ಇನ್ಫೋಸಿಸ್ ಸ್ಥಾಪಿಸುವಾಗ JRD ಟಾಟಾ ಅವರು ಹೇಳಿದ ‘ಆ’ ಮಾತು ಸುಧಾ ಮೂರ್ತಿಯವರು ಇಂದಿಗೂ ಮರೆತಿಲ್ಲ..!

ಮುಂಬಯಿಯ ಧಾರಾಕಾರ ಮಳೆ ಹೇಗಿರುತ್ತೆ ಅಂದ್ರೆ ಇಲ್ಲಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಒಂದು ಸಾಯಂಕಾಲ ಮಳೆಯಲ್ಲಿ ತರುಣನೊಬ್ಬ ನಾರಿಮನ್ ಪಾಯಿಂಟ್ ನಲ್ಲಿ ಟ್ಯಾಕ್ಸಿಗಾಗಿ ಹಾತೊರೆಯುತ್ತಿದ್ದ. ಯಾಕೆಂದರೆ ಹೆಂಡತಿಯ ಆಫೀಸ್ ಪೋರ್ಟ್ ನಲ್ಲಿತ್ತು. ಹಾತೊರೆಯುವ ಕಾರಣ ಗೊತ್ತಾಯ್ತಲ್ಲ, ಹೆಂಡತಿಗೆ ಕರೆತರಲು ಇಲ್ಲಾ ಅಂದ್ರೆ ಅಷ್ಟೇ…

ಹೇಗೋ ಸುದೈವದಿಂದ ಒಂದು ಟ್ಯಾಕ್ಸಿ ದೊರೆತಾಗ ಡ್ರೈವರ್ ಗೆ ಸ್ವಲ್ಪ ವಿನಂತಿಸಿ ಬೇಗ ಪೋರ್ಟ್ ಗೆ ಕರೆದೊಯ್ಯಲು ಹೇಳಿದರು. ಅಲ್ಲಿಗೆ ಹೋಗುವಷ್ಟರಲ್ಲಿ ಪತ್ನಿ ಒಬ್ಬರು ಹಿರಿಯ ವ್ಯಕ್ತಿಯೊಂದಿಗೆ ಮಾತನಾಡುತ್ತ ಕಂಪನಿಯ ಗೇಟ್ ಬಳಿ ನಿಂತಿದ್ದರು. ಈ ತರುಣ ಅಲ್ಲಿಗೆ ಹೋಗುತ್ತಲೇ ಹಿರಿಯ ವ್ಯಕ್ತಿ ಇವರಿಗೆ ಒಂದು ಸ್ಮೈಲ್ ನೀಡಿ ಹೋಗಲನುವಾದರು, ಹೋಗುವ ಮುನ್ನ ಒಂದು ಮಾತನ್ನು ಹೇಳಿದರು,

“Young man, dont make your wife wait in the dark “

ಈ ಮಾತನ್ನು ಕೇಳಿಸಿಕೊಂಡ ವ್ಯಕ್ತಿ ಬೇರೆ ಯಾರು ಅಲ್ಲ, ನಮ್ಮ ನಿಮ್ಮ ಅಭಿಮಾನದ, ಪ್ರೇರಣೆಯ ಚಿಲುಮೆಯಾದ ನಾರಾಯಣಮೂರ್ತಿಯವರು. ಕೆಲಸಕ್ಕಾಗಿ ಅದೇ ಮುಂಬಯಿಗೆ ಸೇರಿದ್ದರು. ಅವರ ಹೆಂಡತಿ ಸುಧಾ ಅವರ ಜೊತೆಗೆ ನಿಂತ ವ್ಯಕ್ತಿ ಬೇರೆ ಯಾರೂ ಅಲ್ಲ, ದೊಡ್ಡ ಉದ್ಯಮಿ ಟಾಟಾ ಸಮೂಹದ ಮುಖ್ಯಸ್ಥ JRD ಟಾಟಾ.

ಈ ಚಿತ್ರ ನೋಡಿದ ಮೂರ್ತಿಯವರು ಹೇಳುತ್ತಾರೆ. ಇಷ್ಟು ದೊಡ್ಡ ಕಂಪನಿಯ ಮಾಲೀಕರಾದ ಟಾಟಾ ಅವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ತೋರಿಸಿದ ಸೌಜನ್ಯ ನನ್ನ ಜೀವನದ ಮೇಲೆ ತುಂಬಾ ಒಳ್ಳೆಯ ಪರಿಣಾಮ ಬೀರಿ ಹೋಯಿತು.

JRD ಅವರು ತಮ್ಮ ಸರಳತೆಗೆ ಹೆಸರುವಾಸಿಯಾಗಿದ್ದರು. ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ವರ್ಕರ್ಸ್ ಗಳನ್ನು ತಮ್ಮ ಮಕ್ಕಳಂತೆ ನೋಡುತ್ತಿದ್ದರು. ಸುಧಾ ಅವರ ಮೇಲೆ ವಿಶೇಷ ಗೌರವ ಇತ್ತು. ಅದಕ್ಕೆ ಕಾರಣವೂ ಹಾಗೆಯೇ ಇತ್ತು. ಯಾಕೆಂದರೆ, ಸುಧಾ ಅವರು ಅಲ್ಲಿ ತಮ್ಮ ಇಂಜಿನಿಯರ್ ನೌಕರಿಯನ್ನು ಜಗಳ ಮಾಡಿ ಅಂದರೆ ಒಂದು ರೀತಿಯಲ್ಲಿ ಹೋರಾಟ ಮಾಡಿ ಪಡೆದಿದ್ದರು.

ಯಾಕೆಂದರೆ ನೌಕರಿಗಾಗಿ ಕರೆದ ಟೇಲ್ಕೋ ಜಾಹೀರಾತಿನಲ್ಲಿ ಸ್ಪಷ್ಟವಾಗಿ ಸ್ತ್ರೀಯರು ಅರ್ಜಿ ಹಾಕಬಾರದು ಎಂದು ನಮೂದಿಸಿತ್ತು. ಇದು ಸುಧಾ ಅವರಿಗೆ ಯಾಕೋ ಹಿಡಿಸಲಿಲ್ಲ. ಆಗವರು ಇದರ ವಿರುದ್ಧವಾಗಿ ದನಿಎತ್ತಿ ಒಂದು ಪತ್ರವನ್ನು ಬರೆದರು. ಆ ಪತ್ರ ಟಾಟಾ ಅವರ ಕೈಗೆ ಸಿಕ್ಕಾಗ ಅವರು ತಕ್ಷಣ ಟೇಲ್ಕೋದ ನಿಯಮದಲ್ಲಿ ಬದಲಾವಣೆಯನ್ನು ಮಾಡಲು ಹೇಳಿದರು. ಅದಾದ ನಂತರ ಟೆಲ್ಕೋ ಆಫೀಸ್ ನಲ್ಲಿ ಕೆಲಸ ಮಾಡುವ ಸುಧಾ ಅವರು ಮೊದಲ ಮಹಿಳಾ ಇಂಜಿನಿಯರ್ ಆದರು.

ಮುಂದೆ ಕೆಲವು ದಿನಗಳ ದಿನಗಳು ಕಳೆದ ನಂತರ ಸುಧಾ ಮೂರ್ತಿಯವರ ಪತಿ ನಾರಾಯಣ ಮೂರ್ತಿಯವರು ಪುಣೆಯಲ್ಲಿ ಇನ್ಫೋಸಿಸ್ ಸ್ಥಾಪನೆ ಮಾಡಿದರು. ಈ ಕಂಪನಿಯನ್ನು ನಡೆಸಲು ಮತ್ತು ಅದರ ಸಹಾಯಕ್ಕಾಗಿ ಸುಧಾ ಅವರು ತಮ್ಮ ಮುಂಬಯಿಯಲ್ಲಿಯ ನೌಕರಿಯನ್ನು ಬಿಟ್ಟು ಪುಣೆಗೆ ಹೋಗುವ ವಿಚಾರ ಮಾಡಿದರು. ಈ ವಿಷಯ ಯಾವಾಗ ಟಾಟಾ ಅವರಿಗೆ ಗೊತ್ತಾಯಿತು ಆಗ ಸುಧಾ ಅವರಿಗೆ ತನ್ನ ಆಫೀಸಿನಲ್ಲಿ ಕರೆಸಿ ಕೆಲಸವನ್ನು ಬಿಡುವ ಕಾರಣವೇನೆಂದು ಕೇಳಿದರು. ಆಗ ಸುಧಾ ಅವರು ಇನ್ಫೋಸಿಸ್ ಬಗ್ಗೆ ಹೇಳಿದಾಗ ಟಾಟಾ ಅವರು ಒಂದು ಪ್ರಶ್ನೆಯನ್ನು ಕೇಳಿದರು,

‘ನಿಮ್ಮ ಕಂಪನಿ ಒಂದು ವೇಳೆ ಯಶಸ್ವಿಯಾದರೆ ನೀವೇನು ಮಾಡುವಿರಿ?’

‘ಸರ್, ನಮಗೆ ಇನ್ನು ಗೊತ್ತಿಲ್ಲ, ನಾವು ಮಾಡುತ್ತಿರುವ ಕಂಪನಿ ಯಶಸ್ವಿಯಾಗುತ್ತೋ ಇಲ್ಲವೋ ಅಂತ ಸುಧಾ ಅವರು ಅಂದಾಗ’,

‘ಪ್ರಾರಂಭ ಯಾವತ್ತೂ ಆತ್ಮವಿಶ್ವಾಸದಿಂದ ಆಗಬೇಕು, ಯಾವಾಗ ನೀವು ಯಶಸ್ವಿಯಾಗುತ್ತಿರಿ, ಆಗ ಸಮಾಜಕ್ಕಾಗಿ ಸಮಾಜದ ಹಿತಕ್ಕಾಗಿ ಯಾವತ್ತೂ ಏನಾದರೂ ದೇಣಿಗೆಯನ್ನು ಕೊಡುತ್ತೀರಿ ಈ ಮಾತನ್ನು ಯಾವಾಗಲೂ ಗಮನದಲ್ಲಿಡಿ. ನೀವು ಗಳಿಸಿದರಲ್ಲಿ ಒಂದು ಭಾಗವನ್ನು ಸಮಾಜಕ್ಕಾಗಿ ಕಾಯ್ದಿರಿಸಿ’, ಎಂದು ಟಾಟಾ ಅವರು ಹೇಳಿದರು.

ಯಾವಾಗ ಇನ್ಫೋಸಿಸ್ ಕಂಪೆನಿಯು ನಿಜವಾಗಿಯೂ ಯಶಸ್ವಿಯಾಯಿತು, ಆಗ ಸುಧಾ ಮೂರ್ತಿಯವರ ಮಾರ್ಗದರ್ಶನದಲ್ಲಿ ಸಮಾಜದ ವಿವಿಧ ಘಟಕಗಳ ಸಹಾಯಕ್ಕಾಗಿ ಇನ್ಫೋಸಿಸ್ ಫೌಂಡೇಶನ್ ಸ್ಥಾಪನೆಯನ್ನು ಮಾಡಿದರು. ಟಾಟಾ ಅವರ ಇಂಥ ಮೇರು ವಿಚಾರಗಳನ್ನು ನಾರಾಯಣಮೂರ್ತಿಯವರಾಗಲಿ ಸುಧಾ ಮೂರ್ತಿಯವರಾಗಲಿ ಇಂದಿಗೂ ಮರೆತಿಲ್ಲ. ಇದೇ ಕಾರಣಕ್ಕಾಗಿ ಇನ್ಫೋಸಿಸ್ ನಲ್ಲಿ JRD ಟಾಟಾ ಅವರ ಎಲ್ಲಕ್ಕೂ ದೊಡ್ಡದಾದ ಭಾವಚಿತ್ರ ಕಾಣಲು ಸಿಗುತ್ತದೆ.