ಒಮ್ಮೆ ಮಗ ಆಕಾಶನಿಗೆ ಚೆನ್ನಾಗಿ ಬೈದು ವಾಚ್ ಮ್ಯಾನ್ ಬಳಿ ಕ್ಷಮೆ ಕೇಳುವಂತೆ ಮಾಡಿದ್ದರು ಮುಕೇಶ್ ಅಂಬಾನಿ! ಯಾಕೆಂದು ಕೇಳಿದರೆ…

ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಗಾದೆ ಮಾತನ್ನು ನಾವು ಕೇಳಿಯೇ ಇದ್ದೇವೆ‌. ಅಂದರೆ ವ್ಯಕ್ತಿತ್ವ ಉನ್ನತವಾಗಿರುವವರು, ಸಂಸ್ಕಾರಗಳನ್ನು ಬಲ್ಲವರು ಹಾಗೂ ಶ್ರಮದ ಮೌಲ್ಯ ಹಾಗೂ ಸಾರ್ಥಕತೆಯನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ಕೂಡಾ, ಅಪರಿಮಿತ ಎನ್ನುವಷ್ಟು ಸಂಪತ್ತನ್ನು ತಮ್ಮದಾಗಿಸಿಕೊಂಡರೂ ಕೂಡಾ ಅವರಲ್ಲಿ ಗರ್ವ ಅಥವಾ ಅಹಂ ಎನ್ನುವುದು ಮೂಡುವುದಿಲ್ಲ ಬದಲಿಗೆ ಅವರ ತೂಕದ ವ್ಯಕ್ತಿತ್ವ ಹಾಗೂ ಗಾಂಭೀರ್ಯದ ಜೊತೆಗೆ ಮಿಳಿತವಾದ ಸರಳತೆಯು ಸದಾ ಅವರನ್ನು ಇನ್ನಷ್ಟು ಎತ್ತರಕ್ಕೆ ಏರಿಸುತ್ತದೆ.

ಮುಖೇಶ್ ಅಂಬಾನಿ ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಶ್ರೀಮಂತರು ಎನ್ನುವ ಹೆಗ್ಗಳಿಕೆ ಇವರದ್ದು. ಅದು ಮಾತ್ರವೇ ಅಲ್ಲದೇ ಜಗತ್ತಿನ ಟಾಪ್ 5 ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಸ್ಥಾನವನ್ನು ಪಡೆದುಕೊಂಡಿದ್ದಾರೆ ಮತ್ತು ಅವರ ಶ್ರೀಮಂತವಾದ ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಬೆಲೆ ಬಾಳುವ ಮನೆಯ ಬಗ್ಗೆ ಕೂಡಾ ಅನೇಕ ಬಾರಿ ಸುದ್ದಿಗಳು ಬಂದಿವೆ. ಅಪಾರವಾದ ಆಸ್ತಿಯ, ಸಂಪತ್ತಿನ ಒಡೆಯರಾದ ಮುಖೇಶ್ ಅಂಬಾನಿಯವರು ಅಷ್ಟೇನು ದುಬಾರಿ ಎನಿಸದ ವಸ್ತ್ರಗಳನ್ನು ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಕಂಡರೂ ಕೂಡಾ, ಅವರ ಕುಟುಂಬದ ಐಶಾರಾಮೀ ಜೀವನದ ಬಗ್ಗೆ ಆಗಾಗ ಸುದ್ದಿಗಳು ಬರುತ್ತಲೇ ಇರುತ್ತವೆ ಹಾಗೂ ಅವು ಎಲ್ಲರ ಗಮನವನ್ನು ಸೆಳೆಯುತ್ತವೆ ಕೂಡಾ.

ಇಂತಹ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಅವರ ಮಗ ಆಕಾಶ್ ಅಂಬಾನಿ ಒಂದು ಸಂದರ್ಭದಲ್ಲಿ ಸೆಕ್ಯುರಿಟಿ ಅವರನ್ನು ಕ್ಷಮಾಪಣೆ ಕೇಳುವ ಪರಿಸ್ಥಿತಿ ಎದುರಾಗಿತ್ತು‌. ಏನೀ ಘಟನೆ ಎಂದು ನಾವು ತಿಳಿಯೋಣ ಬನ್ನಿ. ಕೆಲವು ವರ್ಷಗಳ ಹಿಂದೆ ಮುಖೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ಸಿಂಗರ್ ಸಿಮಿ ಗರೇವಾಲ್ ಅವರ ಒಂದು ಶೋ ಗೆ ಹೋದಂತಹ ಸಂದರ್ಭದಲ್ಲಿ ಮುಖೇಶ್ ಅಂಬಾನಿ ತಮ್ಮ ಮಗ ಆಕಾಶ್ ವಾಚ್ ಮ್ಯಾನ್ ಬಳಿ ಕ್ಷಮಾಪಣೆ ಯನ್ನು ಕೋರಿದ ಘಟನೆಯ ಬಗ್ಗೆ ಎಲ್ಲರಿಗೂ ತಿಳಿಸುತ್ತಾ ಆ ವಿಚಾರವನ್ನು ಹಂಚಿಕೊಂಡಿದ್ದರು.

ಒಮ್ಮೆ ಆಕಾಶ್ ಅಂಬಾನಿ ತಮ್ಮ ಮನೆಯ ವಾಚ್ ಮ್ಯಾನ್ ಬಳಿ ಗಟ್ಟಿಯಾಗಿ ಮಾತನಾಡುತ್ತಾ, ಆತನನ್ನು ಬೈಯ್ಯುವುದನ್ನು ಮುಖೇಶ್ ಅಂಬಾನಿಯವರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಗಮನಿಸಿದ್ದರಂತೆ. ಮಗ ಮನೆಯೊಳಗೆ ಬರುವ ತನಕ ಸುಮ್ಮನೆ ಇದ್ದ ಅವರು ಮಗ ಒಳಗೆ ಬಂದ ಮೇಲೆ ಆತನ ಪ್ರವರ್ತನೆಯನ್ನು ಟೀಕೆ ಮಾಡಿ ಬೈದು, ಆ ಕ್ಷಣವೇ ಹೊರಗೆ ಹೋಗಿ ವಾಚ್ ಮ್ಯಾನ್ ಬಳಿ ಕ್ಷಮೆ ಕೋರುವಂತೆ ಹೇಳಿದರಂತೆ. ಆಗ ಆಕಾಶ್ ತಮ್ಮ ತಂದೆ ಹೇಳಿದಂತೆ ಮನೆಯಿಂದ ಹೊರಗೆ ಬಂದು ವಾಚ್ ಮ್ಯಾನ್ ಬಳಿಗೆ ಹೋಗಿ ತಾನು ಮಾಡಿದ ತಪ್ಪಿಗೆ ಕ್ಷಮಾಪಣೆ ಯನ್ನು ಕೇಳಿ ಬಂದರಂತೆ.‌

ಮುಖೇಶ್ ಅಂಬಾನಿ ಈ ವಿಚಾರ ಹೇಳಿದಾಗ, ನೀತಾ ಅಂಬಾನಿ ಅವರು ತಮ್ಮ ಪತಿ ಮುಖೇಶ್ ಅವರು ಸದಾ ಸಾಮಾನ್ಯವಾಗಿ ಇರಲು, ನೆಲದೊಂದಿಗೆ ತಮ್ಮ ನಂಟನ್ನು ಹೊಂದಿರುವ ವ್ಯಕ್ತಿಯಾಗಿದ್ದು, ಅವರು ತಮ್ಮ ಮಕ್ಕಳು ಕೂಡಾ ಹಾಗೇ ಸಾಮಾನ್ಯರಂತೆ ಇರಲು, ಡೌನ್ ಟು ಅರ್ಥ್ ಆಗಿರಬೇಕು ಎಂದು ಬಯಸುತ್ತಾರೆ, ತಮ್ಮ ಮಕ್ಕಳಲ್ಲಿ ಹಣ, ಆಸ್ತಿ ಹಾಗೂ ಐಶ್ವರ್ಯ ಗಳ ಗರ್ವ ಅಥವಾ ಅಹಂಕಾರ ಮೂಡಬಾರದು ಎಂದು ಬಯಸುತ್ತಾರೆ ಹಾಗೂ ಅವರು ಮಕ್ಕಳಿಗೆ ಅಂತಹ ಸಂಸ್ಕಾರವನ್ನು ನೀಡಲು ಬಯಸುತ್ತಾರೆ ಅದಕ್ಕೆ ಅವರು ಸದಾ ಪ್ರಯತ್ನವನ್ನು ಮಾಡುತ್ತಾರೆ ಎಂದು ಕೂಡಾ ಹೇಳಿದ್ದಾರೆ.