UPSC ಪುಸ್ತಕಗಳು ಖರೀದಿಸಲು ಸಹಾಯ ಮಾಡಿ ಎಂದ ವಿದ್ಯಾರ್ಥಿಗೆ ಸೋನು ಸೂದ್ ಹೇಳಿದ್ದೇನು..?

ಸೋನು ಸೂದ್ ಬಹುಶಃ ಭಾರತದಲ್ಲಿ ಇಷ್ಟೊಂದು ಸದ್ದು ಸುದ್ದಿ ಮಾಡುತ್ತಿರುವ ಸೆಲೆಬ್ರಿಟಿ ಇನ್ನೊಬ್ಬರಿಲ್ಲ ಎಂದರೆ ತಪ್ಪಾಗುವುದಿಲ್ಲ. ಆದರೆ ಈ ನಟ ಸುದ್ದಿಯಾಗಿರುವುದು ಯಾವುದೇ ಹೊಸ ಸಿನಿಮಾ ಅಥವಾ ಇನ್ನಾವುದೋ ಸಿನಿಮಾ ಕುರಿತ ಸುದ್ದಿಯಿಂದಲ್ಲ ಬದಲಾಗಿ ಲಾಕ್ ಡೌನ್ ವೇಳೆ ಮೆರೆದ ತನ್ನ ಹೃದಯ ವೈಶಾಲ್ಯತೆಯಿಂದ. ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲರೂ ಕೊರೊನಾ ದಿಂದ ರಕ್ಷಣೆಗಾಗಿ ತಮ್ಮ ತಮ್ಮ ಮನೆಗಳಲ್ಲೇ ಉಳಿದಾಗ, ವಲಸೆ ಕಾರ್ಮಿಕರು ಮಾತ್ರ ಸಂಕಷ್ಟದಲ್ಲಿ ಸಿಲುಕಿ, ಊರುಗಳಿಗೆ ಹೋಗಲು ಪಟ್ಟ ಪಾಡು ಕಣ್ಣೀರನ್ನು ತರಿಸುವಂತದ್ದು. ಆ ಸಂದರ್ಭದಲ್ಲಿ ರಸ್ತೆಗಿಳಿದು ವಲಸೆ ಕಾರ್ಮಿಕರ ಕೈ ಹಿಡಿದವರು ಇದೇ ಸೋನು ಸೂದ್.

ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದ್ದು ಮಾತ್ರವಲ್ಲದೇ ತನ್ನ ಸ್ವಂತ ಖರ್ಚಿನಲ್ಲಿ ಅವರ ಊರುಗಳಿಗೆ ಕಳುಹಿಸಿದರು ಸೋನು ಸೂದ್. ಅಲ್ಲಿಗೆ ಅವರ ಸೇವಾ ಕಾರ್ಯಗಳು ನಿಲ್ಲಲಿಲ್ಲ‌. ಟ್ವಿಟರ್ ಮೂಲಕ ಯಾರಾದರೂ ಸಮಸ್ಯೆ ಎಂದು ಒಂದು ಟ್ವೀಟ್ ಮಾಡಿದರೆ ಸಾಕು ಸೋನು ಹಾಗೂ ಅವರ ಟೀಂ ಸಹಾಯ ಯಾಚಿಸಿದವರ ಸಹಾಯಕ್ಕೆ ಮುಂದಾಗುವ ಮೂಲಕ ತಮ್ಮ ಮಾನವೀಯತೆಯ ಕಾರ್ಯಗಳನ್ನು ಸೋನು ಮುಂದುವರೆಸುತ್ತಲೇ ಇದ್ದು, ಒಂದಲ್ಲಾ ಒಂದು ಸಹಾಯವನ್ನು ಮಾಡುತ್ತಾ ಅವರು ಸುದ್ದಿಯಾಗುತ್ತಲೇ ಇದ್ದು ಅಪಾರ ಜನ ಮೆಚ್ಚುಗೆಯನ್ನು ತನ್ನದಾಗಿಸಿಕೊಳ್ಳುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಟ್ವಿಟರ್ ನಲ್ಲಿ ವಿದ್ಯಾರ್ಥಿಯೊಬ್ಬನು ಟ್ವೀಟ್ ಮಾಡಿ ಸೋನು ಅವರ ಸಹಾಯವನ್ನು ಯಾಚಿಸಿದ್ದಾನೆ. ಆತ ತನ್ನ ಟ್ವೀಟ್ ನಲ್ಲಿ, ‘ಸರ್, ದಯವಿಟ್ಟು ಯುಪಿಎಸ್ಸಿ ಪುಸ್ತಕಗಳನ್ನು ಖರೀದಿಸಲು ನನಗೆ ಸಹಾಯ ಮಾಡಿ. ಆ ಪುಸ್ತಕಗಳು ಇಲ್ಲದೆ ನಾನು ಪರೀಕ್ಷೆಗೆ ತಯಾರಿಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಪುಸ್ತಕಗಳನ್ನು ಕೊಳ್ಳಲು ನನಗೆ ಸಹಾಯ ಮಾಡಿ’ ಎಂದು ಕೇಳಿದ್ದಾನೆ. ಆತನ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಸೋನು ಸೂದ್ ಅವರು ತಮ್ಮ ಟ್ವೀಟ್ ನಲ್ಲಿ ಆ ವಿದ್ಯಾರ್ಥಿಗೆ ತನ್ನ ವಿಳಾಸವನ್ನು ನೀಡುವಂತೆ ಕೇಳಿದ್ದು, ಪುಸ್ತಕಗಳು ನಿಮ್ಮ ಮನೆ ತಲುಪುತ್ತವೆ” ಎಂದು ಭರವಸೆಯನ್ನು ನೀಡಿದ್ದಾರೆ‌.

ಸೋನು ಮಾಡುತ್ತಿರುವ ಸಹಾಯ ಇದೇ ಮೊದಲಲ್ಲ, ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್ ಫೋನ್ ಖರೀದಿ ಮಾಡಲು ಹಸುವನ್ನು ಮಾರಿದ್ದ ತಂದೆಗೆ ಹಸು ವಾಪಸ್ಸು ಕೊಡಿಸಿದ್ದರು. ಆಂಧ್ರದ ರೈತರೊಬ್ಬರಿಗೆ ಹೊಲ ಉಳಲು ಟ್ರಾಕ್ಟರ್ ಅನ್ನು ಕೊಡಿಸಿದ್ದಾರೆ. ಫಿಲಿಪ್ಪೀನ್ಸ್ ನಿಂದ 39 ಮಕ್ಕಳಿಗೆ ಲಿವರ್ ಟ್ರಾನ್ಸ್ ಪ್ಲಂಟ್ ಶಸ್ತ್ರ ಚಿಕಿತ್ಸೆಗಾಗಿ ಭಾರತಕ್ಕೆ ಕರೆ ತರಲು ಕೂಡಾ ಅವರು ಸಹಾಯಹಸ್ತವನ್ನು ಮುಂದೆ ಚಾಚಿದ್ದಾರೆ. ವಿದೇಶದಲ್ಲಿ ಲಾಕ್ ಡೌನ್ ನಿಂದ ಸಿಕ್ಕಿಕೊಂಡಿದ್ದ ಭಾರತೀಯ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆ ತರಲು ಕೂಡಾ ಸೋನು ಸೂದ್ ನೆರವನ್ನು ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.