ಇಸ್ರೇಲ್ ನಿಂದ ಕಲಿತ ಖರ್ಜೂರದ ಕೃಷಿ: ಇಂದು ದೇಶ ವಿದೇಶಗಳಿಗೆ ರಫ್ತಾಗುತ್ತಿದೆ ಇವರು ಬೆಳೆದ ಖರ್ಜೂರ!
ಆ ವ್ಯಕ್ತಿ ತಮ್ಮ ಜೀವನದಲ್ಲಿ ತಾನೊಬ್ಬ ಪೈಲಟ್ ಆಗಬೇಕೆಂದು ಕನಸು ಕಂಡವರು. ಆದರೆ ಅವರ ಕನಸು ನನಸಾಗಲಿಲ್ಲವಾದರೂ ಇಂದು ಅವರೊಬ್ಬ ಯಶಸ್ವಿ ಬ್ಯುಸಿನೆಸ್ ಮ್ಯಾನ್ ಹಾಗೂ ಯಶಸ್ವಿ ರೈತ ಕೂಡಾ ಆಗಿದ್ದು, ಅವರ ಕೃಷಿ ಭೂಮಿಗೆ ಗ್ಲೋಬಲ್ GAP ( ಗುಡ್ ಅಗ್ರಿಕಲ್ಚರಲ್ ಪ್ರಾಕ್ಟಿಸೈಸ್ ಸರ್ಟಿಫಿಕೇಷನ್) ಕೂಡಾ ಪಡೆದಿದೆ. ಇವರ ಕೃಷಿ ಭೂಮಿಯಲ್ಲಿ ಅಳವಡಿಸಲಾಗಿರುವ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅರಿಯಲು ದೇಶ ವಿದೇಶಗಳಿಂದ ಕೂಡಾ ರೈತರು ಅವರ ಕೃಷಿ ಭೂಮಿಗೆ ಭೇಟಿ ನೀಡುತ್ತಾರೆ ಎಂದರೆ ಅವರು ಕೃಷಿಯಲ್ಲಿ ಎಂತಹ ಸಾಧನೆ ಮಾಡಿದ್ದಾರೆ ಎಂಬುದನ್ನು ನಾವು ಊಹಿಸಬಹುದಾಗಿದೆ. ಹಾಗಾದರೆ ಬನ್ನಿ ಆ ಸಾಧಕ ಯಾರು ಎಂದು ನಾವು ಕೂಡಾ ಇಂದು ತಿಳಿಯೋಣ.

ಈ ಯಶಸ್ವಿ ರೈತನ ಹೆಸರು ಈಶ್ವರ್ ಪಿಂಡೋರಿಯಾ ಇವರು ಮೂಲತಃ ಗುಜರಾತಿ ನವರು. ಇಲ್ಲಿನ ಬುಜ್ ನಿಂದ ಸುಮಾರು 20 ಕಿಮೀ ದೂರದಲ್ಲಿ ಕಚ್ಛ್ ನ ರನ್ ನಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣದ ನಂತರ ಅವರ ಹಳ್ಳಿ ಸಿಗುತ್ತದೆ. ಈಶ್ವರ್ ಅವರು ರಾಜ್ ಕೋಟ್ ನಲ್ಲಿ ವಿದ್ಯಾಭ್ಯಾಸ ಮಾಡಿದವರು, ಅವರು ತಾನೊಬ್ಬ ಕಮರ್ಷಿಯಲ್ ಪೈಲಟ್ ಆಗಬೇಕೆಂದು ಕನಸನ್ನು ಕಂಡಿದ್ದರು. ಆದರೆ ಅವರ ತಂದೆಯ ಸಾ ವಿನಿಂದಾಗಿ ಅವರು ಪೈಲಟ್ ತರಬೇತಿ ಬಿಟ್ಟು ತಂದೆಯ ವ್ಯವಹಾರವನ್ನು ನೋಡಿಕೊಳ್ಳಲೇಬೇಕಾಯಿತು. ಹಾಗೆ ಬ್ಯುಸಿನೆಸ್ ಕಡೆ ಬಂದವರ ಗಮನ ಕೃಷಿಯ ಕಡೆ ಕೂಡಾ ಹರಿಯಿತು.

ಆದರೆ ಈಶ್ವರ್ ಅವರು ತಾನು ಸಾಂಪ್ರದಾಯಿಕ ಕೃಷಿಯ ಬದಲಾಗಿ ವೈಜ್ಞಾನಿಕ ಕೃಷಿ ಮಾಡಲು ನಿರ್ಧಾರ ಮಾಡಿದ್ದರು. ಅದಕ್ಕೆ ಅವರು ಕೃಷಿಯನ್ನು ಆರಂಭಿಸುವ ಮೊದಲು ಕೃಷಿ ವಿಧಾನಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವ ಇಸ್ರೇಲ್ ದೇಶಕ್ಕೆ ತಮ್ಮ ಮಿತ್ರನೊಂದಿಗೆ ಭೇಟಿ ನೀಡಿ, ಅಲ್ಲಿನ ಕೃಷಿ ವಿಧಾನಗಳ ಬಗ್ಗೆ ತಿಳಿದುಕೊಂಡು, ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ಭಾರತಕ್ಕೆ ವಾಪಸಾದರು. ಹಾಗೆ ಬಂದ ಅವರು 2006 ರಿಂದ ಕೃಷಿ ಆರಂಭಿಸಿದ್ದು ತಮ್ಮ 40 ಎಕರೆ ಜಮೀನಿನಲ್ಲಿ ದಾಳಿಂಬೆ, ಖರ್ಜೂರ ಹಾಗೂ ಮಾವಿನ ಬೆಳೆಯನ್ನು ಬೆಳೆಯುತ್ತಿದ್ದಾರೆ ಹಾಗೂ ಲಾಭ ಕೂಡಾ ಗಳಿಸುತ್ತಿದ್ದಾರೆ.

ಈಶ್ವರ್ ಪಿಂಡೋರಿಯ ಅವರ ಕೃಷಿ ಭೂಮಿಯಲ್ಲಿ ಮೊದಲು ಕೃಷಿ ಕಷ್ಟ ಎನಿಸಿದರೂ ಅವರು ಮುಂದುವರೆಸಿದರು. ಅವರು ಅಲ್ಲಿ ಡ್ರಿಪ್ ಇರಿಗೇಶನ್, ಕ್ಯಾನೊಪಿ ಮ್ಯಾನೇಜ್ಮೆಂಟ್, ಪೋಸ್ಟ್ ಹಾರ್ವೆಸ್ಟ್ ಮ್ಯಾನೇಜ್ಮೆಂಟ್, ಬಂಚ್ ಮ್ಯಾನೇಜ್ಮೆಂಟ್, ಪೆಸ್ಟ್ ಮ್ಯಾನೇಜ್ಮೆಂಟ್, ಮಣ್ಣಿನ ಪೋಷಕಾಂಶಗಳ ಪರೀಕ್ಷೆಗಳಂತಹ ಆಧುನಿಕ ವೈಜ್ಞಾನಿಕ ತಂತ್ರಗಳನ್ನು ಅಳವಡಿಸಿದ್ದು ಇದರಿಂದ 60% ನೀರಿನ ಉಳಿತಾಯ ಕೂಡಾ ಆಗುತ್ತಿದ್ದು, ಮಣ್ಣು ಕೂಡಾ ಹೆಚ್ಚು ಫಲವತ್ತತೆಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಮಣ್ಣಿನ ಸೂಕ್ತವಾದ ನಿರ್ವಹಣೆಗಾಗಿ ಅವರು ಕ್ಯಾಲಿಫೋರ್ನಿಯಾದಿಂದ ಹೊಸ ಹೊಸ ಯಂತ್ರಗಳನ್ನು ಕೂಡಾ ತರಿಸಿದ್ದಾರೆ.

ಅಲ್ಲದೇ ಅವರದೇ ಆದ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ಕೂಡಾ ಹೊಂದಿದ್ದಾರೆ. ಭಾರತದ ಎಲ್ಲಾ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಅವರ ಬ್ರಾಂಡ್ ಆದ ಹೇಮಕುಂಡ್ ಫಾರ್ಮ್ ಫ್ರೆಶ್ ಹಣ್ಣುಗಳು ದೊರೆಯುತ್ತವೆ. ಅವರ ತೋಟದಲ್ಲಿ ಬೆಳೆಯುವ ಖರ್ಜೂರು ವಿದೇಶಗಳಿಗೆ ಕೂಡಾ ರಫ್ತಾಗುವ ಮಟ್ಟಕ್ಕೆ ಗುಣಮಟ್ಟದ್ದಾಗಿದೆ. ಜರ್ಮನಿಯಿಂದ ಇವರು ಬೆಳೆಯುವ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆಯಿದೆ ಎನ್ನುತ್ತಾರೆ ಈಶ್ವರ್ ಅವರು. ಆಧುನಿಕ ವೈಜ್ಞಾನಿಕ ಕೃಷಿಯನ್ನು ಸಮರ್ಪಕವಾಗಿ ಬಳಸಿಕೊಂಡು ಈಶ್ವರ್ ಅವರು ಅದ್ಭುತವಾದ ಯಶಸ್ಸನ್ನು ತಮ್ಮದಾಗಿಸಿಕೊಂಡಿದ್ದಾರೆ.
