ಮೊದಲ ರಾತ್ರಿಯೇ ಗಂಡನ ಫಜೀತಿ ಮಾಡಿದ ಹೆಂಡತಿ! ಗಂಡ ಮುಂಜಾನೆ ಎದ್ದ ನಂತರ ಹೆಂಡತಿಗೆ…
ಚಿಕ್ಕಂದಿನಲ್ಲಿ ಯಾರಾದರೂ ಕೇಳಿದರೆ ಮದುವೆ ಯಾವಾಗ? ಎಂದಾಗ ನಾನು ಮದುವೆಯೇ ಮಾಡಿಕೊಳ್ಳುವದಿಲ್ಲ, ಎಂಬ ಸಾಮಾನ್ಯ ಉತ್ತರ. ಹೇಗೆ ದೊಡ್ಡವರಾಗುತ್ತ ಹೋಗುತ್ತೆವೆಯೋ ಹಾಗೆ ನಮಗೆ ಅರಿವಿಲ್ಲದೆಯೇ ಬಾಳಸಂಗಾತಿಯ ಬಗ್ಗೆ ಯೋಚನೆಗಳು ನಮಲ್ಲಿ ಗೊತ್ತಿಲ್ಲದೆಯೇ ಹುಟ್ಟಲು ಶುರುವಾಗುತ್ತವೆ.
ಮದುವೆ ಎಲ್ಲರ ಜೀವನದಲ್ಲಿ ಬರುವ ಒಂದು ಖಾಸಗಿ ಸಂಭ್ರಮ. ಇದು ಒಂದು ಪರ್ವವೇ ಎನ್ನಬಹುದು. ಅದರಲ್ಲಿ ಮೊದಲ ರಾತ್ರಿ ಪ್ರತಿಯೊಬ್ಬರ ಜೀವನದಲ್ಲಿ ಕೊನೆಯವರೆಗೂ ನೆನಪುಳಿಯುವ ಅಮೃತ ಘಳಿಗೆ ಎಂದರೂ ತಪ್ಪಾಗಲಾರದು. ಲವ್ ಮ್ಯಾರೇಜ್ ಮಾಡಿಕೊಳ್ಳುವವರ ಪ್ರಥಮ ರಾತ್ರಿಯೇ ಬೇರೆ ಎನ್ನಬಹುದು, ಮತ್ತು ಅರೇಂಜ್ ಮ್ಯಾರೇಜ್ ಆದವರ ರಾತ್ರಿಯೇ ಬೇರೆ ಎನ್ನಬಹುದು. ಕಾರಣ ಲವ್ ಮ್ಯಾರೇಜ್ ನಲ್ಲಿ ಇಬ್ಬರೂ ಕೂಡಿಕೊಂಡು ಮೊದಲೇ ತುಂಬಾ ಸಮಯ ಖರ್ಚು ಮಾಡಿರುತ್ತಾರೆ. ಇದರಿಂದ ಇಬ್ಬರೂ ಪರಸ್ಪರರ ಭಾವನೆಗಳನ್ನು ಹತ್ತಿರದಿಂದ ಅರ್ಥ ಮಾಡಿಕೊಂಡಿರುತ್ತಾರೆ. ಇಬ್ಬರೂ ತಮ್ಮ ಸಂಗಾತಿಯ ಬೇಕು ಬೇಡಗಳನ್ನು ಅರಿತುಕೊಂಡಿರುತ್ತಾರೆ.
ಅರೇಂಜ್ ಮ್ಯಾರೇಜ್ ನಲ್ಲಿ ಹೀಗಿರುವದಿಲ್ಲ. ಅಲ್ಲಿ ಪ್ಲಾಟ್ ಫಾರ್ಮ್ ಎಲ್ಲವೂ ಹೊಸದಾಗಿರುತ್ತದೆ. ಮೊದಲು ಮದುವೆ, ಆಮೇಲೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವದು. ಹೀಗಿರುವಾಗ ಅವರ ಮೊದಲ ರಾತ್ರಿಯೂ ಸಹಿತ ಇಬ್ಬರಿಗೂ ತುಂಬಾ ಹೊಸದಾದ ಅನುಭವವನ್ನೇ ಕೊಡುತ್ತದೆ.

ನನ್ನ ಮತ್ತು ಪ್ರಾಚೀಯ ಮದುವೆ ಹಿರಿಯರೇ ಅರೇಂಜ್ ಮಾಡಿದ್ದರು. ಹುಡುಗಿಯರು ಅಂದ್ರೆ ಮಾರುದ್ದ ದೂರ ನಿಲ್ಲುವ ನಾನು ಮದುವೆಯ ಹಾಗೂ ಪ್ರಥಮ ರಾತ್ರಿಯ ಕನಸನ್ನು ಕಾಣಲು ಶುರು ಮಾಡಿದ್ದೆ. ಮದುವೆಯ ಮುಂಚೆ ಇಬ್ಬರೂ ಮಾತನಾಡುವದು ಈಗ ಸರ್ವೇ ಸಾಮಾನ್ಯ. ಆದರೆ ನಮ್ಮ ಯಾವುದೋ ಒಂದು ಕಾರಣದಿಂದ ಯಂಗೇಜ್ ಮೆಂಟ್ ನಂತರ ಶೀಘ್ರದಲ್ಲಿ ಮದುವೆ ಮುಹೂರ್ತ ತೆಗೆದಿದ್ದರಿಂದ ನಮ್ಮಿಬ್ಬರಿಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಹೆಂಡತಿಯ ಜೊತೆಗಿನ ಆ ತುಂಟಾಟದ, ಹುಸಿಗೋಪಿನ, ಹಾಸ್ಯದ ಕ್ಷಣಗಳನ್ನು ಮನಸ್ಸಿನಲ್ಲಿಯೇ ಯೋಚಿಸಿ ಪುಳಕನಾಗುತ್ತಿದ್ದೆ. ಎಂದಿಗೂ ಎಂದೆಂದಿಗೂ ಹುಡುಗಿಯರ ಜೊತೆಗೆ ಎದುರು ನಿಂತು ನಾಲ್ಕೇ ನಾಲ್ಕು ಶಬ್ದಗಳನ್ನು ಸಹಿತ ಮಾತನಾಡದ ನಾನು ನನ್ನ ಹೆಂಡತಿಯ ಜೊತೆಗಿನ ಮಧುರ ಕ್ಷಣಗಳನ್ನು ಎಡ್ವಾನ್ಸ್ ನಲ್ಲಿಯೇ ಕಾಣಲು ಶುರು ಮಾಡಿದೆ.
ನಿಗದಿಯಾದ ದಿನಾಂಕಕ್ಕೆ ಮದುವೆ ಎನ್ನುವ ಪರ್ವ ಮುಗಿಯಿತು. ಮನೆಯಲ್ಲಿ ಮದುವೆಯಾದ ನಂತರದ ಪೂಜಾಕಾರ್ಯಗಳು ಮುಗಿದ ನಂತರ ತುಂಬಾ ಕುತೂಹಲದಿಂದ ಕಾಯುತ್ತಿದ್ದ ನನ್ನ ಜೀವನದಲ್ಲಿಯ ಆ ಮೊದಲ ರಾತ್ರಿಯ ಸಂಭ್ರಮ ಬಂದೇ ಬಿಟ್ಟಿತು. ಆ ರಾತ್ರಿ ನಾನು ನಾನಾಗಿರಲಿಲ್ಲ. ನನ್ನಲ್ಲಿ ನನ್ನವಳ ಬಗ್ಗೆ ಪ್ರೀತಿ, ಪ್ರಣಯ, ರೋಮಾಂಚನ, ಕುತೂಹಲ, ಎಲ್ಲವೂ ಒಟ್ಟಿಗೆ ಕೂಡಿ ಸುಂದರವಾಗಿ ಮಯೂರ ನರ್ತನ ಮಾಡುತ್ತಿದ್ದವು. ಅಷ್ಟರಲ್ಲಿ ನನ್ನಕ್ಕ ನನ್ನನ್ನು ಕರೆದು ಕೋಣೆಯ ಬಾಗಿಲಿನವರೆಗೆ ಕರೆದುಕೊಂಡು ಹೋಗಿ ನನ್ನನ್ನು ಸಾವಕಾಶವಾಗಿ ಒಳಗೆ ತಳ್ಳುತ್ತ ಕಿವಿಯಲ್ಲಿ ಮೆಲ್ಲನೆ ಪಿಸುಗುಟ್ಟುತ್ತ ‘ಹೂ ಮ್ಯಾಚ್ ಸ್ಟಾರ್ಟ್ ಆಗಲಿ’ ಎಂದಳು. ನನ್ನ ಮುಖವಂತೂ ನಾಚಿಕೆಯಿಂದ ಕೆಂಪು ಗುಲಾಬಿಯಾಗಿತ್ತು. ಒಳಗಡೆ ಬಂದು ಬಾಗಿಲು ಹಾಕಿ ಮಂಚದ ಕಡೆಗೆ ನೋಡಿದೆ. ಪ್ರಾಚೀ ಕೆಂಪು ಸೀರೆಯನ್ನು ತೊಟ್ಟು ಸಿಂಗರಿಸಿಕೊಂಡು ಕುಳಿತದ್ದನ್ನು ನೋಡಿ ನಿಜಕ್ಕೂ ಬೆರಗಾದೆ. ಅವಳ ಸೌಂದರ್ಯವನ್ನು ನೋಡಿ ಮತ್ತಷ್ಟು ಮೋಹಿತನಾದೆ. ನೀಳವಾದ ಜಡೆ ಹಿಂಬದಿಗೆ ಬಿದ್ದಿತ್ತು. ಮುಖ ಕೆಳಗೆ ಮಾಡಿ ಕುಳಿತಿದ್ದರಿಂದ ಮುಂಗುರುಳೊಂದು ಮುಖದ ಆಧಾರವಿಲ್ಲದೆ ಕೆಳಗೆ ಜೋತಾಡುತ್ತಿತ್ತು. ಕೋಣೆಯು ಮೈಸೂರು ಮಲ್ಲಿಗೆಯ ಪರಿಮಳದಲ್ಲಿ ಘಮಘಮ ಕಂಪಿಡುತ್ತಿತ್ತು. ನನ್ನದೆಯಲ್ಲಿ ಹೃದಯವೊಂದು ದಢ ದಢ ಎಂದು ಕಂಪಿಸುತ್ತಿತ್ತು. ಪ್ರಾಚೀಯ ಸೌಂದರ್ಯವನ್ನು ಅಲ್ಲಿಯೇ ನಿಂತು ನನ್ನೆರಡು ಕಣ್ಣುಗಳಿಂದ ಮನಸ್ಸಿನಲ್ಲಿ ನಿಧಾನವಾಗಿ ಇನ್ಸ್ಟಾಲ್ ಮಾಡುತ್ತಿರುವಾಗಲೇ ಆಕೆಯು ಒಮ್ಮೆಲೇ ನನ್ನನ್ನು ನೋಡಿದಾಗ ನಾಚಿ ಕೆಳಗಡೆ ನೋಡಲಾರಂಭಿಸಿದೆ. ಅನಂತರ ಸ್ವಲ್ಪ ಧೈರ್ಯದಿಂದ ಪ್ರಾಚೀಯ ಸಮೀಪ ಹೋಗಿ ಆಕೆಯ ಭುಜದ ಮೇಲೆ ಕೈ ಇಟ್ಟು ಆಕೆಯ ಮುಖವನ್ನು ಎತ್ತಿ ನನ್ನ ಮುಖದ ಕಡೆಗೆ ತಿರುಗಿಸಿಕೊಳ್ಳಬೇಕೆನ್ನುವಷ್ಟರಲ್ಲಿಯೇ ‘ನಿಲ್ಲಿ’ ಎಂಬ ಶಬ್ದ ಅಲ್ಲಿಯ ಮಧುರ ಕ್ಷಣವನ್ನೇ ಭಂಗ ಮಾಡಿದ ಹಾಗಾಯಿತು. ನಾನಿಟ್ಟಿದ್ದ ಭುಜದ ಮೇಲಿನ ಕೈಯನ್ನು ಪ್ರಾಚೀ ನಿಧಾನವಾಗಿ ಬದಿಗೆ ಸರಿಸುತ್ತ ಬೆಡ್ ಮೇಲಿಂದ ಏಳುತ್ತ ನನ್ನಿಂದ ದೂರ ಒಂದು ಚೇರ್ ಮೇಲೆ ಹೋಗಿ ಕುಳಿತಳು. ಸ್ವಲ್ಪ ಹೊತ್ತು ಏನು ನಡೀತಿದೆ ಎಂಬುದು ತಿಳಿಯಲು ಕಷ್ಟವಾಯಿತು. ಹಾಗೆಯೇ ಮನಸ್ಸಿಗೆ ಸಮಾಧಾನ ಹೇಳುತ್ತ ತಂದೆ-ತಾಯಿಯನ್ನು ಬಿಟ್ಟು ಬಂದದ್ದಕ್ಕಾಗಿ ಅವಳ ಮನಸ್ಥಿತಿ ಸರಿಯಾಗಿರಲಿಕ್ಕಿಲ್ಲ ಎಂದು ಭಾವಿಸಿ, ಶಾಂತವಾಗಿ ಪ್ರಾಚೀ ಯಾಕೆ? ಏನಾಯಿತು? ನಾನು ನಿನ್ನ ಗಂಡ ತುಷಾರ್, ಬಾ ಇಲ್ಲಿ ನನ್ನ ಹತ್ತಿರ ಕುಳಿತುಕೊ, ಬಾ ಎಂದು ಕರೆದಾಗ, ಆಕೆ ಒಮ್ಮೆಲೇ ‘ತುಷಾರ್ ನನಗೆ ನಿನ್ನ ಜೊತೆ ಸ್ವಲ್ಪ ಮಾತನಾಡಬೇಕಿದೆ, ನೋಡು ಈ ಮದುವೆ ನನ್ನಿಷ್ಟದ ವಿರುದ್ಧವಾಗಿ ನಡೆದಿದೆ. ನಾನು ಬೇರೆಯೊಬ್ಬನನ್ನು ಪ್ರೀತಿಸುತ್ತಿರುವೆ, ನಾವಿಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿರುವೆವು. ಆತನ ಜೊತೆಯಲ್ಲೇ ನಾನು ಮದುವೆಯಾಗೋದು. ನಾನು ಎಂದಿಗೂ ನಿನ್ನವಳಾಗಲು ಸಾಧ್ಯವಿಲ್ಲ. ನನ್ನ ಮನೆಯಲ್ಲಿ ನನ್ನ ಮಾತಿಗೆ ಯಾರೂ ಬೆಲೆ ಕೊಡಲಿಲ್ಲ. ನಿನ್ನನ್ನು ಕೈ ಮುಗಿದು ಬೇಡಿಕೊಳ್ಳುವೆ. ನನ್ನ ಮನೆಯವರಿಗೆ ಎಷ್ಟು ರೀತಿಯಲ್ಲಿ ತಿಳಿಸಿ ಹೇಳಲು ಪ್ರಯತ್ನಪಟ್ಟೆ ಆದರೆ ವ್ಯರ್ಥ, ನನ್ನನ್ನು ಯಾರೂ ಅರ್ಥವೇ ಮಾಡಿಕೊಳ್ಳಲಿಲ್ಲ. ಆದ್ದರಿಂದ ಬೇರೆ ದಾರಿ ಕಾಣದೆ ಈ ಮದುವೆಗೆ ನಾನು ಒಪ್ಪಿದೆ. ಈಗ ನಾನು ಸ್ವತಂತ್ರಳು. ನನ್ನನ್ನು ನನ್ನ ಮನೆಯವರೂ ಸಹಿತ ಈಗ ಏನೂ ಮಾಡಲಿಕ್ಕೆ ಸಾಧ್ಯವಿಲ್ಲ. ಪ್ಲೀಜ್..ಪ್ಲೀಜ್ ನೀನಾದರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಯಲ್ಲ? ಎಂದು ಒಂದೇ ಉಸಿರಿಗೆ ಆಕೆ ಹೇಳುತ್ತಿರುವಾಗ ಕ್ಷಣದಲ್ಲಿ ಸಾವಿರಾರು ಕಾಣದ ಬಾಣಗಳು ನನ್ನ ಹೃದಯಕ್ಕೆ ಒಂದೇ ಸಮನೆ ತಿವಿಯುತ್ತಿರುವ ಹಾಗೆ ನೋವಾಗುತ್ತಿತ್ತು.
ನನ್ನ ಕನಸಿನ ಗೋಪುರವನ್ನು ಬೇರೆ ಯಾರು ಅಲ್ಲ ನನ್ನ ಪ್ರೀತಿಯ ಜೀವ ಎಂದು ತಿಳಿದ ನನ್ನ ಸಂಗಾತಿಯೇ ಕ್ಷಣದಲ್ಲಿ ಪುಡಿ ಪುಡಿ ಮಾಡಿದಳು. ನನಗರಿವಿಲ್ಲದೆಯೇ ನನ್ನ ಕೈಯಲ್ಲಿ ಬೇರೆ ಹಾಸಿಗೆಯನ್ನು ತೆಗೆದುಕೊಂಡಿದ್ದೆ. ನಾನೇನು ಮಾಡಬೇಕು? ಮುಂದೇನು? ಎಂಬ ಸಾವಿರಾರು ಪ್ರಶ್ನೆಗಳು ನನ್ನನ್ನು ಸುತ್ತು ಹಾಕಿ ಕೇಳುತ್ತಿದ್ದವು. ಇಷ್ಟೆಲ್ಲವನ್ನು ಹೇಳಿ ಪ್ರಾಚೀಯು ಅಳಲು ಪ್ರಾರಂಭಿಸಿದಳು. ವಾಸ್ತವತೆಗೆ ಬಂದು ಸಮಾಧಾನದಿಂದ ಹೇಳಿದೆ, ಪ್ರಾಚೀ ಅಳಬೇಡ, ನೀನು ನಿಜವಾಗಿಯೂ ತುಂಬಾ ಒಳ್ಳೆಯವಳು. ಯಾಕೆಂದರೆ, ಏನೇ ಆಗಲಿ ಧೈರ್ಯದಿಂದ ನಿನ್ನ ಸಮಸ್ಯೆಯನ್ನು ನನ್ನ ಮುಂದೆ ಹೇಳಿದೆ. ಇದರಿಂದ ಭವಿಷ್ಯದಲ್ಲಿ ನೀನು ನಿನ್ನನ್ನು ಮತ್ತು ನನ್ನನ್ನು ಇಬ್ಬರನ್ನು ತೊಂದರೆಯಿಂದ ಮುಕ್ತ ಮಾಡಿದೆ. ನಾಳೆ ನೀನೊಬ್ಬಳೇ ಹೋಗುವದು ಬೇಡ ನಾನು ನಿನ್ನ ಜೊತೆಗೆ ಬರುತ್ತೇನೆ. ಯಾವುದೇ ಆತಂಕ ಬೇಡ ನಾನಿದ್ದೇನೆ ನಿನ್ನ ಜೊತೆಗೆ ಆಯ್ತಾ, ಎಂದಾಗ ಪ್ರಾಚೀ ಅಳುವವದನ್ನು ನಿಲ್ಲಿಸಿ ಬೆಡ್ ಮೇಲೆ ಆಗ ಸ್ವಲ್ಪ ನಿರಾತಂಕಳಾದಂತೆನಿಸಿ ಮಲಗಿದಳು.
ಇತ್ತ ನನ್ನ ನಿದ್ದೆ ನನ್ನಿಂದ ದೂರ ಎಲ್ಲೋ ಓಡಿ ಹೋಗಿತ್ತು. ತಲೆ ಸಿಕ್ಕು ಹಾಕಿಕೊಂಡ ಮೀನಿನ ಜಾಳಿಗೆಯಾಗಿತ್ತು. ಇದಕ್ಕೆ ಪರಿಹಾರವೇನು. ಪ್ರಾಚೀಗೆ ಆಕೆಯ ಪ್ರೀತಿ ನಾಳೆ ಸಿಗಬಹುದು. ಮನೆಯವರಿಗೆ ಏನು ಹೇಳಲಿ? ಎಲ್ಲರಿಗೂ ಮುಖ ಹೇಗೆ ತೋರಿಸಲಿ? ನನ್ನ ಭವಿಷ್ಯದ ಜೀವನ ಹೇಗೆ? ದಡ ಕಾಣದ ಅಂಬಿಗನಂತಾಗಿತ್ತು ಬದುಕು. ಮನೆಯವರಿಗೆ ಯಾವುದೇ ಸಂಶಯ ಬೇಡ ಎಂದು ಮೊದಲ ರಾತ್ರಿಗಾಗಿ ಇಟ್ಟ ಅರಿಶಿನ ಮಿಶ್ರಿತ ಹಾಲನ್ನು ಕುಡಿದು ಬಿಟ್ಟಿದ್ದೆ. ಅದು ನಿಧಾನವಾಗಿ ತನ್ನ ಕೆಲಸವನ್ನು ಶುರು ಮಾಡಿತ್ತು. ಕೊನೆ ಮೊದಲಿಲ್ಲದ ವಿಚಾರದಲ್ಲಿಯೇ ಲೀನವಾದಾಗ ಯಾವಾಗ ಕಣ್ಣುಗಳು ಮುಚ್ಚಿದ್ದವು ಗೊತ್ತೇ ಇರಲಿಲ್ಲ.
ಮುಂಜಾನೆ ಮಾತ್ರ ಬೇಗನೆ ನನ್ನ ಕಣ್ಣುಗಳು ತೆರೆದಿದ್ದವು. ಎದ್ದು ನೋಡುವಷ್ಟರಲ್ಲಿ ಪ್ರಾಚೀ ಸ್ನಾನ ಮಾಡಿ ತಯಾರಾಗಿ ಕುಳಿತಿದ್ದಳು. ನಾನು ಸಹಿತ ಬೇಗ ಬೇಗ ಮುಂಜಾನೆಯ ಕೆಲಸಗಳನ್ನು ಮುಗಿಸಿಕೊಂಡು ರೆಡಿಯಾದೆ. ತಯಾರಾಗಿ ಕುಳಿತ ಪ್ರಾಚೀಯನ್ನು ನೋಡುವಾಗ ಮತ್ತೆ ಮನಸು ಆಕೆಯ ಮೇಲೆ ಹರಿಯತೊಡಗಿತು. ಬೇಗನೆ ಮನಸ್ಸನ್ನು ಹತೋಟಿಯಲ್ಲಿಡುತ್ತ ಹೆಚ್ಚು ವಿಚಾರಕ್ಕೊಳಗಾಗದೆ ಕೋಣೆಯಿಂದ ಹೊರಗೆ ಬಿದ್ದೆ. ಪ್ರಾಚೀ ಇನ್ನು ಒಳಗಡೆಯೇ ಇದ್ದಳು. ನನ್ನ ಅಕ್ಕ ಮತ್ತು ಪ್ರಾಚೀಯ ಜೊತೆಗಾರಳು ಇಬ್ಬರೂ ನೋಡಿ ನಗುತ್ತಿದ್ದರು. ಆದರೆ ನನ್ನ ದುರ್ದೈವ ರಾತ್ರಿ ಅವರು ಅಂದುಕೊಂಡ ಹಾಗೆ ಏನೂ ನಡೆದಿರಲಿಲ್ಲ, ಅಂತರಂಗದ ತುಮುಲವನ್ನು ಯಾರ ಮುಂದೆಯೂ ಹೇಳಲು ಸಾಧ್ಯವಿಲ್ಲದ ಹಾಗೆ ಆಗಿತ್ತು ನನ್ನ ಪರಿಸ್ಥಿತಿ.
ಅಷ್ಟರಲ್ಲಿ ನನ್ನಕ್ಕ, ‘ತುಷಾರ್ ಯಾವಾಗ ಹೋಗುತ್ತಿಯಾ ನಿನ್ನ ಹೆಂಡತಿಗೆ ಕರೆದುಕೊಂಡು ಎಂದಾಗ ನಾನು ಒಮ್ಮೆಲೇ ಬೆಚ್ಚಿಬಿದ್ದೆ, ಆಶ್ಚರ್ಯಚಕಿತನಾದೆ. ಇವರಿಗೆ ಹೇಗೆ ಗೊತ್ತಾಯಿತು ಈ ವಿಷಯವೆಲ್ಲ ಎಂದು ಪ್ರಾಚೀಯನ್ನು ಕೇಳಲು ಒಳಗಡೆ ಹೋದೆ. ನಾನು ಒಳಗೆ ಹೋಗುವಷ್ಟರಲ್ಲಿ ಪ್ರಾಚೀ ಕೋಣೆಯ ಬಾಗಿಲನ್ನು ಮುಚ್ಚಿ ನನ್ನನ್ನು ಜೋರಾಗಿ ತಬ್ಬಿಕೊಂಡಳು. ನನಗೇನು ತೋಚುತ್ತಲೇ ಇರಲಿಲ್ಲ. ಏನು ನಡೆದಿದೆ ಎಂದು ವಿಚಾರ ಮಾಡುತ್ತಿರುವಾಗಲೇ ಪ್ರಾಚೀ, ‘ಹೇಗಿತ್ತು ಆಕ್ಟಿಂಗ್ ನನ್ನ ಪೆದ್ದ ಪತಿರಾಯ….ಎಂದು ಮನಸ್ಸು ಪೂರ್ತಿಯಾಗಿ ನಕ್ಕಳು.
ಆಗ ನನಗೆ ಜ್ಞಾನೋದಯವಾಯಿತು. ಇದೆಲ್ಲ ನನ್ನ ಫಜೀತಿ ಮಾಡುವ ಸಲುವಾಗಿ ಆಡಿದ ದೊಡ್ಡ ನಾಟಕವಾಗಿತ್ತು ಅಂತ. ನಾನು ಆಗ ಏನೊಂದು ಮಾತನಾಡದೆ ಪ್ರಾಚೀಯನ್ನು ತಬ್ಬಿಕೊಂಡೆ. ಮತ್ತಿನ್ನೇನು ನಮ್ಮ ಮೊದಲ ರಾತ್ರಿಯ ಸಂಭ್ರಮವನ್ನು ರವಿಯು ಚೆಲ್ಲಿದ ಮೊದಲ ಕಿರಣಗಳಲ್ಲಿ ಆಚರಿಸಿದೆವು.