ಒಲಂಪಿಕ್ಸ್ ಪದಕಗಳ ಮುಖ ಬೆಲೆ ಎಷ್ಟು?? ಆಶ್ಚರ್ಯ ಎನಿಸುವಂತಹ, ಪದಕಗಳ ಅಸಲಿ ಬೆಲೆಯ ಮಾಹಿತಿ ಇಲ್ಲಿದೆ.

ಟೋಕಿಯೋ ಒಲಂಪಿಕ್ಸ್ 2020 ಜಪಾನಿನ ರಾಜಧಾನಿಉಲಯಾದ ಟೋಕಿಯೋದಲ್ಲಿ ಜುಲೈ 23ರಿಂದ ಆಗಸ್ಟ್ 8 ರವರೆಗೂ ಬಹಳ ಅದ್ದೂರಿಯಾಗಿ ನಡೆದಿದೆ. ಕೋವಿಡ್ ಸಂಕಷ್ಟದ ನಡುವೆಯೂ ಒಲಂಪಿಕ್ಸ್ ಕ್ರೀಡಾಕೂಟವನ್ನು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ನಡುವೆ ನಡೆಸುವ ಮೂಲಕ ವಿಶ್ವದ ಗಮನವನ್ನೂ ಸೆಳೆದಿದೆ. ವಿಶ್ವದ ವಿವಿಧ ದೇಶಗಳಿಂದ ಅತ್ಯುತ್ತಮ ಕ್ರೀಡಾಪಟುಗಳು ಈ ಕ್ರೀಡಾಕೂಟದ ಭಾಗವಾಗುತ್ತಾರೆ ಹಾಗೂ ತಮ್ಮ ಪ್ರತಿಭೆಯನ್ನು ತಮ್ಮ ಗೆಲುವಿನ ಮೂಲಕ ಒಂದು ಸಾಧನೆಯನ್ನಾಗಿ ಮಾಡಲು, ಪದಕವನ್ನು ಪಡೆಯುವುದಕ್ಕಾಗಿ ಬಹಳಷ್ಟು ಶ್ರಮವನ್ನು ಪಡುತ್ತಾರೆ. ಒಲಂಪಿಕ್ಸ್ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಪ್ರತಿಷ್ಠಿತ ಕ್ರೀಡಾಕೂಟವಾಗಿದೆ. ಈ ಕ್ರೀಡಾಕೂಟದ ವಿವಿಧ ಆಟಗಳಲ್ಲಿ ಅಗ್ರ ವಿಜೇತರಾಗಿ ಹೊರಹೊಮ್ಮಿದ ಕ್ರೀಡಾಪಟು ಗಳಿಗೆ ಕ್ರಮವಾಗಿ ಚಿನ್ನ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ನೀಡಿ ಗೌರವಿಸಲಾಗುತ್ತದೆ.

ಈ ಬಾರಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟ ಗಳಿಗಾಗಿ ಪದಕಗಳ ವಿನ್ಯಾಸವನ್ನು
ಜಪಾನಿನ ಡಿಸೈನರ್ ಜುನಿಚಿ ಕವಾನಿಶಿ ಅವರು ಮಾಡಿದ್ದಾರೆ. ಒಲಂಪಿಕ್ಸ್ ಪದಕಗಳ ವಿನ್ಯಾಸವು ಪ್ರತಿ ಬಾರಿಯೂ ಕೂಡಾ ಬದಲಾಗುತ್ತದೆ. ಅದರಂತೆ ಈ ಬಾರಿ ಒಸಾಕಾ ನಿವಾಸಿಯಾಗಿರುವ, ಗ್ರಾಫಿಕ್ ಡಿಸೈನರ್ ಆಗಿರುವ ಕವಾನಿಶಿ ಅವರು ಒಲಿಂಪಿಕ್ಸ್ ಪದಕಗಳನ್ನು ವಿನ್ಯಾಸ ಮಾಡಿದ್ದಾರೆ. ಇವರು ಒಲಂಪಿಕ್ಸ್ ಮಾತ್ರವೇ ಅಲ್ಲದೇ ಈ ಹಿಂದೆ ಪ್ಯಾರಾಲಿಂಪಿಕ್ಸ್‌ಗೆ ಪದಕಗಳನ್ನು ವಿನ್ಯಾಸ ಮಾಡಿದ್ದರು ಎನ್ನುವುದು ಬಹಳ ವಿಶೇಷವಾಗಿದೆ. ವಿಜೇತ ಕ್ರೀಡಾಪಟು ಗಳಿಗೆ ನೀಡಲಾಗುವ ಈ ಪದಕಗಳು ಒಲಂಪಿಕ್ ಲಾಂಛನದೊಂದಿಗೆ, ಅವುಗಳ ವಿನ್ಯಾಸದಲ್ಲಿ ಗ್ರೀಕ್ ನ ಗೆಲುವಿನ ಸಂಕೇತವಾದ ದೇವತೆ ನೈಕ್ ಚಿತ್ರಣವನ್ನು ಹೊಂದಿರುತ್ತದೆ.

ಈ ಬಾರಿ ಜಪಾನಿನಲ್ಲಿ ಸುಮಾರು 6.21 ಮಿಲಿಯನ್ ಎಲೆಕ್ಟ್ರಾನಿಕ್ ಘಟಕಗಳನ್ನು ಸಂಗ್ರಹಿಸುವ ಮೂಲಕ ಲೋಹಗಳನ್ನು ಮರುಬಳಕೆ ಮಾಡುವ ಮೂಲಕ ಈ ಪದಕಗಳನ್ನು ಸಿದ್ದಪಡಿಸಿದೆ ಎನ್ನುವುದು ಸಹಾ ಮತ್ತೊಂದು ವಿಶೇಷವಾಗಿದೆ. ಇನ್ನು ನಾವು ಈ ಪದಕಗಳ ವಿಶೇಷತೆ ಕುರಿತಾಗಿ ಹೇಳುವುದಾದರೆ, ಚಿನ್ನ, ಬೆಳ್ಳಿ ಮತ್ತು ಕಂಚಿನ ಈ ಮೂರು ವಿಭಾಗಗಳಲ್ಲಿ ನೀಡಲಾಗುವ ಈ ಪದಕಗಳ ವ್ಯಾಸವು ಸುಮಾರು 85 ಮಿಮೀ ಎಂದು ಹೇಳಲಾಗುತ್ತದೆ. ಅದೇ ವೇಳೆಯಲ್ಲಿ ಪದಕದ ದಪ್ಪವು 7.7 ಮಿಲಿಮೀಟರ್‌ಗಳಿಂದ ಹಿಡಿದು 12.1 ಮಿಲಿಮೀಟರ್‌ಗಳವರೆಗೆ ಇರುತ್ತದೆ ಎನ್ನಲಾಗಿದೆ.

ಮೊದಲನೆಯದಾಗಿ ನಾವು ಚಿನ್ನದ ಪದಕ ದಲ್ಲಿ ಚಿನ್ನದ ಪ್ರಮಾಣ ಎಷ್ಟಿರುತ್ತದೆ ಎಂದು ತಿಳಿಯುವುದಾದರೆ, ಒಲಂಪಿಕ್ ಆಟಗಳಲ್ಲಿ ಫೈನಲ್ನಲ್ಲಿ ಗೆಲ್ಲುವ ಆಟಗಾರನಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುತ್ತದೆ. ಇದು ಹೆಸರಿಗೆ ಮಾತ್ರ ಚಿನ್ನದ ಪದಕವಾಗಿರುತ್ತದೆ. ಏಕೆಂದರೆ ಶುದ್ಧ ಬೆಳ್ಳಿಯಿಂದ ತಯಾರಿಸಿದ ಪದಕದ ಮೇಲೆ ಬಂಗಾರದ ಬಣ್ಣವನ್ನು ಲೇಪನ ಮಾಡಲಾಗಿರುತ್ತದೆ. ಈ ಪದಕದ ತೂಕ 556 ಗ್ರಾಂ ಗಳಾಗಿದ್ದು, ಇದರಲ್ಲಿ ಚಿನ್ನದ ಪ್ರಮಾಣ ಕೇವಲ 6 ಗ್ರಾಂ ಗಳಾಗಿರುತ್ತದೆ. ಎರಡನೆಯದಾಗಿ ನಾವು ಬೆಳ್ಳಿಯ ಪದಕ ದ ಬಗ್ಗೆ ಹೇಳುವುದಾದರೆ ಈ ಪದಕದ ತೂಕ 550 ಗ್ರಾಂ ಗಳಾಗಿರುತ್ತದೆ.

ಬೆಳ್ಳಿ ಪದಕವನ್ನು ಬೆಳ್ಳಿಯಿಂದಲೇ ಮಾಡುವುದರಿಂದ ಇದರಲ್ಲಿ 550 ಗ್ರಾಂ ಬೆಳ್ಳಿ ಇದರಲ್ಲಿರುತ್ತದೆ, ಇದು ಹೆಸರಿಗೆ ಮಾತ್ರವೇ ಅಲ್ಲದೇ ವಾಸ್ತವದಲ್ಲೂ ಬೆಳ್ಳಿ ಪದಕವೇ ಆಗಿರುತ್ತದೆ. ಇನ್ನು ಕೊನೆಯದಾಗಿ ಕಂಚಿನ ಪದಕದ ಬಗ್ಗೆ ತಿಳಿಯುವುದಾದರೆ, ಇದು ಕಂಚು ತಾಮ್ರ ಮತ್ತು ಸತುವಿನ ಮಿಶ್ರಣವಾಗಿದ್ದು, ಇದು 95 ಪ್ರತಿಶತ ತಾಮ್ರ ಮತ್ತು 5 ಪ್ರತಿಶತ ಸತುವನ್ನು ಹೊಂದಿರುತ್ತದೆ. ಹಾಗಾದರೆ ಈ ಮೂರು ಪದಕಗಳ ಮಾರುಕಟ್ಟೆ ಮೌಲ್ಯ ಏನು ಎನ್ನುವ ಪ್ರಶ್ನೆ ನಿಮಗೆ ಮೂಡಿದ್ದರೆ ಅದಕ್ಕೂ ಉತ್ತರ ಇಲ್ಲಿದೆ. ಒಂದು ಬೇಳೆ ಈ ಪದಕಗಳನ್ನು ಕರಗಿಸಿದರೆ, ಚಿನ್ನದ ಪದಕದ ಬೆಲೆ ಸುಮಾರು US $ 800 ಅಂದರೆ ₹ 59,319 ಎಂದು ತಜ್ಞರು ಹೇಳುತ್ತಾರೆ.

ಅದೇ ಸಮಯದಲ್ಲಿ, ಬೆಳ್ಳಿ ಮತ್ತು ಕಂಚಿನ ಪದಕಗಳ ಬೆಲೆ ಕ್ರಮವಾಗಿ $ 450 ಮತ್ತು $ 5 ಎನ್ನಲಾಗಿದೆ. ಆದರೆ ವಾಸ್ತವವಾಗಿ ಕರಗಿಸಿದಾಗ ಸಿಗುವ ಅದರ ಮೌಲ್ಯಕ್ಕಿಂತ ಪದಕ ಗೆದ್ದ ಕ್ರೀಡಾಪಟು ವಿನ ಕೊರಳಿನಲ್ಲಿ ಅದು ರಾರಾಜಿಸುವಾಗ ಅದಕ್ಕೆ ಯಾವುದೇ ಮೌಲ್ಯ ನಿರ್ಧಾರ ಮಾಡಲು ಸಾಧ್ಯವಿಲ್ಲ ಎನ್ನುವುದು ಸತ್ಯ. ಒಲಂಪಿಕ್ಸ್ ನಲ್ಲಿ ಪದಕ ವಿಜೇತರಾದ ಆಟಗಾರರಿಗೆ ಒಲಿಂಪಿಕ್ ಅಸೋಸಿಯೇಶನ್ ನಿಂದ ಪದಕಗಳನ್ನು ನೀಡಲಾಗುತ್ತದೆ. ಇದಲ್ಲದೇ ಅನೇಕ ದೇಶಗಳಲ್ಲಿ, ಆಟಗಾರರಿಗೆ ಗೌರವ ಸೂಚಕವಾಗಿ ವಿಭಿನ್ನ ಬಹುಮಾನ ಹಾಗೂ ಸವಲತ್ತುಗಳನ್ನು ನೀಡಲಾಗುತ್ತದೆ.