ಬೆಕ್ಕಿಗೆ ಕೀಟಲೆ ಮಾಡಿ, ಅಮಾಯಕನಂತೆ ನಟಿಸಿದ ನಾಯಿಮರಿ: ವೈರಲ್ ವೀಡಿಯೋ ನೋಡಿ ಸೂಪರ್ ಅಂದ್ರು ನೆಟ್ಟಿಗರು

ಕೆಲವು ವೀಡಿಯೋಗಳೇ ಹಾಗೇ ಅವುಗಳನ್ನು ನೋಡಿ ಆನಂದಿಸುವಾಗ ಇರುವ ಮಜಾ ಅಥವಾ ಸಿಗುವ ಖುಷಿ ಯನ್ನು ಬಣ್ಣಿಸಲು ಪದಗಳೇ ಸಾಲವು ಎನ್ನುವಂತೆ ಇರುತ್ತವೆ. ಮಕ್ಕಳ ಮುಗ್ಧವಾದ ಆಟ, ತುಂಟಾಟ, ಕುಣಿದಾಟ ಇವೆಲ್ಲಾ ಮತ್ತೆ ಮತ್ತೆ ನೋಡಬೇಕು ಎನಿಸುವುದು ಕೂಡಾ ಸಹಜ. ಇದೇ ರೀತಿಯ ತುಂಟಾಟಗಳನ್ನು ಪ್ರಾಣಿಗಳು ಕೂಡಾ ಮಾಡಿದಾಗ ಬಹಳ ಮುದ್ದಾಗಿ ಕಾಣೋದು ಮಾತ್ರ ಅಲ್ಲದೇ ಅವುಗಳ ಆ ಮುಗ್ಧತೆ, ಅದರಲ್ಲಿ ಅಡಗಿದ ತುಂಟತನದ ಪರಿಚಯವನ್ನು ಕೂಡಾ ಮಾಡಿಕೊಡುತ್ತೆ ಅನ್ನೋದು ನಿಜ. ಈ ವೀಡಿಯೋಗಳು ವೈರಲ್ ಕೂಡಾ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಜನರ ಅಪಾರವಾದ ಮೆಚ್ಚುಗೆ ಕೂಡಾ ಪಡೆಯುತ್ತೆ.‌

ಸಾಮಾನ್ಯವಾಗಿ ನಾಯಿ ಮತ್ತು ಬೆಕ್ಕುಗಳು ಒಂದನ್ನೊಂದು ನೋಡಿದರೆ ಶ ತೃ ಗಳು ಅನ್ನೋ ತರ ಆಡೋದನ್ನು ನಾವೆಲ್ಲಾ ನೋಡಿಯೇ ಇರ್ತೀವಿ. ಆದರೂ ಒಂದೇ ಮನೆಯಲ್ಲಿ ಎರಡನ್ನೂ ಕೂಡಾ ಸಾಕಿದ್ದರೆ, ಅವು ಜೊತೆಯಾಗಿ ಬೆಳೆದರೆ, ಜೊತೆಯಾಗಿ ಸಮಯ ಕಳೆಯುತ್ತಿದ್ದರೆ ಆಗ ನಾಯಿ ಹಾಗೂ ಬೆಕ್ಕು ಕೂಡಾ ಪರಸ್ಪರ ಸ್ನೇಹದಿಂದ ಹಾಗೂ ಆತ್ಮೀಯತೆಯಿಂದ ಆಡುವುದನ್ನು, ತಮಾಷೆಯಾಗಿ ತುಂಟಾಟ ಮಾಡುತ್ತಾ ಒಂದರ ಜೊತೆ ಮತ್ತೊಂದು ಜಗಳ ಆಡುವುದನ್ನು ಕೂಡಾ ನೋಡಬಹುದು. ಈಗ ವೈರಲ್ ಆಗಿರುವ ಒಂದು ವೀಡಿಯೋದಲ್ಲಿ ಕೂಡಾ ನಾಯಿ ಮತ್ತು ಬೆಕ್ಕಿನ ತುಂಟಾಟವಿದ್ದು, ಜನರ ಮೆಚ್ಚುಗೆ ಪಡೆದಿದೆ.

ವೀಡಿಯೋದಲ್ಲಿ ಒಂದು ಬೆಕ್ಕು ನಡೆದು ಹೋಗುವಾಗ ಅದರ ಹಿಂದೆ ನಾಯಿ ಮರಿಯೊಂದು ಅದನ್ನು ಹಿಂಬಾಲಿಸುತ್ತಾ ಹೋಗುತ್ತದೆ. ಬೆಕ್ಕನ್ನು ಕೀಟಲೆ ಮಾಡಲು ಹೋಗುವ ನಾಯಿ ಮರಿಯನ್ನು ಬೆಕ್ಕು ಹಿಂದೆ ತಿರುಗಿ ನೋಡುತ್ತದೆ. ಕೂಡಲೇ ನಾಯಿ ಮರಿ ಕುಳಿತು ತನ್ನ ಕಿವಿಯನ್ನು ಕೆರೆದುಕೊಳ್ಳುವಂತೆ ನಾಟಕ ಆಡುತ್ತದೆ. ಬೆಕ್ಕು ಮತ್ತೆ ಮುಂದೆ ಹೋಗುತ್ತಿದ್ದಂತೆ ನಾಯಿ ಮರಿ ಕೂಡಾ ಮತ್ತೊಮ್ಮೆ ಬೆಕ್ಕಿನ ಹಿಂದೆ ಬಿದ್ದು ಅದು ನೋಡಿದೊಡೆನೆ ಯಥಾ ಪ್ರಕಾರ ಅಮಾಯಕನಂತೆ ತಾನು ಕಿವಿ ಕೆರೆದುಕೊಳ್ಳುವಂತೆ ನಟಿಸುತ್ತದೆ. ಈ ದೃಶ್ಯ ನೋಡಿದಾಗ ಹುಡುಗಿಯ ಹಿಂದೆ ಹೊರಟ ಹುಡುಗ ಅವಳು ನೋಡಿದಾಗ ಬೇರೇನೋ ಮಾಡುತ್ತಿರುವ ಹಾಗೆ ಫೋಸ್ ಕೊಡುವ ಸನ್ನಿವೇಶವನ್ನು ನೆನಪಿಸುತ್ತದೆ.‌

ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿರುವ ಈ ವೀಡಿಯೋವನ್ನು 28 ಸಾವಿರಕ್ಕೂ ಅಧಿಕ ಜನರು ವೀಕ್ಷಣೆಗಳನ್ನು ಮಾಡಿದ್ದರೆ, ಎರಡು ಸಾವಿರ ದಾಟಿದ ಲೈಕ್ ಗಳನ್ನು ಈ ವೀಡಿಯೋ ಪಡೆದುಕೊಂಡಿದೆ. ಐನೂರಕ್ಕೂ ಅಧಿಕ ಮಂದಿ ಈ ಸುಂದರವಾದ ವೀಡಿಯೊವನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ. ನೂರಾರು ಜನರು ವೀಡಿಯೋ ಬಗ್ಗೆ ತಮ್ಮ ಮೆಚ್ಚುಗೆ ಗಳನ್ನು ಕಾಮೆಂಟ್ ಗಳ ಮೂಲಕ ಸೂಚಿಸುತ್ತಿದ್ದಾರೆ. ನೆಟ್ಟಿಗರು ಕೂಡಾ ತಮ್ಮದೇ ಆದ ಶೈಲಿಯಲ್ಲಿ ಹಾಡಿ ಹೊಗಳುತ್ತಿದ್ದಾರೆ. ಕೆಲವು ಕಾಮೆಂಟ್ ಗಳ ಬಗ್ಗೆ ನಾವು ನೋಡೋಣ ಬನ್ನಿ.

ವಿಡಿಯೋ ನೋಡಿ

ಅನೇಕರು ನಾಯಿ ಮರಿಯ ತುಂಟಾಟಿಕೆಯನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಈ ನಾಯಿ ಮರಿ ತುಂಬಾ ಒಳ್ಳೆಯದು, ಅದು ಬೆಕ್ಕಿನ ಜೊತೆ ಸ್ನೇಹ ಮಾಡಲು ಬಯಸಿದೆಯೇ ಹೊರತು ಜಗಳ ಮಾಡಲು ಅಲ್ಲ ಎಂದಿದ್ದಾರೆ. ಮತ್ತೊಬ್ಬರು ಹಾಸ್ಯ ಚಟಾಕಿ ಹಾರಿಸುತ್ತಾ ಈ ನಾಯಿಮರಿ ಒಂದು ಸೀಕ್ರೆಟ್ ಸ್ಪೈ, ಅದು ಬೆಕ್ಕಿನ ಬಳಿ ಇರುವ ಯಾವುದೋ ಒಂದು ಸೀಕ್ರೆಟ್ ವಸ್ತುವನ್ನು ಅದನ್ನು ಏಮಾರಿಸಿ ಪಡೆಯುವ ಪ್ರಯತ್ನ ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನಾಯಿ ಮರಿ ಹಾಗೂ ಬೆಕ್ಕಿನ ಈ ವೀಡಿಯೋ ನೂರು ಸಾಮಾನ್ಯ ವೀಡಿಯೋಗಳ ನಡುವೆ ನಿಜಕ್ಕೂ ಬಹಳ ಖುಷಿ ಕೊಡುವ ವೀಡಿಯೋ ಎನಿಸಿದೆ.