ಲಾಕ್ಡೌನ್ನಲ್ಲಿ ಊರಲ್ಲಿ ಸಿಲುಕಿಕೊಂಡಳು, ಆನ್ಲೈನ್ ಶಿಕ್ಷಣಕ್ಕಾಗಿ ಹಳ್ಳಿಯಲ್ಲಿ ಯಾವುದೇ ನೆಟ್ವರ್ಕ್ ಇಲ್ಲವೆಂದು ಬೆಟ್ಟದ ಮೇಲೆಯೇ ಗುಡಿಸಲು ಹಾಕಿ ಅಧ್ಯಯನ ಮಾಡುತ್ತಿರುವ ಯುವತಿ!
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕರಾವಳಿ ಮತ್ತು ಕರ್ನಾಟಕದ ಕರಾವಳಿ ಬೇರೆ ಅಲ್ಲ ಎರಡು ಒಂದೇ ಸಹ್ಯಾದ್ರಿಯ ಶ್ರೇಣಿಯಲ್ಲಿಯೇ ಬರುತ್ತವೆ.
ಇದೇ ಸಿಂಧುದುರ್ಗ ಜಿಲ್ಲೆಯ ಕಣಕವಲಿ ತಾಲೂಕಿನಲ್ಲಿ ಬರುವ ದಾರಿಸ್ತೇ ಹೆಸರಿನ ಊರಲ್ಲಿಯ ಸ್ವಪ್ನಾಲಿ ಸುತಾರ ಹೆಸರಿನ ಹುಡುಗಿ ಮುಂಬಯಿಯಲ್ಲಿ ಪಶು ವೈದ್ಯಳಾಗುವ ಶಿಕ್ಷಣವನ್ನು ಪಡೆಯುತ್ತಿದ್ದಾಳೆ. ಕೊರೊನಾದ ಲಾಕ್ ಡೌನ್ ಸಮಯದಲ್ಲಿ ಊರಲ್ಲಿಯೇ ಸಿಲುಕಿದಾಗ ಆಕೆಯ ಆನಲೈನ್ ಶಿಕ್ಷಣ ಪ್ರಾರಂಭವಾಯಿತು. ಕರಾವಳಿಯ ಈ ದುರ್ಗಮವಾದ ಭಾಗಗಳಲ್ಲಿ ಬರೀ ಕಾಲ್ ಗಳೇ ಕನೆಕ್ಟ್ ಆದರೆ ಸಾಕಾಗುತ್ತೆ ಇನ್ನು ಇಂಟರ್ ನೆಟ್ ಎಲ್ಲಿಂದ ಬರಬೇಕು. ಆದರೆ ವೈದ್ಯೆಯಾಗುವ ಧ್ಯೇಯ ಹೊತ್ತವಳು ಕೇಳಬೇಕಲ್ಲ, ಅಣ್ಣನ ಮೊಬೈಲ್ ತೆಗೆದುಕೊಂಡು ಬೆಟ್ಟ ಗುಡ್ಡಗಳಲ್ಲಿ ಸಂಚರಿಸಿ ಎಲ್ಲಿ ನೆಟ್ವರ್ಕ್ ಸರಿಯಾಗಿ ಬರುತ್ತೋ ಅದನ್ನು ಸರ್ಚ್ ಮಾಡಿದಳು. ಹೀಗೆ ಮಾಡುವಾಗ ಮನೆಯಿಂದ ಎರಡು ಕಿಲೋಮೀಟರ್ ಅಂತರದಲ್ಲಿ ಬೆಟ್ಟದ ಮೇಲೊಂದರಲ್ಲಿ ನೆಟ್ವರ್ಕ್ ಸರಿಯಾಗಿ ಬರುತ್ತಿತ್ತು.
ಅಷ್ಟು ಸಾಕಾಗಿತ್ತು ಸ್ವಪ್ನಾಳಿಗೆ ಮತ್ತೇನು, ದಿನಾಲು ಆ ಬೆಟ್ಟದ ಮೇಲೆ ಬಂದು ಒಂದು ಮರದ ಕೆಳಗೆ ತನ್ನ ಅಭ್ಯಾಸವನ್ನು ಶುರು ಮಾಡಿ ಬಿಟ್ಟಳು. ಸುಡು ಬಿಸಿಲಿನಲ್ಲಿ ಕುಗ್ಗದೆ ದಿನಾಲು ಸ್ಟಡಿ ನಡೆದೇ ಇತ್ತು. ಆದರೆ ನಿಜವಾದ ಸಮಸ್ಯೆ ಎದುರಾದದ್ದು ಮಳೆಗಾಲಲ್ಲಿ. ಸಹ್ಯಾದ್ರಿಯ ಬೆಟ್ಟ ಅಂದ್ರೆ ಕೇಳಬೇಕೆ? ಸತತವಾದ ಧಾರಾಕಾರ ಮಳೆಯಲ್ಲಿ ಕೊಡೆಯನ್ನು ಹಿಡಿದು ಹಾಗೆಯೇ ಅಭ್ಯಾಸ ಮಾಡುವ ಯತ್ನ ಮಾಡಿದಳು. ಇದನ್ನು ಕಂಡ ಸ್ವಪ್ನಾಲಿಯ ನಾಲ್ಕು ಜನ ಅಣ್ಣಂದಿರು ತಂಗಿಗಾಗಿ ಅಲ್ಲಿಯೇ ಬೆಟ್ಟದ ಮೇಲೆ ಒಂದು ಪುಟ್ಟ ಗುಡಿಸಲನ್ನು ತಯಾರಿಸಿದರು. ಸ್ವಪ್ನಾಲಿ ಹಗಲು ಹೊತ್ತಿನಲ್ಲಿ ಅಲ್ಲಿಯೇ ತನ್ನ ಸ್ಟಡಿ ಶುರು ಮಾಡಿದಳು.

ಲಾಕ್ ಡೌನ್ ಗಿಂತ ಮುಂಚೆ ಊರಿಗೆ ಬಂದ ಸ್ವಪ್ನಾಲಿ ಇಲ್ಲಿಯೇ ಸಿಕ್ಕಿ ಬಿದ್ದಳು. ಅಭ್ಯಾಸದಲ್ಲಿ ತುಂಬಾ ಜಾಣೆಯಾದ ಸ್ವಪ್ನಾಲಿ SSLC ಯಲ್ಲಿ 98 % ಗುಣಗಳನ್ನು ಹೊಂದಿದ್ದಾಳೆ. PUC ಯಲ್ಲಿಯೂ ಚೆನ್ನಾಗಿ ಮಾರ್ಕ್ಸ್ ಸ್ಕೊರ್ ಮಾದಿದ್ದಾಳೆ. ಡಾಕ್ಟರ್ ಆಗುವ ಕನಸಿಗೆ ಬಡತನ ಅಡ್ಡ ಬಂದು ಪಶುವೈದ್ಯೆಯಾಗುವ ಕನಸು ಹೊತ್ತಳು. ರೈತರಾದ ಪೋಷಕರು ಮಗಳಿಗೆ ಯಾವತ್ತೂ ಸಹಕರಿಸಿದರು. ಅಭ್ಯಾಸಕ್ಕಾಗಿ ಅಡವಿ ಅಡವಿ ತಿರುಗಾಡಿ ಮಾಡಿದ ಪ್ರಯತ್ನಕ್ಕೆ ಪೋಷಕರು ಖುಷಿ ಹೆಮ್ಮೆ ಪಡುತ್ತಾರೆ.
ಏನಾದರೂ ಮಾಡುವ ಛಲವಿದ್ದರೆ ಅಡೆತಡೆಗಳು ತಾನಾಗಿಯೇ ದೂರವಾಗುತ್ತವೆ. ಸಂಕಟದಲ್ಲಿ ಹತ್ತಿರವಿದ್ದ ಸಂಪನ್ಮೂಲಗಳಲ್ಲಿ ದಾರಿ ಹುಡುಕಿ ವ್ಯವಸ್ಥೆ ಮಾಡಿಕೊಂಡಾಗ ನಿಜವಾದ ಇತಿಹಾಸ ಆಗಲೇ ನಿರ್ಮಾಣವಾಗುವದು.
ಅನೇಕ ಮಕ್ಕಳಿಗೆ ಮನೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಇದ್ದರೂ ಶಿಕ್ಷಣದ ಕಡೆಗೆ ದುರ್ಲಕ್ಷ ಮಾಡುವ ವಿದ್ಯಾರ್ಥಿಗಳು ಸ್ವಪ್ನಾಲಿಯ ಪ್ರೇರಣೆಯನ್ನು ಪಡೆದು ಮುಂದೆ ಹೋಗುವ ಯತ್ನ ಮಾಡಬೇಕು. ಮಾಡುವ ಕೆಲಸಕ್ಕಾಗಿ ಸ್ವಲ್ಪ ಜಿದ್ದು ಮತ್ತು ಕಠೋರ ಪರಿಶ್ರಮದ ಅವಶ್ಯಕತೆ ಇದೆ.