‘ನಾನು ನಿನ್ನನ್ನು ಒಂಟಿಯಾಗಿ ಹೋಗಲು ಬಿಡುವುದಿಲ್ಲ’ ಎಂದು ಹೇಳಿ, ಗಂಡ ಕೂಡ ಹೆಂಡತಿಯ ವಿರಹದಲ್ಲಿ ಜಗತ್ತನ್ನು ತೊರೆದ!

ನ್ಯೂಯಾರ್ಕ್ ನ ಒಂದು ಜನಪ್ರಿಯ ಫೇಸ್ ಬುಕ್ ಪೇಜ್ “ಹ್ಯೂಮನ್ಸ್ ಆಫ್ ನ್ಯೂಯಾರ್ಕ್” ನಲ್ಲಿ ಒಬ್ಬ ಮಗಳು ತನ್ನ ತಂದೆ-ತಾಯಿಯ ಪ್ರೇಮ ಕಥೆಯನ್ನು ಹಂಚಿಕೊಂಡಿದ್ದಾರೆ. ಮಗಳು ವಿವರಿಸಿರುವ ಈ ಪ್ರೇಮಗಾಥೆಯನ್ನು ಕೇಳಿ ನಾವು ಹೇಳಬಹುದಾದ ಮಾತು ಒಂದೇ, “ಪವಿತ್ರ ಪ್ರೇಮದಿಂದ ಬೆಸೆದ ಎರಡು ಹೃದಯಗಳನ್ನು ಯಾರೂ ಎಂದಿಗೂ ಕೂಡಾ ಬೇರೆ ಮಾಡಲು ಸಾಧ್ಯವಿಲ್ಲ” ಎಂದು. ಹೌದು ಈ ಕಥೆಯು ಎರಡು ಹೃದಯಗಳಿಗೆ ಸಂಬಂಧಿಸಿದ್ದು, ಎರಡು ಜೀವಗಳು ಒಂದಕ್ಕೊಂದು ಬೆಸೆದು, ಪ್ರೇಮ ಕಾಣಿಕೆಯನ್ನು ಒಂದಕ್ಕೊಂದು ನೀಡಿರುವ ಒಂದು ಅಪರೂಪದ ಪ್ರೇಮ ಕಾವ್ಯ ಎಂದು ಕೂಡಾ ಹೇಳಿದರೂ ತಪ್ಪಾಗಲಾರದು.

ಫೇಸ್ ಬುಕ್ ಪೇಜ್ ನಲ್ಲಿ ಬರೆಯಲಾಗಿರುವ ವಿವರಣೆಯಂತೆ, ನ್ಯೂಯಾರ್ಕ್ ನಲ್ಲಿ ನೆಲೆಸಿದ್ದ ಭಾರತೀಯ ದಂಪತಿಯ ನಡುವೆ ಅಪಾರವಾದ ಪ್ರೇಮ ಇತ್ತು. ಪತ್ನಿಗೆ ಬ್ರೈನ್ ಟ್ಯೂಮರ್ ಆಗಿ ಆಕೆ ಕೊನೆಯ ದಿನಗಳನ್ನು ಕಳೆಯುವಾಗ ಆಕೆಯ ಪತಿ ಹೇಳುತ್ತಿದ್ದರಂತೆ ನಿನ್ನನ್ನು ಒಬ್ಬಳೇ ಹೋಗಲು ನಾನು ಬಿಡುವುದಿಲ್ಲ, ನಾನೂ ಕೂಡಾ ನಿನ್ನೊಂದಿಗೆ ಬಂದು ಬಿಡುವೆ ಎಂದು. ಅನಂತರ ನಡೆದಿದ್ದು ಕೂಡಾ ಇದಕ್ಕೆ ಭಿನ್ನವಾಗಿಯೇನೂ ಇರಲಿಲ್ಲ. ಏಕೆಂದರೆ ಪತ್ನಿ ಮರಣ ಹೊಂದಿದ ಕೆಲವೇ ದಿನಗಳ ನಂತರ, ಆಕೆಯ ಅಗಲಿಕೆಯ ನೋವಿನಿಂದ ಸಾಕಷ್ಟು ನೊಂದ ಪತಿ ಕೂಡಾ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ.

ಅವರ ಮಗಳು ಬರೆದ ವಿಚಾರ ಹೀಗಿದೆ, ನಮ್ಮ ತಂದೆ ತುಂಬಾ ಒಳ್ಳೆಯ ವ್ಯಕ್ತಿ, ನಮ್ಮ ತಾಯಿ ತನ್ನ ಜೀವನವನ್ನೇ ತಂದೆಗಾಗಿ ಮೀಸಲಿಟ್ಟಿದ್ದರು. ಅಮ್ಮ ಅಪ್ಪನಿಗೆ ಇಷ್ಟ ಆಗುವ ಹಾಗೆ ಅಲಂಕಾರ ಮಾಡಿಕೊಳ್ಳುತ್ತಿದ್ದರು. ಅಪ್ಪ ಆಫೀಸಿನಿಂದ ಮನೆಗೆ ಬಂದ ಕೂಡಲೇ ಐದು ಜನ ಮಕ್ಕಳನ್ನು ಕರೆದು ಮಾತನಾಡಿಸುತ್ತಿದ್ದರು. ಆದರೆ ಅವರು ಮಕ್ಕಳಿಗಿಂತ ಮೊದಲು ಕರೆದು ಆಪ್ಯಾಯತೆ ತೋರುತ್ತಿದ್ದುದು ಮಾತ್ರ ಅಮ್ಮನಿಗೆ. ಏಕೆಂದರೆ ಆಕೆ ಅವರ ಮೊದಲ ಆದ್ಯತೆ ಆಗಿದ್ದರು‌. ಕುಟುಂಬ ಸಮೇತರಾಗಿ ಹೊರಗೆ ಪ್ರವಾಸ ಹೊರಟಾಗ ಅಪ್ಪ ದಾರಿಯುದ್ದಕ್ಕೂ ಅಮ್ಮನಿಗಾಗಿ ಸಿನಿಮಾ ಹಾಡುಗಳನ್ನು ಹಾಡುತ್ತಿದ್ದರು.

ಅಪ್ಪ ಅಮ್ಮನನ್ನು ಪ್ರತಿ ಕ್ಷಣವೂ ಕೂಡಾ ಸಂತೋಷವಾಗಿರಿಸಲು ಪರಿತಪಿಸುತ್ತಾ ಇದ್ದರು. ಅಮ್ಮನಿಗೆ ಬ್ರೈನ್ ಟ್ಯೂಮರ್ ಆದ ಮೇಲೆ ಅವರು ಯಾವಾಗಲೂ ಅಮ್ಮನ ಜೊತೆ ಆಕೆಯ ಕೈ ಹಿಡಿದು ಕೂತಿರುತ್ತಿದ್ದರು. ಆಪರೇಷನ್ ಗಳ ನಂತರ ಅಮ್ಮನ ಪರಿಸ್ಥಿತಿ ಬಿಗಡಾಗಿಸತೊಡಗಿತು. ಆಗಲೂ ಅಪ್ಪ ಅಮ್ಮನ ಜೊತೆಗೇ ಇರುತ್ತಿದ್ದರು. ಅಮ್ಮನಿಗಾಗಿ ಆಕೆಯ ಪಕ್ಕದಲ್ಲಿ ಕುಳಿತು ಧಾರ್ಮಿಕ ಪುಸ್ತಕಗಳನ್ನು ಓದುತ್ತಿದ್ದರು. ಅಮ್ಮ ನಿಧನರಾದ ನಂತರ ಎರಡು ದಿನಗಳ ಕಾಲ ಅಪ್ಪ ಯಾರೊಂದಿಗೂ ಮಾತನಾಡದೇ ಮೌನವಾಗಿ ಉಳಿದಿದ್ದರು. ಮೂರನೇ ದಿನ ಅವರ ಆರೋಗ್ಯ ಇದ್ದಕ್ಕಿದ್ದಂತೆ ಕೆಟ್ಟಿತು.

ಕೂಡಲೇ ಆ್ಯಂಬುಲೆನ್ಸ್ ಕರೆಸಲಾಯಿತು. ಆದರೆ ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರ ಉಸಿರು ನಿಂತಿತ್ತು. ಅಪ್ಪ ಅಮ್ಮ ಇಬ್ಬರೂ ಒಬ್ಬರಿಗಾಗಿ ಒಬ್ಬರು ಬದುಕಿದ್ದರು, ಕೊನೆಗೆ ಅವರಿಬ್ಬರೂ ಜೊತೆಯಾಗಿಯೇ ಹೊರಟು ಹೋದರು ಎಂದು ಮಗಳು ತನ್ನ ತಂದೆ ತಾಯಿ ಅನುಪಮವಾದ ಪ್ರೇಮ ಕಥೆಯನ್ನು ಬರೆದಿದ್ದಾರೆ. ಇದನ್ನು ಓದಿದ ಅನೇಕರು ಭಾವುಕರಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದು, ಈ ಕಥೆಯನ್ನು ಶೇರ್ ಮಾಡಿದ್ದಾರೆ. ಪ್ರೇಮ ಎಂಬುದು ಈಗಲೂ ನಿಷ್ಕಲ್ಮಶ ಹಾಗೂ ಅದರ ಔನತ್ಯ ತಿಳಿದ ಜೀವಗಳು ಇನ್ನೂ ಇವೆ ಎನ್ನುವುದಕ್ಕೆ ಈ ದಂಪತಿ ಸಾಕ್ಷಿಯಾಗಿದ್ದಾರೆ.