ದುರ್ಗಾ ದೇವಿ ಅವತಾರ ತಾಳಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ: ಬರೋಬ್ಬರಿ 2.10 ಲಕ್ಷ ರೂ ಖರ್ಚು

ಪಶ್ಚಿಮ ಬಂಗಾಳದಲ್ಲಿ ದುರ್ಗಾ ದೇವಿಯ ಉತ್ಸವ ಹೇಗೆ ನಡೆಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ‌. ನವರಾತ್ರಿ ವೇಳೆಗೆ ವೈವಿದ್ಯಮಯವಾದ, ಅಂದವಾದ ದುರ್ಗಾ ಮಾತೆಯ ಮೂರ್ತಿಗಳನ್ನು ಸಿದ್ದಪಡಿಸಿ, ಸ್ಥಾಪಿಸಿ ಭಕ್ತಿ ಶ್ರದ್ಧೆಯಿಂದ ಆರಾಧನೆ ಮಾಡುತ್ತಾರೆ. ಇನ್ನೇನು ನವರಾತ್ರಿ ಉತ್ಸವಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ ಎನ್ನುವಾಗಲೇ ಸುದ್ದಿಯೊಂದು ಹೊರ ಬಂದಿದ್ದು, ಈ ಬಾರಿ ನವರಾತ್ರಿ ಉತ್ಸವಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ದುರ್ಗಾ ದೇವಿಯ ಅವತಾರವನ್ನು ತಾಳಲಿದ್ದಾರೆ.‌ ಹೌದು ಇದೇನಿದು ಮಮತಾ ಬ್ಯಾನರ್ಜಿಯವರು ದುರ್ಗಾ ದೇವಿ ಅವತಾರದಲ್ಲಿ ? ಎನ್ನುವ ಪ್ರಶ್ನೆ ನಿಮಗೆ ಮೂಡಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

ಹೌದು ಮಮತಾ ಬ್ಯಾನರ್ಜಿಯನ್ನು ದುರ್ಗಾ ದೇವಿಯ ರೂಪದಲ್ಲಿ ಜನರ ಮುಂದೆ ತೋರಿಸಲು ಸಿದ್ಧತೆಗಳು ಬಹಳ ಭರದಿಂದ ಸಾಗಿದೆ. ಕೆಲವು ವರ್ಷಗಳ ಹಿಂದಷ್ಟೇ ಜಗತ್ತಿನ ಅತಿ ಎತ್ತರದ ದುರ್ಗಾ ವಿಗ್ರಹವನ್ನು ಕೆತ್ತಿದ್ದ ಮಿಂಟು ಪಾಲ್ ಇದೀಗ ಇಂತಹುದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಹೊಸ ಪುತ್ಥಳಿಯನ್ನು ಫೈಬರ್​ ಗ್ಲಾಸ್​ನಿಂದ ತಯಾರು ಮಾಡಲಾಗುತ್ತಿದೆ. ಈ ದುರ್ಗಾ ಮೂರ್ತಿಯನ್ನು ಕೋಲ್ಕತ್ತಾದ ನಜ್ರುಲ್​ಪುರ್​ ಉನ್ನಾಯನ್​ ಸಮಿತಿಯು ಪೆಂಡಾಲ್​ನಲ್ಲಿಟ್ಟು ಆರಾಧಿಸಲಾಗುವುದು ಎನ್ನಲಾಗಿದೆ. ಈ ಕಲಾಕೃತಿಯ ಬಗ್ಗೆ ಮಾದ್ಯಮದ ಮುಂದೆ ಮಾತನಾಡಿರುವ ಕಲಾವಿದ ಮಿಂಟು ಪಾಲ್​ ಅವರು ದುರ್ಗಾದೇವಿಯ ಕಲಾಕೃತಿಯು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೇ ಹೋಲುವಂತೆ ಇರಲಿದೆ ಎಂದಿದ್ದಾರೆ.

ಈ ಮೂರ್ತಿಯ ಎತ್ತರವನ್ನು ಸಹಾ ಮಮತಾ ಅವರ ಎತ್ತರದಷ್ಟೇ ಅಂದರೆ ಐದು ಅಡಿ ನಾಲ್ಕು ಅಂಗುಲ ಇರಲಿದ್ದು, ದೀದಿ ತೊಡುವ ಸೀರೆಯನ್ನೇ ಹೋಲುವಂತೆ ತೆಳು ಅಂಚಿನ ಬಿಳಿ ಬಣ್ಣದ ಸೀರೆಯನ್ನು ಕಲಾಕೃತಿಗೆ ತೊಡಿಸಲಾಗುವುದು ಎಂದು ಹೇಳಿದ್ದಾರೆ. ಈ ಮೂರ್ತಿ ಕೆತ್ತನೆಗೆ ಒಟ್ಟು 2.10 ಲಕ್ಷ ರೂಗಳನ್ನು ಖರ್ಚು ಮಾಡಲಾಗುತ್ತಿದೆ. ಮತ್ತೊಂದು ವಿಶೇಷ ಏನೆಂದರೆ ಈ ದುರ್ಗಾ ದೇವಿಯ ಕೈಯಲ್ಲಿ ಆಯುಧಗಳ ಬದಲಿಗೆ ಮಮತಾ ಬ್ಯಾನರ್ಜಿಯವರ ಸರ್ಕಾರದ ಹತ್ತು ಪ್ರತಿಷ್ಠಿತ ಯೋಜನೆಗಳನ್ನು ಬಿಂಬಿಸುವ ಫಲಕಗಳನ್ನು ನೀಡಲಾಗಿದೆ. ಮೂರ್ತಿ ನಿರ್ಮಾಣ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು ಇದೊಂದು ವಿಶೇಷ ಮೂರ್ತಿಯಾಗಲಿದೆ ಎಂದಿದ್ದಾರೆ‌ ಮಿಂಟೋ ಪಾಲ್ ಅವರು.