ಸೆಕೆಂಡ್ ಹ್ಯಾಂಡ್ ಗಾಡಿ ತೆಗೆದುಕೊಳ್ಳುವ ವಿಚಾರ ಮಾಡುತ್ತಿದ್ದೀರಾ? ಹಾಗಾದರೆ ಮೋಸದಿಂದ ಪಾರಾಗಲು ‘ಈ’ ವಿಷಯಗಳು ನಿಮಗೆ ತಿಳಿದಿರಲಿ!
ಸದ್ಯ ಕಾರಿನ ಕ್ರೆಜ್ ಹೆಚ್ಚಾಗಿದೆ. ಹೀಗಾಗಿ ಕಾರು ಖರೀದಿಸುವ ಜನ ಹೆಚ್ಚಾಗುತ್ತಿದ್ದಾರೆ. ಇವರಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುವ ವಿಚಾರವನ್ನು ಹೊಂದಿರುವವರು ತುಂಬಾ ಜನ ಗ್ರಾಹಕರು ಇದ್ದಾರೆ. ಕೆಲವರು ಆರ್ಥಿಕವಾಗಿ ವಿಚಾರ ಮಾಡಿ ಸೆಕೆಂಡ್ ಹ್ಯಾಂಡ್ ಕಾರನ್ನು ನೋಡುವವರಿದ್ದರೆ ಇನ್ನು ಕೆಲವರು ಮೊದಲು ಸೆಕೆಂಡ್ ಹ್ಯಾಂಡ್ ಕಾರನ್ನು ನಡೆಸಿ ಡ್ರೈವಿಂಗ್ ಪರ್ಫೆಕ್ಟ್ ಆದಮೇಲೆ ಹೊಸದಾಗಿ ಗಾಡಿಯನ್ನು ತೆಗೆದುಕೊಳ್ಳಲು ವಿಚಾರ ಮಾಡುತ್ತಾರೆ.
ಅವರವರ ಪ್ರಕಾರ ಇದು ಸರಿಯೂ ಹೌದು. ಆದರೆ ಎಷ್ಟೋ ಸಲ ಹಳೆಯದನ್ನು ಖರೀದಿಸಿ ಹಾಳಾಗಿ ಹೋದರು ಎನ್ನುವ ಗಾದೆಯಂತೆ ಪಶ್ಚಾತಾಪ ವಾಗುವುದು ಸಹಜ.
ಕಾರು ಖರೀದಿಸುವದೇ ಓಡಾಡುವ ಉದ್ದೇಶದಿಂದ, ಅಂದಮೇಲೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ ಮೇಲೆ ತಿರುಗಾಡಿಸದೆ ನಿಂತಲ್ಲಿಯೇ ನಿಲ್ಲಿಸಿದರೆ ಲಾಭವೇನು ಬಂತು ಹೇಳಿ?
ಅದಕ್ಕಾಗಿ ಇಂಥ ಹಳೆಯ ಗಾಡಿಯನ್ನು ಖರೀದಿಸುವ ಮುನ್ನ ಕೆಲವೊಂದು ವಿಷಯಗಳ ಕಡೆಗೆ ಗಮನ ಹರಿಸುವುದು ತುಂಬಾ ಅತ್ಯಗತ್ಯ. ಎಲ್ಲ ಸೆಕೆಂಡ್ ಹ್ಯಾಂಡ್ ಕಾರುಗಳು ಸರಿಯಾಗಿ ಇರುವುದಿಲ್ಲ ಅಂತಲ್ಲ. ಆದರೆ ನಾವು ತೆಗೆದುಕೊಳ್ಳುವ ಕಾರು ನಮ್ಮ ದುರದೃಷ್ಟಕ್ಕೆ ಸರಿಯಾಗಿಲ್ಲದಿದ್ದರೆ ಮೋಸ ಹೋದಂತೆಯೇ ಸರಿ. ಹೆಚ್ಚುವರಿ ಹಣವನ್ನು ಕೊಟ್ಟು ಸಹ ಸರಿಯಾದ ವಾಹನ ಸಿಗದೇ ಹೋದಾಗ ಮನಸ್ಸಿಗೆ ತುಂಬಾ ದುಃಖವಾಗುತ್ತೆ.
ಅದಕ್ಕಾಗಿಯೇ ಈ ಲೇಖನದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಯಾವ ವಿಷಯಗಳ ಕಡೆಗೆ ಗಮನಹರಿಸಬೇಕು ಎಂಬುದರ ಬಗ್ಗೆ ವಿಸ್ತಾರವಾಗಿ ಹೇಳಲಿದ್ದೇವೆ ಒಮ್ಮೆ ಓದಿ.
ಎಲ್ಲಕ್ಕೂ ಮೊದಲು ನಾವು ಖರೀದಿಸುವ ವಾಹನ ಅಥವಾ ಕಾರು ಯಾವ ವರ್ಷದಲ್ಲಿ ಹೊರಗೆ ಬಿದ್ದಿದೆ, ಅಥವಾ ಎಷ್ಟು ವರ್ಷ ಹಳೆಯದಾಗಿದೆ ಎಂಬುದನ್ನು ಪರೀಕ್ಷಿಸುವುದು ತುಂಬಾ ಮುಖ್ಯ.
ಅದಾದ ನಂತರ ಎರಡನೇ ಗಮನಾರ್ಹ ವಿಷಯವೇನೆಂದರೆ, ಪ್ರಸ್ತುತ ಕಾರನ್ನು ಎಷ್ಟು ಜನ ಮಾಲೀಕರು ನಡೆಸಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು.
ಆನಂತರ ಕಾರಿನ ಕೀ ತೆಗೆದುಕೊಂಡು ಸ್ವತ: ಅಥವಾ ನಿಮ್ಮ ಗುರುತಿನ ಯಾರಾದರೂ ಎಕ್ಸ್ಪರ್ಟ್ ಇದ್ದರೆ ಅವರ ಕಡೆಯಿಂದ ಕಾರನ್ನು ಚಲಾಯಿಸಿ ನೋಡುವುದು. ಕಾರಿನ ಮಾಲೀಕರು ಒಂದು ವೇಳೆ ಕಾರನ್ನು ಟೆಸ್ಟ್ ಡ್ರೈವ್ ಮಾಡಲು ಕೊಟ್ಟರೆ ಯಾವುದೇ ಮುಚ್ಚುಮರೆಯಿಲ್ಲದೆ ಬಿಂದಾಸಾಗಿ ಕಾರು ಕೀ ತೆಗೆದುಕೊಂಡು ಚಲಾಯಿಸಿ ನೋಡಿ. ಕಾರು ನಡೆಸುತ್ತಿರುವಾಗ ಎಂಜಿನ್ ನಲ್ಲಿ ಯಾವುದೇ ರೀತಿಯ ಸೌಂಡ್ ಏನಾದರೂ ಬರುತ್ತಿದೆಯೇ ಎಂಬುದರ ಬಗ್ಗೆ ಸರಿಯಾಗಿ ಕೇಳಿಸಿಕೊಳ್ಳಿ. ಇದಾದ ನಂತರ ಕಾರನ್ನು 4 ಬದಿಗಳಿಂದ ಸರಿಯಾಗಿ ಕಣ್ಣು ಹಾಯಿಸಿ ನೋಡಿಕೊಳ್ಳಿ. ಇನ್ನು ಬರುತ್ತೆ ಬಣ್ಣದ ಸರದಿ. ಕಾರಿನ ಬಾಡಿ ಮತ್ತು ಬಾಗಿಲುಗಳ ಬಣ್ಣದಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ಕಾರಿಗೆ ಮರುಬಣ್ಣ ಮಾಡಲಾಗಿದೆ ಎಂಬುವುದನ್ನು ತಿಳಿದುಕೊಳ್ಳಿ.
ಗಾಡಿಯ ಬೋನೆಟ್ ಅನ್ನು ಓಪನ್ ಮಾಡಿ ಅಲ್ಲಿಯೂ ನೀವು ಸರಿಯಾಗಿ ನಿರೀಕ್ಷಣೆ ಮಾಡಿ ಕಾರಿನ ಬಗ್ಗೆ ತಿಳಿದುಕೊಳ್ಳಬಹುದು. ಬೋನೆಟ್ ಗೆ ವೆಲ್ಡಿಂಗ್ ಮಾಡಿದ ಗುರುತುಗಳು ಏನಾದರೂ ಇದ್ದರೆ ಕಾರಿಗೆ ಎದುರಿನಿಂದ ಯಾವುದೇ ಚಿಕ್ಕಪುಟ್ಟ ಆಕ್ಸಿಡೆಂಟ್ ಆಗಿದೆ ಎಂದು ತಿಳಿದುಬರುತ್ತದೆ. ಒಂದು ವೇಳೆ ಗಾಡಿಯ ಚೇಸಿಗೆ ಪೆಟ್ಟು ಬಿದ್ದಿದ್ದರೆ ಅಥವಾ ಚೇಸಿ ಬೆಂಡ್ ಆಗಿದ್ದು ಕಂಡು ಬಂದರೆ ಇಲ್ಲವೆ ಆ ಸ್ಥಳದಲ್ಲಿ ವೆಲ್ಡಿಂಗ್ ಮಾಡಿದ್ದು ಏನಾದರೂ ಕಂಡುಬಂದರೆ ದೊಡ್ಡ ಅಪಘಾತವಾಗಿದೆ ಎಂದು ತಿಳಿದುಕೊಳ್ಳಬೇಕು.
ಗಾಡಿಯ ರನ್ನಿಂಗ್ ಬೋರ್ಡ್ ಹೇಗಿದೆ ಎಂಬುದರ ಬಗ್ಗೆಯೂ ತಿಳಿದುಕೊಳ್ಳಿ. ಇದಾದ ನಂತರ ಟೈಯರ್ ಗಳ ಅವಸ್ಥೆಯ ಬಗ್ಗೆ ಅಥವಾ ಕಂಪನಿಯ ಬಗ್ಗೆ ಮತ್ತು ಕಂಡಿಶನ್ ಬಗ್ಗೆ ತಿಳಿದುಕೊಂಡು ಮುಂದೆ ಹೆಜ್ಜೆ ಇಡಿ.
ಗಾಡಿ ಇಲ್ಲಿಯವರೆಗೆ ಎಷ್ಟು ಕಿಲೋಮೀಟರ್ ಓಡಿದೆ ಎಂಬುದನ್ನು ತಿಳಿದುಕೊಳ್ಳಲು ಮೀಟರ್ ಚೆಕ್ ಮಾಡಿ. ನೀವು ಎಂಜಿನ್ನಿನ ಫ್ಯೂಲ್ ಗೇಜ್ ಸಹ ಚೆಕ್ ಮಾಡಬಹುದು. ಫ್ಯೂಲ್ ಗೇಜ್ ಚೆಕ್ ಮಾಡುವಾಗ ಎಂಜಿನ್ ನಿಂದ ತುಂಬಾ ಹೊಗೆ ಬರುತ್ತಿದ್ದರೆ ಮತ್ತು ಎಂಜಿನ್ ಜಾಸ್ತಿ ಹೀಟ್ ಆಗುತ್ತಿದ್ದರೆ ಎಂಜಿನ್ನಿನ ಕಂಡೀಶನ್ ಸರಿಯಾಗಿಲ್ಲವೆಂದು ತಿಳಿದುಕೊಳ್ಳಬೇಕು.
ಕಾರನ್ನು ನಡೆಸಿ ನೋಡುವಾಗ ಸಸ್ಪೆನ್ಷನ್ ಗಳಲ್ಲಿ ಏನಾದರೂ ಶಬ್ದ ಬರುತ್ತಿದೆ ಎಂದು ಸರಿಯಾಗಿ ಚೆಕ್ ಮಾಡಿ ನೋಡಿ. ಯಾವುದಾದರೂ ರಸ್ತೆಗುಂಡಿ ಯಲ್ಲಿಂದ ಕಾರನ್ನು ನಡೆಸಿದಾಗ ಸಸ್ಪೆನ್ಷನ್ ನಲ್ಲಿ ಹಾರ್ಡ್ ನೆಸ್ ಅನುಭವವಾದರೆ ಸಸ್ಪೆನ್ಷನ್ ಗಳು ಸರಿಯಾಗಿಲ್ಲವೆಂದು ಅರ್ಥವಾಗುತ್ತದೆ. ಅದರ ಜೊತೆಗೆ ಕಾರಿನ ಎಸಿ ಸರಿಯಾಗಿ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಖಾತರಿಪಡಿಸಿಕೊಳ್ಳಿ.
ಕೆಲವೊಮ್ಮೆ ಕಾರು ಹೊರಗಿನಿಂದ ಸುಂದರವಾಗಿ ಕಾಣಿಸದಿದ್ದರೂ ಎಂಜಿನ್ ಚೆನ್ನಾಗಿರಬಹುದು. ಅದರ ಜೊತೆಗೆ ಗಾಡಿಯ ಪಿಲ್ಲರ್ ಚೆಕ್ ಮಾಡಿ. ಕಾರಿನ ಬಾಗಿಲುಗಳು ಬೆಂಡ್ ಆಗಿದ್ದರೆ ಕಾರು ಈ ಮುನ್ನ ಅಪಘಾತಕ್ಕೀಡಾಗಿದೆ ಎಂಬುದು ಗೊತ್ತಾಗುತ್ತದೆ. ಬಾಗಿಲಿಗಿದ್ದ ರಬ್ಬರ್ ತೆಗೆದು ಚೆಕ್ ಮಾಡಿದಾಗ ವೆಲ್ಡಿಂಗ್ ಮಾಡಿದ್ದೆನಾದರೂ ಇದ್ದರೆ ಕಂಡುಬರುತ್ತದೆ. ಆ ರೀತಿಯ ಯಾವುದೇ ಗುರುತುಗಳು ಇಲ್ಲದಿದ್ದರೆ ಕಾರು ಚೆನ್ನಾಗಿದೆ ಎಂದು ತಿಳಿದುಕೊಳ್ಳಬೇಕು.
ಕಾರಿನ ಇನ್ನೊಂದು ಮುಖ್ಯವಾದ ಪಾರ್ಟ್ಸ್ ಏನೆಂದರೆ ಅದರ ಗೇರ್ ಬಾಕ್ಸ್. ನಿಮಗೆ ಕಾರು ನಡೆಸುವ ಅನುಭವ ಚೆನ್ನಾಗಿದ್ದರೆ ಗೇರ್ ಬಾಕ್ಸ್ ನ್ನು ನೀವೇ ಪರಿಶೀಲಿಸಬಹುದು, ಇಲ್ಲವಾದರೆ ನಿಮ್ಮ ಗುರುತಿನ ಮೆಕ್ಯಾನಿಕ್ ಯಾರಾದರೂ ಇದ್ದರೆ ಅವರ ಕಡೆಯಿಂದ ಚೆಕ್ ಮಾಡಿಸಿಕೊಳ್ಳಬಹುದು. ಆತನ ಜೊತೆ ಚರ್ಚೆ ಮಾಡಿ ಗಾಡಿಯ ಬೆಲೆಯನ್ನು ನಿರ್ಧರಿಸಬಹುದು.
ಇನ್ನು ಕೊನೆಯದಾಗಿ ಪರಿಶೀಲಿಸಬಹುದಾದ ಇನ್ನೊಂದು ವಿಷಯವೇನೆಂದರೆ, ಗಾಡಿ ಬಂಪರ್ ಹೇಗಿದೆ ಅದನ್ನು ನೋಡುವುದು. ಒಂದು ವೇಳೆ ಅದು ಸರಿಯಾಗಿಲ್ಲದಿದ್ದರೆ ಅಥವಾ ಹೊಸದಾದ ಬಂಪರ್ ಕೂಡಿಸಿದ್ದರೆ ಅಲ್ಲಿಯ ಗುರುತುಗಳಿಂದ ಅದು ಗೊತ್ತಾಗುತ್ತದೆ. ಆದರೆ ಒಂದು ಮಾತು ಬಂಪರ್ ಕಂಡಿಶನ್ ನೋಡಿ ಗಾಡಿಯ ವ್ಯವಹಾರ ಮಾಡುವುದು ಮತ್ತು ಬಿಡುವುದು ಮಾಡಬೇಡಿ. ಏಕೆಂದರೆ ಬಂಪರ್ ನಿಂದ ಅಷ್ಟೊಂದು ಯಾವುದೇ ರೀತಿಯ ವಿಪರೀತ ವ್ಯತ್ಯಾಸ ಅಥವಾ ಪರಿಣಾಮ ಬೀರುವುದಿಲ್ಲ. ಕಾರಿನ ಮೇಲ್ಭಾಗ ಹೇಗಿದೆ ಎಂಬುವುದನ್ನು ಒಂದು ಸಲ ನೋಡುವುದು ಉತ್ತಮ. ಕಾರು, ಎಂಜಿನ್, ಬಾಡಿ, ಚೇಸಿ ಎಲ್ಲವೂ ಉತ್ತಮವಾಗಿದ್ದು ಮೇಲ್ಭಾಗದಲ್ಲಿ ಜುಜುಬಿ ಮಾರ್ಕ್ಸ್ ಗಳು ಬಿದ್ದಿದ್ದರೆ ಅದೇ ಕಾರಣದಿಂದ ಗಾಡಿಯ ವ್ಯವಹಾರ ಮಾಡುವುದನ್ನು ನಿಲ್ಲಿಸಬೇಡಿ.