ನೀವು ಜೀವನದಲ್ಲಿ ಎಂದಾದರೂ ಅವಮಾನಕ್ಕೊಳಗಾದರೆ ‘ಟಾಟಾ’ ಅವರಂತೆ ಉತ್ತರ ಕೊಡುವುದನ್ನು ಕಲಿಯಿರಿ!

ನಾವು ಈ ವ್ಯವಹಾರಿಕ ಜಗತ್ತಿನಲ್ಲಿ ಸಂಚರಿಸುವಾಗ ಎಲ್ಲರೂ ನಮ್ಮ ಜೊತೆಗೆ ಯಾವ ರೀತಿಯಾಗಿ ವರ್ತಿಸುತ್ತಿರುತ್ತಾರೆ ಎಂಬುದು ಗಮನಕ್ಕೆ ಬರುತ್ತಿರುತ್ತದೆ. ಹೆಚ್ಚಾಗಿ ಎಲ್ಲರೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವದು ನಮಗೆ ತಿಳಿದು ಬರುತ್ತದೆ. ಇಂಥದ್ದರಲ್ಲಿ ನಾವು ಎದುರಿನವರ ಜೊತೆಗೆ ಪ್ರಾಮಾಣಿಕವಾಗಿ ವರ್ತಿಸಿದರೂ ಅವರಿಂದ ನಮಗೆ ಅಪಮಾನವಾಗುವಂಥ ಘಟನೆಗಳು ಆಗೇ ಆಗುತ್ತವೆ. ಒಬ್ಬೊಬ್ಬರು ಕೆಲವೊಂದು ಸಲ ಎಲ್ಲರ ಮುಂದೆ ತುಂಬಾ ಹಿ ಯಾಳಿಸಿ ಯಾವ ಕಾಲಕ್ಕೂ ಮರೆಯಲಾರದ ಹೀ ನ ಶಬ್ದಗಳನ್ನು ಪ್ರಯೋಗಿಸಿ ಮು ಖಭಂಗ ಮಾಡುತ್ತಾರೆ. ಆಗ ಆ ಕೆಟ್ಟ ಮಾತುಗಳು ನಮ್ಮ ಹೃದಯದಲ್ಲಿ ಅಚ್ಚಳಿಯದಂತೆ ನಾಟಿ ಬಿಡುತ್ತವೆ.

ಬಡವರೇ ಆಗಿರಲಿ ಶ್ರೀಮಂತರೇ ಆಗಿರಲಿ. ಎಲ್ಲರಿಗೂ ಮಾನ ಸನ್ಮಾನವೆಂದರೆ ಅಷ್ಟೇ. ಯಾವಾಗ ನಾಲ್ಕು ಜನರ ಮುಂದೆ ಅವಮಾನವಾಗುತ್ತೆ ಆಗ ನಿರಾಶರಾಗಕೂಡದು. ಕಾರಣ ನಿರಾಶೆಯ ಭರದಲ್ಲಿ ಆಗಬಾರದ ತಪ್ಪುಗಳು ನಮ್ಮಿಂದ ಆಗುತ್ತವೆ. ಏನೆಂದರೆ, ಎದುರಿನವರ ಜೊತೆಗೆ ಜಗಳಕ್ಕಿಳಿಯುವದು, ಅಥವಾ ಬಾಯಿಗೆ ಬಂದ ಹಾಗೆ ಮಾತನಾಡುವದು, ಇದಕ್ಕೂ ಹೆಚ್ಚು ಅತಿರೇಕವಾದರೆ ಪ್ರಸಂಗ ಕೈ ಕೈಗೂ ಬರುತ್ತದೆ.

ಎಷ್ಟೋ ಸಲ ವ್ಯಕ್ತಿ ನಮಗಿಂತ ದೊಡ್ಡವನಾಗಿದ್ದರೆ ಅಂದರೆ ಹಣದಲ್ಲಿ ಬಲದಲ್ಲಿ ನಮಗಿಂದ ಹೆಚ್ಚಾಗಿದ್ದರೆ ಆಗ ನಮಗೇನು ಮಾಡಲೂ ಸಾಧ್ಯವಿಲ್ಲದೆ ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತೆ ಅವಮಾನವನ್ನು ಸಹಿಸಿಕೊಳ್ಳುತ್ತ ಮನದಲ್ಲೇ ಮರುಗುವ ಪ್ರಸಂಗಗಳು ಬರುತ್ತವೆ. ಆಗ ಅವರಿಂದಾದ ಅವಮಾನವನ್ನು ಯಾರಿಗೂ ಹೇಳಿಕೊಳ್ಳದೆ ಹಾಗೆಯೇ ಮನದಲ್ಲಿಟ್ಟುಕೊಳ್ಳುತ್ತೇವೆ. ಅಥವಾ ನಮ್ಮ ಆಪ್ತರ ಜೊತೆಗೆ ಸಂಬಂಧಿತ ವ್ಯಕ್ತಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತ ಮಾಡುತ್ತೇವೆ.

ಇದು ಬರೀ ನಮ್ಮ ನಿಮ್ಮಂಥವರ ಜೊತೆಗೆಯೇ ಆಗುತ್ತದೆ ಹೀಗಲ್ಲ. ಯಾರ ಜೊತೆಗೂ ಆಗಬಹುದು. ಇಂಥದ್ದೊಂದು ಘಟನೆ ಭಾರತದ ಉದ್ಯೋಗಪತಿ ರತನ್ ಟಾಟಾ ಅವರ ಜೊತೆಗೂ ಆಗಿತ್ತು. ಆಗ ಅವರು ಮಾಡಿದ ಕೆಲಸ ತುಂಬಾ ಅಮೋಘವಾದದ್ದು. ಅವರು ಇಂಥ ಪ್ರಸಂಗಕ್ಕೆ ಎದುರಾದ ಬಗೆಯನ್ನು ನೋಡಿದರೆ ನಿಜವಾಗಿಯೂ ಅವರ ಮೇಲೆ ಮತ್ತಷ್ಟು ಹೆಮ್ಮೆ ಪಡುತ್ತೇವೆ.

ಟಾಟಾ ಅವರು 1998 ರಲ್ಲಿ ಟಾಟಾ ಇಂಡಿಕಾ ಕಾರೊಂದನ್ನು ಏಕಕಾಲಕ್ಕೆ ಭಾರತ ಮತ್ತು ಭಾರತದ ಹೊರಗೆ ಮಾರ್ಕೆಟ್ಟಿಗೆ ಇಳಿಸಿದರು. ಆಗ ಟಾಟಾ ಇಂಡಿಕಾ ಕಾರಿಗೆ ಯಾಕೋ ಜನರು ಇಷ್ಟ ಪಡಲೇ ಇಲ್ಲ. ಹೀಗಾಗಿ ಉತ್ಪಾದನೆ ಕಡಿಮೆಯಾಯಿತು. ಉತ್ಪಾದನೆಗೆ ಹೊಡೆತ ಬಿದ್ದುದರಿಂದ ಪ್ರೊಜೆಕ್ಟೇ ಫೇಲಾಗಿ ಕಂಪನಿ ನೆಲಕಚ್ಚಿತು. ಹೀಗಾಗಿ ಟಾಟಾ ಅವರಿಗೆ ಈ ಪ್ರೊಜೆಕ್ಟ್ ನ್ನೇ ಮಾರಲು ಸಂಚಾಲಕ ಮಂಡಳಿಯವರು ಒತ್ತಾಯ ಮಾಡತೊಡಗಿದರು. ಬೇರೆ ದಾರಿ ಕಾಣದೆ ರತನ್ ಟಾಟಾ ಅವರು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದರು. ಆಮೇಲೆ ಅಮೆರಿಕೆಯ ಜಗಪ್ರಸಿದ್ಧ ಫೋರ್ಡ್ ಮೊಟಾರ್ ಕಂಪನಿಯು ಈ ಪ್ರೊಜೆಕ್ಟ್ ನ್ನು ಖರೀದಿಸಲು ಅಭಿರುಚಿ ತೋರಿಸಿತು.

ಆಗ ರತನ್ ಟಾಟಾ ಅವರು ಫೋರ್ಡ್ ಕಂಪನಿಯ ಮಾಲೀಕರಾದ ಬಿಲ್ ಫೋರ್ಡ್ ಜೊತೆ ಮಾತುಕತೆಗಾಗಿ ಅಮೆರಿಕೆಯ ಮಿಷಿಗನ್ ರಾಜ್ಯದಲ್ಲಿಯ ಡೆಟ್ರಾಯಿಟ್ ಪಟ್ಟಣಕ್ಕೆ ಹೋದರು. ಆ ಮೀಟಿಂಗ್ ನಲ್ಲಿ ಬಿಲ್ ಅವರು ರತನ್ ಟಾಟಾ ಅವರಿಗೆ ಸ್ವಲ್ಪ ಕುಹಕತನದಿಂದಲೇ, ‘ರತನ್ ಅವರೇ, ನಿಮಗೆ ಫೋರ್ ವೀಲರ್ ತಯಾರಿಸುವ ಜ್ಞಾನವಿಲ್ಲದಿದ್ದರೆ ಇದಕ್ಕೇಕೆ ಕೈ ಹಾಕಿದ್ದೀರಿ, ನಿಮ್ಮ ಬಂದ್ ಬಿದ್ದಿರುವ ಪ್ರೊಜೆಕ್ಟ್ ನ್ನು ತೆಗೆದುಕೊಂಡು ನಾವು ನಿಮ್ಮ ಮೇಲೆ ಒಂದು ಉಪಕಾರವೇ ಮಾಡುತ್ತಿದ್ದೇವೆ’ ಎಂದರು.

ಸ್ವಾಭಿಮಾನದ ಹೆಸರಾದ ರತನ್ ಟಾಟಾ ಅವರಿಗೆ ಬಿಲ್ ಫೋರ್ಡ್ ಆಡಿದ ಮಾತುಗಳು ಮನಸ್ಸಿಗೆ ತುಂಬಾ ನಾಟಿದವು. ಅಲ್ಲಿಂದ ನೇರ ಮುಂಬಯಿಗೆ ಬಂದು ಕಂಪನಿಯ ಮಹತ್ವದ ಮೀಟಿಂಗ್ ಕರೆದರು. ಆ ಮೀಟಿಂಗ್ ನಲ್ಲಿ ಟಾಟಾದ ಈ ಪ್ರೊಜೆಕ್ಟ್ ಮಾರುವದನ್ನು ಕ್ಯಾನ್ಸಲ್ ಮಾಡಲು ಹೇಳಿ ಹೇಗಾದರೂ ಸರಿ ಇದನ್ನು ಲಾಭದಲ್ಲಿ ತರಲೇಬೇಕು ಎಂದು ನಿರ್ಧರಿಸಿದರು. ರತನ್ ಅವರು ತೆಗೆದುಕೊಂಡ ಈ ನಿರ್ಣಯ ಕೆಲವರು ತಪ್ಪೆಂದು ಭಾವಿಸಿ ಗೇಲಿ ಮಾಡಿದರು. ಆದರೆ ಟಾಟಾ ಅವರು ಮಾತ್ರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅವರು ತಮ್ಮ ಪ್ರೊಜೆಕ್ಟ್ ಯಶಸ್ವಿಯಾಗುವದರ ಸಲುವಾಗಿ ವಿವಿಧ ಪ್ರಯೋಗಗಳನ್ನು ಮಾಡಲು ಶುರು ಮಾಡಿದರು. ಯಾಕೆಂದರೆ, ಅವರ ಮನದಲ್ಲಿ ಬಿಲ್ ಫೋರ್ಡ್ ಆಡಿದ ಕುಹಕತನದ ಮಾತುಗಳು ನೆನಪಿನಲ್ಲಿದ್ದವು. ಅದಕ್ಕೆ ಸರಿಯಾಗಿ ಉತ್ತರವನ್ನು ನೀಡಬೇಕಾಗಿತ್ತು. ಈ ಪ್ರಯತ್ನದಲ್ಲಿ ಅವರು ಮುಂದೆ ಕೆಲವೇ ತಿಂಗಳುಗಳಲ್ಲಿ ಯಶಸ್ವಿಯಾಗಿಯೇ ತೋರಿಸಿದರು. ಆಗ ಟಾಟಾ ಇಂಡಿಕಾ ಭಾರತದಲ್ಲಿಯ ಜನಪ್ರಿಯ ಕಾರು ಎಂದು ಹೆಸರು ಪಡೆಯಿತು.

ವಿಷಯ ಇಲ್ಲಿಯೇ ಮುಗಿಯಿತು ಎಂದು ತಿಳಿಯಬೇಡಿ. ಇದಾದ ನಂತರ ಟಾಟಾ ಗ್ರೂಪ್ ಒಂದರ ನಂತರ ಒಂದು ಅನೇಕ ಮಾಡೆಲ್ಸ್ ವಾಹನಗಳನ್ನು ತಯಾರಿಸಿ ಯಶಸ್ಸಿನ ಶಿಖರ ಮೇಲೆ ಏರುತ್ತಿರುವಾಗ 2009 ರಲ್ಲಿ ಅತ್ತ ಫೋರ್ಡ್ ಕಂಪನಿಯ ಜಗತ್ ಪ್ರಸಿದ್ಧ ಕಾರು ‘ಜಾಗ್ವಾರ್ ಲ್ಯಾಂಡ್ ರೋವರ್’ ದಿವಾಳಿಯಾಗಿತ್ತು. 11 ವರ್ಷಗಳ ಹಿಂದೆ ಟಾಟಾ ಅವರ ಇಂಡಿಕಾ ಜೊತೆಗೆ ನಡೆದ ಘಟನೆ ಇಂದು ಫೋರ್ಡ್ ಜೊತೆಗೆ ನಡೆದಿತ್ತು. ಇದೇ ಸಮಯವನ್ನು ಅರಿತು ಟಾಟಾ ಅವರು ಬಿಲ್ ಫೋರ್ಡ್ ಅವರಿಗೆ ಜಾಗ್ವಾರ್ ಕಂಪನಿಯನ್ನು ಖರೀದಿಸಲು ಉತ್ಸುಕರಾಗಿದ್ದನ್ನು ತಿಳಿಸಿದರು.

ವಿಶೇಷವೆಂದರೆ, ರತನ್ ಅವರು ಆಗ ಮುಂಬಯಿಯಿಂದ ಅಮೆರಿಕೆಗೆ ಹೋಗಿದ್ದರು. ಈಗ ಸ್ವತಃ ಬಿಲ್ ಅವರು ಅಮೆರಿಕೆಯಿಂದ ಮುಂಬಯಿಗೆ ತಮ್ಮ ಕಂಪನಿಯನ್ನು ಮಾರಲು ಬಂದಿದ್ದರು. ಮಾತುಗಳು ಸಹಿತ ಪರಿಪೂರ್ಣವಾಗಿ ವಿರುದ್ಧವಾಗಿದ್ದವು. ಬಿಲ್ ಫೋರ್ಡ್ ಹೇಳಿದ್ದು, ‘ರತನ್ ಟಾಟಾ ಅವರು ‘ಜಾಗ್ವಾರ್ ಲ್ಯಾಂಡ್ ರೋವರ್’ ಖರೀದಿಸಿ ನಮ್ಮ ಮೇಲೆ ಉಪಕಾರ ಮಾಡಿದ್ದೀರಿ’.

ಈ ವ್ಯವಹಾರದಿಂದ ರತನ್ ಟಾಟಾ ಅವರ ಜೊತೆಗೆ ಭಾರತದ ಹೆಸರು ಸಹಿತ ಎಲ್ಲೆಡೆ ಅಭಿಮಾನದಿಂದ ಮಿನುಗಿತು. ಕಾರಣ ಸದ್ಯಕ್ಕೆ ಫೋರ್ ವೀಲರ್ ಕಂಪೆನಿಗಳಲ್ಲಿ ಟಾಟಾ ಒಂದು ಅಗ್ರಗಣ್ಯ ಕಂಪನಿಯಾಗಿದೆ. ಇದರ ಹಿಂದೆ ಟಾಟಾ ಅವರ ಶ್ರಮ ತುಂಬಾ ಇದೆ. ಟಾಟಾ ಕಂಪನಿಯ ವಾಹನಗಳು ಇಂದು ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ತುಂಬಾ ಮೆಚ್ಚುಗೆಯನ್ನು ಪಡೆದಿವೆ.

ತಮಗಾದ ಅವಮಾನವನ್ನು ಮರೆಯದೆ, ಅಥವಾ ತಪ್ಪಾದ ಮಾರ್ಗದಿಂದ ಸ್ಪಂದಿಸದೆ ಅದಕ್ಕೆ ತಕ್ಕಂತೆ ಕೂಲಾಗಿ ಸ್ವತಃ ಶ್ರಮವನ್ನು ವಹಿಸಿ ಜಿದ್ದಿನಿಂದ ಮತ್ತು ಪ್ರಬಲವಾದ ಧ್ಯೇಯ ಶಕ್ತಿಯಿಂದ ಅವಮಾನವನ್ನು ಮಾಡಿದವನಿಗೆ ಆತನದೇ ಧಾಟಿಯಲ್ಲಿ ಉತ್ತರವನ್ನು ಕೊಡುವ ರತನ್ ಟಾಟಾ ಅವರ ಈ ಆದರ್ಶ ಹೇಗಿದೆ ನೀವೇ ಹೇಳಿ.

ಅವಮಾನ ಮಾಡಿದ ವ್ಯಕ್ತಿಗೆ ಆತ ಮಾತನಾಡಿದ ಚುಚ್ಚು ಮಾತುಗಳಿಂದ ಮನನೊಂದು ಧರೆಯಲ್ಲಿಳಿದು ಹೇಡಿಯಾಗಿ ಅಲ್ಲ, ಯಾವಾಗಲೂ ನಮ್ಮ ಪ್ರತಿಭೆ ಮತ್ತು ಕ್ಷಮತೆಯ ಬಲದಿಂದ ಉತ್ತರಿಸುವ ತಯಾರಿಯಲ್ಲಿ ನಾವಿರಬೇಕು.