ಒಂದು ಸಾಧಾರಣ ಐಡಿಯಾದಿಂದ 16 ತಿಂಗಳಲ್ಲೇ ಕೋಟ್ಯಾಧಿಪತಿಯಾದ 19 ವರ್ಷದ ಸ್ಟೂಡೆಂಟ್!
ಸಾಧನೆ ಮಾಡಲು, ಗಳಿಕೆ ಮಾಡಲು ವಯಸ್ಸು ಅಥವಾ ಒಂದು ನಿರ್ದಿಷ್ಟವಾದ ವಯಸ್ಸಿನ ಗಡಿಗಳೆಂಬುದು ಇಲ್ಲ ಎಂದು ಸಾಬೀತು ಮಾಡಿದ್ದಾನೆ ಒಬ್ಬ 19 ವರ್ಷದ ಯುವಕ. ಬ್ರಿಟನ್ ನ ದೊಡ್ಡ ದೊಡ್ಡ ಉದ್ಯಮಿಗಳ ಜೊತೆ ಒಡನಾಟ ಹೊಂದಿದ್ದು, ಈತನನ್ನು ಆತನ ಮಿತ್ರರು ಎಲೆನ್ ಶುಗರ್ ಎಂದೇ ಕರೆಯುತ್ತಾರೆ. ಹಾಗಾದರೆ ಹತ್ತೊಂಬತ್ತು ವಯಸ್ಸಿಗೆ ಈ ಯುವಕ ಮಾಡುತ್ತಿರುವುದಾದರೂ ಏನು? ಎನ್ನುವ ಪ್ರಶ್ನೆ ಮೂಡಿದ್ದರೆ ಉತ್ತರ ಕೂಡಾ ಇಲ್ಲೇ ಇದೆ.
ಈ ಯುವಕನ ಹೆಸರು ಅಕ್ಷಯ್ ರೂಪ್ ರೆಲಿಯಾ. ಓದಿನಲ್ಲಿ, ತನ್ನ ಪ್ರಾಜೆಕ್ಟ್ ಹಾಗೂ ಅಸೈನ್ಮೆಂಟ್ ಗಳಲ್ಲಿ ಸದಾ ಎ, ಎ+ ಪಡೆಯುವ ಈತ ಓದಿನಲ್ಲಿ ಕೂಡಾ ಬಹಳ ಚುರುಕು.
ಆದರೆ ಇದಲ್ಲ ಆತನ ವಿಶೇಷ. ತರಗತಿಗಳು ಮುಗಿದು ಲಂಚ್ ಬ್ರೇಕ್ ಸಿಕ್ಕಾಗ ತನ್ನ ವಯಸ್ಸಿನ ಇತರೆ ಯುವಕರು ಮೈದಾನದಲ್ಲಿ ಪುಟ್ಬಾಲ್ ಅಥವಾ ಇನ್ನಿತರೆ ಆಟಗಳ ಕಡೆಗೆ ಓಡಿದರೆ ಅಕ್ಷಯ್ ತನ್ನ ಮೊಬೈಲ್ ಮೂಲಕ ದೊಡ್ಡ ದೊಡ್ಡ ಆಸ್ತಿಗಳ ಕೊಡು-ಕೊಳ್ಳುವಿಕೆಯ ವ್ಯವಹಾರದಲ್ಲಿ ತೊಡಗುವುದು ಆತನ ವಿಶೇಷ. ಹೌದು ಅಕ್ಷಯ್ ಈ ಕಿರಿಯ ವಯಸ್ಸಿನಲ್ಲಿಯೇ ರಿಯಲ್ ಎಸ್ಟೇಟ್ ನಂತಹ ಬ್ಯುಸಿನೆಸ್ ಮಾಡುತ್ತಾ ಯಶಸ್ವಿಯಾಗಿದ್ದಾರೆ. ಹದಿನಾರು ತಿಂಗಳ ಹಿಂದೆಯಷ್ಟೇ ಆತ doorstep.co.uk ಎನ್ನುವ ವೆಬ್ಸೈಟ್ ಆರಂಭಿಸಿದ್ದ, ಇಂದು ಈ ವೆಬ್ಸೈಟ್ ಅಲ್ಲಿನ 18 ರಿಯಲ್ ಎಸ್ಟೇಟ್ ಏಜನ್ಸಿ ಗಳಲ್ಲಿ ಒಂದಾಗಿ ದಾಖಲಾಗಿದೆ.
ಭಾರತ ಮೂಲದ ಅಕ್ಷಯ್ ಇಂದು ಬ್ರಿಟನ್ ನ ಕಿರಿಯ ವಯಸ್ಸಿನ ಕೋಟ್ಯಾಧಿಪತಿ ಎನಿಸಿಕೊಂಡಿದ್ದಾರೆ. ಬ್ಯುಸಿನೆಸ್ ಆರಂಭಿಸಿದ ಕೆಲವೇ ಸಮಯದಲ್ಲಿ ಅವರು ಸುಮಾರು 100 ಮಿಲಿಯನ್ ಪೌಂಡ್ ಗಳಷ್ಟು ಆಸ್ತಿಯ ಮಾರಾಟವನ್ನು ಮಾಡಿದ್ದಾರೆ. ಅಕ್ಷಯ್ ಆರಂಭಿಸಿರುವ ಈ ಕಂಪನಿಯಲ್ಲಿ ಒಟ್ಟು 12 ಜನರಿದ್ದು, ಅಕ್ಷಯ್ ಸ್ವತಃ 500 ಪೌಂಡ್ ಸಂಬಳದಿಂದ ಕೆಲಸ ಆರಂಭಿಸಿದ್ದರು. ಅದು ಈಗ 1000 ಪೌಂಡ್ ಗಳಾಗಿದೆ. ತಾನು ಉಳಿಸಿದ ಹಣದಿಂದ ಅಕ್ಷಯ್ ತನ್ನ ತಂದೆ ತಾಯಿಗೆ ಕಾರೊಂದನ್ನು ಕಾಣಿಕೆಯಾಗಿ ನೀಡಿದ್ದಾರೆ ಕೂಡಾ.
ಅಕ್ಷಯ್ ಅವರ ತಂದೆ ಕೌಶಿಕ್ ರಾಯಲ್ ಮೇಲ್ ಸ್ಟೇರಿಂಗ್ ನಲ್ಲಿ ಕೇರ್ ಟೇಕರ್ ಆಗಿದ್ದು, ತಾಯಿ ರೇಣುಕಾ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿದ್ದಾರೆ. ಅಕ್ಷಯ್ ಅವರ ತಂದೆ ತಾಯಿ ಇಬ್ಬರಿಗೂ ಸರಿಯಾಗಿ ಕಿವಿ ಕೇಳುವುದಿಲ್ಲ. ಉತ್ತರ ಲಂಡನ್ ನಲ್ಲಿ ನೆಲೆಸಿರುವ ಇವರು ಕ್ವೀನ್ ಎಲಿಜಬೆತ್, ಬರ್ನೆಟ್ ಲಂಡನ್ ನಲ್ಲಿ ಶಿಕ್ಷವಣನ್ನು ಮಾಡುತ್ತಿದ್ದಾರೆ. ಇನ್ನು ಅಕ್ಷಯ್ ಅವರ ಈ ಬುದ್ದಿವಂತಿಕೆ ನೋಡಿ ಅಲ್ಲಿನ ಸುಪ್ರಸಿದ್ಧ ಉದ್ಯೋಗಪತಿ ಹಾಗೂ ಅಪ್ರೆಂಟಿಸ್ ಕಾರ್ಯಕ್ರಮಗಳ ತಾರೆ ಎಂದೇ ಖ್ಯಾತರಾದ ಎಲೆನ್ ಶುಗರ್ ಅವರ ಹೆಸರನ್ನು ಅಕ್ಷಯ್ ಗೆ ಇಟ್ಟಿದ್ದಾರೆ ಅವರ ಸ್ನೇಹಿತರು.

ಆಸ್ತಿಗಳ ಮಾರಾಟದಲ್ಲಿ ತೊಡಗಿರುವ ಅಕ್ಷಯ್ ಅವರ ಏಜನ್ಸಿ ಅದೇ ದೇಶದ ಇತರೆ ಏಜನ್ಸಿಗಳಿಗಿಂತ ಕಡಿಮೆ ಚಾರ್ಜ್ ವಿಧಿಸುತ್ತದೆ. ಇತರೆ ಏಜೆನ್ಸಿಗಳು 800,1000 ಪೌಂಡ್ ಶುಲ್ಕ ವಿಧಿಸಿದರೆ ಅಕ್ಷಯ್ ಅವರ ಏಜನ್ಸಿಯ ಶುಲ್ಕ ಕೇವಲ 99 ಪೌಂಡ್. ಅಕ್ಷಯ್ ಅವರ ವ್ಯವಹಾರ ಬಹುತೇಕ ವೆಬ್ಸೈಟ್ ಮೂಲಕವೇ ನಡೆಯುತ್ತದೆ. ಈ ವೆಬ್ಸೈಟ್ ಆರಂಭ ಮಾಡಲು ಅಕ್ಷಯ್ ತಮ್ಮ ಸಂಬಂಧಿಕರ ಬಳಿ ಸುಮಾರು 7000 ರೂಪಾಯಿಗಳನ್ನು ಸಾಲ ಪಡೆದಿದ್ದರು. ಅಕ್ಷಯ್ ಗೆ ಆಕ್ಸಫರ್ಡ್ ಯೂನಿವರ್ಸಿಟಿ ಯಲ್ಲಿ ಅರ್ಥಶಾಸ್ತ್ರ ಮತ್ತು ಗಣಿತದ ವಿಷಯಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ದೊರೆತಿದೆ. ಆದರೆ ಅದನ್ನು ಪ್ರಸ್ತುತ ಅಕ್ಷಯ್ ಹೋಲ್ಡ್ ನಲ್ಲಿ ಇಟ್ಟಿದ್ದಾರೆ.
ನಿಜವಾದ ಅರ್ಥದಲ್ಲಿ ಯಶಸ್ಸನ್ನು ನಮ್ಮದಾಗಿಸಿಕೊಳ್ಳಲು, ದೃಢನಿಶ್ಚಯ ಮತ್ತು ಸ್ಪಷ್ಟವಾದ ಗುರಿಯಿರಬೇಕು. ಅಲ್ಲದೇ ಅದನ್ನು ಸಾಧಿಸುವ ಛಲ ಇರುವ ದೃಢ ಮನಸ್ಸು ಕೂಡಾ ಅಗತ್ಯ ಇದೆ. ಜಗತ್ತನ್ನ ತನ್ನ ದೃಷ್ಟಿಯಲ್ಲಿ ನೋಡುವ ಅಕ್ಷಯ್, ತನ್ನ ಪ್ರತಿಭೆಯಿಂದಲೇ ಎಲ್ಲರಿಂದ ಗೌರವವನ್ನು ಪಡೆಯುತ್ತಿದ್ದಾನೆ. ಇಂದಿನ ಯುವಕರು ಸಮಯಕ್ಕೆ ಅನುಗುಣವಾಗಿ ತಮ್ಮ ಸಾಮರ್ಥ್ಯವನ್ನು ಗುರುತಿಸಿ, ಶ್ರಮಪಟ್ಟರೆ ಯಶಸ್ಸು ಖಂಡಿತವಾಗಿಯೂ ಅವರದಾಗುತ್ತದೆ ಎಂಬುದಕ್ಕೆ ಅಕ್ಷಯ್ ಉದಾಹರಣೆಯಾಗಿದ್ದಾರೆ.