ಕ್ರ್ಯಾಷ್ ಟೆಸ್ಟ್ ನಲ್ಲಿ ಮಹೀಂದ್ರಾ ಕಂಪನಿಯ ಥಾರ್ ನ ಸಾಧನೆ: ಮೇಡ್ ಇನ್ ಇಂಡಿಯಾ ಕಾರು ಅತ್ಯಂತ ಸುರಕ್ಷಿತ ಎಂದು ಹೆಮ್ಮೆ ಪಟ್ಟ ಆನಂದ್ ಮಹೀಂದ್ರಾ
ದೇಶದ ಪ್ರಮುಖ ಹಾಗೂ ದಿಗ್ಗಜ ವಾಹನ ನಿರ್ಮಾಣ ಸಂಸ್ಥೆ ಎನಿಸಿರುವ ಮಹೇಂದ್ರ ಇತ್ತೀಚೆಗೆ ತನ್ನ off-road ಎಸ್ಯುವಿ ಥಾರ್ ಅನ್ನು ಬಿಡುಗಡೆ ಮಾಡಿದೆ. ಈ ವಾಹನದ ಸ್ಟೈಲಿಶ್ ಲುಕ್ ಮತ್ತು ದೃಢವಾದ ಸಾಮರ್ಥ್ಯ ಎಲ್ಲರ ಗಮನವನ್ನು ಸೆಳೆಯುತ್ತಿರುವುದು ಮಾತ್ರವಲ್ಲದೆ ಸಾಕಷ್ಟು ಜನಪ್ರಿಯತೆಯನ್ನು ಕೂಡ ತನ್ನದಾಗಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಈ ಹೊಸ ವಾಹನ ಜನರ ಅಪಾರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದು, ಥಾರ್ ಲಾಂಚ್ ಆದನಂತರ ಸುಮಾರು 20000 ಮುಂಗಡ ಬುಕ್ಕಿಂಗ್ ಆಗಿದ್ದು ಈ ಕಾರಿಗೆ ಇರುವ ಬೇಡಿಕೆಯೇನು ಎಂದು ನಾವು ಊಹಿಸಬಹುದಾಗಿದೆ. ಇನ್ನು ಮಹೇಂದ್ರ ಕಂಪನಿ ಈಗ ಪ್ರವೇಶ ಮಟ್ಟದ ಟ್ರಿಮ್ ಅನ್ನು ಕೂಡಾ ತಾತ್ಕಾಲಿಕವಾಗಿ ನಿಲ್ಲಿಸಿದೆ ಎನ್ನಲಾಗಿದೆ.
ಪ್ರಸ್ತುತ ಕಾರಿನ ಬಗ್ಗೆ ಮಹೇಂದ್ರ ಕಂಪನಿಯು ಕೂಡ ಬಹಳ ಹೆಮ್ಮೆ ಪಡುತ್ತಿದೆ ಏಕೆಂದರೆ ಕೆಲವು ದಿನಗಳ ಹಿಂದೆ ಈ ಹೊಸ ಕಾರ್ ಗ್ಲೋಬಲ್ ಕ್ರ್ಯಾಶ್ ಟೆಸ್ಟನ್ನು ಕೂಡಾ ಮುಗಿಸಿದ್ದು, ಟೆಸ್ಟ್ನಲ್ಲಿ ಸುರಕ್ಷತೆಯ ವಿಚಾರದಲ್ಲಿ ಈ ಹೊಸ ಕಾರಿಗೆ 4 ಸ್ಟಾರ್ ಗಳ ರೇಟಿಂಗ್ ದೊರೆತಿದೆ. ಬೇರೆ ಕಂಪನಿಯ ಕಾರುಗಳಿಗೆ ಹೋಲಿಕೆ ಮಾಡಿದಾಗ ಸುರಕ್ಷತೆಯ ದೃಷ್ಟಿಯಿಂದ ಮಹಿಂದ್ರಾ ಕಂಪನಿ ಕಾರಿಗೆ ದಕ್ಕಿರುವ ರೇಟಿಂಗ್ ಹೆಚ್ಚಾಗಿದೆ. ಕಂಪನಿ ಕೂಡಾ ಬೇರೆ ಕಾರುಗಳಿಗೆ ಹೋಲಿಕೆ ಮಾಡಿದಾಗ ತನ್ನ ಈ ಹೊಸ ಕಾರಿನಲ್ಲಿ ಸುರಕ್ಷತೆಗೆ ವಿಶೇಷ ಗಮನವನ್ನು ನೀಡಿದೆ. ಈ ವಿಷಯವಾಗಿ ಮಹಿಂದ್ರ ಕಂಪನಿಯ ಮಾಲೀಕರಾದ ಆನಂದ ಮಹಿಂದ್ರಾ ಅವರು ಕೂಡಾ ಸಂತೋಷದಿಂದ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡಿ ತಮ್ಮ ಹೆಮ್ಮೆಯ ಕಾರಿನ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ.
ಆನಂದ ಮಹೇಂದ್ರ ಅವರು ತಮ್ಮ ಟ್ವೀಟ್ ನಲ್ಲಿ “ಭಾರತದ ಮೊಟ್ಟಮೊದಲ ಅತ್ಯಂತ ಸುರಕ್ಷಿತ ಕಾರ್, ಭಾರತದ ಅತ್ಯಂತ ಸುರಕ್ಷಿತ off-road ಎಸ್ ಯು ವಿ ಹಾಗೂ ಭಾರತದ ಅತ್ಯಂತ ಸುರಕ್ಷಿತ ಎಂವಿಪಿ ಗಳು ಮಹೇಂದ್ರ ಗ್ಯಾರೇಜ್ ನಿಂದ ಬರುತ್ತಿವೆ ಎನ್ನುವುದು ನನಗೆ ಬಹಳ ಹೆಮ್ಮೆಯ ವಿಷಯವಾಗಿದೆ” ಎಂದು ಬರೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮತ್ತೊಂದು ಟ್ವೀಟ್ ಮಾಡಿ ಭಾರತೀಯ ಉತ್ಪನ್ನಗಳ ಅಥವಾ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಶ್ಲಾಘನೆ ಮಾಡಿದ್ದಾರೆ. ಅವರು ತಮ್ಮ ಟ್ವೀಟ್ ನಲ್ಲಿ ಮಹಿಂದ್ರ ಥರ್ ಅತ್ಯಂತ ಸುರಕ್ಷಿತ off-road ವಾಹನವಾಗಿದೆ. ಮೇಡ್ ಇನ್ ಇಂಡಿಯಾ ಯಾವುದೇ ವಿಷಯದಲ್ಲಿ ಕೂಡ ಹಿಂದೆ ಬಿದ್ದಿಲ್ಲ ಎಂಬುದನ್ನು ಇದು ಸಾಬೀತು ಮಾಡುತ್ತದೆ ಎಂದಿದ್ದಾರೆ.
ಅಲ್ಲದೇ ನೀವು ತೆರೆದ ರಸ್ತೆಯಲ್ಲಿ ಸಂಚಾರ ಮಾಡಲು ಹೊರಟಾಗ ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿರಬೇಕೆಂದು ಥಾರ್ ಬಯಸುತ್ತದೆ ಎಂದು ಹೇಳಿದ್ದಾರೆ. ಮಹೀಂದ್ರ ಕಂಪನಿಯ ಈ ಥಾರ್ ಎನ್ ಸಿ ಪಿ ಸೇಫ್ ಕಾರ್ ಫಾರ್ ಇಂಡಿಯಾ ಕ್ರ್ಯಾಷ್ ಪರೀಕ್ಷೆಯಲ್ಲಿ ವಯಸ್ಕರು ಮತ್ತು ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ನಾಲ್ಕು ಸ್ಟಾರ್ ಗಳನ್ನು ಪಡೆದುಕೊಂಡಿದೆ. 2020 ರ ಥಾರ್ ನಲ್ಲಿ ಸ್ಟಾಂಡರ್ಡ್ ಆಗಿ ಮುಂಭಾಗದಲ್ಲಿ ಡ್ಯುಯೆಲ್ ಏರ್ ಬ್ಯಾಗ್ ಗಳನ್ನು ಅಳವಡಿಸಿಲಾಗಿದೆ ಎನ್ನಲಾಗಿದೆ. ವರದಿಯ ಅನ್ವಯ ಥಾರ್ ನ ಕ್ರ್ಯಾಷ್ ಟೆಸ್ಟ್ ನಲ್ಲಿ ಈ ಕಾರಿನಲ್ಲಿ ಚಾಲಕನ ಮತ್ತು ಪ್ರಯಾಣಿಕರ ಕುತ್ತಿಗೆ ಹಾಗೂ ತಲೆಯ ಭಾಗದ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದು, ಇದು ಹೆಚ್ಚು ಉತ್ತಮವಾಗಿದೆ ಎನ್ನಲಾಗಿದೆ.
ಕಳೆದ ಕೆಲವೇ ದಿನಗಳ ಹಿಂದೆ ಗ್ಲೋಬಲ್ ಕ್ರ್ಯಾಶ್ ಟೆಸ್ಟ್ ನಲ್ಲಿ ಮಾರುತಿ ಕಂಪನಿಯ ಹಲವು ಮಾಡೆಲ್ ಗಳ ಕಾರುಗಳನ್ನು ಕೂಡಾ ಪರಿಶೀಲನೆ ಮಾಡಿದ್ದು ಅದರಲ್ಲಿ ಕೆಲವು ಕಾರುಗಳಿಗೆ ಶೂನ್ಯ ಸ್ಟಾರ್ ದೊರೆತಿದ್ದರೆ, ಇನ್ನೂ ಕೆಲವಕ್ಕೆ ಒಂದರಿಂದ ನಾಲ್ಕರ ವರೆಗೂ ಸ್ಟಾರ್ ಗಳು ಲಭ್ಯವಾಗಿತ್ತು. ಇದು ಕಾರು ಕೊಳ್ಳುವವರಿಗೆ ಆ ಕಾರುಗಳು ಎಷ್ಟು ಸುರಕ್ಷಿತ ಎನ್ನುವ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿತ್ತು. ಈಗ ಇದರ ಬೆನ್ನಲ್ಲೇ ಮಹೀಂದ್ರಾ ಥಾರ್ ಮೇಡ್ ಇನ್ ಇಂಡಿಯಾ ಉತ್ಪನ್ನಕ್ಕೆ ನಾಲ್ಕು ಸ್ಟಾರ್ ದೊರೆತಿರುವುದು ಒಂದು ಹೆಮ್ಮೆಯ ವಿಷಯವೇ ಆಗಿದೆ ಎನ್ನಬಹುದು.