ಶುಭ ಸುದ್ದಿ: ಪೇಟಿಎಂ ಕಡೆಯಿಂದ 35 ಸಾವಿರ ಸಂಬಳದ ಉದ್ಯೋಗ, 20 ಸಾವಿರ ಜನರಿಗೆ: ಅರ್ಹತೆ ಹಾಗೂ ಅರ್ಜಿ ಸಲ್ಲಿಕೆ ಹೇಗೆ??
ಒಂದು ವೇಳೆ ನೀವು ಉದ್ಯೋಗದ ಹುಡುಕಾಟದಲ್ಲಿ ತೊಡಗಿರುವಿರಿ ಎನ್ನುವುದಾದರೆ ನಿಮಗಾಗಿ ಒಂದು ಹೊಸ ಹಾಗೂ ಒಳ್ಳೆಯ ವಿಷಯವು ಬರುತ್ತಿದೆ. ಹೌದು ದೇಶದ ಬಹುದೊಡ್ಡ ಡಿಜಿಟಲ್ ಪೇಮೆಂಟ್ ಸಲ್ಯೂಷನ್ ಕಂಪನಿಯಾಗಿರುವ ಪೇಟಿಎಂ ದೀಪಾವಳಿ ಹಬ್ಬಕ್ಕೂ ಮೊದಲೇ 16,600 ಕೋಟಿಗಳ ಐಪಿಓ ತರುತ್ತದೆ ಎಂದು ಹೇಳಲಾಗಿದ್ದು, ಇದು ಇಲ್ಲಿಯವರೆಗಿನ ಅತಿ ದೊಡ್ಡ ಐಪಿಒ ಎನ್ನಲಾಗಿದೆ. ಇದನ್ನು ತರುವ ಮೊದಲು ಕಂಪನಿಯು ಇದಕ್ಕಾಗಿ ಸಂಪೂರ್ಣವಾಗಿ ಸಜ್ಜಾಗುತ್ತಿದೆ. ಪೇಟಿಎಂ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಚನೆ ಮಾಡುತ್ತಿದ್ದು, ಪೇಟಿಎಂ ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಕಾರ್ಯಕ್ರಮದ ಅನುಷ್ಠಾನದ ಮೂಲಕ ಪದವಿಪೂರ್ವ ಶಿಕ್ಷಣವನ್ನು ಪಡೆದಿರುವವರಿಗೆ ಉದ್ಯೋಗವನ್ನು ಕಲ್ಪಿಸುತ್ತಿದೆ ಎನ್ನಲಾಗಿದೆ.
ವ್ಯಾಪಾರಿಗಳಿಗೆ ಡಿಜಿಟಲ್ ಅಳವಡಿಕೆ ಕುರಿತಾಗಿ ಸರಿಯಾದ ಮಾಹಿತಿಯನ್ನು ಹಾಗೂ ಅದರ ಕುರಿತಾಗಿ ಶಿಕ್ಷಣವನ್ನು ನೀಡಲು ಪೇಟಿಎಂ 20 ಸಾವಿರ ಜನ ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಗಳನ್ನು ನೇಮಕ ಮಾಡಿಕೊಳ್ಳುವ ಆಲೋಚನೆಯನ್ನು ಮಾಡಿದೆ ಎನ್ನಲಾಗಿದೆ. ಈ ಸೇಲ್ಸ್ ಎಕ್ಸಿಕ್ಯೂಟಿವ್ ಗಳು ವ್ಯಾಪಾರಿಗಳು ಹಾಗೂ ಉದ್ಯೋಗಿಗಳಿಗೆ ಡಿಜಿಟಲ್ ಅಳವಡಿಕೆಯ ಕುರಿತಾಗಿ ಸಂಪೂರ್ಣವಾದ ಮಾಹಿತಿಯನ್ನು ನೀಡುವ ಜೊತೆಗೆ ಡಿಜಿಟಲ್ ಉತ್ಪನ್ನಗಳ ಕುರಿತಾಗಿ ಹಾಗೂ ಅವುಗಳ ಬಳಕೆಯ ಕುರಿತಾಗಿ ಉತ್ತೇಜನವನ್ನು ನೀಡುವರು ಎನ್ನಲಾಗಿದೆ.
ನೇಮಕಗೊಂಡ ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಗಳಿಗೆ ಮಾಸಿಕ 35,000 ರೂ.ಗಳ ಸಂಬಳದ ಜೊತೆಗೆ ಉತ್ತಮವಾದ ಕಮಿಷನ್ ಸಹ ಗಳಿಸುವ ಸಾಕಷ್ಟು ಅವಕಾಶಗಳು ಇವೆ. ಅಲ್ಲದೇ ಅವರು ಪೇಟಿಎಂ ಉತ್ಪನ್ನಗಳಾದ ಪೇಟಿಎಂ ಆಲ್-ಇನ್-ಒನ್ ಕ್ಯೂಆರ್ ಕೋಡ್ಗಳು, ಪೇಟಿಎಂ ಆಲ್ ಇನ್ ಒನ್ ಪಿಒಎಸ್ ಮೆಷಿನ್, ಪೇಟಿಎಂ ಸೌಂಡ್ಬಾಕ್ಸ್ ಮತ್ತು ಕಂಪನಿಯ ವ್ಯಾಲೆಟ್ಗಳು, ಯುಪಿಐ, ಪೇಟಿಎಂ ಪೋಸ್ಟ್ಪೇಯ್ಡ್, ಮರ್ಚೆಂಟ್ ಸಾಲಗಳು ಸೇರಿದಂತೆ ಪೇಟಿಎಂನ ಸಂಪೂರ್ಣ ಶ್ರೇಣಿಯ ಉತ್ಪನ್ನಗಳನ್ನು ಕುರಿತಾಗಿ ಸಹಾ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಬಳಸುವಂತೆ ಉತ್ತೇಜನ ನೀಡುವರು.
ಈ ಉದ್ಯೋಗಕ್ಕಾಗಿ, ಕನಿಷ್ಠ 18 ವರ್ಷ ವಯಸ್ಸಾಗಿರುವ, 10 ಅಥವಾ 12ನೇ ತರಗತಿಯನ್ನು ತೇರ್ಗಡೆ ಹೊಂದಿರುವ ಯಾವುದೇ ವ್ಯಕ್ತಿಯಾದರೂ ಸಹ ಅರ್ಜಿಯನ್ನು ಪೇಟಿಎಂ ಆ್ಯಪ್ ನ ಮೂಲಕ ಆನ್ಲೈನ್ ನಲ್ಲಿ ಸಲ್ಲಿಸಬಹುದಾಗಿದೆ. ಅಲ್ಲದೇ ದ್ವಿಚಕ್ರವಾಹನ ಉಳ್ಳವರಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುವುದು ಮತ್ತು ವಿವಿಧ ಉತ್ಪನ್ನಗಳ ಮಾರಾಟದಲ್ಲಿ ಅನುಭವ ಉಳ್ಳವರಿಗೆ ವಿಶೇಷ ಪ್ರಾಧಾನ್ಯತೆಯನ್ನು ನೀಡಲಾಗುವುದು. ಇದರ ಜೊತೆಗೆ ಸ್ಥಳೀಯ ಭಾಷೆ ಮತ್ತು ಸುತ್ತಮುತ್ತಲ ಪ್ರದೇಶಗಳ ಜ್ಞಾನ ಕೂಡಾ ಅಭ್ಯರ್ಥಿಗೆ ಇರಬೇಕಾದದ್ದು ಪ್ರಮುಖವಾದ ಅರ್ಹತೆಗಳಾಗಿವೆ.
ಪೇಟಿಎಂ ತನ್ನ ₹ 16,600 ಕೋಟಿ ಐಪಿಒನೊಂದಿಗೆ ಆದಷ್ಟು ಬೇಗ ಮಾರುಕಟ್ಟೆಯನ್ನು ಪ್ರವೇಶ ಮಾಡಲಿದೆ ಎಂದು ವರದಿಯಾಗಿದೆ. Paytm ನ IPO ಅಕ್ಟೋಬರ್ ವೇಳೆಗೆ ಬರುವ ಸಾಧ್ಯತೆಗಳು ದಟ್ಟವಾಗಿದೆ. ಇನ್ನು ಕಂಪನಿಯು ಜುಲೈ 15 ರಂದು ಮಾರುಕಟ್ಟೆ ನಿಯಂತ್ರಕ ‘ಸೆಬಿ’ ಗೆ ತನ್ನ ಆರಂಭಿಕ ಷೇರು ಮಾರಾಟಕ್ಕಾಗಿ ಕರಡು ಪತ್ರಗಳನ್ನು ಸಲ್ಲಿಸಿತ್ತು ಎನ್ನಲಾಗಿದೆ. ಪೇಟಿಎಂ ನ ಈ ಹೊಸ ಯೋಜನೆಯಿಂದಾಗಿ ಉದ್ಯೋಗಾಂಕ್ಷಿಗಳಿಗೆ ಒಂದು ಉತ್ತಮವಾದ ಉದ್ಯೋಗದ ಅವಕಾಶ ದೊರೆಯುವುದು ಎನ್ನಲಾಗಿದೆ.