70 ವರ್ಷಗಳಲ್ಲಿ ಸರ್ಕಾರ ರಸ್ತೆ ನಿರ್ಮಿಸಲಿಲ್ಲ, ಸೋನು ಸೂದ್‌ ಅವರಿಂದ ಸ್ಫೂರ್ತಿ ಪಡೆದ ಗ್ರಾಮಸ್ಥರು ಮಾಡಿದ್ದೇನು ಗೊತ್ತಾ?

ದೇಶಕ್ಕೆ ಸ್ವತಂತ್ರ ಬಂದು 70 ವರ್ಷಗಳೇ ಕಳೆದರೂ , ಅನೇಕ ಸರ್ಕಾರಗಳು ಆಡಳಿತಕ್ಕೆ ಬಂದರೂ, ಚುನಾವಣೆಯ ವೇಳೆಯಲ್ಲಿ ಆಶ್ವಾಸನೆಗಳನ್ನು ಕೊಟ್ಟರೂ ಕೂಡಾ ರಸ್ತೆಯ ಮುಖವನ್ನೇ ಕಾಣದ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿನ ಹಳ್ಳಿಗಳು ಇದೀಗ ಸರಕಾರವೇ ಆ ಗ್ರಾಮಸ್ಥರ ಕಡೆಗೆ ತಿರುಗಿ ನೋಡುವಂತಹ ಕೆಲಸವನ್ನು ಮಾಡಿದ್ದಾರೆ. ಸರ್ಕಾರದ ಪೊಳ್ಳು ಆಶ್ವಾಸನೆಗಳಿಂದ ಬಸವಳಿದ ಜನರು ಮಾಡಿರುವ ಕಾರ್ಯವು ನಿಜಕ್ಕೂ ಕೂಡಾ ಸರ್ಕಾರದ ವಿಫಲತೆಯನ್ನು ಎತ್ತಿ ತೋರಿಸುವಂತಿದ್ದು, ಜನರು ನಿರ್ಧಾರ ಮಾಡಿದರೆ ಯಾವುದೇ ಕಾರ್ಯ ಕೂಡಾ ಕಠಿಣವಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಆದರೆ ಗ್ರಾಮೀಣ ಭಾಗದ ಜನರು ಇಂತಹುದೊಂದು ಕಾರ್ಯಕ್ಕೆ ಕೈಹಾಕಲು ಕಾರಣ ಅವರು ಒಬ್ಬ ವ್ಯಕ್ತಿಯಿಂದ ಪಡೆದ ಸ್ಪೂರ್ತಿ.

ಹಾಗಾದರೆ ಬನ್ನಿ ಆ ಗ್ರಾಮಗಳು ಯಾವುವು? ಏನು ಅಲ್ಲಿನ ಜನರು ಮಾಡಿದ ಅಮೋಘ ಎನಿಸುವ ಕಾರ್ಯ ಹಾಗೂ ಅವರ ಈ ಕಾರ್ಯಕ್ಕೆ ಸ್ಪೂರ್ತಿಯಾದ ವ್ಯಕ್ತಿ ಯಾರೆಂದು ನಾವು ಕೂಡಾ ತಿಳಿಯೋಣ. ವಿಜಯನಗರಂ ಜಿಲ್ಲೆಯಲ್ಲಿ ಎರಡು ಆದಿವಾಸಿ ಗ್ರಾಮಗಳಿದ್ದು, ಸ್ವಾತಂತ್ರ್ಯ ನಂತರದಿಂದ ಇದುವರೆವಿಗೂ ಕೂಡಾ ಈ ಗ್ರಾಮಗಳನ್ನು ಸಂಪರ್ಕಿಸುವ ಅಥವಾ ಗ್ರಾಮಸ್ಥರ ಸಂಚಾರಕ್ಕೆ ಸರಿಯಾದ ರಸ್ತೆಗಳೇ ಇರಲಿಲ್ಲ. ಚಿಂತಾಮಲ ಮತ್ತು ಕೋಡಾಮ ಎನ್ನುವ ಈ ಎರಡು ಗ್ರಾಮಗಳಲ್ಲಿ ಸುಮಾರು 300 ಕುಟುಂಬಗಳು ವಾಸವಿದ್ದು, ಅನೇಕ ಬಾರಿ ಸರ್ಕಾರದ ಮುಂದೆ ರಸ್ತೆ ನಿರ್ಮಾಣದ ಮನವಿಯನ್ನು ಇಟ್ಟರೂ ಅದು ಪೂರ್ತಿಯಾಗಲೇ ಇಲ್ಲ.

ಕೊರೊನಾ ಸಂಕಷ್ಟದಲ್ಲಿ ರಿಯಲ್ ಹೀರೋ ಆಗಿ ಹೊರಹೊಮ್ಮಿದ ಸೋನು ಸೂದ್ ಜನರ ಮನೆಗಳಿಗೆ ಸಹಾಯವನ್ನು ಕಳುಹಿಸಲು ಪಟ್ಟ ಶ್ರಮವನ್ನು ನೋಡಿದ ಈ ಗ್ರಾಮದ ಜನರು ಅದರಿಂದ ಸ್ಪೂರ್ತಿ ಪಡೆದು ತಮ್ಮ ಗ್ರಾಮಗಳಿಗೆ ತಾವೇ ರಸ್ತೆಯನ್ನು ನಿರ್ಮಾಣ ಮಾಡಲು ನಿರ್ಧಾರವೊಂದನ್ನು ಮಾಡಿದ್ದಾರೆ. ರಸ್ತೆ ನಿರ್ಮಾಣಕ್ಕೆ ಗ್ರಾಮಗಳ ಪ್ರತಿಯೊಂದು ಮನೆಯವರು ಕೂಡಾ 2000 ರೂಪಾಯಿಗಳ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಹೀಗೆ ಹಣ ಸಂಗ್ರಹಣೆಯಾದ ಕೂಡಲೇ ಗ್ರಾಮಸ್ಥರು ಯಾವುದೇ ಸರ್ಕಾರದ ಅನುದಾನಕ್ಕೆ ಕಾಯದೇ ರಸ್ತೆ ನಿರ್ಮಾಣದ ಕಾರ್ಯ ಕ್ಕೆ ಚಾಲನೆ ನೀಡಿದ್ದಾರೆ.

ಬೆಟ್ಟದ ರಸ್ತೆಯನ್ನು ಯಂತ್ರದ ಸಹಾಯದಿಂದ ನಿರ್ಮಾಣ ಮಾಡಿದ್ದು, ತಮ್ಮ ಗ್ರಾಮದಿಂದ ಮುಖ್ಯ ರಸ್ತೆಯವರೆಗೆ ಒಂದು ಕಚ್ಚಾ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ. ಅಷ್ಟು ಮಾತ್ರವೇ ಅಲ್ಲದೇ ಅವರು ರಸ್ತೆಯ ಇಕ್ಕೆಲಗಳಲ್ಲಿ ನಟ ಸೋನು ಸೂದ್ ಅವರ ಪೋಸ್ಟರ್ ಗಳನ್ನು ಹಾಕಿ ಸಂಭ್ರಮಿಸಿದ್ದಾರೆ ಅಲ್ಲದೇ ಪೋಸ್ಟರ್ ಗಳ ಮೂಲಕ ತಮಗೆ ಸ್ಪೂರ್ತಿಯಾದ ಸೋನು ಸೂದ್ ಅವರಿಗೆ ಧನ್ಯವಾದಗಳನ್ನು ಇಲ್ಲಿನ ಜನರು ಅರ್ಪಿಸಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ನಟ ಸೋನು ಸೂದ್ ಅಗತ್ಯ ಇರುವವರಿಗೆ ಎಷ್ಟೇ ಕಠಿಣವಾದರೂ ಕೂಡಾ ನೆರವನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡಿದ್ದರು.

ಸೋನು ಸೂದ್ ಅವರ ಸಹಾಯವು ಈಗ ಎರಡು ಗ್ರಾಮಗಳಿಗೆ ಸ್ಪೂರ್ತಿಯಾಗಿರುವುದು ನಿಜಕ್ಕೂ ಒಂದು ಉತ್ತಮ ಬೆಳವಣಿಗೆ ಎನಿಸಿದೆ. ಜನರಿಂದಲೇ ಅಧಿಕಾರ ಪಡೆದು ಜನರನ್ನು ಮರೆತ ನಾಯಕರಿಗೆ ಜನರು ನಾವು ಸ್ವಾವಲಂಬಿಗಳು ಎಂಬುದನ್ನು ಅಕ್ಷರಶಃ ತೋರಿಸಿಕೊಟ್ಟಿದ್ದಾರೆ. ಜನರಲ್ಲಿ ಇಂತಹ ಜಾಗೃತಿ ಮೂಡಿದರೆ ನಿಜಕ್ಕೂ ದೇಶದ ಅನೇಕ ಸಮಸ್ಗೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.