ಮಲ್ಟಿ ನ್ಯಾಷನಲ್ ಕಂಪನಿಯ ಕೆಲಸ ಬಿಟ್ಟು, ಎರೆಹುಳು ಗೊಬ್ಬರ ಮಾರಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿರುವ MBA ಗ್ರ್ಯಾಜುಎಟ್!

ನಿಮ್ಮ ಗುರಿಯನ್ನು ಸಾಧಿಸಲು ನೀವು ನಿಮ್ಮೆಲ್ಲಾ ಗಮನವನ್ನು ಅದರ ಕಡೆ ನೀಡಿದರೆ, ಗುರಿಯ ಕಡೆಗೆ ನಿಮ್ಮ ಪಯಣವನ್ನು ಯಾರಿಂದಲೂ ಕೂಡಾ ತಡೆಯಲು ಸಾಧ್ಯವೇ ಇಲ್ಲ.‌ ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯೊಂದರ ಬಗ್ಗೆ ನಾವೀಗ ಹೇಳಲು ಹೊರಟಿದ್ದೇವೆ. ಕೇವಲ ಒಂದು ಕಿಲೋಗ್ರಾಂ ಎರೆಹುಳುಗಳ ಸಹಾಯದಿಂದ ಸಿದ್ಧಪಡಿಸಲಾದ ಜೈವಿಕಗೊಬ್ಬರದಿಂದ ಬ್ಯುಸಿನೆಸ್ ಆರಂಭಿಸಿದ ವ್ಯಕ್ತಿಯೊಬ್ಬರ ಇಂದಿನ ವ್ಯವಹಾರದ ವಾರ್ಷಿಕ ವಹಿವಾಟು ಎರಡು ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಗುಜರಾತ್, ಒಡಿಶಾ, ಅಸ್ಸಾಂ ಸೇರಿದಂತೆ 14 ರಾಜ್ಯಗಳಲ್ಲಿ ಸುಮಾರು ಎಂಟು ಸಾವಿರ ಗೊಬ್ಬರ ತಯಾರಿಕಾ ಘಟಕಗಳನ್ನು ಅವರು ಸ್ಥಾಪಿಸಿದ್ದಾರೆ. ಈ ಪೈಕಿ ಮೀರತ್ ಜಿಲ್ಲೆಯಲ್ಲೇ ಸುಮಾರು 80 ಘಟಕಗಳು ಅವರದ್ದಾಗಿವೆ. ಹಾಗಾದರೆ ಯಾರು ಆ ಯಶಸ್ವಿ ವ್ಯಕ್ತಿ ಎಂಬುದನ್ನು ತಿಳಿಯೋಣ ಬನ್ನಿ.

ಇಂತಹುದೊಂದು ಉದ್ಯಮವನ್ನು ನಿಲ್ಲಿಸಿದ ವ್ಯಕ್ತಿಯ ಹೆಸರು ಅಮಿತ್ ತ್ಯಾಗಿ. ಮೀರತ್ ಇವರು ತಮ್ಮ ಪತ್ನಿ ಮೋನಿಕಾ ತ್ಯಾಗಿಯವರು ನೀಡಿದ ಸಲಹೆಯಿಂದ ಆರಂಭಿಸಿದ ವ್ಯವಹಾರ ಇಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ಗಾಜಿಯಾಬಾದ್ ನಲ್ಲಿ ಎಂಬಿಎ ಪದವಿ ಪಡೆದ ಇವರು ಒಂದು ಮಲ್ಟಿ ನ್ಯಾಶನಲ್ ಕಂಪನಿಯಲ್ಲಿ ವರ್ಷವೊಂದಕ್ಕೆ ಲಕ್ಷಾಂತರ ವೇತನ ಗಳಿಸುವ ಪ್ಯಾಕೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಒಮ್ಮೆ ಅಮಿತ್ ಅವರಿಗೆ ಅವರ ಪತ್ನಿ ಎರೆಹುಳು ಗೊಬ್ಬರದ ಬ್ಯುಸಿನೆಸ್ ಬಗ್ಗೆ ಸಲಹೆ ನೀಡಿದಾಗ, ಅಮಿತ್ ತನ್ನ ಮಾರ್ಕೆಟಿಂಗ್ ಕೌಶಲ್ಯವನ್ನು ತನ್ನದೇ ವ್ಯವಹಾರಕ್ಕೆ ಏಕೆ ಬಳಸಿಕೊಳ್ಳಬಾರದು ಎನ್ನುವ ಆಲೋಚನೆ ಮಾಡಿದರು.

ಆ ಆಲೋಚನೆ ಬಂದ ಮೇಲೆ ನಗರದ ಬದುಕಿಗೆ ವಿದಾಯ ಹೇಳಿ ಹಳ್ಳಿಯ ತಮ್ಮ ಭೂಮಿಯ ಕಡೆ ಗಮನ ನೀಡಿ ಅಲ್ಲಿ ಎರೆಹುಳು ಗೊಬ್ಬರ ಉತ್ಪಾದಿಸಿ ಮಾರಾಟ‌ ಮಾಡುವ ಕಡೆ ಗಮನ ನೀಡಿದರು. ಆದರೆ ಆರಂಭದಲ್ಲಿ ಅವರಿಗೆ ಇದಕ್ಕೆ ಸೂಕ್ತ ಪ್ರೋತ್ಸಾಹ ದೊರೆಯಲಿಲ್ಲ. ಏಕೆಂದರೆ ಹೆಚ್ಚು ಇಳುವರಿಗಾಗಿ ರಾಸಾಯನಿಕ ಗೊಬ್ಬರಗಳಿಗೆ ರೈತರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದ ಕಾಲವದು.
ಆದರೆ ಅಮಿತ್ ಅವರು ತಮ್ಮ ಮನಸ್ಸು ಬದಲಿಸದೆ ಕೆಲಸ ಆರಂಭ ಮಾಡಿ, ಎರೆಹುಳು ಗೊಬ್ಬರ ಉತ್ಪಾದನೆ ಮಾಡಿ ನರ್ಸರಿ ಒಂದಕ್ಕೆ ಗೊಬ್ಬರವನ್ನು ನೀಡಿದರು. ಒಂದು ವಾರದ ನಂತರ ಆ‌ ನರ್ಸರಿಯವರು ಹೆಚ್ಚಿನ ಗೊಬ್ಬರಕ್ಕೆ ಬೇಡಿಕೆ ಇಟ್ಟರು. ಹೆಚ್ಚು ಬೆಲೆ ಹೇಳಿದರೂ ಆ ನರ್ಸರಿ ಅವರು ಕೊಡಲು ಸಿದ್ಧರಾಗಿಬಿಟ್ಟರು. ಹೀಗೆ ಅಮಿತ್ ಅವರು ತಯಾರಿಸಲು ಆರಂಭಿಸಿದ ಎರೆಹುಳು ಗೊಬ್ಬರಕ್ಕೆ ಬೇಡಿಕೆ ಬರ ತೊಡಗಿತು.

ಅಮಿತ್ ಅವರ ಮೂರು ಎಕರೆ ಜಮೀನಿನಲ್ಲಿ 350 ವರ್ಮಿ ಬೆಡ್ ಗಳಿದ್ದು, ಒಂದು ತಿಂಗಳಿಗೆ ಸುಮಾರು 100 ಟನ್ ಗ ಗೊಬ್ಬರವನ್ನು ಇಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ಈ ಹಂತಕ್ಕೆ ಬೆಳೆಯಲು ಅವರು ಆರಂಭದ ದಿನಗಳಲ್ಲಿ ಹಳ್ಳಿಗಳಿಗೆ ಭೇಟಿ ನೀಡಿ ದಿನವೊಂದಕ್ಕೆ ಐವತ್ತು ಜನರನ್ನು ಭೇಟಿ ಮಾಡಿ ಜೈವಿಕ ಗೊಬ್ಬರದ ಮಹತ್ವ ತಿಳಿಸಿ ಮೊದಲು ತಾವು ನೀಡುವ ಎರೆಹುಳು ಗೊಬ್ಬರ ಪರೀಕ್ಷೆ ಮಾಡಿ ಅನಂತರವೇ ಕೊಂಡುಕೊಳ್ಳಲು ಹೇಳುತ್ತಿದ್ದರಂತೆ. ಅಲ್ಲದೇ ಇದರಿಂದ ಭೂಮಿಯ ಸಂರಕ್ಷಣೆ ಕೂಡಾ ಸಾಧ್ಯವೆನ್ನುವ ಜಾಗೃತಿ ಕೂಡಾ ಮೂಡಿಸಲು ಅವರು ಪ್ರಯತ್ನ ಪಟ್ಟರು. ಈ ಎಲ್ಲಾ ಪ್ರಯತ್ನಗಳ ಫಲವೇ ಇಂದು ಅವರ ವ್ಯವಹಾರ ದೊಡ್ಡ ಮಟ್ಟಕ್ಕೆ ಬೆಳೆದಿದೆ.

ಸ್ನೇಹಿತರೇ ಜೀವನದಲ್ಲಿ ಯಾವುದೇ ಸಫಲತೆಯಾಗಲೀ ಶ್ರಮಪಡದೇ ಸಿಗುವುದಿಲ್ಲ. ಒಂದೆರಡು ಸೋಲು ಕಂಡಕೂಡಲೇ ನಾವು ವಿಚಲಿತರಾಗದೇ ತಾಳ್ಮೆ ಹಾಗೂ ಆತ್ಮ ವಿಶ್ವಾಸದಿಂದ ಮುಂದಡಿಯಿಟ್ಟರೆ ಗೆಲುವು ಖಚಿತ.