ರಾಯರ ಚಮತ್ಕಾರ! ಕಳ್ಳತನ ಮಾಡಿದ ಆಭರಣಗಳನ್ನು ಕಳ್ಳ ಸ್ವತಃ ತಾನಾಗಿಯೇ ತಂದು ಕೊಟ್ಟ ಕಥೆ!
ನನ್ನ ಜೀವನದಲ್ಲಿ ಕಂಡ ಒಂದು ರಾಯರ ಚಮತ್ಕಾರದ ಘಟನೆಯನ್ನು ಹೇಳುತ್ತೇನೆ. ನಾನು ಚಿಕ್ಕಂದಿನಿಂದಲೂ ರಾಯರನ್ನು ಆರಾಧಿಸುತ್ತ ಬಂದಿರುವೆ. ನನ್ನ ತಾಯಿಯು ಸುಮಾರು ವರ್ಷಗಳಿಂದ ಕೂಡಿಕೊಂಡು ಬಂದಿರುವ ತನ್ನ ಗೆಳತಿಗೆ ಒಮ್ಮೆ ಯಾವುದೋ ಒಂದು ಸಮಾರಂಭಕ್ಕಾಗಿ ತನ್ನ ಕೊರಳ ಹಾರವನ್ನು, ಗೆಳತಿಯು ಕೇಳಿದಾಗ ಯಾವುದೇ ವಿಚಾರ ಮಾಡದೆ ಕೊಟ್ಟುಬಿಟ್ಟಳು. ಆಕೆ ತೆಗೆದುಕೊಂಡು ಹೋಗುವಾಗ ನಾಳೆ ಈ ಆಭರಣವನ್ನು ವಾಪಸ್ ತಂದು ಕೊಡುತ್ತೇನೆ ಎಂದು ಹೇಳಿದಳು. ಬಹಳ ದಿನಗಳಿಂದ ಇರುವ ಮೈತ್ರಿಯಿಂದಾಗಿ ಅಮ್ಮ ಯಾವುದೇ ಆತಂಕವಿಲ್ಲದೆ ಆಭರಣವನ್ನು ಆಕೆಗೆ ಕೊಟ್ಟಿದ್ದಳು.
ಮುಂದೆ ಆಭರಣ ಕೊಟ್ಟು ನಾಲ್ಕೈದು ದಿವಸಗಳಾದರೂ ಗೆಳತಿ ತೆಗೆದುಕೊಂಡ ಆಭರಣವನ್ನು ತಂದು ಅಮ್ಮನಿಗೆ ವಾಪಸ್ ಕೊಡಲೇ ಇಲ್ಲ. ಇದರಿಂದ ಅಮ್ಮ ಆತಂಕಗೊಂಡು ಗೆಳತಿಗೆ ಕೇಳಿದಾಗ, ಆ ಗೆಳತಿ ನೀವು ಕೊಟ್ಟ ನೆಕ್ಲೇಸ್ ಕಳೆದು ಹೋಗಿದೆ, ಮತ್ತು ಅದರ ಹಣವನ್ನು ನಿಮಗೆ ಕೊಡಲು ನನ್ನಿಂದ ಸಾಧ್ಯವಿಲ್ಲ ಎಂಬ ಮಾತನ್ನು ಹೇಳಿದಳು.
ಈ ರೀತಿಯಾಗಿ ಅಸಭ್ಯವಾಗಿ ವರ್ತಿಸಿದ ಮಹಿಳೆಯ ಜೊತೆಗೆ ನನ್ನ ತಾಯಿಗೆ ಏನು ಮಾತನಾಡಬೇಕು ಎಂಬುದೇ ತಿಳಿಯಲಿಲ್ಲ. ನನ್ನ ತಾಯಿ ನನಗೆ ಕಾಲ್ ಮಾಡಿ ನಡೆದ ಘಟನೆಯನ್ನು ವಿವರಿಸಿದಳು. ಕೊರಳ ಹಾರಿನ ಬೆಲೆ ಸುಮಾರು ನಾಲ್ಕು ಲಕ್ಷ ರೂಪಾಯಿಗಳವರೆಗೆ ಇತ್ತು.
ನಾನು ನನ್ನ ತಾಯಿಗೆ ಸಮಾಧಾನವನ್ನು ಹೇಳುತ್ತಾ ರಾಯರ ಮೇಲೆ ಭಾರ ಹಾಕಿ ಪರಿಸ್ಥಿತಿಯ ಬಗ್ಗೆ ಅರಿವು ಮಾಡಿಕೊಂಡು ದೇವ ಮಂದಿರದಲ್ಲಿ ಹೋಗಿ ರಾಯರ ಮುಂದೆ ಕುಳಿತುಕೊಂಡು ರಾಯರಿಗೆ ವಿನಮ್ರವಾಗಿ ಪ್ರಾರ್ಥಿಸಿಕೊಂಡೆ. ಗುರುರಾಯರಿಗೆ ನಮಿಸುತ್ತಾ, ಸ್ವಾಮಿ ನನ್ನ ತಾಯಿಯು ಆಕೆಗೆ ಸಹಾಯ ಮಾಡಿದಳು ಆದರೆ ಆಕೆ ಮಾತ್ರ ನನ್ನ ತಾಯಿಗೆ ಮೋಸ ಮಾಡುತ್ತಿದ್ದಾಳೆ. ಜೊತೆಗೆ ನೆಕ್ಲೆಸ್ ನ್ನು ತನ್ನ ಹತ್ತಿರ ಇಟ್ಟುಕೊಂಡು ತಾಯಿಗೆ ಸುಳ್ಳನ್ನು ಹೇಳುತ್ತಿದ್ದಾಳೆ ಎಂಬ ವಿಶ್ವಾಸ ನನಗಿದೆ. ದಯವಿಟ್ಟು ನನ್ನ ತಾಯಿಯ ಕೊರಳ ಹಾರವನ್ನು ಆಕೆಯಿಂದ ಮರಳಿ ದೊರೆಯುವಂತೆ ಏನಾದರೂ ಸಹಾಯ ಮಾಡು ಎಂದು ಕೈಮುಗಿದು ಬೇಡಿಕೊಂಡೆ.
ಮಿತ್ರರೇ, ನಿಮಗೆ ಈ ವಿಷಯ ನಿಜವೆನಿಸದಿರಬಹುದು, ಆದರೆ ನಿಜಕ್ಕೂ ಅದೇ ದಿನ ಸಾಯಂಕಾಲ ಗುರುವಿನ ಚಮತ್ಕಾರವಾಯಿತೆಂದೇ ಹೇಳಬೇಕು. ನನ್ನ ತಾಯಿಯ ಗೆಳತಿಯು ಆ ದಿವಸ ಸಾಯಂಕಾಲ ಕೊರಳ ಹಾರವನ್ನು ತೆಗೆದುಕೊಂಡು ಮನೆಗೆ ಬಂದು ತಾಯಿಗೆ ಕೊಟ್ಟು ನನ್ನಿಂದ ದೊಡ್ಡ ತಪ್ಪಾಯ್ತು ನಾನು ನಿಮ್ಮ ಜೊತೆಗೆ ಈ ರೀತಿಯಾಗಿ ನಡೆದುಕೊಳ್ಳಬಾರದಾಗಿತ್ತು, ಆದ್ದರಿಂದ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ನಮ್ರತೆಯಿಂದ ಪ್ರಾರ್ಥಿಸಿದಳು.
ದೇವರಿಗೆ ಒಮ್ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ದೇವರು ನಿಶ್ಚಿತವಾಗಿ ಒಲಿದೆ ಒಲಿಯುತ್ತಾನೆ. ನಾನು ಮೊದಲಿನಿಂದಲೂ ರಾಯರ ಮೇಲಿಟ್ಟಿದ್ದ ಶ್ರದ್ಧೆ ಎಂದಿಗೂ ಹುಸಿ ಹೋಗಿಲ್ಲ. ದೇವರ ಮೇಲೆ ಶ್ರದ್ಧೆ ಇರಬೇಕು ಆದರೆ ಅಂಧಶ್ರದ್ಧೆ ಮಾತ್ರ ಇರಬಾರದು ಎಂಬುದು ನನ್ನ ಅನಿಸಿಕೆ. ಏಕೆಂದರೆ, ದೇವರು ಸ್ವತಃ ಪ್ರತ್ಯಕ್ಷವಾಗಿ ಭಕ್ತನಿಗೆ ಸ್ಪಂದಿಸಬೇಕೆಂದೇನು ಇಲ್ಲ. ಆತ ಭಕ್ತನಿಗೆ ಅಥವಾ ಭಕ್ತನ ಕಷ್ಟಗಳನ್ನು ನಿವಾರಣೆ ಮಾಡಬೇಕಾದರೆ ಯಾವುದೇ ರೀತಿಯಲ್ಲಿಯೂ ಸಹಾಯ ಮಾಡಬಹುದು. ಆದರೆ ಯಾವುದಕ್ಕೂ ಆತನ ಮೇಲೆ ಶ್ರದ್ಧೆ ಮಾತ್ರ ಇರಬೇಕು, ಅಲ್ವಾ?
—– ರಮಣಿ