ಚಹಾ ಕುಡಿಯಿರಿ ಜೊತೆಗೆ ಕಪ್ ನ್ನು ತಿಂದುಬಿಡಿ, ತ್ರಿಮೂರ್ತಿ ಎಂಜಿನಿಯರ್ಸ್ ಗಳ ಅದ್ಭುತ ಐಡಿಯಾ!

ದೇಶದಲ್ಲಿ ದಿನದಿಂದ ದಿನಕ್ಕೆ ಕಸದ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲಿ ನಮ್ಮಂತಹ ಹೆಚ್ಚು ಜನಸಂಖ್ಯೆ ಇರುವ ದೇಶಕ್ಕೆ ಈ ಸಮಸ್ಯೆ ಮತ್ತಷ್ಟು ತಲೆನೋವಾಗಿ ಪರಿಣಮಿಸುತ್ತಿದೆ. ಯಾವ ಉಪಾಯಗಳಿಂದ ಕಸ ಕಡಿಮೆಯಾಗುತ್ತದೆ ಎಂದು ಸರಕಾರದ ಜೊತೆಗೆ ಅನೇಕ NGOಗಳು ಸಹ ತಲೆಕೆಡಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ದಿನದಿಂದ ದಿನಕ್ಕೆ ಕಸದ ಸಮಸ್ಯೆ ಕಡಿಮೆಯಾಗುವ ಬದಲಾಗಿ ರಾಕ್ಷಸ ರೂಪ ತಾಳುತ್ತಿದೆ. ಪ್ರತಿಯೊಂದು ವ್ಯಕ್ತಿ ದೇಶದ ಈ ಸಮಸ್ಯೆಯನ್ನು ದೂರಮಾಡಲು ಅಳಿಲು ಸಹಾಯ ಮಾಡಿದರೂ ಸಹ ದೇಶಕ್ಕೆ ಎಷ್ಟೋ ಸಹಾಯವಾಗುತ್ತದೆ.

ಇದೇ ಉದ್ದೇಶವನ್ನು ಹೊಂದಿದ ಮಹಾರಾಷ್ಟ್ರದ ಮಹಾಲಕ್ಷ್ಮಿಯ ನಿವಾಸವಾದ ಕೊಲ್ಲಾಪುರದ ಮೂವರು ಇಂಜಿನಿಯರುಗಳು ತಿನ್ನಲು ಉಪಯೋಗವಾಗುವ ಚಹಾದ ಕಪ್ ಗಳ ಮುಖಾಂತರ ಕಸವನ್ನು ಕಡಿಮೆಮಾಡಲು ಒಂದು ಅದ್ಭುತವಾದ ಐಡಿಯಾ ಕಂಡುಹಿಡಿದಿದ್ದಾರೆ. ದಿಗ್ವಿಜಯ ಗಾಯಕವಾಡ್, ಆದೇಶ್ ಕಾರಂಡೆ ಮತ್ತು ರಾಜೇಶ್ ಖಾಮಕರ್ ಈ ತ್ರಿವಳಿ ಇಂಜಿನಿಯರ್ಗಳು ತಿನ್ನಲು ಯೋಗ್ಯವಾಗಿರುವ ಬಿಸ್ಕೆಟ್ ನಲ್ಲಿಯೇ ಚಹ ನೀಡಲು ಪ್ರಾರಂಭಿಸಿದ್ದಾರೆ. ಇದರಿಂದ ಕೆಫೆ, ಚಹಾ ಕ್ಯಾಂಟೀನ್ ಮತ್ತು ಕಾಫಿ ಶಾಪ್ ಗಳಲ್ಲಿ ಕಪ್ ಗಳಿಂದಾಗುವ ಕಸ ತುಂಬಾ ಕಡಿಮೆಯಾಗಲು ಸಹಾಯವಾಗಿದೆ. ಕಾಗದ ಅಥವಾ ಪ್ಲಾಸ್ಟಿಕ್ ನಿಂದ ತಯಾರಾದ ಕಪ್ ಗಳಿಗೆ ಬಿಸ್ಕೆಟ್ ಕಪ್ಗಳು ಉತ್ತಮ ಆಪ್ಷನ್ ಆಗಿವೆ.

ಈ ಉಪಾಯವು ಮೊದಲು ದಿಗ್ವಿಜಯ್ ಈತನ ತಲೆಯಲ್ಲಿ ಹೊಳೆಯಿತು. ಆನಂತರ ಈ ವಿಧಾನ ಜಾರಿಯಲ್ಲಿ ತರುವ ಸಲುವಾಗಿ ಇದರ ಬಗ್ಗೆ ಚೆನ್ನಾಗಿ ಅಭ್ಯಾಸ ಮಾಡಿದರು. ಹೈದರಾಬಾದ್ ಮತ್ತು ಗುಜರಾತಿನಲ್ಲಿ ತಿನ್ನುವ ಸಲುವಾಗಿ ಉಪಯೋಗಿಸುವ ಚಮಚ ಮತ್ತು ಕಪ್ ಗಳನ್ನು ತರಿಸಿಕೊಂಡರು. ಸುಮಾರು ಒಂದೂವರೆ ವರ್ಷಗಳವರೆಗೆ ಅದರ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಆನಂತರ ಕೊಲ್ಲಾಪುರದಲ್ಲಿ ಈ ರೀತಿಯ ಉಪಾಯ ಮಾಡುವುದನ್ನು ನಿಶ್ಚಯಿಸಿದರು. ವಿಶೇಷವಾಗಿ ಸಾಮಾನ್ಯ ಜನರ ಜೇಬಿಗೆ ಭಾರ ಬೀಳದಂತೆ ಕಪ್ಪುಗಳನ್ನು ತಯಾರಿಸಿದರು.

ಇದಕ್ಕಾಗಿ ಬೇಕಾಗುವ ಮಷೀನ್ ನ್ನು ಹೈದರಾಬಾದ್ ನಿಂದ ತಯಾರಿಸಿ ತರಿಸಿಕೊಂಡರು. ಲಾಕ್ ಡೌನ್ ಸಮಯದಲ್ಲಿ ಈ ಕಲ್ಪನೆಗೆ ಅವರು ವಿಶೇಷವಾಗಿ ಸಮಯ ಖರ್ಚು ಮಾಡಿದರು. ಆನಂತರ ಈ ಜನವರಿ ತಿಂಗಳಿನಿಂದ ಮತ್ತೆ ಇಬ್ಬರೂ ಮಿತ್ರರ ಸಹಾಯದಿಂದ ತಿನ್ನಲು ಇಷ್ಟಪಡುವಂತಹ ಕಪ್ ಗಳ ನಿರ್ಮಿತಿ ಮಾಡಿದರು. ಪಟ್ಟಣದ ವಿವಿಧ ಹೊಟೇಲ್ಗಳಲ್ಲಿ, ಕ್ಯಾಂಟೀನ್ ಗಳಲ್ಲಿ, ಕೆಫೆ ಮತ್ತು ರೆಸ್ಟೋರೆಂಟ್ ಗಳಲ್ಲಿ ತಮ್ಮ ಈ ಕಪ್ ಗಳನ್ನು ಲಭ್ಯ ಮಾಡಿ ಕೊಡತೊಡಗಿದರು. ಸದ್ಯ ಕಪ್ ಗಳನ್ನು ತಯಾರಿಸುವ ಅವರ ಈ ಬಿಜಿನೆಸ್ ಇನ್ನೂ ಹೆಚ್ಚಿನ ಸ್ವರೂಪದಲ್ಲಿ ಬೆಳೆಸಬೇಕೆನ್ನುವ ಉದ್ದೇಶವನ್ನು ಹೊಂದಿದ್ದಾರೆ. ಸಮಯಕ್ಕನುಸಾರವಾಗಿ ಬಾವುಲ್ಸ್ ಮತ್ತು ಪ್ಲೇಟ್ ಗಳನ್ನು ತಯಾರಿಸುವ ವಿಚಾರವನ್ನು ಸಹ ಹೊಂದಿದ್ದಾರೆ.