10 ಹೊಸ ಆಡಿ ಕಾರುಗಳ ಮೇಲೆ ಸ್ಕ್ರ್ಯಾಚ್ ಮಾಡಿದ 3 ವರ್ಷದ ಮಗು; 22 ಲಕ್ಷ ಡಿಮಾಂಡ್ ಮಾಡಿದ ಶೋರೂಮ್!
ಮಕ್ಕಳ ಆಟ ದೇವರೇ ಬಲ್ಲ, ಎನ್ನುವ ಮಾತೊಂದು ಇದೆ. ಮಕ್ಕಳು ಏನು ಮಾಡಿದರೂ ಚಂದ, ಹೇಗೆ ಇದ್ದರೂ ಚಂದ. ಮಕ್ಕಳೆಂದರೆ ಎಲ್ಲರಿಗೂ ಪಂಚಪ್ರಾಣ. ಮಕ್ಕಳ ಆಟ, ಸಿಟ್ಟು, ತುಂಟತನ, ನಟನೆ, ಅಳುವದು, ನಗುವದು, ಮಾತನಾಡುವದು ಹೀಗೆ ಪ್ರತಿಯೊಂದು ವಿಷಯ ಪೋಷಕರ ಜೊತೆಗೆ ಬೇರೆಯವರಿಗೂ ಸಂತೋಷ ನೀಡುತ್ತದೆ.
ಆದರೆ ಕೆಲವೊಂದು ಸಲ ಮಕ್ಕಳ ಇದೇ ಆಟಗಳು ಪೋಷಕರಿಗೆ ಅಷ್ಟೇ ಅಲ್ಲ ಇನ್ನೊಬ್ಬರಿಗೂ ತುಂಬಾ ಅಪಾಯದಲ್ಲಿ, ಕಷ್ಟದಲ್ಲಿ ಸಿಲುಕಿಸಿ ಹಾನಿಯನ್ನುಂಟು ಮಾಡುತ್ತವೆ. ಆದ್ದರಿಂದಲೇ ಎಲ್ಲಿಯೂ ಹೋದಲ್ಲಿ ಬಂದಲ್ಲಿ ಮಕ್ಕಳ ಮೇಲೆ ನಿಗಾ ವಹಿಸುವದು ಪೋಷಕರ ಆದ್ಯ ಜವಾಬ್ದಾರಿಯಾಗಿರುತ್ತದೆ. ಇದರಲ್ಲಿ ಸ್ವಲ್ಪ ಲೋಪವಾದರೂ ತಂದೆ ತಾಯಿಯರ ಜೊತೆಗೆ ಬೇರೆಯವರು ಸಹಿತ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಘಟನೆ ಚೀನಾದ ಗುಯಿಲಿನ್ ಪಟ್ಟಣದಲ್ಲಿ ನಡೆದಿದೆ. ಇಲ್ಲಿ ಮೂರು ವರ್ಷದ ಹುಡುಗಿಯು ಮಾಡಿದ ಕೀಟಲೆಯಿಂದ ಪೋಷಕರಿಗೆ 29 ಸಾವಿರ ಡಾಲರ್ ಅಂದರೆ ಸುಮಾರು 22 ಲಕ್ಷ ರೂಪಾಯಿಗಳ ದಂಡವನ್ನು ತೆತ್ತುವ ಆತಂಕ ಎದುರಾಗಿದೆ.
ವಾಸ್ತವವಾಗಿ ಅಲ್ಲಿ ನಡೆದಿದ್ದೇನೆಂದರೆ, ಪತಿ ಪತ್ನಿ ತಮ್ಮ ಮೂರು ವರ್ಷದ ಹುಡುಗಿಯೊಂದನ್ನು ಜೊತೆಯಲ್ಲಿ ಕರೆದುಕೊಂಡು ಪ್ರಸಿದ್ಧ ಆಡೀ ಕಾರಿನ ಶೋರೂಮಿಗೆ ಹೋಗಿದ್ದಾರೆ. ಅಲ್ಲಿ ಹೋದ ನಂತರ ಇಬ್ಬರು ಕಾರುಗಳ ಮಾಹಿತಿಯನ್ನು ಪಡೆಯುವದರಲ್ಲಿ ಬಿಜಿ ಇದ್ದಾಗ ಮಗುವಿನ ಕಡೆಗೆ ಗಮನ ಕೊಟ್ಟಿಲ್ಲ. 3 ವರ್ಷದ ಮಗಳು ಶೋರೂಮಿನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡಿದ್ದಾಳೆ. ಹೀಗೆ ಓಡಾಡುವಾಗ ಅವಳ ಕೈಯಲ್ಲಿ ಹೊರಗಿನಿಂದ ತಂದ ಕಲ್ಲಿನ ಚುರೊಂದು ಇದ್ದದ್ದು ಯಾರು ಗಮನಿಸಿಲ್ಲ. ಮಗು ಆ ಕಲ್ಲಿನ ಚೂರಿನಿಂದ ಶೋರೂಮಿನಲ್ಲಿದ್ದ ಹೊಚ್ಚ ಹೊಸದಾದ 10 ಆಡೀ ಕಾರುಗಳ ಮೇಲೆ ಸ್ಕ್ರ್ಯಾಚೇಸ್ ಗಳನ್ನು ಮಾಡಿದ್ದಾಳೆ. ಇನ್ನು ಈ ಆಡೀ ಕಾರುಗಳ ಬೆಲೆ ಎನಿರುತ್ತೆ ಎಂಬುದು ಎಲ್ಲರಿಗೂ ಗೊತ್ತೆ ಇದೆ. ಹೀಗಾಗಿ ಈ ದುಬಾರಿ ಕಾರುಗಳ ಮೇಲೆ ಮಗು ಇಷ್ಟೆಲ್ಲ ಮಾಡುತ್ತಿರುವಾಗ ಮಗುವಿನ ಕಡೆಗೆ ಯಾರು ಗಮನವೇ ಹರಿಸಿಲ್ಲ.

ಸ್ವಲ್ಪ ಸಮಯದ ನಂತರ ಪ್ರಸ್ತುತ ಘಟನೆ ಶೋರೂಮಿನ ಸಿಬ್ಬಂದಿ ವರ್ಗದವರ ಗಮನಕ್ಕೆ ಬಂದಾಗ ತಂದೆ ತಾಯಿಯರಿಗೆ ಏನು ಮಾತಾಡಬೇಕು ಎಂದು ತೋಚಲೇ ಇಲ್ಲ. ಇದನ್ನು ಗಮನಿಸಿದ ಶೋರೂಮ್ ಮಾಲೀಕ ಪೋಷಕರಿಗೆ 2 ಲಕ್ಷ ಯುಆನ್ ಅಂದರೆ ಸುಮಾರು 29 ಸಾವಿರ ಡಾಲರ್ ಪರಿಹಾರ ಧನದ ಬೇಡಿಕೆ ಇಟ್ಟನು. ಆದರೆ ಇಷ್ಟೊಂದು ಹಣವನ್ನು ಪರಿಹಾರ ಸ್ವರೂಪದಲ್ಲಿ ನೀಡಲು ಪೋಷಕರು ಅಸಮರ್ಥತೆಯನ್ನು ತೋರಿದಾಗ ಶೋರೂಮ್ ಮಾಲೀಕ ಕೋರ್ಟಿನ ಮೊರೆ ಹೋಗಿದ್ದಾನೆ.
ಮಕ್ಕಳು ದೇವರ ಸ್ವರೂಪ ನಿಜ. ಆದರೆ ಅವರು ಮಾಡುವ ಕೀಟಲೆಗಳು ಕೆಲವೊಂದು ಸಲ ಮಾನಸಿಕವಾಗಿ, ಆರ್ಥಿಕವಾಗಿ, ಕೆಲವೊಂದು ಸಲ ದೈಹಿಕವಾಗಿ ಹೀಗೆ ನಾನಾ ವಿಧದಲ್ಲಿ ತುಂಬಾ ಹಾನಿಯನ್ನುಂಟು ಮಾಡುತ್ತವೆ. ಆದ್ದರಿಂದ ಹೆತ್ತವರು ಯಾವತ್ತೂ ಜಾಗರೂಕರಾಗಿ ಇದ್ದು ಮಕ್ಕಳ ಮೇಲೆ ನಿಗಾ ಇಡುವದರಿಂದ ಈ ರೀತಿಯ ಸಮಸ್ಯೆಗಳು ಉಲ್ಬಣವಾಗುವದಿಲ್ಲ.