2 ಬಾರಿ ಕಾರ್ಪೊರೇಟರ್ ಆದರೂ ತಳ್ಳು ಗಾಡಿಯ ಮೇಲೆ ಸ್ಯಾಂಡ್ವಿಚ್ ಮಾರಿ ಜೀವನ ಸಾಗಿಸುತ್ತಿರುವ ಸರಳ ಜೀವಿ ಕಾರ್ಪೊರೇಟರ್ ಗೋಪಿಚಂದ!

ರಾಜಕಾರಣಿಗಳು ಎಂದ ನಂತರ ಸಾಮಾನ್ಯ ಮನುಷ್ಯನ ಎದುರು ನಿಲ್ಲುವ ವ್ಯಕ್ತಿಮತ್ವ ಎಂಥದು ಅಂದರೆ ಶುಭ್ರ ಬಿಳಿಯ ಲೀನನ್ ಪೋಷಾಕು, ಕಣ್ಣಿಗೆ ಕಪ್ಪು ಬಣ್ಣದ ರೇಬಾನ್ ಗಾಗಲ್, ಕೈಯಲ್ಲಿ ಬೆಲೆಬಾಳುವ ಮೊಬೈಲ್, ಕಾಲಲ್ಲಿ ಕಪ್ಪು ಬಣ್ಣದ ಶೂಜು, ದುಬಾರಿ ವಾಚು ಸುತ್ತಲೂ ನಾಲ್ಕೈದು ಜನ, ಅಲ್ವಾ?

ದೊಡ್ಡ ಪಟ್ಟಣದ ಮಹಾನಗರಪಾಲಿಕೆಯ ಕಾರ್ಪೊರೇಟರ್ ಅಂದರೆ ಹೆಚ್ಚು ಕಡಿಮೆ MLA ಲೇವಲ್ ನಲ್ಲಿಯೇ ಇರುತ್ತಾರೆ. ನಾವು ಇಲ್ಲಿ ಉಲ್ಲೇಖಿಸುತ್ತಿರುವ ಮಹಾನಗರಪಾಲಿಕೆಯ ಕಾರ್ಪೊರೇಟರ್ ಮಾಹಾರಾಷ್ಟ್ರದ ಉಪರಾಜಧಾನಿಯಾದ ನಾಗಪೂರದ ವಾರ್ಡ್ ಕ್ರಮಾಂಕ 3 ರ ಗೋಪಿಚಂದ್ ಕುಮ್ರೆ.

ಗೋಪಿಚಂದ್ ಇವರು ಸದ್ಯಕ್ಕೆ ಬಿಜೆಪಿ ಪಕ್ಷದ ಪರವಾಗಿ ಆರಿಸಿ ಬಂದವರು. ಇದಕ್ಕೂ ಮೊದಲು ಒಂದು ಸಲ ಸ್ವತಂತ್ರ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದರು.

ಇವರ ಕೆಲಸದ ಬಗ್ಗೆ ಹೇಳುವದಾದರೆ, ಮನೆಯೇ ಇವರ ಆಫೀಸ್. ಹಾಗಾಗಿ ಇಲ್ಲಿಂದಲೇ ಇವರು ತಮ್ಮ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಾರೆ. ಮುಂಜಾನೆಯಿಂದ ಸಾಯಂಕಾಲದವರೆಗೆ ತನ್ನ ವಾರ್ಡ್ ಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತ ಜನರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ.

ಇವರ ಶಿಕ್ಷಣ PUC ವರೆಗೆ ಮುಗಿದಿದ್ದು, ತಮ್ಮ ಉಪಜೀವನಕ್ಕಾಗಿ ಗಾಡಿಯ ಮೇಲೆ ಸ್ಯಾಂಡ್ ವಿಚ್ ಮಾರುವ ಕೆಲಸ ಮಾಡುತ್ತಾರೆ. ಎರಡನೆಯ ಸಲ ನಗರಪಾಲಿಕೆಗೆ ಆರಿಸಿ ಬಂದರೂ ಮೊದಲಿನ ಜೀವನದಲ್ಲಿ ಸ್ವಲ್ಪವೂ ವ್ಯತ್ಯಾಸ ಮಾಡಿಕೊಳ್ಳದೆ ರಾಜಕಾರಣಿಯ ಯಾವ ಆಡಂಬರಕ್ಕೂ ಬೀಳದೆ ಸರಳವಾಗಿ ತಾನಾಯ್ತು ತನ್ನ ಕೆಲಸವಾಯ್ತು ಇರುತ್ತಾರೆ. ದಿನಂಪ್ರತಿ ಜನರ ಮತ್ತು ತನ್ನ ವಿಭಾಗಕ್ಕೆ ಸಂಬಂಧಿಸಿದ ಕೆಲಸಗಳ ಬಗ್ಗೆ ಮಾಹಿತಿ ಪಡೆಯುವದು ಹಾಗೂ ಅವುಗಳ ಚಾಲನೆಗೆ ಪ್ರಯತ್ನಿಸುವದು ಇಷ್ಟೆಲ್ಲ ಮಾಡಿಯಾದ ಮೇಲೆ ಸಾಯಂಕಾಲ ತಪ್ಪದೆ ತನ್ನ ಗಾಡಿಗೆ ಬಂದು ಸ್ಯಾಂಡ್ ವಿಚ್ ಮಾರುವದು ಇದು ಗೋಪಿಚಂದ್ ಅವರ ನಿತ್ಯ ಕೆಲಸವಾಗಿದೆ.

ಬರೀ ಗ್ರಾಮ ಪಂಚಾಯಿತಿಯ ಮೆಂಬರ್ ಆಗಿ ಆರಿಸಿ ಬಂದರೇನೆ ಸಾಲ ಸಾಲ ಮಾಡಿಯಾದರೂ ತಮ್ಮ ಹಿಂದಿನ ಜೀವನ ಮರೆತು ಲೇಟೆಸ್ಟ್ ಲೈಫ್ ಸ್ಟೈಲ್ ನಲ್ಲಿ ಇಳಿದು ಮೆರೆಯೋ ಕಾಲದಲ್ಲಿ ಇಂಥವನೊಬ್ಬ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಎರಡು ಬಾರಿ ಆರಿಸಿ ಬಂದರೂ ಯಾವುದೇ ಗರ್ವ, ಇಗೋ ಕ್ಕೆ ಬೆಲೆ ಕೊಡದೆ ತಾನು ಮಾಡುತ್ತಿದ್ದ ಕಾಯಕವನ್ನೇ ಮುಂದುವರಿಸಿ ಅದೇ ರೀತಿ ಜೀವನ ನಡೆಸುತ್ತಿದ್ದಾರೆ ಎಂದರೆ ಈಗಿನ ಕಾಲದಲ್ಲಿ ನಿಜಕ್ಕೂ ಇದು ಶ್ಲಾಘನೀಯ. ರಾಜಕೀಯವೆಂದರೆ ಕಡಿಮೆ ಸಮಯದಲ್ಲಿ ಶೀಘ್ರವಾಗಿ ಶ್ರೀಮಂತ ಮಾಡುವ ಒಂದು ಬಿಜಿನೆಸ್ ಎಂದು ತಿಳಿಯುವ ಈಗಿನ ಕಾಲದಲ್ಲಿಯ ರಾಜಕಾರಣಿಗಳಿಗೆ ಇವರ ರಾಜಕೀಯ ಒಂದು ಆದರ್ಶ.

ಇಲ್ಲಿಯ ಜನರೂ ಸಹ ಇವರ ಬಗ್ಗೆ ಗೌರವದಿಂದ ಮತ್ತು ಆಶ್ಚರ್ಯದಿಂದ ಮಾತಾಡುತ್ತಾರೆ. ರಾಜಕೀಯ ಪ್ರವೇಶ ಮಾಡಿದ ನಂತರ ಇವರ ಜೀವನ ಬದಲಾಗಿ ಬಿಡುತ್ತದೆ, ಹಾಗೂ ಇವರು ಸ್ಯಾಂಡ್ ವಿಚ್ ಮಾರಾಟ ಮಾಡುವದಿಲ್ಲ ಎಂದು ತಿಳಿದಿದ್ದರಂತೆ. ಅದೆಲ್ಲ ಸುಳ್ಳಾಗಿ ಹೋಗಿದೆ. ಇವರ ಸರಳ ಸ್ವಭಾವದ ಬಗ್ಗೆ, ಹಾಗೂ ಇವರು ಮಾಡುವ ಜನಪರ ಕಾರ್ಯಗಳ ಬಗ್ಗೆ ಜನ ಸಮಾಧಾನ ಹೊಂದಿದ್ದಾರೆ. ಇವರ ವಾರ್ಡ್ ತುಂಬಾ ಸ್ವಚ್ಛತೆಯಿಂದ ಕೂಡಿದೆ. ಜನರ ಸಮಸ್ಯೆಗೆ ಯಾವತ್ತೂ ಸ್ಪಂದಿಸುತ್ತಿರುತ್ತಾರೆ ಇದು ವಿಶೇಷ, ಎಂದು ಜನರು ಇವರ ಬಗ್ಗೆ ಮಚ್ಚಿಗೆಯ ಮಾತುಗಳನ್ನು ಮಾತಾಡುತ್ತಾರೆ. ಸಾಮಾನ್ಯವಾಗಿ ಚುನಾಯಿತರಾಗಿ ಆರಿಸಿ ಬಂದ ಮೇಲೆ ವ್ಯಕ್ತಿಯೊಬ್ಬನ ಲೈಫೇ ಚೇಂಜ್ ಆಗಿ ಬಿಡುತ್ತದೆ, ನೀವು ಮಾತ್ರ ಈ ಗಾಡಿಯ ಮೇಲೆಯೇ ಸ್ಯಾಂಡ್ ವಿಚ್ ಮಾರಾಟ ಮಾಡ್ತಾ ಇದ್ದೀರಾ… ನಿಮಗೂ ಬದಲಾಗಬೇಕು, ಗಾಡಿ, ಬಂಗ್ಲೆ, ಐಷಾರಾಮಿ ಜೀವನ ನಡೆಸಬೇಕು ಅನ್ನಿಸೋದಿಲ್ವಾ ಅಂತ ಮಾರಾಠಿ tv ನ್ಯೂಜ್ ಚಾನೆಲ್ ಒಂದು ಕೇಳಿದ ಪ್ರಶ್ನೆಗೆ ಗೋಪಿಚಂದ್ ಅವರು ಸರಳವಾಗಿ ಹೇಳ್ತಾರೆ…. ನಾನಿರೋದೆ ಹೀಗೆ ಮೇಡಂ, ನಿನ್ನೆ, ಇಂದು, ನಾಳೆಯೂ.