ಇತಿಹಾಸದಲ್ಲೇ ಮೊದಲ ಬಾರಿಗೆ ಗ್ರೀನ್ ಲ್ಯಾಂಡ್ ನಲ್ಲಿ ಹಿಮ ಬೀಳುವ ಬದಲಾಗಿ ಮಳೆಯಾಗಿದೆ: ಎಚ್ಚರಿಕೆಯ ಗಂಟೆ ಎಂದಿದ್ದಾರೆ ವಿಜ್ಞಾನಿಗಳು!
ಇತಿಹಾಸದಲ್ಲಿ ಇದೇ ಮೊದಲನೇ ಬಾರಿಗೆ ಎನ್ನುವಂತೆ ಸದಾ ಹಿಮದಿಂದ ಕೂಡಿರುವ, ಗ್ರೀನ್ ಲ್ಯಾಂಡ್ ನ ಹಿಮ ಪದರಗಳ ಮೇಲಿನ ಅತ್ಯಂತ ಎತ್ತರದ ಸ್ಥಳದಲ್ಲಿ ಹಿಮ ಬೀಳುವ ಬದಲು ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಆಗಸ್ಟ್ 14ರಂದು ಹಿಮಪದರಗಳ ಸುಮಾರು 3,216 ಮೀಟರ್ ಎತ್ತರದ ಶಿಖರದಲ್ಲಿ ಹಲವು ಗಂಟೆಗಳ ಕಾಲ ಮಳೆಯಾಗಿದೆ. ಅಲ್ಲಿನ ತಾಪಮಾನವು ಸುಮಾರು ಒಂಬತ್ತು ಗಂಟೆಗಳ ಕಾಲ ಹಿಮ ಘನಿಕರಿಸುವ ಬಿಂದುವಿಗಿಂತ ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ. ಇದನ್ನು ದೃಢೀಕರಿಸುತ್ತಾ ವಿಜ್ಞಾನಿಗಳು ಸಹಾ ತಾವು ಶನಿವಾರ ಸಮಿಟ್ ಸ್ಟೇಷನ್ ನಲ್ಲಿ ಮಳೆಯನ್ನು ನೋಡಿದ್ದಾಗಿ ಹೇಳಿದ್ದಾರೆ.
ಸಮಿಟ್ ಸ್ಟೇಷನ್ ಕೇಂದ್ರವು ಗ್ರೀನ್‌ಲ್ಯಾಂಡ್ ನ ವೈಜ್ಞಾನಿಕ ಸಂಶೋಧನಾ ಕೇಂದ್ರವಾಗಿದೆ. ಇದನ್ನು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನವು 1989 ರಲ್ಲಿ ಸ್ಥಾಪಿಸಿತು.
ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ಇದು ಮೂರನೇ ಬಾರಿ ಗ್ರೀನ್ ಲ್ಯಾಂಡ್ ಸಮಿಟ್ ನಲ್ಲಿ ತಾಪಮಾನವು ಶೂನ್ಯಕ್ಕಿಂತ ಹೆಚ್ಚಾಗಿರುವುದು ಎನ್ನಲಾಗಿದೆ. ನ್ಯಾಷನಲ್ ಸ್ನೋ ಅಂಡ್ ಐಸ್ ಡೇಟಾ ಸೆಂಟರ್ ನ ಪ್ರಕಾರ, ಗ್ರೀನ್ ಲ್ಯಾಂಡ್ ನಲ್ಲಿ ಆಗಸ್ಟ್ 14 ರಿಂದ 16 ರವರೆಗಿನ ಮೂರು ದಿನಗಳಲ್ಲಿ ಒಡ್ಟಿ ಏಳು ಟನ್ ಮಳೆಯಾಗಿದೆ. 1950 ರಲ್ಲಿನ ಡೇಟಾ ಸಂಗ್ರಹಿಸಿದ ನಂತರ ಈಗ ಇದು ಅತ್ಯಧಿಕ ಮಳೆಯಾಗಿದೆ ಎಂದು ತಿಳಿದು ಬಂದಿದೆ. ಗ್ರೀನ್ ಲ್ಯಾಂಡ್ ನ ಆಗ್ನೇಯ ಕರಾವಳಿಯಿಂದ ಹಿಡಿದು ಸಮಿಟ್ ಸ್ಟೇಷನ್ ವರೆಗೂ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ. ಮಳೆ ಹಾಗೂ ಅಧಿಕ ತಾಪಮಾನವು ದ್ವೀಪದಾದ್ಯಂತ ವ್ಯಾಪಕವಾಗಿ ಹಿಮ ಕರಗಲು ಕಾರಣವಾಯಿತೆನ್ನಲಾಗಿದೆ.

ಇದು ಭಾನುವಾರದಂದು ಗ್ರೀನ್ ಲ್ಯಾಂಡ್ ನ ಹಿಮ ಪದರಗಳ ಮೇಲ್ಮೈ ಹಿಮದ ಭಾರೀ ನಷ್ಟಕ್ಕೆ ಕಾರಣವಾಗಿದೆ. ಇದು ಆಗಸ್ಟ್ ಮಧ್ಯದಲ್ಲಿ ದೈನಂದಿನ ಸರಾಸರಿಗಿಂತ ಏಳು ಪಟ್ಟು ಹೆಚ್ಚಾಗಿದೆ ಎನ್ನುವುದು ಒಂದು ಅಚ್ಚರಿಯ ಬೆಳವಣಿಗೆ ಆಗಿದೆ. ಸಮಿಟ್ ಸ್ಟೇಷನ್ ನಲ್ಲಿ ಹಿಂದಿನ ದಾಖಲೆ ಮುರಿದ ಈ ಭಾರೀ ಮಳೆಯು ಗ್ರೀನ್ ಲ್ಯಾಂಡ್ ಹಿಮ ಪದರಗಳ ಮೇಲೆ ಪರಿಣಾಮ ಬೀರುತ್ತಿರುವ ಹವಾಮಾನ ಬದಲಾವಣೆಯ ಬಗ್ಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಭೂಮಿಯ ಮೇಲಿನ ವಾತಾವರಣದಲ್ಲಿ ಎಂತಹ ಬದಲಾವಣೆಗಳು ಸಂಭವಿಸುತ್ತಿದೆ ಎನ್ನುವುದಕ್ಕೆ ಈ ಮಳೆಯು ಸಾಕ್ಷಿಯಾಗಿದೆ ಎನ್ನುವುದು ಕೆಲವು ವಿಜ್ಞಾನಿಗಳ ಅಭಿಪ್ರಾಯವೂ ಆಗಿದೆ.
ಕೊಲಂಬಿಯಾ ವಿಶ್ವವಿದ್ಯಾಲಯದ ಲ್ಯಾಮಾಂಟ್-ಡೊಹೆರ್ಟಿ ಅರ್ಥ್ ಅಬ್ಸರ್ವೇಟರಿಯ ಹಿಮನದಿಶಾಸ್ತ್ರಜ್ಞೆಯಾಗಿರುವ ಇಂದ್ರಾಣಿ ದಾಸ್ ಅವರು ಅಂತರರಾಷ್ಟ್ರೀಯ ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತಾ, ಈ ಮಳೆಯು ಹಿಮ ಪದರಗಳಿಗೆ ಖಂಡಿತ ಉತ್ತಮವಾದ ಅಥವಾ ಆರೋಗ್ಯಕರವಾದಂತಹ ಸಂಕೇತವಲ್ಲ. ಮಂಜುಗಡ್ಡೆಯ ಮೇಲೆ ನೀರು ಬೀಳುವುದು ಒಳ್ಳೆಯದಲ್ಲ. ಈ ನೀರಿನಿಂದ ಹಿಮ ಪದರಗಳು ಕರಗುವ ಸಾಧ್ಯತೆ ಹೆಚ್ಚಾಗಿದೆ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಯುಎಸ್ ನ್ಯಾಷನಲ್ ಸ್ನೋ ಅಂಡ್ ಐಸ್ ಡಾಟಾ ಸೆಂಟರ್‌ನ ಉಪ ಮುಖ್ಯ ವಿಜ್ಞಾನಿ ಟ್ವಿಲಾ ಮೂನ್ ಹೇ “ಗ್ರೀನ್ ಲ್ಯಾಂಡ್ ಶಿಖರದ ಮೇಲೆ ಈ ಅಪಾಯಕಾರಿ ಮಳೆ ಹೊಸ ವಿದ್ಯಮಾನವಲ್ಲ” ಎಂದು ಹೇಳಿದ್ದಾರೆ.