ವಿಶ್ವದ ರಹಸ್ಯಮಯ ಮರುಭೂಮಿಯಲ್ಲಿ 2200 ವರ್ಷ ಪುರಾತನ 121 ಅಡಿ ಎತ್ತರದ ‘ಬೆಕ್ಕು’ ಪತ್ತೆ! ಅಚ್ಚರಿ ಪಡಿಸುವ ‘ರಹಸ್ಯ’ ಬಿಚ್ಚಿಟ್ಟ ಶಾಸ್ತ್ರಜ್ಞರು!

ಪೆರು ದೇಶದ ರಹಸ್ಯಮಯ ಮರುಭೂಮಿಯಲ್ಲಿ ಈ ಭೂಮಿಯ ಮೇಲಿನ ಒಂದು ವಿಸ್ಮಯವು ಪತ್ತೆಯಾಗಿದೆ. ಪುರಾತತ್ವ ವಿಭಾಗದ ಶಾಸ್ತ್ರಜ್ಞರು ಸುಮಾರು 2200 ವರ್ಷಗಳಷ್ಟು ಪುರಾತನವಾದ ಒಂದು ವಿಶಾಲವಾದ ಬೆಕ್ಕಿನ ರೇಖಾ ಚಿತ್ರವನ್ನು ಪತ್ತೆ ಹಚ್ಚಿದ್ದಾರೆ. ಇದನ್ನು ಪತ್ತೆ ಹಚ್ಚಿರುವ ಪುರಾತತ್ವ ಶಾಸ್ತ್ರಜ್ಞರು ಪೆರುವಿನ ನಜ್ಕಾ ಮರುಭೂಮಿಯಲ್ಲಿ ಇರುವ ಒಂದು ಬೆಟ್ಟದ ಮೇಲೆ 121 ಅಡಿ ಎತ್ತರದ ಬೆಕ್ಕಿನ ರೇಖಾಚಿತ್ರವನ್ನು ಕೆತ್ತಲಾಗಿದ್ದು, ನಾಜ್ಕಾ ಲೈನ್ಸ್ ಅನ್ನು ಶತಮಾನಗಳ ಕಾಲದಿಂದ ಸಂರಕ್ಷಣೆ ಮಾಡಿಕೊಂಡು ಬರಲಾಗುತ್ತಿದ್ದು, ಇದು ನಾಜ್ಕಾ ಸಂಸ್ಕೃತಿ ಹಾಗೂ ಪರಂಪರೆಯ ಒಂದು ಭಾಗವೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗೆ ಈ ಪ್ರದೇಶದಲ್ಲಿ ಅನೇಕ ವಿಶಾಲ ಆಕೃತಿಗಳನ್ನು ಪತ್ತೆ ಹಚ್ಚಲಾಗಿದ್ದು, ಅದೇ ಹಾದಿಯಲ್ಲಿ ಈಗ 2200 ವರ್ಷಗಳಷ್ಟು ಪುರಾತನವಾದ ಈ ವಿಶಾಲ ಬೆಕ್ಕಿನ ರೇಖಾ ಚಿತ್ರವನ್ನು ಪತ್ತೆ ಹಚ್ಚಲಾಗಿದೆ.

ಈ ಬೆಕ್ಕಿನ ವಿಶಾಲ ಆಕೃತಿಯನ್ನು ಅರ್ಜೆಂಟೈನಾ ದಿಂದ ಅಲಾಸ್ಕಾಗೆ ಹೋಗುವ ಹೈವೇ ಮಾರ್ಗದಲ್ಲಿ ಇರುವ ಒಂದು ಬೆಟ್ಟದ ಮೇಲೆ ಕೊರೆಯಲಾಗಿದೆ. ದಕ್ಷಿಣ ಪೆರುವಿನಲ್ಲಿ ಇರುವ ಈ ನಾಜ್ಕಾ ಲೈನ್ಸ್ ಭೂಮಿಯ ಮೇಲೆ ಮಾಡಲಾಗಿರುವ ವಿಶಾಲ ರೇಖಾ ಚಿತ್ರ ಸಮೂಹಗಳ ಸಾಲಿಗೆ ಸೇರಿದೆ. (ಜಿಯೋಗ್ಲಿಫ್) ನಾಜ್ಕಾ ಲೈನ್ಸ್ ನಲ್ಲಿ ಈಗಾಗಲೇ ಪಶುಗಳ ಹಾಗೂ ಗ್ರಹಗಳ ಆಕೃತಿಗಳ ಸುಮಾರು 300 ಕ್ಕೂ ಅಧಿಕ ರೇಖಾ ಚಿತ್ರಗಳು ದೊರೆತಿವೆ ಎನ್ನಲಾಗಿದೆ. ಪುರಾತತ್ವ ಶಾಸ್ತ್ರಜ್ಞ ಜಾನಿ ಇಲ್ಸಾ ಮಾತನಾಡುತ್ತಾ ಈ ಸ್ಥಳದಲ್ಲಿ ಪ್ರವಾಸಿಗರ ಸಹಾಯಕ್ಕಾಗಿ ಬೆಟ್ಟದ ಮೇಲೆ ಮಾಡಲಾಗಿದ್ದ ಗುರುತುಗಳನ್ನು ಅಳಿಸಿ, ಸ್ವಚ್ಚತಾ ಕಾರ್ಯ ಮಾಡುವಾಗ ಆಶ್ಚರ್ಯಕರ ಎಂಬಂತೆ ಈ ವಿಶಾಲ ಕಾಯದ ಬೆಕ್ಕಿನ ರೇಖಾ ಚಿತ್ರ ಪತ್ತೆಯಾಗಿದೆ ಎಂದಿದ್ದಾರೆ.

ಇಲ್ಲಿ ಸ್ವಚ್ಚತಾ ಕಾರ್ಯ ಮಾಡಲು ಮುಖ್ಯ ಕಾರಣ ಪ್ರವಾಸಿಗರು ಕೂಡಾ ಈ ರಹಸ್ಯಮಯ ನಾಜ್ಕಾ ಲೈನ್ಸ್ ಗಳನ್ನು ಸ್ಪಷ್ಟವಾಗಿ ಹಾಗೂ ಸುಲಭವಾಗಿ ನೋಡಲಿ ಎನ್ನುವ ಕಾರಣವಾಗಿತ್ತು. ನಿಜಕ್ಕೂ ಸಾವಿರಾರು ವರ್ಷಗಳ ಹಿಂದಿನ ಜನರು ಯಾವುದೇ ತಂತ್ರಜ್ಞಾನದ ಸಹಾಯವಿಲ್ಲದೇ ಇಂತಹ ರೇಖಾಚಿತ್ರಗಳನ್ನು ರಚಿಸಿ ಸಂರಕ್ಷಣೆ ಮಾಡಿದ್ದರು ಎನ್ನುವುದು ಒಂದು ಅದ್ಭುತವಲ್ಲದೇ ಮತ್ತೇನು ಎನ್ನುತ್ತಾರೆ ಜಾನಿ ಇಲ್ಸಾ. ರೇಖಾ ಚಿತ್ರದ ಹಾದಿಯನ್ನು ತೆರವುಗೊಳಿಸುವಾಗ ಇವು ಪ್ರಕೃತಿ ಸಹಜವಲ್ಲ ಎನಿಸಿ ನಾವು ಪತ್ತೆ ಹಚ್ಚುವ ಕಾರ್ಯ ಮುಂದುವರೆಸಿದ ಹಾಗೆ ಹೊಸ ಹೊಸ ರೇಖಾಚಿತ್ರಗಳು ಸಿಗುತ್ತಲೇ ಇವೆ‌. ಅಲ್ಲದೇ ಡ್ರೋಣ್ ಗಳ ಸಹಾಯದಿಂದ ಬೆಟ್ಟಗಳ ಎಲ್ಲಾ ಭಾಗಗಳ ಚಿತ್ರಗಳನ್ನು ತೆಗೆದುಕೊಂಡಿದ್ದೇವೆ, ಬಹುಶಃ ಇನ್ನೂ ಹೆಚ್ಚು ರೇಖಾಚಿತ್ರಗಳು ದೊರೆಯಬಹುದು ಎನ್ನುತ್ತಾರೆ ಇಲ್ಸಾ.

ಪೆರುವಿನ ಸಂಸ್ಕೃತಿ ಸಚಿವಾಲಯವು ಬೆಕ್ಕಿನ ರೇಖಾಚಿತ್ರ ಪತ್ತೆಯಾದಾಗ ಬಹುಶಃ ಅದನ್ನು ನೋಡುವುದು ಕಷ್ಟ ಆಗಬಹುದು ಎಂದು ಹೇಳಿತ್ತಂತೆ. ಏಕೆಂದರೆ ಈ ಬೆಕ್ಕಿನ ರೇಖಾಚಿತ್ರ ಬೆಟ್ಟದ ಕಡಿದಾದ ಇಳಿಜಾರಿನಲ್ಲಿ ಮೂಡಿಸಲಾಗಿದ್ದು, ರೇಖೆಗಳು ಕೂಡಾ ಸವೆಯುತ್ತಾ ಬಂದಿದ್ದವು ಎನ್ನಲಾಗಿದೆ. ಸಚಿವಾಲಯದ ಹಲವು ವಾರಗಳ ಶ್ರಮದಿಂದ ಈಗ ಬೆಕ್ಕಿನ ಆಕೃತಿಯು ಸ್ಪಷ್ಟವಾಗಿ ಕಂಡಿದ್ದು, 121 ಅಡಿ ಎತ್ತರವಾಗಿದೆ ಈ ಆಕೃತಿ. ಇದು ಕ್ರಿಪೂ 200 ರಲ್ಲಿ ಬಿಡಿಸಲಾದ ರೇಖಾಚಿತ್ರ ಎಂದಿದೆ ಇಲ್ಲಿನ ಸಂಸ್ಕೃತಿ ಸಚಿವಾಲಯ. ಕಳೆದ ವರ್ಷ ನವೆಂಬರ್ ನಲ್ಲಿ ಇಲ್ಲಿ ಸುಮಾರು 140 ನಜ್ಕಾ ಲೈನ್ಸ್ ಗಳು ದೊರೆತಿದ್ದವು ಎನ್ನಲಾಗಿದೆ.

ಜಪಾನ್ ಕೂಡಾ ಇಲ್ಲಿ ಹದಿನೈದು ವರ್ಷಗಳ ಕಾಲ ಸಂಶೋಧನೆ ನಡೆಸಿತ್ತು ಎನ್ನಲಾಗಿದೆ. ಬೆಕ್ಕಿನ ರೇಖಾ ಚಿತ್ರದ ಜೊತೆಗೆ ಪ್ರಮುಖವಾಗಿ ಒಂದು ಹಕ್ಕಿ, ಮನುಷ್ಯನ ಮುಖ ಹೊಂದಿರುವ ಪ್ರಾಣಿ, ಎರಡು ಮುಖಗಳ ಹಾವು, ಕಿಲ್ಲರ್ ವೇಲ್ ಗಳ ರೇಖಾ ಚಿತ್ರಗಳು ಕೂಡಾ ಸೇರಿವೆ‌. ಪೆರುವಿನ ಈ ನಾಜ್ಕಾ ಲೈನ್ಸ್ ವಿಶ್ವಸಂಸ್ಥೆಯ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿನ ಜನರ ಪ್ರಕಾರ ಪುರಾತನ ಕಾಲದಲ್ಲಿ ದೇವತೆಗಳಿಗೆ ಸಂದೇಶ ನೀಡಲು ಇಂತಹ ವಿಶಾಲ ಆಕಾರದ ಚಿತ್ರಗಳನ್ನು ಬಿಡಿಸಲಾಗುತ್ತಿತ್ತು, ದೇವರು ಅದನ್ನು ನೋಡುತ್ತಿದ್ದರು ಎಂಬ ನಂಬಿಕೆಯಿದೆ. ಏನೇ ಆದರೂ ಕೂಡಾ ಈ ನಾಜ್ಕಾ ಲೈನ್ಸ್ ನಿಜಕ್ಕೂ ಅದ್ಭುತವೇ ಹೌದು.