ಕಿಚನ್ ನಲ್ಲಿ ಹೋಗದಂತೆ ತಡೆಯಲು ತಾಯಿ ಮಾಡಿಸಿದಳು ಬಾಗಿಲು, ಮಗು ತೋರಿಸಿದ ಬುದ್ಧಿವಂತಿಕೆಯ ವಿಡಿಯೋ ವೈರಲ್!
ಸಣ್ಣ ಮಕ್ಕಳಿರುವ ಮನೆಯಲ್ಲಿ ಮಕ್ಕಳ ತುಂಟಾಟ ಹಾಗೂ ಅವರ ಆಟಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಕೆಲವು ಮನೆಗಳಲ್ಲಂತೂ ಮಕ್ಕಳ ಈ ತುಂಟಾಟಗಳಿಂದ ಪೋಷಕರು ಮಕ್ಕಳನ್ನು ಸುಧಾರಿಸುವ ವೇಳೆಗೆ ಸುಸ್ತಾಗಿ ಬಿಡುತ್ತಾರೆ. ಅದು ಮಾತ್ರವೇ ಅಲ್ಲದೇ ಮನೆಗಳಲ್ಲಿ ಪೋಷಕರು ಕೂಡಾ ಮಕ್ಕಳು ಮೆಟ್ಟಿಲುಗಳ ಬಳಿ, ಅಡುಗೆ ಕೋಣೆಯೊಳಗೆ ಅಥವಾ ಅಪಾಯ ಆಗುತ್ತದೆ ಎನ್ನುವ ಕಡೆಗಳಿಗೆ ಹೋಗದಂತೆ ಅಂತಹ ಜಾಗಗಳಲ್ಲಿ ಏನಾದರೊಂದು ಅಡ್ಡ ಹಾಕುತ್ತಾರೆ. ನಗರಗಳಲ್ಲಿ ಸೇಫ್ಟಿ ಡೋರ್ಸ್ ಅನ್ನು ಖರೀದಿ ಮಾಡಿ ಮಕ್ಕಳು ಅಪಾಯ ಇರೋ ಕಡೆಗೆ ಅಥವಾ ತುಂಟಾಟ ಮಾಡಿ ತೊಂದರೆ ಉಂಟು ಮಾಡೋ ಕಡೆ ಇಟ್ಟು ಮಕ್ಕಳು ಒಳಗೆ ಬಾರದಂತೆ ಎಚ್ಚರ ವಹಿಸ್ತಾರೆ.
ಮೇರಿಲ್ಯಾಂಡ್ ನ ಒಬ್ಬ ಮಹಿಳೆ ಕೂಡಾ ತನ್ನ ಮಗನ ತುಂಟಾಟಗಳನ್ನು ತಡೆಯಲು ಇಂತಹ ಒಂದು ಪ್ರಯತ್ನ ಮಾಡಿ, ಕಡೆಗೆ ತನ್ನ ಪುಟ್ಟ ಮಗನ ಚಾಣಾಕ್ಷತನವನ್ನು ವೀಡಿಯೋದಲ್ಲಿ ಬಂಧಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋ ನೋಡಿದವರೆಲ್ಲರೂ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಂಡರೆ, ಸಾವಿರಾರು ಜನ ಈ ವೀಡಿಯೋವನ್ನು ಮೆಚ್ಚಿ ಅದನ್ನು ಹಂಚಿಕೊಂಡಿದ್ದಾರೆ.
ಈ ವೀಡಿಯೋ ನೋಡಿದವರು ನಿಜಕ್ಕೂ ಪುಟ್ಟ ಹುಡುಗನ ತುಂಟಾಟದಲ್ಲೂ ಆತನ ಮೆರೆದ ಬುದ್ಧಿವಂತಿಕೆಯನ್ನು ಬಹಳ ಇಷ್ಟ ಪಟ್ಟಿದ್ದಾರೆ. ಹಾಗಾದರೆ ಈ ವೀಡಿಯೋದಲ್ಲಿ ಏನಿದೆ ಅಂತ ತಿಳಿಯೋಣ ಬನ್ನಿ.
ಮೇರಿಲ್ಯಾಂಡ್‌ನ ನಿವಾಸಿ ಜನೇಲ್ ಪಾಮರ್ ಅವರ ಒಂದು ವರ್ಷದ ಮಗ ಪದೇ ಪದೇ ಅಡುಗೆ ಮನೆಗೆ ಬರುವುದು, ಅಡುಗೆ ಮನೆಯಲ್ಲಿ ಸ್ನಾಕ್ಸ್ ಎತ್ತಿಕೊಂಡು ತಿನ್ನುವುದು, ಅಡುಗೆ ಮನೆಯಲ್ಲಿನ ವಸ್ತುಗಳನ್ನು ಅಸ್ತವ್ಯಸ್ತಗೊಳಿಸುವುದು ಮಾಡುತ್ತಲೇ ಇದ್ದ. ಮಗನ ತುಂಟಾಟಗಳಿಂದ ದಣಿದಿದ್ದ ಜನೇಲ್ ಅದರಿಂದ ಪರಿಹಾರ ಕಂಡುಕೊಳ್ಳುವುದಕ್ಕೆ ಅಂತ ಒಂದು ಸೇಫ್ಟಿ ಡೋರ್ ಅನ್ನು ಖರೀದಿ ಮಾಡಿ ತಂದು ಮಗ ಅಡುಗೆ ಮನೆಯೊಳಗೆ ಬರದೇ ಇರಲಿ ಅಂತ ಅಡ್ಡ ಹಾಕಿದ್ದಾರೆ. ಆದರೆ ಆಮೇಲೆ ನಡೆದಿರೋದು ಮಾತ್ರ ಆಕೆ ನಿಜಕ್ಕೂ ಊಹೆ ಕೂಡಾ ಮಾಡಿರಲಿಲ್ಲ ಎನ್ನಬಹುದು.
ಆಕೆ ಮಗು ಬರದೇ ಇರಲಿ ಎಂದು ಅಡ್ಡ ಇಟ್ಟಿರುವ ಸೇಫ್ಟಿ ಡೋರ್ ಅನ್ನು ಬೇಬಿ ಪಾಮರ್ ಆರಾಮವಾಗಿ ಮೇಲೆ ಎತ್ತಿ ಅದರ ಕೆಳಭಾಗದಿಂದ ಅಡುಗೆ ಮನೆ ಒಳಗೆ ಹೋಗ್ತಾನೆ. ನಂತರ ಅವನು ಅಡುಗೆ ಮನೆಯಲ್ಲಿ ಸ್ನಾಕ್ಸ್ ಎತ್ಕೊಂಡು ವಾಪಸ್ ಬಂದು ಅದನ್ನು ಇನ್ನೊಂದು ಬದಿಗೆ ಎಸೆದ, ಬಾಗಿಲ ಕೆಳಗಿಂದ ಹೊರಗೆ ಬಂದು ಮತ್ತೆ ಬಾಗಿಲನ್ನು ಲಾಕ್ ಮಾಡುತ್ತಾನೆ. ಅವನು ಹಾಗೆ ಮಾಡಿ ಬಹುಶಃ ತನ್ನ ತಾಯಿಗೆ ಇದೆಲ್ಲಾ ಗೊತ್ತಿಲ್ಲ ಎಂದು ಯೋಚಿಸಿದ್ದರೂ ಇರಬಹುದು. ಆದರೆ ಆ ಮಗುವಿನ ತಾಯಿ ಇದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಜನೇಲ್ ಪಾಮರ್ ಹಂಚಿಕೊಂಡ ಈ ವೀಡಿಯೋ ಜೊತೆ ಆಕೆ “ನನ್ನ ಮಗುವಿಗೆ ಅಡುಗೆ ಮನೆಗೆ ಹೋಗಲು ಸಾಧ್ಯವಾಗದಂತೆ ನಾನು ಬಾಗಿಲು ಖರೀದಿಸಿ ಇಟ್ಟೆ, ಆದರೆ ಅವನು ಒಳಗೆ ಹೋಗಿ ಎಲ್ಲಾ ಸಾಮಗ್ರಿಗಳನ್ನು ಹರಡಿ ಹಾಕಿದ್ದಾನೆ. ನೋಡಿ, ನಾನೇ ಈಗ ತಮಾಷೆಯಾಗಿಬಿಟ್ಟೆ.” ಎಂದು ಬರೆದು ಕೊಂಡಿದ್ದಾರೆ. ಈ ವೀಡಿಯೊವನ್ನು ಇದುವರೆವಿಗೂ 9 ಲಕ್ಷ ಜನ ವೀಕ್ಷಣೆ ಮಾಡಿದ್ದು, ಎಂಟು ಸಾವಿರ ಜನ ಶೇರ್ ಮಾಡಿದ್ದರೆ, ಮೂರು ಸಾವಿರಕ್ಕೂ ಅಧಿಕ ಜನ ಕಾಮೆಂಟ್ ಮಾಡಿದ್ದಾರೆ. ಈ ಮಗು ಬಹಳ ಜಾಣ, ಬುದ್ಧಿವಂತ, ಅವನ ಬುದ್ಧಿವಂತಿಕೆ ನಿಜಕ್ಕೂ ಗ್ರೇಟ್ ಎಂದೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.