ಮೂರೂ ಮಕ್ಕಳು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಮುನ್ನವೇ ಜಗತ್ತು ತೋರಿಸಲು ಹೊರಟ ತಂದೆ-ತಾಯಿ! ಮನ ಕಲಕುವ ವ್ಯಥೆಯ ಕಥೆ…
ವ್ಯಕ್ತಿ ತಿಳಿದುಕೊಂಡಂತೆ ಅಷ್ಟು ಸರಳವಾಗಿಲ್ಲ ಈ ಬದುಕು. ಎಷ್ಟೋ ಸಲ ಇದು ಸರ್ವಸಾಮಾನ್ಯ ವ್ಯಕ್ತಿಯ ಅನುಭವಕ್ಕೆ ಬಂದೇ ಬರುತ್ತದೆ. ಕೆಲವು ಕಷ್ಟಗಳು ಮನೆ ಬಾಗಿಲಿಗೆ ಬಂದು ಆಕಸ್ಮಿಕವಾಗಿ ಹಾಜರಿ ನೀಡಿದಾಗ ಬದುಕು ಈ ಕೆಟ್ಟ ಅನುಭವವನ್ನು ನೀಡುತ್ತದೆ. ಜೀವನ ಎಲ್ಲವೂ ಪರ್ಫೆಕ್ಟ್ ನಡೆದಿರುವಾಗಲೇ ಕೆಟ್ಟ ಘಳಿಗೆಗಳು ಬದುಕಿನಲ್ಲಿ ಒಮ್ಮೆಲೇ ಬಿರುಗಾಳಿ ಎಬ್ಬಿಸುತ್ತವೆ. ಈ ರೀತಿಯ ಕೆಟ್ಟ ಅನುಭವ ಜೀವನದಲ್ಲಿ ಕೆಲವರಿಗೆ ಒಮ್ಮೆಯಾದರೆ ಇನ್ನು ಕೆಲವರಿಗೆ ಮೇಲಿಂದ ಮೇಲೆ ಆಗುತ್ತದೆ.
ಪ್ರಸ್ತುತ ಲೇಖನದಲ್ಲಿಯ ವಿಷಯ ಓದಿದಾಗ ಮೂವರು ಮಕ್ಕಳ ಬಗ್ಗೆ ತುಂಬಾ ಕರುಣೆ ಉಂಟಾಗುತ್ತದೆ. ಕೆನಡಾ ದೇಶದ ನಿವಾಸಿಗಳಾದ ಈ ಕಪಲ್ ಗೆ ನಾಲ್ಕು ಜನ ಮಕ್ಕಳು. ಇವರು ತಮ್ಮ ಇದ್ದ ಬದ್ದ ಕೆಲಸಗಳನ್ನು ಬದಿಗೊತ್ತಿ ನಾಲ್ಕು ಮಕ್ಕಳನ್ನು ಜೊತೆಗೆ ಸೇರಿಸಿಕೊಂಡು ಮನೆ ತೊರೆದು ಜಗತ್ತನ್ನೇ ಸುತ್ತಾಡಲು ಹೊರಟಿದ್ದಾರೆ. ಅದರ ಹಿಂದಿನ ಕಾರಣವನ್ನು ಕೇಳಿದಾಗ ಮನ ನಲಗುತ್ತದೆ. ಇನ್ನು ಕೆಲವೇ ದಿನಗಳ ನಂತರ ನಾಲ್ಕು ಮಕ್ಕಳಲ್ಲಿ ಮೂವರು ಮಕ್ಕಳು ತಮ್ಮ ಕಣ್ಣಿನ ದೃಷ್ಟಿಯನ್ನು ಅಥವಾ ಬೆಳಕನ್ನು ಕಾಯಂ ಆಗಿ ಕಳೆದುಕೊಳ್ಳಲಿದ್ದಾರೆ. ಈ ನೋವಿನಿಂದಾಗಿಯೇ ಪೋಷಕರು ಇಂಥ ಒಂದು ದೊಡ್ಡ ನಿರ್ಣಯಕ್ಕೆ ಕೈ ಹಾಕಿದ್ದಾರೆ. ಈ ಪ್ರವಾಸ ಅಷ್ಟೊಂದು ಸರಳವಾಗಿಲ್ಲ. ಆದರೆ ಅವರಿಗೆ ಜೀವನಪೂರ್ತಿ ಕೊನೆಯವರೆಗೂ ನೆನಪಿನಲ್ಲಿರುವ ಸುಂದರಘಳಿಗೆ ಮಾತ್ರ ನಿಶ್ಚಿತವಾಗಿಯೂ ಆಗಲಿದೆ. ಈ ಕಠಿಣ ಪ್ರಸಂಗ ಸೆಬೇಸ್ಟಿಯನ್ ಪೇಲಿಟಿಯರ್ ಹಾಗೂ ಇದಿತ್ ಲೆಮೆ ಈ ದಂಪತಿಗಳಿಗೆ ಎದುರಾಗಿದೆ. ದಂಪತಿಗಳು ಈ ಭಯಾನಕವಾದ ಪರಿಸ್ಥಿತಿಯ ಜೊತೆಗೆ ಹೊರಾಡುವ ಸಲುವಾಗಿ ಮಾಡುತ್ತಿರುವ ಈ ಜಬರ್ದಸ್ತ ಪ್ರಯತ್ನ ಇವರಿಬ್ಬರಿಗೂ ಜೀವನದ ಕೊನೆಯವರೆಗೂ ದುಃಖ ನೀಡದೆ ಸ್ವಲ್ಪಾದರೂ ನೆಮ್ಮದಿ ನೀಡುತ್ತದೆ ನಿಶ್ಚಿತ.
ಸದ್ಯ ಈ ಜೋಡಿ ತಮ್ಮ ನಾಲ್ಕು ಮಕ್ಕಳಿಗೆ ಜಗತ್ತನ್ನು ತೋರಿಸುವ ಸಲುವಾಗಿ ಮನೆಯಿಂದ ಹೊರಗೆ ಬಿದ್ದಿದ್ದಾರೆ. ಇದರ ಹಿಂದಿನ ಉದ್ದೇಶ ಅವರಿಗೆ ಸ್ವತಃ ಎಂಜಾಯ್ ಮಾಡುವುದಿಲ್ಲ, ನಾಲ್ಕು ಮಕ್ಕಳಲ್ಲಿ ಮುಖ್ಯವಾಗಿ ಮೂರು ಮಕ್ಕಳಿಗೆ ತಮ್ಮ ಕಣ್ಣಿನ ಬೆಳಕು ಕಳೆದುಕೊಳ್ಳುವ ಮುನ್ನ ಜಗತ್ತಿನ ಪರಿಚಯ ಮಾಡಿಕೊಡುವದಿದೆ.

ಈ ದಂಪತಿಗಳ ಮೂರು ಮಕ್ಕಳಿಗೆ ತುಂಬಾ ಅಪರೂಪವಾದ ಕಾಯಿಲೆ ಇದೆ. ಈ ಕಾಯಿಲೆಯಿಂದಾಗಿ ವಯಸ್ಸಿನ ಜೊತೆಗೆ ಮಕ್ಕಳ ದೃಷ್ಟಿಯು ಸಹಿತ ಕಡಿಮೆಯಾಗುತ್ತಾ ಹೋಗುತ್ತದೆ. ಕೊನೆಗೆ ಒಂದು ದಿನ ವ್ಯಕ್ತಿ ಸಂಪೂರ್ಣವಾಗಿ ದೃಷ್ಟಿಹೀನನಾಗುತ್ತಾನೆ.
ಮಗುವಿನ ಈ ಕಾಯಿಲೆಯ ಬಗ್ಗೆ ಪೋಷಕರಿಗೆ ಹೇಗೆ ಗೊತ್ತಾಯ್ತು?
ಸೆಬೇಸ್ಟಿಯನ್ ಮತ್ತು ಇದಿತ್ ರ ಮೊದಲ ಮಗಳು ಮಿಯಾ ಕೇವಲ 3 ವರ್ಷದವಳಿದ್ದಾಗ ಆಕೆಗೆ ನೋಡಲು ಸಮಸ್ಯೆಯಾಗುತ್ತಿದೆ ಎಂಬುದು ಅರಿವಾದಾಗ ಆಕೆಯನ್ನು ಆಯ್ ಸ್ಪೆಷಲಿಸ್ಟ್ ಕಡೆಗೆ ಕರೆದುಕೊಂಡು ಹೋದರು. ಆಗ ಡಾಕ್ಟರ್ ನಿಮ್ಮ ಮಗಳು ರೇಟಿನೈಟಿಸ್ ಪಿಗ್ಮೆಂಟೊಸಾ ( retinitis pigmentosa) ಹೆಸರಿನ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇದೇ ಕಾಯಿಲೆಯಿಂದಾಗಿ ನಿಮ್ಮ ಹುಡುಗಿ ಮಿಯಾ ಬಹಳ ಹೊತ್ತಿನವರೆಗೆ ನೋಡಲು ಸಮಸ್ಯೆ ಬರುತ್ತಿದೆ ಎಂದು ಹೇಳಿದರು. ಈಗ ಮಿಯಾ 9 ವರ್ಷದವಳಿದ್ದಳು.
ಬರೀ ಮಿಯಾಳ ಕಾಯಿಲೆಯ ಬಗ್ಗೆ ದಂಪತಿಗಳು ಚಿಂತೆಯಲ್ಲಿರುವಾಗ ಆಕೆಯ 7 ವರ್ಷದ ತಮ್ಮಂದಿರಾದ ಕೋಲಿನ್ ಮತ್ತು 5 ವರ್ಷದ ಲಾರೆನ್ ಇಬ್ಬರಿಗೂ ಮಿಯಾಳ ಹಾಗೆ ಲಕ್ಷಣಗಳು ಕಂಡುಬರಲು ಶುರುವಾದವು. 2019 ರಲ್ಲಿ ಈ ಎರಡು ಮಕ್ಕಳನ್ನು ಚಿಕಿತ್ಸೆಗೆ ಒಳಪಡಿಸಿದಾಗ ಈ ಮಕ್ಕಳಲ್ಲಿಯೂ ಮಿಯಾಳ ಕಾಯಿಲೆ ಇರುವದು ತಿಳಿದು ಬಂತು. ಒಂದು ಸಮಾಧಾನದ ಸಂಗತಿ ಏನೆಂದರೆ ಈ ದಂಪತಿಗಳ ನಾಲ್ಕನೆಯ ಮಗ ಲಿಯೋ ಮಾತ್ರ ಈ ಕಾಯಿಲೆಯಿಂದ ದೂರವಿದ್ದನು.
ತನ್ನ ಮಕ್ಕಳಿಗಿರುವ ಈ ಅಪರೂಪದ ಕಾಯಿಲೆಯ ಬಗ್ಗೆ ತಾಯಿ ಹೀಗೆ ಹೇಳುತ್ತಾಳೆ, ಈ ಕಾಯಿಲೆಯನ್ನು ಗುಣಪಡಿಸುವಂಥ ಯಾವುದೇ ರೀತಿಯ ಔಷಧ ಮತ್ತು ಉಪಚಾರ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಹಾಗೂ ಈ ಕಾಯಿಲೆ ಯಾವಾಗ ತನ್ನ ಪ್ರಭಾವ ತೋರಿಸುತ್ತದೆ ಎಂಬುದರ ಬಗ್ಗೆಯೂ ನಮಗೆ ನಿಶ್ಚಿತವಾಗಿ ಗೊತ್ತಿಲ್ಲ. ಡಾಕ್ಟರ್ ಹೇಳುವ ಪ್ರಕಾರ, ಮಧ್ಯ ವಯಸ್ಸಿನಲ್ಲಿ ಈ ಕಾಯಿಲೆ ತನ್ನ ಪ್ರಭಾವ ಬೀರಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿ ಮಸ್ತಿ ಮಜಾ ಮಾಡುವ ಈ ಮಕ್ಕಳಿಗೆ ಜಗತ್ತನ್ನೇ ಸುತ್ತಾಡಿಸುವ ಪ್ಲಾನ್ ಯಾವಾಗ ತಲೆಯಲ್ಲಿ ಬಂತು?
ಮಕ್ಕಳ ಆಯ್ ಸ್ಪೆಷಲಿಸ್ಟ್ ಡಾಕ್ಟರ್ ಅವರು ಮಿಯಾಳ ‘ವಿಜುವಲ್ ಮೆಮೊರಿಸ್’ ಹೆಚ್ಚಿಸುವ ಸಲಹೆಯನ್ನು ನೀಡಿದರು. ಆಗ ತಾಯಿಯು ಇದರ ಬಗ್ಗೆ ವಿಚಾರ ಮಾಡಿ ಇದಕ್ಕೊಂದು ಒಳ್ಳೆಯ ಉಪಾಯವನ್ನು ಶೋಧಿಸಿದಳು. ಅದೇನೆಂದರೆ ಬರಿ ಮಿಯಾಳನ್ನು ಅಷ್ಟೇ ಅಲ್ಲ ಮೂವರು ಮಕ್ಕಳಿಗೆ ಜೊತೆಯಲ್ಲಿ ತೆಗೆದುಕೊಂಡರೆ ಇದರ ಉಪಯೋಗ ಮೂವರಿಗೂ ಏಕಕಾಲಕ್ಕೆ ಆಗುವುದು ಎಂದು ವಿಚಾರ ಮಾಡಿ ಜಗತ್ತಿನ ಪ್ರವಾಸಕ್ಕೆ ಹೊರಟು ನಿಂತರು.
ಈ ಸಂದರ್ಭದಲ್ಲಿ ತಾಯಿ ಹೀಗೆ ಹೇಳುತ್ತಾಳೆ, ನನ್ನ ಮಕ್ಕಳಿಗೆ ಯಾವುದೇ ರೀತಿಯ ಪುಸ್ತಕದ ಮುಖಾಂತರ ಪ್ರಾಣಿಗಳನ್ನು ತೋರಿಸುವದಕ್ಕಿಂತ ನಿಜವಾದ ಪ್ರಾಣಿಗಳನ್ನೇ ತೋರಿಸಲು ಇಷ್ಟಪಡುತ್ತೇನೆ. ನಾನು ನನ್ನ ಮಕ್ಕಳ ವಿಜುಯಲ್ ಮೆಮೊರಿಸ್ ತುಂಬಾ ಸುಂದರ ಹಾಗೂ ಒಳ್ಳೆಯ ಫೋಟೋಗಳಿಂದ ತುಂಬಲು ಇಷ್ಟಪಡುತ್ತೇನೆ ಎನ್ನುತ್ತಾಳೆ.
ಇದ್ದ ಬಿದ್ದ ಕೆಲಸಗಳನ್ನು ಬಿಟ್ಟು ಈ ದಂಪತಿಗಳು ಜಗತ್ತನ್ನೇ ಸುತ್ತಾಡವ ಪ್ರವಾಸವನ್ನು ಕೈಗೊಂಡಿದ್ದಾರೆ. ತಂದೆ ಸೆಬೇಸ್ಟಿಯನ್ ಫೈನಾನ್ಸಿಯಲ್ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದರೆ ತಾಯಿ ಹೆಲ್ತ್ ಕೇರ್ ಫೀಲ್ಡ್ ನಲ್ಲಿ ಸರ್ವಿಸ್ ಮಾಡುತ್ತಿದ್ದಾಳೆ. ಮಕ್ಕಳ ಹತ್ತಿರ ಅಷ್ಟೊಂದು ಜಾಸ್ತಿ ಸಮಯವಿಲ್ಲ, ಹೀಗಾಗಿ ಇಬ್ಬರು ಕೂಡಿ ಇದೆಲ್ಲವನ್ನು ಬೇಗ ಬೇಗ ಪ್ಲಾನ್ ಮಾಡಿದ್ದಾರೆ. ನಾವು ಮನೆಯಲ್ಲಿಯೇ ಕುಳಿತು ಮಕ್ಕಳಿಗಾಗಿ ಏನು ಬೇಕಾದರೂ ಮಾಡಬಹುದು. ಆದರೆ ಮನೆ ಬಿಟ್ಟು ಹೊರಗೆ ಪ್ರವಾಸ ಮಾಡುವದು ತುಂಬಾ ಒಳ್ಳೆಯ ಅನುಭವ ಎಂದು ನನ್ನ ಅನಿಸಿಕೆ. ಬರೀ ಪ್ರಾಕೃತಿಕ ಸೌಂದರ್ಯವನ್ನು ಸವಿಯುವ ಉದ್ದೇಶ ಅಷ್ಟೇ ಅಲ್ಲ, ಅದರ ಜೊತೆ ಬೇರೆ ಬೇರೆ ಬೇರೆ ಸಂಸ್ಕೃತಿ ಮತ್ತು ಜನರನ್ನು ನೋಡುವುದು ಮತ್ತು ಅವರನ್ನು ತಿಳಿದುಕೊಳ್ಳುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಆ ಮಕ್ಕಳ ತಂದೆ ಹೇಳುತ್ತಾನೆ.
ಈಗ ಜಗತ್ತನ್ನೇ ಸುತ್ತಾಡುವುದರಿಂದ ಇದಕ್ಕೆ ಬೇಕಾಗುವ ಹಣವು ಸಹ ತುಂಬಾ ಜಾಸ್ತಿ. ಈ ಕಾರಣಕ್ಕಾಗಿ ಇಬ್ಬರು ದಂಪತಿಗಳು ತಮ್ಮ ಸೇವಿಂಗ್ಸ್ ಮತ್ತು ಹೂಡಿಕೆಯನ್ನು ಒಂದುಗೂಡಿಸಿದ್ದಾರೆ. ಪತಿ ಮಾಡುತ್ತಿರುವ ಫೈನಾನ್ಸ್ ಕಂಪನಿಯನ್ನು ಯಾವುದೋ ಒಂದು ದೊಡ್ಡ ಕಂಪನಿ ಖರೀದಿ ಮಾಡಿತು. ಆ ಕಂಪನಿಯಲ್ಲಿ ಸೆಬೇಸ್ಟಿಯನ್ ಹೆಸರಿನಲ್ಲಿ ಷೇರುಗಳಿದ್ದವು. ಅದೃಷ್ಟ ತುಂಬಾ ಚೆನ್ನಾಗಿದ್ದ ಕಾರಣ ಅಲ್ಲಿಂದ ಸಾಕಷ್ಟು ಹಣ ಸೇಬೆಸ್ಟಿಯನ್ ಗೆ ದೊರೆತವು. ಈ ಬಗ್ಗೆ ತಾಯಿ ಇದಿತ್, ‘ಇದು ನಮ್ಮ ಬದುಕಿಗೆ ಸಿಕ್ಕ ದೊಡ್ಡ ಗಿಫ್ಟ್ ಆಗಿದೆ. ಬಹುಶಃ ಇದು ನಮ್ಮ ಪ್ರವಾಸಕ್ಕಾಗಿಯೇ ಬಂದಿರಬೇಕು, ಹೂ ತೆಗೆದುಕೊಳ್ಳಿ ಮತ್ತು ಪ್ರವಾಸ ಮಾಡಿ ಎನ್ನುವಂತಾಗಿದೆ ಈ ಹಣ’, ಎಂದು ಹೇಳುತ್ತಾಳೆ.

ಹಾಗೆ ನೋಡಲಾಗಿ ಈ ದಂಪತಿಗಳು 2020 ರಲ್ಲಿ ಜಗತ್ತಿನ ಪ್ರವಾಸಕ್ಕೆ ಹೊರಡುವ ಉದ್ದೇಶವನ್ನು ಹೊಂದಿದ್ದರು. ಆದರೆ ಕೊರೋನಾ ಸಂಕಟದಿಂದಾಗಿ ಈ ಪ್ರವಾಸವು 2022 ರ ವರೆಗೆ ಮುಂದೂಡುವ ಪ್ರಸಂಗ ಒದಗಿ ಬಂತು. ಕೊನೆಗೆ 2022 ರ ಮಾರ್ಚ್ ನಿಂದ ಈ ಕುಟುಂಬವು ಕೆನಡಾದ ಮ್ಯಾಟ್ರಿಯಲ್ ಪಟ್ಟಣದಿಂದ ತಮ್ಮ ಪ್ರವಾಸವನ್ನು ಪ್ರಾರಂಭಿಸಿಯೇ ಬಿಟ್ಟರು.
ಈ ಪ್ರವಾಸದಲ್ಲಿ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರ್ಣ ಮಾಡಿಕೊಳ್ಳುವ ಬಗ್ಗೆ ಅನೇಕ ರೀತಿಯ ಬೇಕು ಬೇಡಿಕೆಗಳನ್ನು ಮಕ್ಕಳು ತಮ್ಮ ದಂಪತಿಗಳ ಮುಂದೆ ಹೇಳಿದ್ದಾರೆ. ಆ ಪ್ರಕಾರ ಅವರೆಲ್ಲರ ಆಸೆಗಳನ್ನು ಪೂರ್ಣ ಮಾಡಲು ಒಂದು ಲಿಸ್ಟ್ ನ್ನೇ ತಯಾರು ಮಾಡಿಕೊಂಡಿದ್ದಾರೆ. ಅದರಲ್ಲಿ ಕುದುರೆ ಸವಾರಿ, ಒಂಟೆ ಸವಾರಿ, ಒಂಟೆ ಮೇಲೆ ಕುಳಿತು ಜ್ಯೂಸ್ ಕುಡಿಯೋದು ಹೀಗೆ ಮಕ್ಕಳ ಚಿಕ್ಕಪುಟ್ಟ ಆಸೆಗಳನ್ನು ಮರೆಯದೇ ಪೂರ್ಣಗೊಳಿಸಲು ಲಿಸ್ಟ್ ಒಂದನ್ನು ಮಾಡಿಕೊಂಡಿದ್ದಾರೆ.

ಈ ಫ್ಯಾಮಿಲಿಯ ಟ್ರಿಪ್ ನಮೀಬಿಯದಿಂದ ಆಯಿತು ಪ್ರಾರಂಭ…
ಅಲ್ಲಿ ಮಕ್ಕಳು ಆನೆ, ಜೀಬ್ರಾ, ಜಿರಾಫ್ ಹೀಗೆ ಅನೇಕ ರೀತಿಯ ವನ್ಯ ಪ್ರಾಣಿಗಳನ್ನು ತುಂಬಾ ಹತ್ತಿರದಿಂದ ನೋಡಿದರು. ಅಲ್ಲಿಂದ ಅವರು ಟರ್ಕಿಗೆ ಹೋದರು. ಸುಮಾರು ಒಂದು ತಿಂಗಳವರೆಗೆ ಅಲ್ಲಿ ನಿಂತರು. ತದನಂತರ ಮಂಗೋಲಿಯ, ಆಫ್ರಿಕಾ ಆಮೇಲೆ ಇಂಡೋನೇಷಿಯಾ ಹೀಗೆ ನಿರಂತರ ಪ್ರವಾಸ ನಡೆಯುತ್ತಲೇ ಇದೆ.
ನಮ್ಮ ಪ್ರಯತ್ನ ಆದಷ್ಟು ಮಕ್ಕಳಿಗೆ ವಿಶೇಷವಾದ ವಸ್ತು ಮತ್ತು ಪ್ರಾಣಿಗಳನ್ನು ಹಾಗೂ ನಿಸರ್ಗವನ್ನು ತೋರಿಸುವದಾಗಿದೆ. ಮಕ್ಕಳು ಮನೆಯಲ್ಲಿ ನೋಡದ ವಸ್ತುಗಳನ್ನು ತೋರಿಸಲಿಕ್ಕಾಗಿ ಹಾಗೂ ಅವರಿಗೆ ಹೊಸ ಅನುಭವವನ್ನು ನೀಡಲು ನಾವು ಮನೆಯಿಂದ ಹೊರಗೆ ಸುತ್ತಾಡಲು ಬಂದಿದ್ದೇವೆ ಎಂದು ಪೋಷಕರು ಹೇಳುತ್ತಾರೆ.
ದೇಶ ಸುತ್ತಾಡುವುದರಿಂದ ಜಗತ್ತು ಸುತ್ತಾಡುವುದರಿಂದ ಮನುಷ್ಯನಿಗೆ ಏನಾದರೂ ಹೊಸದನ್ನು ಕಲಿಯಲು ಸಿಗುತ್ತದೆ. ಇಷ್ಟೆಲ್ಲ ಮಾಡುವಾಗ ಅನೇಕ ಸಲ ಇದು ತಿಳಿದುಕೊಂಡಷ್ಟು ಸುಲಭವಾಗಿಯೂ ಇರುವುದಿಲ್ಲ. ಇಂಥ ಪ್ರಸಂಗಗಳಲ್ಲಿ ಕೆಲವೊಮ್ಮೆ ಅನಾನುಕೂಲತೆಯ ಪ್ರಸಂಗಗಳು ಸಹ ಎದುರಾಗುತ್ತವೆ ಎಂದು ಪೋಷಕರು ತಮ್ಮ ಅನುಭವವನ್ನು ಹೇಳುತ್ತಾರೆ.
ನಾವು ಈ ಪ್ರವಾಸದಲ್ಲಿ ಮಕ್ಕಳಿಗೆ ಏನಾದರೂ ವಿಶೇಷತೆಯನ್ನು ನೀಡಲು ಬಯಸಿದ್ದೇವೆ. ಅದನ್ನು ನೋಡಿದ ನಮ್ಮ ಮಕ್ಕಳು ಜೀವನದ ಕೊನೆಯ ಉಸಿರಿರುವವರೆಗೂ ಮರೆತಿರಬಾರದು. ಮಕ್ಕಳಿಗೆ ಯಾವ ವಸ್ತುಗಳು ಹೆಚ್ಚು ಆಕರ್ಷಣೆಯನ್ನು ಮಾಡುತ್ತವೆ ಎಂಬುದರ ಬಗ್ಗೆ ನಮಗೆ ಗೊತ್ತಿಲ್ಲ. ನಾವಂದುಕೊಂಡಂತೆ ಒಳ್ಳೆಯ ವಸ್ತುಗಳು ಅವರಿಗೂ ಇಷ್ಟವಾಗುತ್ತವೆ ಅಂತಲ್ಲ. ಅವರಿಗೆ ಬೇರೆ ವಸ್ತುಗಳು ಸಹ ಇಷ್ಟವಾಗಬಹುದು.
ಮನೆಗೆ ಯಾವಾಗ ತಿರುಗಿ ಹೋಗುತ್ತೇವೆ ಎಂಬುದರ ಬಗ್ಗೆ ಇನ್ನೂವರೆಗೆ ನಾವು ಯಾವುದೇ ರೀತಿಯ ವಿಚಾರ ಮಾಡಿಲ್ಲ ಎಂದು ಪೋಷಕರು ಹೇಳುತ್ತಾರೆ. ಒಂದು ಅಂದಾಜಿನ ಪ್ರಕಾರ 2023 ಮಾರ್ಚ್ ತಿಂಗಳಲ್ಲಿ ಈ ಕುಟುಂಬ ತಿರುಗಿ ತಮ್ಮ ಮನೆಗೆ ವಾಪಸ್ ಹೋಗಬಹುದು. ಸದ್ಯಕ್ಕಂತೂ ಈ ಕುಟುಂಬ ಮನೆಗೆ ತಿರುಗಿ ಹೋಗುವ ಬಗ್ಗೆ ಯಾವುದೇ ವಿಚಾರ ಮಾಡದೆ ಫುಲ್ ಎಂಜಾಯ್ ಮಾಡುವ ಮೂಡ್ ನಲ್ಲಿದೆ.

ಪ್ರಸ್ತುತ ಈ ಪ್ರವಾಸ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಕಣ್ಣುಗಳನ್ನು ತೆರೆಸಿದೆ, ನಾವು ಎಲ್ಲರೂ ಕೂಡಿ ಸದ್ಯದ ಸಮಯದಲ್ಲಿ ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಎಂಜಾಯ್ ಮಾಡುತ್ತಾ ಅನುಭವಿಸುತ್ತಿದ್ದೇವೆ ಎಂದು ತಂದೆ ಹೇಳುತ್ತಾನೆ. ಮನೆಗೆ ಹೋಗಿಯೂ ಇದೇ ರೀತಿಯ ಬದುಕು ನಡೆಯಲು ಪ್ರಾರಂಭಿಸಿದರೆ ತುಂಬಾ ಖುಷಿಯಾಗುತ್ತದೆ ಎನ್ನುತ್ತಾನೆ ಸೆಬೇಸ್ಟಿಯನ್.
ಏನಿದು ರೇಟಿನೈಟಿಸ್ ಪಿಗ್ಮೆಂಟೊಸಾ ಕಾಯಿಲೆ?
ಯು ಎಸ್ ನ್ಯಾಷನಲ್ ಆಯ್ ಇನ್ಸ್ಟಿಟ್ಯೂಟ್ ಪ್ರಕಾರ, ರೇಟಿನೈಟಿಸ್ ಪಿಗ್ಮೆಂಟೊಸಾ ಕಾಯಿಲೆ ಆದ ವ್ಯಕ್ತಿಗೆ ಅದರ ಲಕ್ಷಣಗಳು ಚಿಕ್ಕಂದಿನಿಂದಲೇ ಕಂಡುಬರುತ್ತವೆ. ಈ ಕಾಯಿಲೆಯಿಂದಾಗಿ ವ್ಯಕ್ತಿಯು ಭವಿಷ್ಯದಲ್ಲಿ ಸಂಪೂರ್ಣವಾಗಿ ದೃಷ್ಟಿಹೀನನಾಗುತ್ತಾನೆ.