ಜರ್ಮನಿಯ ವಧುವನ್ನು ವರಿಸಿದ ದೇಸಿ ಹುಡುಗ; ಹುಡುಗಿಯ ತಂದೆಯ ಮಾತುಗಳನ್ನು ಕೇಳಿ ಭಾವುಕರಾದ ಊರಿನ ಜನ!
ಪ್ರೇಮಕ್ಕೆ ದೇಶ, ಭಾಷೆ, ಸಂಸ್ಕತಿಗಳೆಂಬ ಗಡಿಗಳಿಲ್ಲ. ಪ್ರೀತಿ ಹುಟ್ಟಿತೆಂದರೆ ಸಾಕು ಪ್ರೇಮಿಗಳು ಎಲ್ಲಾ ಅಡೆ ತಡೆಗಳನ್ನು ಮೀರಿ ಜೊತೆಯಾಗಿ ಜೀವನ ಕಟ್ಟಿಕೊಳ್ಳಲು ಕನಸನ್ನು ಕಾಣತೊಡಗುವರು. ಕೆಲವರು ಮದುವೆಯಾಗುವಂತಹ ದೊಡ್ಡ ಹೆಜ್ಜೆಯನ್ನು ಕೂಡಾ ಇಡಲು ಹೆದರುವುದಿಲ್ಲ. ನಮ್ಮ ದೇಶದಲ್ಲಿ ಮದುವೆಗೆ ವಿಶೇಷ ಪ್ರಾಧಾನ್ಯತೆ ಇದ್ದು, ಮದುವೆಗೆ ಬರುವವರು ವಧುವಿನ ಕಡೆಗೆ ಗಮನ ನೀಡುವುದು ಕೂಡಾ ಸಹಜ. ಮಧ್ಯ ಪ್ರದೇಶದಲ್ಲಿ ಕಳೆದ ಭಾನುವಾರದಂದು ನಡೆದ ಮದುವೆಯೊಂದರಲ್ಲಿ ಪ್ರಮುಖ ಆಕರ್ಷಣೆ ವಧು ವರನೇ ಆಗಿದ್ದರು ಎಂದರೆ ತಪ್ಪಾಗಲಾರದು. ಕಾರಣ ಮಂಟಪದಲ್ಲಿ ಕುಳಿತಿದ್ದ ವಧು ವರನ ವಿಶೇಷತೆ ನೆರೆದವರ ಗಮನವನ್ನು ಬಹುವಾಗಿ ಸೆಳೆದಿತ್ತು.
ಈ ಮದುವೆಯ ವಧು ವರ ಏಕೆ ಅಷ್ಟು ವಿಶೇಷವಾಗಿದ್ದರು ಎನ್ನುವುದಕ್ಕೆ ಒಂದು ಕಾರಣ ಕೂಡಾ ಇದೆ. ಇಲ್ಲಿ ವರ ದೇಶೀಯನಾದರೆ, ವಧು ವಿದೇಶಿಯಳಾಗಿದ್ದುದು. ಚೋಖೆಲಾಲ್ ಭಾವ್ಸರ್ ಎನ್ನುವವರು ಮಧ್ಯಪ್ರದೇಶದ ಭೌರಿಯಾ ಎನ್ನುವ ಹಳ್ಳಿ ಯಲ್ಲಿ ಶಿಕ್ಷಕರಾಗಿದ್ದಾರೆ. ಇವರ ಮಗನ ಹೆಸರು ಬೃಜ್ ಕಿಶೋರ್ ಒಬ್ಬ ವಿಜ್ಞಾನಿಯಾಗಿದ್ದಾರೆ. ಬ್ರಿಜ್ ಕಿಶೋರ್ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಜರ್ಮನ್ ಮೂಲದ ವಿಕ್ಟೋರಿಯಾ ಲೂಯಿಸಾ ಫ್ರೈನ್ ಮರ್ಸನ್ ವಾನ್ ಬೀಬರ್ಸ್ಟೈನ್ ಎನ್ನುವ ಯುವತಿಯೊಡನೆ ವಿವಾಹವಾದರು. ಭಾರತೀಯ ವರ, ಜರ್ಮನ್ ವಧುವಿನ ಜೋಡಿ ಎಲ್ಲರ ಗಮನ ಸೆಳೆದು ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು.

ಇಂಟರ್ನೆಟ್ ನಲ್ಲಿ ಈ ಮದುವೆಯ ಫೋಟೋಗಳು ಸಾಕಷ್ಟು ವೈರಲ್ ಆದವು. ವಿಶೇಷ ಎಂದರೆ ಜರ್ಮನಿಯ ವಧುವಿನ ಕುಟುಂಬ ಮಗಳ ಮದುವೆಯನ್ನು ಭಾರತೀಯ ಸಂಪ್ರದಾಯದ ಪ್ರಕಾರ ನೆರವೇರಿಸಲು ಉತ್ಸುಕರಾಗಿದ್ದರು. ಅಲ್ಲದೇ ಮದುವೆಯ ದಿನ ಹೆಣ್ಣಿನ ಕಡೆಯವರೆಲ್ಲಾ ಕೂಡಾ ಭಾರತೀಯ ಸಂಪ್ರದಾಯದ ಹಾಗೆ ವಸ್ತ್ರಗಳನ್ನು ಧರಿಸಿ, ವಿವಾಹದ ಎಲ್ಲಾ ಶಾಸ್ತ್ರಗಳಲ್ಲಿ ಭಾಗವಹಿಸಿದ್ದರು. ಒಂದು ಫೋಟೋದ ಜೊತೆಗೆ ಮಧ್ಯಪ್ರದೇಶದ ಮಗ ಜರ್ಮನಿಯ ಮಗಳನ್ನು ಮದುವೆಯಾಗಿ ಕರೆತಂದ. ಅರಿಶಿಣ ಶಾಸ್ತ್ರದಲ್ಲಿ ಹುಡುಗಿಯ ಮನೆಯವರು ಗಂಡು ಹೆಣ್ಣಿಗೆ ಅರಿಶಿನ ಹಚ್ಚಿ ಸಂಭ್ರಮಿಸಿದರು ಎಂದು ಕೂಡಾ ಬರೆಯಲಾಗಿತ್ತು.

ಮದುವೆ ಮಾತ್ರ ಬಹಳ ಸಡಗರ ಹಾಗೂ ಸಂತೋಷದಿಂದ ನೆರವೇರಿದ್ದು, ಮದುವೆಗೆ ಬಂದ ಬಂಧು ಮಿತ್ರರಿಗೆ ಕೂಡಾ ಮದುವೆ ಒಂದು ಖುಷಿಯನ್ನು ನೀಡಿತು ಎನ್ನಲಾಗಿದೆ. ಜರ್ಮನಿಯಿಂದ ಬಂದಿದ್ದ ಹುಡುಗಿಯ ಮನೆಯ ಕಡೆಯವರು ಭಾರತೀಯ ಆಹಾರ ಪದಾರ್ಥಗಳ ರುಚಿಯನ್ನು ಬಹಳ ಮೆಚ್ಚಿ ಸವಿದರು. ಅಲ್ಲದೇ ಹುಡುಗಿಯ ಕಡೆಯವರು ಮದುವೆಯ ನಂತರ ತಮ್ಮ ಮಗಳನ್ನು ವರನಿಗೆ ಒಪ್ಪಿಸುವ ಶಾಸ್ತ್ರದಲ್ಲಿ ತಮ್ಮ ಮಗಳನ್ನು ಆಕೆಯ ಗಂಡನ ಮನೆಗೆ ಒಪ್ಪಿಸುತ್ತಿದ್ದು ಇನ್ನು ಮುಂದೆ ಆಕೆಗೆ ಅತ್ತೆ ಮಾವನೇ ತಂದೆ ತಾಯಿ, ಆ ಹಳ್ಳಿಯ ಜನರೇ ಆಕೆಯ ಪರಿವಾರ ಹಾಗೂ ಬಂಧುಗಳು ಎಂದು ಹೇಳಿದ ಮಾತು ಗ್ರಾಮಸ್ಥರ ಮನಸ್ಸನ್ನು ಗೆದ್ದಿದೆ ಕೂಡಾ.

ಮಗಳ ವಿವಾಹ ಹೀಗೆ ನಡೆಯುತ್ತದೆಯೆಂದು ಊಹೆ ಮೂಡಾ ಮಾಡಿರಲಿಲ್ಲ ಎನ್ನುವ ಅವರಿಗೆ ಮದುವೆ ಬಹಳ ಖುಷಿ ಕೊಟ್ಟಿದೆ ಎನ್ನುತ್ತಾರೆ. ಜರ್ಮನಿಯ ವಧು ಭಾರತೀಯ ಉಡುಪಿನಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದಾಳೆ. ಆಕೆಯ ಪರಿವಾರ ಕೂಡಾ ಭಾರತೀಯ ಸಂಪ್ರದಾಯಗಳೊಟ್ಟಿಗೆ ಬೆರೆತಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಇಲ್ಲಿನ ಜನರ ಪದ್ಧತಿಗಳು ಕ್ರಮೇಣ ವಿದೇಶಗಳಲ್ಲಿ ಜನಪ್ರಿಯವಾಗುತ್ತಿವೆ. ದೇಶಗಳ ನಡುವಿನ ಗಡಿ ಜನರ ಪ್ರೇಮಕ್ಕೆ ಅಥವಾ ವಿವಾಹಕ್ಕೆ ಎಂದೂ ಕೂಡಾ ತಡೆಯಾಗಲು ಸಾಧ್ಯ ಇಲ್ಲ ಎನ್ನುವುದಕ್ಕೆ ಈ ವಿವಾಹ ಸಾಕ್ಷಿಯಾಗಿದೆ.