ರಾಜ ಬಂಧನದಲ್ಲಿದ್ದರೂ ರಾಜನೇ: ಪಂಜರದೊಳಗಿಂದಲೇ ಕೊಕ್ಕರೆಗೆ ಪಾಠ ಕಲಿಸಿದ ಪಕ್ಷಿ ರಾಜ ಹದ್ದು!

ಪಕ್ಷಿ ಲೋಕದಲ್ಲಿ ಹದ್ದು ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಹದ್ದಿನ ನೋಟ ಬಹಳ ತೀಕ್ಷ್ಣ, ಹದ್ದಿನ ಹಾರಾಟ ಬಹಳ ಎತ್ತರ. ಹದ್ದಿನ ನೋಟದಲ್ಲಿ ಹಾಗೂ ಅದರ ವರ್ತನೆಯಲ್ಲಿ ಒಂದು ಗಾಂಭೀರ್ಯವನ್ನು ನಾವು ಕಾಣುತ್ತೇವೆ. ಬೇರೆ ಹಕ್ಕಿಗಳಿಗೆ ಹೋಲಿಕೆ ಮಾಡಿದಾಗ ಹದ್ದು ಪಕ್ಷಿಗಳ ರಾಜ ಎನ್ನುವಂತೆ ರಾಜಗಾಂಭೀರ್ಯಕ್ಕೆ ಹೆಸರಾಗಿದೆ ಎನಿಸುತ್ತದೆ. ಹದ್ದುಗಳ ಹಾರಾಟ ಹಾಗೂ ಹಾಗೂ ಅವು ಬೇ ಟೆಯಾಡುವ ವಿಧಾನದ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ವೈರಲ್ ಆಗಿದೆ. ಹದ್ದುಗಳ ವಿಡಿಯೋಗಳನ್ನು ನೋಡಿ ಅನೇಕ ಜನರು ಆಶ್ಚರ್ಯ ಪಟ್ಟಿದ್ದಾರೆ, ಅದಕ್ಕೆ ಮೆಚ್ಚುಗೆಗಳನ್ನು ನೀಡಿದ್ದಾರೆ
ಈಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ನಲ್ಲಿ ಹದ್ದಿನ ಒಂದು ವಿಶೇಷ ವಿಡಿಯೋ ಎಲ್ಲರ ಗಮನವನ್ನು ಸೆಳೆದಿದೆ.

ಈ ಹದ್ದಿನ ವೀಡಿಯೋ ವಿಶೇಷ ಹೇಗೆ ಎನ್ನುವುದಾದರೆ ಇಲ್ಲಿ ಹದ್ದು ಆಕಾಶದಲ್ಲಿ ಹಾರುತ್ತಿಲ್ಲ, ಅಥವಾ ತನ್ನ ತೀಕ್ಷ್ಣ ನೋಟದ ಸಹಾಯದಿಂದ ಬೇಟೆಯನ್ನು ಆಡುತ್ತಿಲ್ಲ. ಬದಲಾಗಿ ಈ ವಿಡಿಯೋದಲ್ಲಿ ಹದ್ದು ಪಂಜರದೊಳಗೆ ಇರುವ ದೃಶ್ಯವನ್ನು ನಾವು ನೋಡುತ್ತೇವೆ. ಆದರೆ ಪಂಜರದೊಳಗೇ ಇದ್ದರೂ ಸಾಮರ್ಥ್ಯದ ವಿಷಯದಲ್ಲಿ ತಾನು ಕಡಿಮೆಯೇನಿಲ್ಲ ಎನ್ನುವುದನ್ನು ಹದ್ದು ಮತ್ತೊಮ್ಮೆ ಸಾಬೀತು ಮಾಡಿದಂತೆ ಈ ದೃಶ್ಯವು ನಮ್ಮ ಕಣ್ಣಿಗೆ ಕಾಣುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿದಾಗ ಯಾವುದೋ ಒಂದು ಪ್ರಾಣಿ ಸಂಗ್ರಹಾಲಯದಲ್ಲಿ ಹದ್ದ‌ನ್ನು ಒಂದು ಪಂಜರದಲ್ಲಿ ಇಡಲಾಗಿದೆ.

ಈ ವೇಳೆ ಪಂಜರದಲ್ಲಿ ಇರುವ ಹದ್ದಿಗೆ ತಿನ್ನುವುದಕ್ಕೆ ಮಾಂಸದ ತುಂಡನ್ನು ನೀಡಲಾಗಿದೆ. ಹದ್ದು ಆ ಮಾಂಸದ ತುಂಡನ್ನು ತಿನ್ನುವಾಗ ಹೊರಗೆ ಒಂದು ಕೊಕ್ಕರೆ ಆ ಮಾಂಸದ ತುಂಡಿನ ಆಸೆಯಿಂದ ಹಾರಿ ಬಂದು ಪಂಜರದ ಹೊರಗೆ ಹದ್ದಿನ ಮುಂದೆ ಕುಳಿತುಕೊಂಡು ಮಾಂಸದ ತುಂಡನ್ನು ಕಸಿದುಕೊಳ್ಳಲು ಹೊಂಚನ್ನು ಹಾಕಿದೆ. ಹದ್ದು ಮಾಂಸವನ್ನು ತಿನ್ನುವ ವೇಳೆಯಲ್ಲಿ ಕೊಕ್ಕರೆಯೂ ಅದರ ಹತ್ತಿರಕ್ಕೆ ಹೋಗಿ ಅದನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತದೆ, ಆದರೆ ಹದ್ದು ಅದನ್ನು ದೂರ ಓಡಿಸುತ್ತದೆ. ಅನಂತರ ಹದ್ದು ಮತ್ತೊಮ್ಮೆ ಮಾಂಸವನ್ನು ತಿನ್ನಲು ಪ್ರಾರಂಭಿಸಿದ ಕೂಡಲೇ ಹೊಂಚುಹಾಕಿ ಕುಳಿತ ಕೊಕ್ಕರೆಯೂ ಮತ್ತೊಮ್ಮೆ ತನ್ನ ಕೊಕ್ಕನ್ನು ತೂರಿಸಿ ಆ ಮಾಂಸದ ತುಂಡನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುವಾಗಲೇ ಹದ್ದು ಕೊಕ್ಕರೆಯ ಕೊಕ್ಕನ್ನು ಗಟ್ಟಿಯಾಗಿ ಕಚ್ಚಿಕೊಂಡು ಬಿಡುತ್ತದೆ.

ಅನಿರೀಕ್ಷಿತವಾದ ಹದ್ದಿನ ಗಟ್ಟಿಯಾದ ಹಿಡಿತಕ್ಕೆ ಕೊಕ್ಕರೆ ಒಂದು ಕ್ಷಣ ಕಂಗಾಲಾಗಿದೆ. ಅದು ತನ್ನನ್ನು ತಾನು ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದೆ. ಅನಂತರ ಹದ್ದು ಅದರ ಕೊಕ್ಕನ್ನು ಬಿಟ್ಟು ಬಿಡುತ್ತದೆ. ಆಗ ಬದುಕಿದೆಯಾ ಬಡಜೀವ ಎನ್ನುವಂತೆ ಕೊಕ್ಕರೆ ನೋವಿನಿಂದ ಪಾರಾಗುತ್ತದೆ. ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 74 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಸುಮಾರು ಒಂದು ಲಕ್ಷಕ್ಕಿಂತಲೂ ಅಧಿಕ ಜನರು ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ನಾಲ್ಕು ಸಾವಿರಕ್ಕಿಂತಲೂ ಅಧಿಕ ಜನರು ಕಾಮೆಂಟ್ ಮಾಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋ ನೋಡಿ

ವಿಡಿಯೋ ಶೇರ್ ಮಾಡಿಕೊಂಡಿರುವ ಯೂಟ್ಯೂಬರ್ ಇದರ ವಿವರಣೆಯನ್ನು ನೀಡುತ್ತಾ ಜನ ಈ ದೃಶ್ಯವನ್ನು ಸೆರೆಹಿಡಿದ ಕ್ಯಾಮೆರಾಮ್ಯಾನ್ ಅನ್ನು ಟೀಕೆ ಮಾಡುತ್ತಿದ್ದಾರೆ. ಆದರೆ ಅದು ಸರಿಯಲ್ಲ, ಏಕೆಂದರೆ ಕ್ಯಾಮರಾ ಹಿಡಿದ ವ್ಯಕ್ತಿಯೂ ಕೂಡ ಇಂತಹ ದೃಶ್ಯವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಸರಿಯಾದ ಸಮಯದಲ್ಲಿ ಆತನ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಈಗ ಎಲ್ಲರ ಕಣ್ಣು ಮುಂದೆ ಬಂದು ರಂಜಿಸಿದೆ ಎಂದು ಹೇಳಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಸಹ ಬಡಪಾಯಿ ಕೊಕ್ಕರೆ ಬಗ್ಗೆ ಅಯ್ಯೋ ಪಾಪ ಎಂದಿದ್ದಾರೆ. ಇದೇ ವೇಳೆ ಪಂಜರದೊಳಗೆ ಇದ್ದರೂ ಕೂಡ ತನ್ನ ಸಾಮರ್ಥ್ಯವನ್ನು ಮೆರೆದ ಹದ್ದನ್ನು ನೆಟ್ಟಿಗರು ರಾಜ ಬಂಧನದಲ್ಲಿದ್ದರೂ ಸಹಾ ರಾಜನೆ ಎನ್ನುವ ನೀತಿಯನ್ನು ಹೇಳುತ್ತಾ ಹದ್ದನ್ನು ಹಾಡಿ ಹೊಗಳುತ್ತಿದ್ದಾರೆ.