ಮದುವೆಯಲ್ಲಿ 70 ಗ್ರಾಂ ಚಿನ್ನದ ನೆಕ್ಲೆಸ್ ಕಳವು; ಸಂಬಂಧಿಕರ ಮಾನ ಕಾಯ್ದು, ಪೊಲೀಸರ ಪ್ಲಾನ್ ಯಶಸ್ವಿಯಾಗಿತ್ತು ಹೇಗೆ?
ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಸಮಾರಂಭದಲ್ಲಿ ಮೈಮರೆತಿರುವಾಗ ಮಹಿಳೆಯೊಬ್ಬಳ 70 ಗ್ರಾಂ ಚಿನ್ನದ ಸರ ಕಳುವಾಯಿತು. ಮದುವೆಯ ನಂತರ ಮದುಮಗಳಿಗೆ ವರನ ಜೊತೆಗೆ ಕಳುಹಿಸುವ ಕಾರ್ಯಕ್ರಮ ಜೋರಾಗಿ ನಡೆಯಿತು. ಬಂದಿರತಕ್ಕಂತಹ ಎಲ್ಲ ಅತಿಥಿಗಳು ಮದುವೆ ಮುಗಿಸಿ ತಮ್ಮ ತಮ್ಮ ಮನೆಗೆ ಹೋಗುವ ತಯಾರಿಯಲ್ಲಿದ್ದರು. ಅಷ್ಟರಲ್ಲಿ ಮಹಿಳೆಯೊಬ್ಬಳು ತನ್ನ ಕೊರಳಲ್ಲಿಯ 70 ಗ್ರಾಂ ಚಿನ್ನದ ಬೆಲೆಬಾಳುವ ನೆಕ್ಲೆಸ್ ಕಳುವಾಗಿದೆ ಎಂದು ಹೇಳಿದಾಗ ಎಲ್ಲರೂ ಬೆಸ್ತು. ಮಹಿಳೆಯು ಆದಷ್ಟು ಬೇಗ ಈ ಪ್ರಕರಣವನ್ನು ಪೊಲೀಸ್ ಕಂಟ್ರೋಲ್ ರೂಮಿಗೆ ಕಾಲ್ ಮಾಡಿ ತಿಳಿಸಿದ್ದಾಳೆ. ಪ್ರಕರಣ ತಿಳಿದ ಪೊಲೀಸರು ಆದಷ್ಟು ಬೇಗ ಮದುವೆ ಸ್ಥಳಕ್ಕೆ ಹಾಜರಾಗಿದ್ದಾರೆ. ಮದುವೆ ಮಂಟಪದಲ್ಲಿ ಉಪಸ್ಥಿತರಿದ್ದ ಅತಿಥಿಗಳೆಲ್ಲರೂ ಒಬ್ಬರು ಬೇರೊಬ್ಬರ ಸಂಬಂಧಿಕರೇ ಆಗಿದ್ದರಿಂದ ಪ್ರಕರಣವನ್ನು ಹೇಗೆ ಕೊನೆಗಾಣಿಸಬೇಕು ಎಂಬುದೇ ಪೊಲೀಸರ ಮುಂದೆ ದೊಡ್ಡ ಪ್ರಶ್ನೆಯಾಗಿತ್ತು.
ಪ್ರಸ್ತುತ ಘಟನೆ ಕಳೆದ ಬುಧವಾರ ಮಹಾರಾಷ್ಟ್ರದ ಉಪ ರಾಜಧಾನಿಯಾದ ನಾಗ್ಪುರ್ ನಲ್ಲಿಯ ಬೃಂದಾವನ್ ಮ್ಯಾರೇಜ್ ಹಾಲ್ ನಡೆದಿದೆ. ಮದುವೆಗಾಗಿ ಸುಮಾರು 200 ಜನ ಅತಿಥಿಗಳು ಸೇರಿದ್ದರು. ಮದುಮಗಳು ಗಂಡನ ಮನೆಗೆ ಹೋದ ನಂತರ ಉಪಸ್ಥಿತರಿದ್ದ ಅತಿಥಿಗಳು ಸಹ ತಮ್ಮ ತಮ್ಮ ಮನೆಗೆ ಹೋಗುವ ಲಗುಬಗೆಯಲ್ಲಿದ್ದಾಗಲೇ ಮಹಿಳೆಯೊಬ್ಬಳು ತನ್ನ ಕೊರಳಲ್ಲಿಯ 70 ಗ್ರಾಂ ಚಿನ್ನದ ಸರವನ್ನು ಬ್ಯಾಗ್ ನಲ್ಲಿ ತೆಗೆದಿಟ್ಟಿದ್ದು ಕಳುವಾಗಿದೆ, ಯಾರಿಗಾದರೂ ಆ ಚಿನ್ನದ ಸರ ದೊರಕಿದೆಯಾ? ಎಂದು ಸಂಬಂಧಿಕರಿಗೆ ಕೇಳುತ್ತಿದ್ದಳು.
ಅದಕ್ಕೆ ಅಲ್ಲಿ ಉಪಸ್ಥಿತರಿದ್ದ ಅತಿಥಿಗಳು ಯಾರು ಏನು ಹೇಳದ ಕಾರಣ ಮಹಿಳೆ ಕೊನೆಗೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಫೋನ್ ಮಾಡಿ ಪೊಲೀಸರನ್ನು ಕರೆಯಿಸಿದ್ದಳು.
ಪೊಲೀಸರು ಬಂದ ನಂತರ ಮದುಮಗಳ ತಂದೆ ಪೊಲೀಸರಿಗೆ ಭೇಟಿಯಾಗಿ, ‘ಇಲ್ಲಿಯವರೆಗೆ ತುಂಬಾ ಸುಂದರವಾಗಿ ನಡೆದ ಮದುವೆಯ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಕಲಂಕ ತಗುಲಬಾರದು ಹಾಗೂ ಮದುವೆಗೆ ಬಂದ ಅತಿಥಿಗಳ ಮಾನ ಹಾನಿಯಾಗದಂತೆ ದಯವಿಟ್ಟು ಕಾಳಜಿ ತೆಗೆದುಕೊಳ್ಳಿ’ ಎಂದು ವಿನಂತಿ ಮಾಡಿದರು. ಪೊಲೀಸರು ಸಹ ತುಂಬಾ ನಾಜೂಕಿನಿಂದ ಹೆಣೆಯಲಾದ ಸಂಬಂಧಗಳ ದಾರ ಸ್ವಲ್ಪವೂ ಸಡಿಲವಾಗಬಾರದೆಂದು ಯೋಚಿಸಿ ಕೊನೆಗೆ ಪೊಲೀಸ್ ಉಪನಿರೀಕ್ಷಕರಾದ ದಿಲೀಪ್ ನಾಗಪುರೆ ಅವರು ಒಂದು ಪ್ಲಾನ್ ಹಾಕಿದರು.
ಪೊಲೀಸ್ ಉಪನಿರೀಕ್ಷಕರಾದ ದಿಲೀಪ್ ಅವರು ಮೊದಲು ಅಲ್ಲಿದ್ದ ಎಲ್ಲ ಅತಿಥಿಗಳಿಗೆ ಒಂದೆಡೆ ಸೇರಿಸಿ, ನಿಮ್ಮ ಎದುರುಗಡೆ ಒಂದು ಕೋಣೆ ಇದೆ, ಆ ಕೋಣೆಯಲ್ಲಿ ನಿಮಗೆ ಒಬ್ಬೊಬ್ಬರಾಗಿ ಹೋಗಬೇಕಾಗಿದೆ. ಚಿನ್ನದ ಸರವನ್ನು ಯಾರೇ ಕದ್ದಿರಲಿ ಅವರು ಆ ಕೋಣೆಯ ಒಳಗಿದ್ದ ಮ್ಯಾಟ್ರೆಸ್ ಕೆಳಗಡೆ ಅದನ್ನು ಇಟ್ಟು ಹೊರಗಡೆ ಬನ್ನಿ. ಹೀಗೆ ಮಾಡಿದಲ್ಲಿ ಯಾರ ಮೇಲೂ ಆರೋಪ ದಾಖಲಿಸಲಾಗುವದಿಲ್ಲ ಎಂದು ಖಡಕ್ಕಾಗಿ ಸೂಚನೆ ನೀಡಿದರು. ಉಪನಿರೀಕ್ಷಕರು ನೀಡಿದ ಸೂಚನೆಯ ಪ್ರಕಾರ ಅತಿಥಿಗಳು ಒಬ್ಬೊಬ್ಬರಾಗಿ ಕೋಣೆಯಲ್ಲಿ ಪ್ರವೇಶಮಾಡಿ ವಾಪಸ್ ಬರಲು ಶುರು ಮಾಡಿದರು. ಈ ರೀತಿ ಎಲ್ಲ ಅತಿಥಿಗಳು ಕೋಣೆಯಲ್ಲಿ ಪ್ರವೇಶಿಸಿ ತಿರುಗಿ ಬಂದ ನಂತರ ಕೋಣೆಯ ತಪಾಸಣೆ ಮಾಡಲಾಯಿತು. ಕಳವಾಗಿದ್ದ ಚಿನ್ನದ ಸರ ಮೆಟ್ರೆಸ್ ಕೆಳಗಡೆ ಪೊಲೀಸರಿಗೆ ಸಿಕ್ಕಿತು. ಈ ರೀತಿಯಾಗಿ ಪೊಲೀಸರು ಮದುವೆಗೆ ಉಪಸ್ಥಿತರಿದ್ದ ಯಾವ ಅತಿಥಿಗಳ ಮನಸ್ಸನ್ನು ನೋಯಿಸದೇ 70 ಗ್ರಾಂ ಚಿನ್ನದ ನೆಕ್ಲೆಸ್ ನ ಕಳ್ಳತನದ ತನಿಖೆಯನ್ನು ತುಂಬಾ ಸರಳವಾಗಿ ಮಾಡಿ ಜನರಿಂದ ಶಬ್ಬಾಷ್ ಎನಿಸಿಕೊಂಡಿದ್ದಾರೆ. ಪೊಲೀಸರ ಯುಕ್ತಿಯನ್ನು ಡೆಪ್ಯೂಟಿ ಕಮಿಷನರ್ ರವರು ಸಹ ಹಾಡಿ ಹೊಗಳಿದ್ದಾರೆ.