Viral Video: ಬಾಳೆ ಹಣ್ಣು ಕಂಡು ಕುಣಿದು ಕುಪ್ಪಳಿಸಿದ ಆನೆ ಮರಿ! ನೆಟ್ಟಿಗರು ಅಂತಿದ್ದಾರೆ “ಸೋ ಸ್ವೀಟ್!”

ಸಾಮಾಜಿಕ ಜಾಲತಾಣಗಳಲ್ಲಿ ಆನೆ ಮರಿಯೊಂದರ ಮುಗ್ಧತೆಯನ್ನು, ತುಂಟಾಟವನ್ನು ಒಳಗೊಂಡಿರುವ ಒಂದು ಹೃದಯ ಸ್ಪರ್ಶಿಸುವ ವಿಡಿಯೋ ಸಿಕ್ಕಾಪಟ್ಟೆ ವೇಗವಾಗಿ ವೈರಲ್ ಆಗುತ್ತಿದ್ದು, ನೋಡುಗರ ಮೆಚ್ಚುಗೆಯನ್ನು ಪಡೆದುಕೊಂಡು ಸಾಗಿದೆ. ಈ ವೀಡಿಯೋದಲ್ಲಿನ ದೃಶ್ಯಗಳನ್ನು ನೋಡಿದಾಗ ಮರಿ ಆನೆಯ ತುಂಟಾಟ ಎಂತಹವರ ಮನಸ್ಸನ್ನು ಕೂಡಾ ಸೂರೆಗೊಳ್ಳುವಂತೆ ಇದೆ‌. ಸಹಜವಾಗಿಯೇ ಆನೆಗಳಿಗೆ ಬಾಳೆಹಣ್ಣು ಎಂದರೆ ಬಹಳ ಇಷ್ಟ. ಆನೆಗಳಿಗೆ ಜನರು ಕೂಡಾ ದೇವಾಲಯಗಳ ಬಳಿ ಬಾಳೆಹಣ್ಣುಗಳನ್ನು ಕೊಡುವುದನ್ನು ನಾವು ಕೂಡಾ ನೋಡಿಯೇ ಇರುತ್ತೇವೆ. ಆನೆಗಳಿಗೆ ಪ್ರಿಯವಾದ ಬಾಳೆಹಣ್ಣುಗಳನ್ನು ಹಸಿದ ಆನೆಯ ಮುಂದೆ ಇಟ್ಟರೆ ಅದು ಸುಮ್ಮನೆ ಇರುವುದೇ? ಒಂದನ್ನೂ ಕೂಡಾ ಬಿಡದೆ ತಿಂದು ಮುಗಿಸಿ ಬಿಡುವುದು ಕೂಡಾ ವಾಸ್ತವ.

ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಇಂತಹುದೊಂದು ಸುಂದರವಾದ ಸನ್ನಿವೇಶವನ್ನೇ ನಾವು ನೋಡಬಹುದಾಗಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಆನೆ ಮರಿಯೊಂದಕ್ಕೆ ತನ್ನ ಎದುರುಗಡೆ ಬಾಳೆಹಣ್ಣಿನ ಗೊನೆಗಳು ಕಂಡಿವೆ. ಹಸಿವಿನಿಂದ ಆಹಾರಕ್ಕಾಗಿ ಕಾಯುತ್ತಿದ್ದ ಆ ಮರಿ ಆನೆಗೆ ಒಂದೇ ಸಲಕ್ಕೆ ಅಷ್ಟೊಂದು ಬಾಳೆ ಹಣ್ಣುಗಳನ್ನು ನೋಡಿ ಆಗಿರುವ ಖುಷಿ ಅಷ್ಟಿಷ್ಟಲ್ಲ.‌ ಅದು ಬಾಳೆ ಹಣ್ಣಿನ ಒಂದು ಗೊನೆಯನ್ನು ಮೊದಲು ತನ್ನ ಸೊಂಡಿಲಿನಿಂದ ಎತ್ತಿಕೊಂಡು ದೂರ ಎಸೆಯುತ್ತದೆ. ಅನಂತರ ಅದರ ಹಿಂದೆ ಓಡಿ ಹೋಗಿ ಅದನ್ನು ಹಿಡಿದುಕೊಳ್ಳುತ್ತದೆ.

ನಂತರ ತನ್ನ ಬಳಿಯೇ ಇದ್ದ ತನ್ನ ತಾಯಿಯ ಹತ್ತಿರದಿಂದ ಬಾಳೆಹಣ್ಣು ಗಳನ್ನು ಕಿತ್ತುಕೊಂಡು ಆಟ ಆಡುತ್ತದೆ. ಹೀಗೆ ಮರಿ ಆನೆಯು ಬಾಳೆ ಹಣ್ಣನ್ನು ಕಂಡು ಕುಣಿದು, ಕುಪ್ಪಳಿಸಿ ಆಟವಾಡಿದ ವೀಡಿಯೋವನ್ನು ಇಂಡಿಯನ್ ಫಾರೆಸ್ಟ್ ಸರ್ವೀಸ್ ನ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಜೊತೆ ಅವರು ವಿಶ್ವ ಆನೆಗಳ ದಿನಾಚರಣೆಗೆ ಸಿದ್ಧತೆ, ನೀವು ಪ್ರಾಣಿಗಳನ್ನು ಪ್ರೀತಿಸುವವರಾದರೆ, ವಿಶೇಷವಾಗಿ ಆನೆ ಮರಿಗಳನ್ನು ಇಷ್ಟಪಡುವವರಾದರೆ ಈ ವೀಡಿಯೋ ನಿಮ್ಮ ಮುಖದಲ್ಲಿ ನಗುವನ್ನು ತರುತ್ತದೆ ಎಂದು ಬರೆದುಕೊಂಡಿದ್ದಾರೆ.

ಈ ವೀಡಿಯೊವನ್ನು ಅವರು ಆಗಸ್ಟ್ 11 ರಂದು ಹಂಚಿಕೊಂಡಿದ್ದು, ಇದುವರೆಗೆ 30 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೇ 2 ಸಾವಿರ ದಾಟಿದ ಲೈಕ್ ಗಳನ್ನು ಮತ್ತು 300 ಕ್ಕೂ ಹೆಚ್ಚು ರೀ-ಟ್ವೀಟ್‌ಗಳನ್ನು ಮಾಡಲಾಗಿದೆ. ಜನರು ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದು, ಅವರು ಪ್ರತಿಕ್ರಿಯೆಗಳಲ್ಲಿ ಮೂಲಕ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.‌ ನೆಟ್ಟಿಗರು ಮಕ್ಕಳು ಮಕ್ಕಳೆ, ಅದು ಪ್ರಾಣಿಗಳಾಗಲೀ, ಮನುಷ್ಯರಾಗಲೀ ಮುಗ್ಧತೆ ಮಾತ್ರ ಒಂದೇ ಎಂದೂ, ಆನೆ ಮರಿಯು ಆನೆ ದಿನಾಚರಣೆಯ ಸಂಭ್ರಮಕ್ಕೆ ಸಜ್ಜಾಗಿದೆ ಎಂದೂ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.