‘ಆಟ’ ಮುಗಿಸಿ ತಂದೆಯತ್ತ ಸಾಗಿದ ‘ಯುವರಾಜಕುಮಾರ’!ಇಹಲೋಕ ತ್ಯಜಿಸಿದ ಪುನೀತ್!

ಇಂದಿನ ದಿನ ಕನ್ನಡ ಚಿತ್ರರಂಗದಲ್ಲಿ ಕರಾಳ ದಿವಸ ಎಂದರೆ ತಪ್ಪಾಗಲ್ಲ. ಏಕೆಂದರೆ ಇಂದಿನ ದಿನ ಕನ್ನಡ ನಾಡು ಮಾಣಿಕ್ಯ ಕಳೆದುಕೊಂಡಿದೆ. ಅದೆಷ್ಟೋ ಆಸೆ ಆಕಾಂಕ್ಷೆಗಳನ್ನು ಹೊತ್ತುಕೊಂಡು ಮುಂದೆ ಹೊರುಡುತ್ತಿರುವ ಕುದುರೆಯನ್ನು ದೇವರೇ ಅಡ್ಡವಾಗಿ ನಿಂತು ಆಟ ಮುಗಿಸಿದ್ದಾನೆ. ದೇವರೇ ನಿನಗೆ ಕರುಣೆಯೇ ಇಲ್ಲವೇ.

ಕನ್ನಡ ಚಿತ್ರರಂಗದ ಮೇರು ನಟ ‘ಅಪ್ಪು’ (ಪುನೀತ್) ಅವರು ಇಂದು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪಯಣ ಮಾಡಿದ್ದಾರೆ. ಇದುವರೆಗೂ ಈ ಸುದ್ದಿ ನಂಬೋಕೆ ಆಗುತ್ತಿಲ್ಲ. ಪುನೀತ್ ಅವರು ಕನ್ನಡ ನಾಡಿನ ಹೆಮ್ಮೆಯ ಪುತ್ರ, ಕನ್ನಡ ಚಿತ್ರರಂಗದ ಯುವರಾಜಕುಮಾರ್ ಆಗಿದ್ದರು. ತಂದೆಯ ಸಂಸ್ಕಾರದಲ್ಲಿ ಬೆಳೆದ ಅಪ್ಪು ಅವರು ತಂದೆಯಂತೆ ನಾನು ಅಂತ ತೋರಿಸಿಕೊಟ್ಟಿದ್ದಾರೆ. ತಾವು ಮಾಡುವ ಪ್ರತಿಯೊಂದು ಕಾರ್ಯ ಜನರ ಒಳಿತಿಗಾಗಿ ಮಾಡಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ತಂದೆಯ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತಾ ಚಂದನವನಕ್ಕೆ ಬಂದಿದ್ದರು. ಅವರು ಭಕ್ತ ಪ್ರಹ್ಲಾದ್ ಚಿತ್ರದ ಮುಖಾಂತರ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದರು. ಸುಮಾರು 50 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ‘ನಟಸಾರ್ವಭೌಮ’ ಎಂದೆನಿಸಿಕೊಂಡರು. ಯುವ ಪೀಳಿಗೆಗೆ ಧೈರ್ಯ ಸಾಹಸ ನೀಡುತ್ತಾ ‘ಯುವರತ್ನ’ ರಾದರು. ತಂದೆಯ ಗುಣಗಳನ್ನು ಹೊಂದಿದ ಪುನೀತ್ ಅವರು ಚಿತ್ರರಂಗದಲ್ಲಿ ಪ್ರತಿಯೊಬ್ಬ ಕಲಾವಿದರಿಗೆ ಕೈಲಾದಷ್ಟು ಸಹಾಯ ಮಾಡಿ ರಾಜಕುಮಾರ್ ಎನಿಸಿಕೊಂಡರು.

ಪುನೀತ್ ರಾಜಕುಮಾರ್ ಅವರು ಮಾಡಿರುವ ಸಾಮಾಜಿಕ ಕಾರ್ಯಗಳನ್ನು ಹೇಳೋಕ್ಕೆ ಸಾಲದು. 26 ಅನಾಥಾಶ್ರಮ, 48 ಉಚಿತ ಶಾಲೆಗಳು, 16 ವೃದ್ಧಾಶ್ರಮ, 19 ಗೋಶಾಲೆ ಮತ್ತು 1800 ಮಕ್ಕಳ ಉಚಿತ ಶಿಕ್ಷಣ ನೀಡುವ ಹೊಣೆಯನ್ನು ಅಪ್ಪು ಅವರು ಹೊತ್ತಿದ್ದರು. ಇಷ್ಟೊಂದು ಪುಣ್ಯದ ಕೆಲಸ ಮಾಡುತ್ತಿರುವ ಯುವರಾಜನನ್ನು ಕೊನೆಗೂ ವಿಧಿ ಕರೆದುಕೊಂಡು ಹೋಯಿತು. ಅಪ್ಪು ಅವರ ಅಗಲುವಿಕೆ ಇಡೀ ಕರ್ನಾಟಕ ಜನತೆಗೆ ಅಷ್ಟೇ ಅಲ್ಲ ಕನ್ನಡ ಮೇಲೆ ಪ್ರೀತಿ ಹೊಂದಿದ ಪ್ರತಿಯೊಬ್ಬರ ಕಣ್ಣಲ್ಲಿ ನೀರು ತಂದೊದಗಿದೆ.

ಅಪ್ಪು ಅವರು ಮುಂಜಾನೆಯ ತಮ್ಮ ದಿನನಿತ್ಯದ ಕಾರ್ಯಗಳನ್ನು ಮುಗಿಸಿ ಜೀಮ್ ಮಾಡುತ್ತಿದ್ದಾಗ ಅವರ ಹೃದಯಕ್ಕೆ ಸ್ವಲ್ಪ ನೋವು ಉಂಟಾಯಿತು. ತಕ್ಷಣ ಅವರು ತಮ್ಮ ಕುಟುಂಬದ ವೈದ್ಯರನ್ನು ಕರೆಸಿ ನಡೆದ ಘಟನೆ ತಿಳಿಸಿದರು. ತಪಾಸಣೆ ಮಾಡಿದ ವೈದ್ಯರು ಅಪ್ಪು ಅವರ ಪರಸ್ಥಿತಿ ತುಂಬಾ ಗಂ#ಭೀರವಾಗಿದೆ ಇವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಿ ಎಂದು ಸಲಹೆ ನೀಡಿದರು. ಇದನ್ನು ಆಲಿಸಿದ ಕುಟುಂಬದವರು ತಕ್ಷಣವೇ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಿದರು. ವಿಧಿಯಾಟ ನೋಡಿ ಆಸ್ಪತ್ರೆಯಲ್ಲಿ ಸೌಲಭ್ಯವಿರುವ ಎಲ್ಲ ಉಪಚಾರ ಮಾಡಿದರು ಸಹ ಅಪ್ಪು ಅವರ ಪ್ರಾಣದ ಪಕ್ಷಿಯನ್ನು ಉಳಿಸಲು ಸಾಧ್ಯವಾಗಲಿಲ್ಲ.

ದೇವರು ಒಳ್ಳೆಯವರನ್ನು ಆದಷ್ಟು ಬೇಗ ಕರೆದುಕೊಂಡು ಹೋಗುತ್ತಾನೆ ಎಂಬುದು ಇಂದು ಮತ್ತೊಮ್ಮೆ ಸತ್ಯವಾಗಿದೆ. ಸಾರ್ವಜನಿಕರಿಗಾಗಿ ಪುನೀತ್ ಅವರ ಪಾರ್ಥಿವ ಶರೀರದ ದರ್ಶನ ಕಂಠೀರವ ಸ್ಟೇಡಿಯಂನಲ್ಲಿ ಸಾಯಂಕಾಲ 6 ಗಂಟೆಗೆ ಶುರುವಾಗಲಿದೆ. ಅವರ ಅಂತಿಮ ಸಂಸ್ಕಾರವನ್ನು ಎಲ್ಲಿ ಮಾಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅವರ ಕುಟುಂಬದವರ ಆಸೆಯಂತೆ ಅಂತಿಮ ಸಂಸ್ಕಾರ ನಡೆಸಲಾಗುವದು ಎಂದು ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಅಪ್ಪು ಅವರ ಅಂತಿಮ ಯಾತ್ರೆಗೆ ಸಹಕರಿಸಿ ಎಂದು ಬೊಮ್ಮಾಯಿಯವರು ಕಾರ್ನಾಟದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.