ಮನುಷ್ಯನಿಗೆ ಕರೆಂಟ್ ತಾಗುತ್ತೆ, ಆದರೆ ವಿದ್ಯುತ್ ತಂತಿಯ ಮೇಲೆ ಕುಳಿತ ಪಕ್ಷಿಗಳಿಗೇಕೆ ತಾಗುವದಿಲ್ಲ?

ಹಕ್ಕಿಗಳು ಅಥವಾ ಪಕ್ಷಿಗಳು ಹಾರುತ್ತಾ ಬಂದು ವಿದ್ಯುತ್ ತಂತಿಗಳ ಮೇಲೆ ಕೂರುವುದನ್ನು ನಾವು ಹಲವು ಸಲ ಗಮನಿಸಿರುತ್ತೇವೆ. ಕೆಲವು ಸಲ ಅದನ್ನು ನೋಡುವಾಗ ನಮ್ಮ‌ ಮನಸ್ಸಿನಲ್ಲೇ ಸಹಜವಾಗಿಯೇ ಒಂದು ಪ್ರಶ್ನೆ ಏಳುತ್ತೆ, ಅದೇನು ಎಂದರೆ ಹಕ್ಕಿಗಳು ವಿದ್ಯುತ್ ತಂತಿ ಮೇಲೆ ಕೂತಿದೆ ಆದರೆ ಅದಕ್ಕೆ ಏಕೆ ವಿದ್ಯುತ್ ಶಾಕ್ ಹೊಡಿಲಿಲ್ಲ? ಅದೇ ನಾವು ವಿದ್ಯುತ್ ತಂತಿಯನ್ನು ಮುಟ್ಟಿದ್ರೆ, ಬೈ ಚಾನ್ಸ್ ಗೊತ್ತಿಲ್ದೇ ಅದು ನಮ್ಮ ದೇಹಕ್ಕೆ ತಾಗಿದರೂ ಕೆಲವೇ ಕ್ಷಣಗಳಲ್ಲಿ ಶಾಕ್ ಹೊಡೆಯುತ್ತಲ್ವಾ ಅನ್ನೋ ಪ್ರಶ್ನೆ ನಮ್ಮನ್ನು ಕಾಡುತ್ತೆ. ಹಾಗಾದರೆ ಇದಕ್ಕೆ ಕಾರಣವೇನು? ಪಕ್ಷಿಗಳಲ್ಲಿ ಅಂತಹ ವಿಶೇಷವಾದ ರಕ್ಷಣಾ ವ್ಯವಸ್ಥೆ ಏನಿದೆ? ಅಂತ ತಿಳಿಯೋಣ ಬನ್ನಿ.

ವಾಸ್ತವವಾಗಿ ಹಕ್ಕಿಗಳಲ್ಲಿ ಅಂತಹ ಯಾವುದೇ ವಿಶೇಷ ರಕ್ಷಣಾ ವ್ಯವಸ್ಥೆ ಇಲ್ಲ. ಬದಲಿಗೆ ಇಲ್ಲೊಂದು ವೈಜ್ಞಾನಿಕ ಸಿದ್ಧಾಂತ ತನ್ನ ಕೆಲಸವನ್ನು ಮಾಡ್ತಾ ಇರುತ್ತೆ. ಬಹಳ ಸರಳವಾದ ಆ ವಿಚಾರ ತಿಳಿದರೆ ಪಕ್ಷಿಗಳಿಗೆ ಏಕೆ ವಿದ್ಯುತ್ ಶಾಕ್ ತಗಲಲಿಲ್ಲ ಅನ್ನೋದರ ಉತ್ತಮ ನಮಗೆ ಸಿಗುತ್ತೆ.‌ ಮೊದಲಿಗೆ ವಿದ್ಯುತ್ ಎಂದರೆ ಅದು ಎಲೆಕ್ಟ್ರಾನ್ ಗಳ ಚಲನೆಯಾಗಿದ್ದು, ಇದು ಕೆಲವು ಸಿದ್ಧಾಂತಗಳ ಅನುಸಾರ ಚಲಿಸುತ್ತವೆ. ಆ ಸಿದ್ಧಾಂತ ಎಂದರೆ ಸರ್ಕಿಟ್ ಪೂರ್ತಿಯಾಗುವುದು. ಎಲೆಕ್ಟ್ರಾನ್ ಗಳ ಚಲನೆ ಪವರ್ ಲೈನ್ ಗಳಿಂದ ಆರಂಭವಾಗಿ ನಮ್ಮ ಮನೆಯ ಉಪಕರಣಗಳ ಕಡೆಗೆ ಹರಿದು ಬರುತ್ತದೆ. ಅನಂತರ ಅಲ್ಲಿಂದ ಅದು ಅರ್ಥಿಂಗ್ ಮೂಲಕ ಭೂಮಿಯೊಳಗೆ ಪ್ರವೇಶ ಮಾಡುತ್ತದೆ.

ಏಕೆಂದರೆ ವಿದ್ಯುತ್ ನ ಹರಿವಿಗೆ ಸರ್ಕಿಟ್ ಪೂರ್ತಿಯಾಗುವುದು ಅನಿವಾರ್ಯ. ಎರಡನೇಯ ಸಿದ್ಧಾಂತ ವಿದ್ಯುತ್ ಯಾವಾಗಲೂ ಅತಿ ಕಡಿಮೆ ಅಡೆ ತಡೆ ಇರುವ ಮಾರ್ಗವನ್ನು ಆರಿಸಿಕೊಳ್ಳುತ್ತದೆ. ಉದಾಹರಣೆಗೆ ನಾವು ಕೂಡಾ ವಿದ್ಯುತ್ ತಂತಿಗಳ ಮೇಲೆ ಹಕ್ಕಿಗಳ ಹಾಗೆ ಕುಳಿತರೆ ಅಂದರೆ ಬೇರೆ ಯಾವುದೇ ವಸ್ತುವನ್ನು ಹಿಡಿಯದೆ ಕುಳಿತರೆ ನಮಗೂ ಕೂಡಾ ವಿದ್ಯುತ್ ಶಾಕ್ ಹೊಡೆಯುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಈಗ ಹೇಳಿದ ಎರಡು ಸಿದ್ಧಾಂತಗಳು. ಅಂದರೆ ಎಲೆಕ್ಟ್ರಾನ್ ಗಳ ಹರಿವು ಮತ್ತು ಅತ್ಯಂತ ಸರಳವಾದ ಹಾದಿಯನ್ನು ಆರಿಸಿಕೊಳ್ಳುವುದು.

ಎಲೆಕ್ಟ್ರಾನ್ ಎಲ್ಲೇ ಹರಿದರೂ ಅಥವಾ ಚಲಿಸಿದರೂ ಅದು ನೇರವಾದ ಮತ್ತು ಸರಳವಾದ ಹಾದಿಯನ್ನು ಆರಿಸಿಕೊಳ್ಳುತ್ತದೆ. ಹೇಗೆಂದರೆ ಮನುಷ್ಯ ಹುಲ್ಲಿನ ಅಥವಾ ಮಣ್ಣಿನ ರಸ್ತೆ ಮೇಲೆ ನಡಿಗೆ ಕಷ್ಟ ಎಂದು ಅವರ ಬದಲಾಗಿ ನೇರವಾದ ಹಾಗೂ ಡಾಂಬರು ರಸ್ತೆಯನ್ನು ಆರಿಸಿಕೊಂಡಂತೆ. ಅದರಂತೆ ವಿದ್ಯುತ್ ತಂತಿ ಮೇಲೆ ಹಕ್ಕಿ ಕುಳಿತಿರುವಾಗ ಎಲೆಕ್ಟ್ರಾನ್ ಗಳಿಗೂ ಎರಡು ಅವಕಾಶ ಇರುತ್ತದೆ, ಒಂದು ಹಕ್ಕಿಯ ಕಾಲುಗಳಿಂದ ಅದರ ದೇಹದ ಮೇಲೆ ಏರಿ ಸಾಗುವ ಕಷ್ಟದ ದಾರಿ, ಅದರ ಧಾತು ಮೂಲಕ ಹರಿಯುವ ಸರಳ ಹಾದಿ‌. ಸಿದ್ಧಾಂತದ ಪ್ರಕಾರ ಎಲೆಕ್ಟ್ರಾನ್ ಸರಳವಾದ ಹಾದಿಯನ್ನು ಆರಿಸಿಕೊಳ್ಳುವುದರಿಂದ ಅದು ನೇರವಾಗಿ ಧಾತು ಮೂಲಕ ಹಾದು ಹೋಗುತ್ತದೆ. ಅದಕ್ಕೆ ಹಕ್ಕಿಗೆ ವಿದ್ಯುತ್ ಶಾಕ್ ಹೊಡೆಯುವುದಿಲ್ಲ‌.

ಮನುಷ್ಯ ಕೂಡಾ ಹಕ್ಕಿಯ ಹಾಗೆ ಕುಳಿತರೆ ಅವನಿಗೂ ಶಾಕ್ ಹೊಡೆಯದು. ಅದರ ಬದಲಾಗಿ ಹಕ್ಕಿಯಾಗಲೀ, ಮನುಷ್ಯನಾಗಲಿ ವಿದ್ಯುತ್ ತಂತಿ ಮೇಲೆ ಕುಳಿತಾಗ ಬೇರೊಂದು ಭೂಮಿಯೊಡನೆ ಸಂಪರ್ಕ ಇರುವ ಯಾವುದೇ ಮರವನ್ನು, ವಸ್ತುವನ್ನು ಮುಟ್ಟಿದರೆ ಅಥವಾ ಸ್ಪರ್ಶವಾದರೆ ಆಗ ಎಲೆಕ್ಟ್ರಾನ್ ಹರಿಯಲು ಹೊಸ ಮಾರ್ಗ ದೊರೆತು ಅದು ಮನುಷ್ಯ ಅಥವಾ ಹಕ್ಕಿಯ ಮೂಲಕ ಹರಿದು ಆಗ ಮಾತ್ರ ಶಾಕ್ ಹೊಡೆಯುತ್ತದೆ. ಹೀಗೆ ಎಲೆಕ್ಟ್ರಾನ್ ಗಳು ಹರಿಯುವ ಸಿದ್ಧಾಂತವನ್ನು ಅರಿತರೆ ವಿದ್ಯುತ್ ತಂತಿಗಳ ಮೇಲೆ ಕುಳಿತ ಹಕ್ಕಿಗಳಿಗೆ ಶಾಕ್ ಏಕೆ ಹೊಡೆಯದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿ ಬಿಡುತ್ತದೆ.