24 ಗಂಟೆ ಉರಿಯುವ ಮ್ಯಾಜಿಕ್ ಲ್ಯಾಂಪ್ ತಯಾರಿಸಿದ 62 ವರ್ಷದ ವ್ಯಕ್ತಿ: ಮಾರುಕಟ್ಟೆಯಲ್ಲಿ ಸಿಕ್ಕಿತು ಭರ್ಜರಿ ಬೇಡಿಕೆ!
ದೀಪಾವಳಿ ಹಬ್ಬ ಎಂದರೆ ಇದು ದೀಪಗಳ ಹಬ್ಬ, ಇದು ಬೆಳಕಿನ ಹಬ್ಬ ಹಾಗೂ ಸಂತೋಷ, ಸಂಭ್ರಮದಿಂದ ಆಚರಣೆ ಮಾಡುವ ಹಬ್ಬವಿದು. ಈ ಸಂದರ್ಭದಲ್ಲಿ ದೀಪಗಳ ಖರೀದಿ ಕೂಡಾ ಜೋರಾಗಿ ನಡೆಯುತ್ತದೆ ಹಾಗೂ ವೈವಿದ್ಯಮಯ ದೀಪಗಳು ಕೂಡಾ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದಲ್ಲಿ ದೀಪಗಳಿಗೆ ಅವುಗಳದೇ ಆದ ಧಾರ್ಮಿಕ ಮಹತ್ವ ಕೂಡಾ ಇರುವುದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕೆ ಹಬ್ಬಗಳ ಸಂದರ್ಭದಲ್ಲಿ ದೀಪಗಳಿಗೆ ವಿಶೇಷ ಪ್ರಾಧಾನ್ಯತೆ ಇದ್ದು, ದೀಪಾವಳಿಯಲ್ಲಿ ಅದು ದುಪ್ಪಟ್ಟಾಗುತ್ತದೆ. ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಒಂದು ವಿಶೇಷ ದೀಪವನ್ನು ಕಲಾವಿದನೊಬ್ಬರು ತಯಾರಿಸಿದ್ದು ಸೋಶಿಯಲ್ ಮೀಡಿಯಾ ದಲ್ಲಿ ಈ ದೀಪದ ಬಗ್ಗೆ ಸಾಕಷ್ಟು ಸುದ್ದಿಗಳಾಗಿದ್ದು, ಜನರ ಗಮನವನ್ನು ಸೆಳೆಯುತ್ತಿದೆ.
ಇಂದು ನಾವು ತಿಳಿಯಲು ಹೋಗುತ್ತಿರುವ ದೀಪವು ನಿಜಕ್ಕೂ ವಿಶೇಷವಾಗಿದೆ. ಅದಕ್ಕೆ ಪ್ರಮುಖ ಕಾರಣ ಈ ದೀಪವು ಹಗಲು, ರಾತ್ರಿ ಪೂರ್ತಿ ಅಂದರೆ 24 ಗಂಟೆಗಳ ಕಾಲ ಉರಿಯುವುದು ಎನ್ನಲಾಗಿದೆ. ವಿಷಯಕ್ಕೆ ಬಂದರೆ ಛತ್ತೀಸಘಡದಲ್ಲಿ ಕುಂಬಾರ ವೃತ್ತಿಯನ್ನು ಮಾಡುವ ಅಶೋಕ್ ಚಕ್ರಧಾರಿ ಅವರ ಕೈಯಲ್ಲಿ ಅರಳಿರುವ ವಿಶೇಷ ದೀಪವಾಗಿದೆ ಇದು. ಅಶೋಕ್ ಚಕ್ರಧಾರಿಯವರು ಛತ್ತೀಸ್ಗಢ ದ ಬಸ್ತಾರ್ ಜಿಲ್ಲೆಯ ಕೊಡಂಗಾಂವ್ ನ ನಿವಾಸಿಯಾಗಿದ್ದು, ಬಹಳ ಶ್ರಮವಹಿಸಿ ಇಂತಹುದೊಂದು ವಿಶೇಷವಾದ ದೀಪವನ್ನು ವಿನ್ಯಾಸಗೊಳಿಸಿದ್ದು, ಇದರ ವಿಚಾರ ಈಗ ಸುದ್ದಿಯಾಗಿದ್ದು ಎಲ್ಲರ ಗಮನ ಅತ್ತ ಹರಿದಿದೆ.

ಅಶೋಕ್ ಚಕ್ರಧಾರಿ ಅವರು ತಾನು ವಿನ್ಯಾಸಗೊಳಿಸಿರುವ ಹೊಸ ದೀಪಗಳ ಕುರಿತಾಗಿ ಮಾದ್ಯಮವೊಂದರಲ್ಲಿ ಮಾಹಿತಿಯನ್ನು ನೀಡುವಾಗ ಈ ದೀಪದ ವಿಶೇಷತೆಗಳನ್ನು ಕೂಡಾ ವಿವರಿಸಿದ್ದಾರೆ. ಅಶೋಕ್ ಅವರು ಹೇಳುವಂತೆ ಈ ದೀಪದಲ್ಲಿ ಎಣ್ಣೆಯು ತನಗೆ ತಾನೇ ಹರಿಯುವುದರಿಂದ ದೀಪವು ಬಹಳ ಹೊತ್ತು ಉರಿದು ಬೆಳಕನ್ನು ನೀಡುತ್ತದೆ ಎನ್ನಲಾಗಿದೆ. ಅಶೋಕ್ ಅವರು ತಮ್ಮ ಈ ನೂತನ ವಿನ್ಯಾಸದ ದೀಪಗಳಿಗೆ ಮ್ಯಾಜಿಕ್ ಲ್ಯಾಂಪ್ ಎನ್ನುವ ಹೆಸರನ್ನು ಇಟ್ಟಿದ್ದಾರೆ. ಅವರು ಯೂಟ್ಯೂಬ್ ನಲ್ಲಿ ಒಂದು ವೀಡಿಯೋವನ್ನು ನೋಡಿದ್ದರಂತೆ. ಅದು ನೋಡಿದ ಮೇಲೆ ಅವರಿಗೆ ಇಂತಹುದೊಂದು ಐಡಿಯಾ ಬಂರು ಬಂತು ಎಂದು ಹೇಳುತ್ತಾರೆ.
ಅಶೋಕ್ ಅವರು ತಾನು ಸದಾ ಹೊಸ ಹೊಸ ವಿಷಯಗಳನ್ನು ಹುಡುಕುತ್ತಾ ಇರುತ್ತೇನೆ. ವಿಶೇಷವಾಗಿ ನನ್ನ ಕೌಶಲ್ಯಕ್ಕೆ ಸವಾಲಾಗಿರಬೇಕು ಮತ್ತು ಅದರಿಂದ ನನ್ನ ಸುತ್ತ ಮುತ್ತಲು ಇರುವ ಜನರಿಗೆ ಉಪಯೋಗವಾಗುವಂತಹ ಸಂಶೋಧನೆ ಆಗಬೇಕು ಎನ್ನುತ್ತಾರೆ. ಚಕ್ರಧಾರಿ ಅವರಿಗೆ ಈಗ 62 ವರ್ಷ ವಯಸ್ಸು. ಅವರು 2019 ರಿಂದಲೂ ಕೂಡಾ ಒಂದು ಹೊಸ ವಿನ್ಯಾಸದ ದೀಪವನ್ನು ಮಾಡಲು ಹೊಸ ಹೊಸ ವಿನ್ಯಾಸಗಳ ಕುರಿತಾಗಿ ಇಂಟರ್ನೆಟ್ ನಲ್ಲಿ ಸರ್ಚ್ ಮಾಡುತ್ತಿದ್ದರಂತೆ.ಆಗ ಅವರಿಗೆ ಒಂದು ವೀಡಿಯೋ ಅವರ ಗಮನವನ್ನು ಬಹಳವಾಗಿ ಸೆಳೆದಿದೆ.

ಅವರು ವೀಡಿಯೋದಲ್ಲಿ ನೋಡಿದ ದೀಪದಲ್ಲಿ ಎಣ್ಣೆಯು ತುಂಬಿದ್ದು ಅದು ದೀಪ ಹೆಚ್ಚು ಹೊತ್ತು ಆರದಂತೆ ಉರಿಯುವುದನ್ನು ಗಮನಿಸಿ ತಾನು ಕೂಡಾ ಅಂತದ್ದೇ ಒಂದು ದೀಪವನ್ನು ತಯಾರು ಮಾಡಲು ನಿರ್ಧಾರವನ್ನು ಮಾಡಿ, ದೀಪದ ತಯಾರಿಕೆಯಲ್ಲಿ ತೊಡಗಿಕೊಂಡರಂತೆ. ಅದರ ಫಲವಾಗಿಯೇ ಈಗ ಅವರು ತಯಾರು ಮಾಡಿರುವ ಮ್ಯಾಜಿಕ್ ಲ್ಯಾಂಪ್. ಅಶೋಕ್ ಚಕ್ರಧಾರಿ ಅವರು ಸಿದ್ಧಪಡಿಸಿರುವ ಈ ದೀಪಗಳ ವಿಷಯ ಸುದ್ದಿಯಾದ ನಂತರ ಅವರಿಗೆ ಇಂತಹ ದೀಪಗಳಿಗಾಗಿ ಹೆಚ್ಚಿನ ಬೇಡಿಕೆ ಕೂಡಾ ಬರುತ್ತಿದೆ ಎಂದಿದ್ದಾರೆ ಅವರು. ಏನಾದರೂ ಹೊಸತನ್ನು ಮಾಡುವ ಛಲವಿರುವವರಿಗೆ ಅಶೋಕ್ ಅವರು ನಿಜಕ್ಕೂ ಸ್ಪೂರ್ತಿ ಎನ್ನಬಹುದು.