ಚಿಕ್ಕಂದಿನಲ್ಲಿ ಹಸಿದಾಗ ಕೊಟ್ಟ ಒಂದು ಗ್ಲಾಸ್ ಹಾಲಿನ ಉಪಕಾರವನ್ನು ಮರಳಿಸಿದ ರೀತಿ ನೋಡಿದರೆ ಹೀಗೂ ಇರ್ತಾರಾ?
ಅನೇಕ ಮಕ್ಕಳು ಬಡತನದಲ್ಲಿ ಹುಟ್ಟಿ ಕಷ್ಟದಲ್ಲಿ ಬೆಳೆದು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿ ತಮ್ಮ ಶಾಲೆಯ ಫೀಜನ್ನು ತಾವೇ ಒಗ್ಗೂಡಿಸಿ ಶಿಕ್ಷಣವನ್ನು ಕಲಿತು ಮುಂದೆ ದೊಡ್ಡ ದೊಡ್ಡ ವ್ಯಕ್ತಿಗಳಾದ ಉದಾಹರಣೆಗಳನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಇಷ್ಟೆಲ್ಲ ಮಾಡುವಾಗ ಅವರ ಜೀವನ ಸಾಫಲ್ಯ ಮಾಡಲು ಯಾರು ಸಹಾಯ ಮಾಡಿರುತ್ತಾರೆ ಅಂಥವರನ್ನು ಇವರು ಯಾವತ್ತೂ ಮರೆಯುವದಿಲ್ಲ. ಸಮಯ ಬಂದಾಗ ಅವರ ಮಾಡಿದ ಪ್ರತ್ಯುಪಕಾರವನ್ನು ತೀರಿಸಿ ಬಿಡುತ್ತಾರೆ.
ಈಗ ಇಲ್ಲಿ ಪ್ರಸ್ತುತ ಪಡಿಸುತ್ತಿರುವ ನೈಜ ಕಥೆಯು ಸಹಿತ ತನಗೆ ಮಾಡಿದ ಉಪಕಾರವನ್ನು ನೆನಪಿನಲ್ಲಿಟ್ಟು ಅದಕ್ಕೆ ಸರಿಯಾದ ಸಮಯದಲ್ಲಿ ಪ್ರತ್ಯುಪಕಾರವನ್ನು ಮಾಡಿದ ವ್ಯಕ್ತಿಯ ಬಗ್ಗೆಯೇ ಇದೆ.
ಅಮೆರಿಕಾದ ನ್ಯೂಜರ್ಸಿಯ್ ಕೆಮೆಡನ್ ನಗರದಲ್ಲಿ ಜೀವಿಸುತ್ತಿದ್ದ ಒಂದು ಹುಡುಗ ಆರ್ಥಿಕವಾಗಿ ಹಿಂದುಳಿದಿದ್ದವನಾಗಿದ್ದರೂ ಅಭ್ಯಾಸದಲ್ಲಿ ಜಾಣನಾಗಿದ್ದನು. ಶಾಲೆ ಕಲಿಯುವದಕ್ಕಾಗಿ ಆತ ದಿನಂಪ್ರತಿ ಆಟಿಗೆ ಸಾಮಾನುಗಳನ್ನು ಮಾರಿ ಬಂದ ಹಣದಿಂದ ಶಾಲೆಯ ಫೀಜನ್ನು ಕಟ್ಟಿ ಶಿಕ್ಷಣದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದ. ಈ ಕೆಲಸ ಮಾಡುವಾಗ ಕೆಮೆಡನ್ ನಗರ ಆತನಿಗೆ ತುಂಬಾ ಚಿರಪರಿಚಿತವಾಗಿತ್ತು.
ಹೀಗೆ ಒಂದು ದಿನ ಆಟಿಗೆ ಸಾಮಾನುಗಳನ್ನು ಮಾರಾಟ ಮಾಡುವಾಗ ಹುಡುಗನಿಗೆ ತುಂಬಾ ಹಸಿವೆಯಾಗಿತ್ತು. ಆಗ ಒಂದು ಮನೆಯಲ್ಲಿ ಏನಾದರೂ ತಿನ್ನಲಿಕ್ಕೆ ಕೇಳಬೇಕೆಂದು ನಿರ್ಧರಿಸಿ ಬಾಗಿಲು ಬಡಿದನು. ಒಬ್ಬಳು ಹುಡುಗಿಯು ಬಾಗಿಲು ತೆರೆದಾಗ ಆತ ಹೆದರಿ ಊಟದ ಬದಲಾಗಿ ಕುಡಿಯಲು ನೀರನ್ನು ಕೇಳಿದನು. ಆಯ್ತು ಎಂದು ಹೇಳಿ ಹುಡುಗಿಯು ನೀರು ತರಲು ಒಳಗೆ ಬಂದು ಯೋಚಿಸಿದಳು ಪಾಪ, ಹುಡುಗನನ್ನು ನೋಡಿದರೆ ತುಂಬಾ ದಣಿದಿರುವ ಹಾಗಿದೆ, ಬಹುಶಃ ಆತನಿಗೆ ಹಸಿವಾಗಿರಬೇಕು ಎಂದು ತಿಳಿದು ಒಂದು ಗ್ಲಾಸ್ ತುಂಬಾ ಹಾಲನ್ನು ನೀಡಿದಳು. ಹುಡುಗ ಆಕೆಯನ್ನು ಚೆನ್ನಾಗಿ ದಿಟ್ಟಿಸುತ್ತ ಆ ಹಾಲನ್ನು ಸಂತೋಷದಿಂದ ಕುಡಿದು, ಕೊಟ್ಟ ಹಾಲಿನ ಹಣವನ್ನು ಕೊಡುವ ಸಲುವಾಗಿ ಇದರ ದುಡ್ಡು ಎಷ್ಟು ಎಂದು ವಿನಯದಿಂದ ಕೇಳಿದನು. ಆಗ ಆ ಹುಡುಗಿ, ‘ನನ್ನ ಅಮ್ಮ ಹೇಳಿದ್ದಾಳೆ, ಸಹಾಯದ ಬದಲಾಗಿ ಎಂದಿಗೂ ಹಣವನ್ನು ಕೇಳಬೇಡ ಎಂದು’. ಆ ಮಾತುಗಳನ್ನು ಕೇಳಿ ಹುಡುಗ ಆಕೆಯ ಹೆಸರನ್ನು ಕೇಳಿ ತುಂಬು ಮನಸ್ಸಿನಿಂದ ಧನ್ಯವಾದಗಳನ್ನು ಅರ್ಪಿಸಿ ಅಲ್ಲಿಂದ ಹೋದನು.

ಹೀಗೆಯೇ ದಿನಗಳ ಮೇಲೆ ದಿನಗಳು, ತಿಂಗಳುಗಳ ಮೇಲೆ ತಿಂಗಳುಗಳು, ವರುಷಗಳ ಮೇಲೆ ವರುಷಗಳು ಕಳೆಯುತ್ತ ಹೋದವು. ಮುಂದೆ ಆ ಹುಡುಗ ದೊಡ್ಡವನಾಗುತ್ತ ತನ್ನ ಪರಿಶ್ರಮದ ಬಲದಿಂದ ಒಳ್ಳೆಯ ಹಾಸ್ಪಿಟಲ್ ಒಂದರಲ್ಲಿ ಡಾಕ್ಟರ್ ಆದರು. ಅವರೇ ‘ಹಾವರ್ಡ್ ಕೆಲಿ’.
ಒಂದು ದಿನ ಅವರ ಆಸ್ಪತ್ರೆಯಲ್ಲಿ ಯುವತಿಯೊಬ್ಬಳು ಅಡ್ಮಿಟ್ ಆದಳು. ಆಕೆಯನ್ನು ಪರಿಶೀಲಿಸಲು ಡಾ ಕೆಲಿ ಹೋದರು. ಆಕೆ ಆರೋಗ್ಯ ತುಂಬಾ ಹದಗೆಟ್ಟಿತ್ತು. ಮುಖ ಬಸವಳಿದಿತ್ತು. ದೇಹದಲ್ಲಿ ಶಕ್ತಿ ಇರಲಿಲ್ಲ. ಒಟ್ಟಿನಲ್ಲಿ ಆಕೆಯ ಕಂಡೀಷನ್ ತುಂಬಾ ಸೀರಿಯಸ್ ಆಗಿತ್ತು. ಆಕೆಯ ಹೆಸರು ವಿಳಾಸ ನೋಡಿದಾಗ ತಾನು ಬೆಳೆದ ಊರಿನವಳೇ ಇದ್ದಾಳೆಂದು ಮತ್ತು ಚಿಕ್ಕವನಿದ್ದಾಗ ಓಣಿ ಓಣಿ ತಿರುಗಾಡಿ ಆಟಿಗೆ ಸಾಮಾನುಗಳನ್ನು ಮಾರಿದ ಕ್ಷಣಗಳೆಲ್ಲ ನೆನಪಾಯಿತು. ತಾನು ಹಸಿದಿದ್ದಾಗ ತನಗೆ ಹಾಲು ಕೊಟ್ಟ ಹುಡುಗಿ ಈಕೆಯೇ ಎಂದು ಅವರಿಗೆ ಗೊತ್ತಾಯಿತು.
ಆ ಹುಡುಗಿಯ ಜೀವನದಲ್ಲಿ ಎಲ್ಲವೂ ಸರಿ ಇರಲಿಲ್ಲ. ಆಕೆಯ ಕುಟುಂಬದ ಪರಿಸ್ಥಿತಿ ಹದಗೆಟ್ಟಿತ್ತು. ಅದರ ಪ್ರಭಾವ ಆಕೆಯ ದೇಹದ ಮೇಲಾಗಿತ್ತು. ತುಂಬಾ ಕೃಶವಾಗಿದ್ದರಿಂದ ಆ ಊರಿನ ವೈದ್ಯರು ಈ ದೊಡ್ಡ ಆಸ್ಪತ್ರೆಗೆ ಒಳ್ಳೆಯ ಟ್ರೀಟ್ ಮೆಂಟ್ ಗಾಗಿ ಕಳಿಸಿದ್ದರು. ಡಾ. ಹಾವರ್ಡ್ ಕೆಲಿ ಯವರು ಆಕೆಯನ್ನು ಸರಿಯಾಗಿ ಪರಿಶೀಲಿಸಿ ಚೆನ್ನಾಗಿ ಔಷಧೋಪಚಾರ ಮಾಡಿ ಕೆಲವು ದಿನಗಳಲ್ಲಿ ಆಕೆಯನ್ನು ಆರೋಗ್ಯವಂತಳಾಗಿ ಮಾಡಿದರು.
ಈಗ ಆಕೆಯ ಆರೋಗ್ಯ ಸರಿಯಾಗಿದ್ದರೂ ಆಸ್ಪತ್ರೆಯ ಬಿಲ್ ಪೆಡ್ ಹೇಗೆ ಮಾಡುವದು ಎಂಬುದರ ಬಗ್ಗೆ ಚಿಂತಿತಳಾಗಿದ್ದಳು. ಏಕೆಂದರೆ ಅಷ್ಟೊಂದು ಹಣ ಆಕೆಯ ಹತ್ತಿರ ಇರಲಿಲ್ಲ.
ಡಿಸ್ ಚಾರ್ಜ್ ಕೊಡುವ ದಿನ ಆಸ್ಪತ್ರೆಯ ಬಿಲ್ ಜೊತೆಗೆ ಡಾಕ್ಟರ್ ಒಂದು ಲೆಟರ್ ಪಾಕೆಟ್ ನಲ್ಲಿಟ್ಟು ಆಕೆಗೆ ಕಳುಹಿಸಿದರು. ಆಸ್ಪತ್ರೆಯ ಬಿಲ್ ಇದ್ದ ಪಾಕೇಟ್ ನ್ನು ಆಕೆ ನಿಧಾನವಾಗಿ ತೆಗೆದು ನೋಡುತ್ತಿದ್ದಳು. ಅದರಲ್ಲಿ ಕೆಲವು ಟ್ರೀಟ್ ಮೆಂಟಿಗೆ ಸಂಬಂಧಿಸಿದ ಕಾಗಪತ್ರಗಳು ಇದ್ದವು, ಅದರ ಮೇಲಿದ್ದ ಬೇರೆ ಲೆಟರ್ ಕೈಯಲ್ಲಿ ತೆಗೆದುಕೊಂಡು ನಿಧಾನವಾಗಿ ಅದರಲ್ಲಿ ಬರೆದದ್ದನ್ನು ಓದಹತ್ತಿದಳು.
ಅದರಲ್ಲಿ ಹೀಗೆ ಬರೆದಿತ್ತು. ಆಸ್ಪತ್ರೆಯ ಬಿಲ್ ಕೊಡುವ ಬಗ್ಗೆ ಆತಂಕ ಪಡಬೇಡಿ, ಕಾರಣ ಇದರ ಬಿಲ್ ಕೆಲವು ವರ್ಷಗಳ ಹಿಂದೆಯೇ ‘ಒಂದು ಹಾಲಿನ ಗ್ಲಾಸ್ ನಿಂದ ತುಂಬಲಾಗಿದೆ’. ಯುವತಿಯ ಕಣ್ಣಂಚಿನಲ್ಲಿ ನೀರು ಬಂದಿತ್ತು. ಎದುರಿಗೆ ಡಾಕ್ಟರ್ ನಿಂತಿದ್ದರು.
ಆಗ ಡಾಕ್ಟರ್ ಹೇಳುತ್ತಾರೆ, ಕೆಲವು ವರ್ಷಗಳ ಹಿಂದೆ ಆಟಿಗೆ ಸಾಮಾನುಗಳನ್ನು ಮಾರುತ್ತಿರುವಾಗ ನನಗೆ ನಿಜವಾಗಿಯೂ ತುಂಬಾ ಹಸಿವೆಯಾಗಿತ್ತು. ಆಗ ನಾನು ನಿಮಗೆ ನೀರು ಬೇಡಿದಾಗ ನೀವು ಗ್ಲಾಸ್ ತುಂಬಾ ಹಾಲನ್ನು ಕುಡಿಯಲು ಕೊಟ್ಟಿರಿ. ಎಂದು ಭೂತವನ್ನು ನೆನಪಿಸಿಕೊಂಡರು.
ಇನ್ನೊಬ್ಬರಿಗೆ ನಾವೇನು ಕೊಡುತ್ತೇವೆಯೋ ಅದೇ ನಮಗೆ ಮರಳಿ ಸಿಗುತ್ತದೆ ಎನ್ನುತ್ತಾರೆ. ಈ ಮಹಿಳೆಯ ವಿಷಯದಲ್ಲಿ ಅದು ನಿಜವಾಗಿದೆ. ಜೀವನದಲ್ಲಿ ಯಾರಿಗಾದರೂ ಏನಾದರೂ ಹಂಚುವ ಸಂದರ್ಭ ಅಂತ ಬಂದಾಗ ಒಳ್ಳೆಯದನ್ನೇ ಹಂಚಬೇಕು ಕಾರಣ ಮರಳಿ ನಮಗೂ ಒಳ್ಳೆಯದೇ ಆಗುತ್ತದೆ. ಧನಾತ್ಮಕ ವಿಚಾರ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ.