಪೋಷಕರು ಮಕ್ಕಳು ಆಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ಮೂರು ವರ್ಷದ ಪುಟ್ಟ ಬಾಲಕನೊಬ್ಬನು ಗಣೇಶನ ಮೂರ್ತಿಯನ್ನು ನುಂಗಿದ ನಂತರ ಆತನ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಲಭ್ಯ ಇರುವ ಮಾಹಿತಿಗಳ ಪ್ರಕಾರ ಆ ಬಾಲಕನು ಸುಮಾರು ಐದು ಸೆಂಟಿಮೀಟರ್ ಉದ್ದದ ಗಣೇಶನ ಮೂರ್ತಿಯನ್ನು ನುಂಗಿದ್ದನು ಎನ್ನಲಾಗಿದೆ. ಬಾಲಕನ ಪರಿಸ್ಥಿತಿಯು ಹದಗೆಟ್ಟ ಹಿನ್ನೆಲೆಯಲ್ಲಿ ಆತನನ್ನು ಕೂಡಲೇ ಬೆಂಗಳೂರು ಹಳೆ ವಿಮಾನ ನಿಲ್ದಾಣ ರಸ್ತೆ ಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರು ಒಂದು ಚಮತ್ಕಾರ ಅಥವಾ ಅದ್ಭುತ ಎನ್ನುವಂತೆ ಬಾಲಕನ ಪ್ರಾಣವನ್ನು ಉಳಿಸುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ.
ಮೂರು ವರ್ಷದ ಪುಟ್ಟ ಹುಡುಗನು ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಸಣ್ಣದಾದ ಗಣೇಶನ ಮೂರ್ತಿಯನ್ನು ನುಂಗಿದ್ದಾನೆ. ಅನಂತರ ಆತನ ಎದೆಯ ಮೇಲ್ಭಾಗದಲ್ಲಿ ನೋವು ಕಂಡುಬಂದಿದ್ದು, ಎಂಜಲನ್ನು ನುಂಗುವುದು ಕೂಡಾ ಕಷ್ಟವಾಗಿದೆ. ಈ ಪರಿಸ್ಥಿತಿಯಿಂಸ ಪರದಾಡಿದ ಮಗುವನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಕುತ್ತಿಗೆ ಮತ್ತು ಎದೆಯ ಭಾಗವನ್ನು ಎಕ್ಸ್ ರೇ ಮಾಡಿ ನೋಡಿದಾಗ ಗಣೇಶನ ಮೂರ್ತಿ ಇರುವುದು ಕಂಡಿದೆ. ಅನಂತರ ವೈದ್ಯರು ಎಂಡೋಸ್ಕೋಪಿಕ್ ವಿಧಾನವನ್ನು ಬಳಸಿ ಗಣೇಶನ ಮೂರ್ತಿಯನ್ನು ಹೊರತೆಗೆಯುವ ನಿರ್ಧಾರವನ್ನು ಮಾಡಿದ್ದಾರೆ.
ಆ ಪುಟ್ಟ ಬಾಲಕನಿಗೆ ಅರವಳಿಕೆ ಯನ್ನು ನೀಡಿ ಒಂದು ಗಂಟೆಯ ಅವಧಿಯಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಗಣೇಶನ ಮೂರ್ತಿಯನ್ನು ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ನಡೆದ ಮೂರು ಗಂಟೆಗಳ ನಂತರ ಮಗುವಿಗೆ ಆಹಾರವನ್ನು ನೀಡಲು ಪ್ರಾರಂಭಿಸಲಾಯಿತು ಎನ್ನಲಾಗಿದ್ದು, ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ. ಶಿಶುವೈದ್ಯರಾದಂತಹ ಡಾಕ್ಟರ್ ಶ್ರೀಕಾಂತ್ ಅವರು ಮಾತನಾಡುತ್ತಾ ಮೂರ್ತಿಯನ್ನು ನುಂಗಿದ ಪರಿಣಾಮ ಅನ್ನ ನಾಳದಲ್ಲಿ ಗಾಯ ವಾಗಿತ್ತು. ಆದ್ದರಿಂದಲೇ ಎದೆ ನೋವು ಕಾಣಿಸಿಕೊಂಡು ಮಗುವಿಗೆ ಆಹಾರ ನುಂಗುವುದು ಕೂಡ ಕಠಿಣವಾಗಿತ್ತು ಎಂದು ಹೇಳಿದ್ದಾರೆ.
ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಮನೀಶ್ ರೈ ಅವರು ಮಾತನಾಡುತ್ತಾ ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಅದರ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಗಂಭೀರ ಪರಿಸ್ಥಿತಿ ಕಂಡು, ತಕ್ಷಣವೇ ನೀಡಿದಂತಹ ಚಿಕಿತ್ಸೆಯ ಪರಿಣಾಮದಿಂದ ಮಗುವಿನ ಆರೋಗ್ಯದಲ್ಲಿ ಶ್ರೀಘ್ರವಾಗಿ ಸುಧಾರಣೆ ಕಂಡು ಬಂದಿದ್ದು, ಮಗು ಹುಷಾರಾಯಿತು. ಅಲ್ಲದೇ ಅವರು ಚಿಕ್ಕ ಚಿಕ್ಕ ಮಕ್ಕಳ ಪೋಷಕರು ಮಕ್ಕಳ ಕುರಿತಾಗಿ ಆದಷ್ಟು ಜಾಗ್ರತೆಯಿಂದ ಇರಬೇಕು ಹಾಗೂ ಅವರು ಆಟ ಆಡುವಾಗ ಅವರ ಸುತ್ತಮುತ್ತಲಿರುವ ವಸ್ತುಗಳ ಬಗ್ಗೆ ಗಮನವನ್ನು ನೀಡಬೇಕು ಎನ್ನುವ ಸಲಹೆಯನ್ನು ನೀಡಿದ್ದಾರೆ.