ಮಾನವನ ದೇಹದಲ್ಲಿ ಹಂದಿಯ ಕಿಡ್ನಿಯನ್ನು ಟ್ರಾನ್ಸ್ ಪ್ಲಾಂಟ್ ಮಾಡುವಲ್ಲಿ ಡಾಕ್ಟರ್ ಗೆ ಸಿಕ್ಕಿತು ಯಶಸ್ಸು!

ವೈದ್ಯಕೀಯ ವಿಜ್ಞಾನದ ಪ್ರಪಂಚದಿಂದ ದೊಡ್ಡ ಸುದ್ದಿಯೊಂದು ಹೊರಬರುತ್ತಿದೆ. ವೈದ್ಯರು ಹಂದಿ ಮೂತ್ರಪಿಂಡವನ್ನು ಮಾನವ ದೇಹಕ್ಕೆ ಟ್ರಾನ್ಸ್ ಪ್ಲಾಂಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಐತಿಹಾಸಿಕ ಯಶಸ್ಸಿನ ನಂತರ ಮಾನವನ ದೇಹದಲ್ಲಿ ಅಂಗಾಂಗ ಟ್ರಾನ್ಸ್ ಪ್ಲಾಂಟ್ ಗಾಗಿ ಮಾನವ ಅಂಗಗಳ ತೀವ್ರ ಕೊರತೆಯನ್ನು ನೀಗಿಸಬಹುದು. ಹಲವಾರು ಪರೀಕ್ಷೆಗಳ ನಂತರ, ವೈದ್ಯರು ಹಂದಿಯ ಮೂತ್ರಪಿಂಡವು ಮಾನವ ದೇಹದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಸಹ ಹಂದಿಯ ಈ ಅಂಗವನ್ನು ತಕ್ಷಣವೇ ತಿರಸ್ಕರಿಸಲಿಲ್ಲ.

ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಈ ಐತಿಹಾಸಿಕ ಯಶಸ್ಸನ್ನು ಅಮೆರಿಕದ ವೈದ್ಯರು ಸಾಧಿಸಿದ್ದಾರೆ. ಸಂಪೂರ್ಣ ಮೂತ್ರಪಿಂಡ ಟ್ರಾನ್ಸ್ ಪ್ಲಾಂಟ್ ವಿಧಾನವನ್ನು ನ್ಯೂಯಾರ್ಕ್ ನಗರದ NYU ಲ್ಯಾಂಗನ್ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು. ಟ್ರಾನ್ಸ್ ಪ್ಲಾಂಟ್ ಮಾಡುವ ಮೊದಲು ಹಂದಿಯ ಜೀನ್ ಗಳನ್ನು ಬದಲಾಯಿಸಲಾಗಿದೆ ಎಂದು ವೈದ್ಯರು ಹೇಳಿದರು. ಹೀಗೆ ಮಾಡುವದರಿಂದ ಮಾನವನ ದೇಹವು ತಕ್ಷಣವೇ ಆ ಅಂಗವನ್ನು ತಿರಸ್ಕರಿಸುವುದಿಲ್ಲ.

ಬೇರೆ ಪ್ರಾಣಿಯ ಅಂಗವನ್ನು ಮಾನವ ದೇಹದಲ್ಲಿ ಯಶಸ್ವಿಯಾಗಿ ಟ್ರಾನ್ಸ್ ಪ್ಲಾಂಟ್ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ. ಈ ಹಿಂದೆ ಹಲವು ಪರೀಕ್ಷೆಗಳು ನಡೆದಿವೆ. ಆದರೆ ಪ್ರತಿ ಬಾರಿಯೂ ಕಸಿ ವಿಫಲವಾಗಿದೆ. ಆದರೆ ಮೊದಲ ಬಾರಿಗೆ, ಹಂದಿಯ ಮೂತ್ರಪಿಂಡವನ್ನು ಮಾನವ ದೇಹವು ಯಶಸ್ವಿಯಾಗಿ ಸ್ವೀಕರಿಸಿತು.

ಮಾಧ್ಯಮ ವರದಿಗಳ ಪ್ರಕಾರ, ಒಬ್ಬ ಬ್ರೇನ್ ಡೆಡ್ ಆದ ವ್ಯಕ್ತಿಯ ಮೇಲೆ ಈ ಕಸಿ ಮಾಡಲಾಗಿದೆ. ರೋಗಿಯ ಮೂತ್ರಪಿಂಡಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ಆದರೆ ಆತನನ್ನು ಜೀವನರಕ್ಷಕ ಯಂತ್ರದಿಂದ ತೆಗೆದುಹಾಕುವ ಮುನ್ನ ವೈದ್ಯರು ಆತನ ಕುಟುಂಬದವರಿಗೆ ಪರೀಕ್ಷೆ ಮಾಡಲು ಅನುಮತಿ ಕೇಳಿ ನಂತರ ಈ ಪ್ರಯೋಗವನ್ನು ನಡೆಸಲಾಯಿತು. ಮೂರು ದಿನಗಳ ನಂತರ ಹಂದಿಯ ಮೂತ್ರಪಿಂಡ ಬ್ರೇನ್ ಡೆಡ್ ರೋಗಿಯ ರಕ್ತನಾಳಗಳಿಗೆ ಸಂಪರ್ಕಗೊಂಡಿತ್ತು. ಮೂತ್ರಪಿಂಡವನ್ನು ದೇಹದ ಹೊರಗೆ ಇಡಲಾಗಿದೆ.

ಅಮೇರಿಕೆಯ ಯುನೈಟೆಡ್ ನೆಟ್ವರ್ಕ್ ಫಾರ್ ಆರ್ಗನ್ ಶೇರಿಂಗ್ ಪ್ರಕಾರ, ಪ್ರಸ್ತುತ 1,07,000 ಜನರು ಅಂಗಾಂಗ ಕಸಿಗಾಗಿ ಕಾಯುವ ಪಟ್ಟಿಯಲ್ಲಿದ್ದಾರೆ. ಅವರಲ್ಲಿ 90,000 ಕ್ಕೂ ಹೆಚ್ಚು ಜನರಿಗೆ ಮೂತ್ರಪಿಂಡಗಳು ಬೇಕಾಗುತ್ತವೆ. ವರದಿಯ ಪ್ರಕಾರ, ರೋಗಿಯು ಮೂತ್ರಪಿಂಡ ಕಸಿಗಾಗಿ ಸರಾಸರಿ ಮೂರರಿಂದ ಐದು ವರ್ಷ ಕಾಯಬೇಕಾಗುತ್ತದೆ. ಅಮೇರಿಕನ್ ವೈದ್ಯರ ಈ ಯಶಸ್ಸನ್ನು ವರದಾನವೆಂದು ಪರಿಗಣಿಸಲಾಗಿದೆ.