ಅದೃಷ್ಟ ಅಂದರೆ ಇದು! ಸಾಗರ ತೀರದಲ್ಲಿ ಸಿಕ್ಕ ತಿಮಿಂಗಲದ ವಾಂತಿಯಿಂದ ಕೋಟ್ಯಾಧಿಪತಿಯಾದ ಮೀನುಗಾರ!
ಥೈಲ್ಯಾಂಡ್ ನಲ್ಲಿ ಮೀನುಗಾರನೊಬ್ಬ ರಾತ್ರೋರಾತ್ರಿ ಕೋಟ್ಯಾಧೀಶ್ವರನಾಗಿದ್ದಾನೆ. ಆತ ಇದ್ದಕ್ಕಿದ್ದಂತೆ ಹೀಗೆ ಕೋಟಿಗಳ ಒಡೆಯನಾಗಿದ್ದಾದರೂ ಹೇಗೆ ಅಂತೀರಾ? ಆ ವಿಷಯ ಹೇಳಿದರೆ ನೀವು ಅದನ್ನು ಕೇಳಿ ಒಂದು ಕ್ಷಣ ಹೌದೇ? ಎಂದು ಆಶ್ಚರ್ಯ ಬೇಕಾದರೂ ಪಡಬಹುದು, ಅಥವಾ ಛೀ ಛೀ ಎಂದು ಅಸಹ್ಯ ಕೂಡಾ ಪಡುವ ಸಾಧ್ಯತೆ ಇರಬಹುದು. ಆದರೂ ಕೂಡ ವಾಸ್ತವವನ್ನು ಹೇಳಲೇಬೇಕು ಹಾಗೂ ಅದನ್ನು ತಿಳಿದ ಮೇಲೆ ಕೇಳಿದವರು ಕೂಡ ಒಪ್ಪಲೇಬೇಕು ಎನ್ನುವಂತಹ ವಿಷಯವಿದು. ಈ ಮೀನುಗಾರ ಕೋಟ್ಯಾಧೀಶ್ವರನಾಗಿದ್ದು ಆತನಿಗೆ ಸಮುದ್ರತೀರದಲ್ಲಿ ದೊರೆತ ವೇಲ್ ನ (ತಿಮಿಂಗಲ) ವಾಂತಿಯಿಂದ. ಏನು ವೇಲ್ ಒಂದರ ವಾಂತಿಯಿಂದ ವ್ಯಕ್ತಿಯೊಬ್ಬ ಕೋಟಿ ಕೋಟಿ ಗಳಿಸಿದ ಎಂದರೆ ನಂಬಲು ಕಷ್ಟ ಎನಿಸುತ್ತಿದೆಯಾ? ಹಾಗಾದರೆ ಪೂರ್ತಿ ವಿಷಯ ತಿಳಿದರೆ ನಿಮಗೆ ಅದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ.
ನಾರಿಸ್ ಎಂಬ ಹೆಸರಿನ ಮೀನುಗಾರನಿಗೆ ಸಮುದ್ರತೀರದಲ್ಲಿ ತಿಮಿಂಗಲದ ವಾಂತಿ ದೊರೆತಿದೆ. ಆತ ಅದನ್ನು ಒಂದು ಸಾಮಾನ್ಯ ಕಲ್ಲು ಎಂದೇ ಭಾವಿಸಿ, ಎತ್ತಿಕೊಂಡು ಬಂದಿದ್ದಾನೆ. ಆದರೆ ಅದು ಆತನ ಭವಿಷ್ಯವನ್ನು ಬದಲಿಸುವ ಅದೃಷ್ಟ ಎಂಬುದು ಅನಂತರ ತಿಳಿದಾಗ ಬಹಳ ಆಶ್ಚರ್ಯ ಪಟ್ಟಿದ್ದಾನೆ. ಏಕೆಂದರೆ ಆತನಿಗೆ ದೊರೆತಿದ್ದು ಸಾಮಾನ್ಯವಾದ ಕಲ್ಲಲ್ಲ, ಅದು ಬಹಳ ಬೆಲೆಬಾಳುವ, ಅಪರೂಪ ಎನಿಸಿರುವ ವೇಲ್ ನ ವಾಂತಿಯಾಗಿತ್ತು. ನಾರಿಸ್ ಗೆ ದೊರೆತ ಆ ಅಪರೂಪದ ವಸ್ತುವಿನ ಬೆಲೆ 24 ಲಕ್ಷ ಪೌಂಡ್ ಎಂದು ತಿಳಿದಾಗ ಇನ್ನಷ್ಟು ಆಶ್ಚರ್ಯಪಟ್ಟಿದ್ದಾನೆ ನಾರಿಸ್. ವೇಲ್ ನ ಈ ವಾಂತಿಯನ್ನು ವೈಜ್ಞಾನಿಕ ಭಾಷೆಯಲ್ಲಿ ಎಂಬರ್ ಗ್ರೀಸ್ ಎಂದು ಕರೆಯುತ್ತಾರೆ.
ಕೆಲವು ವಿಜ್ಞಾನಿಗಳು ಇದನ್ನು ವೇಲ್ ನ ವಾಂತಿ ಎಂದರೆ ಇನ್ನು ಕೆಲವು ವಿಜ್ಞಾನಿಗಳು ಇದನ್ನು ಅದರ ಮಲ ಎನ್ನುವರು. ವೇಲ್ ನ ಕರುಳಿನಲ್ಲಿ ಉತ್ಪತ್ತಿಯಾಗುವ ವ್ಯರ್ಥ ಪದಾರ್ಥಗಳನ್ನು ಅದು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಆ ವ್ಯರ್ಥ ಪದಾರ್ಥವು ಅವುಗಳ ರೆಕ್ಟಮ್ ಗಳ ಮೂಲಕ ಹೊರಬರುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ ಅದರ ಗಾತ್ರ ದೊಡ್ಡದಾಗಿದ್ದರೆ ಮೀನು ತನ್ನ ಬಾಯಿಯ ಮೂಲಕ ಅದನ್ನು ಹೊರಕ್ಕೆ ಉಗುಳುತ್ತದೆ. ಇದು ಕಪ್ಪು ಬಣ್ಣದ ಮೇಣದಂತ ಪದಾರ್ಥವಾಗಿರುತ್ತದೆ. ವೇಲ್ ಗಳು ಸಾಗರ ತೀರದಿಂದ ಬಹಳ ದೂರ ಆಳ ಸಾಗದರಲ್ಲಿ ಇರುವುದರಿಂದ ಅವು ಉಗುಳಿದ ಈ ಪದಾರ್ಥ ನೀರಿನಲ್ಲಿ ತೇಲುತ್ತಾ ಸಾಗರ ತೀರವನ್ನು ಸೇರಲು ವರ್ಷಗಳೇ ಕಳೆದುಹೋಗುತ್ತವೆ.
ಅಲ್ಲದೆ ಈ ಪದಾರ್ಥವು ಉಪ್ಪು ನೀರಿನ ಸಂಪರ್ಕಕ್ಕೆ ಬಂದ ಕಾರಣ ಅದು ಕೆಲವು ವೈಜ್ಞಾನಿಕ ಕಾರಣಗಳಿಂದಾಗಿ ಕಲ್ಲಿನಂತೆ ಗಟ್ಟಿಯಾಗಿಬಿಡುತ್ತದೆ. ಹಾಗೂ ಸಾಗರದ ಅಲೆಗಳ ಹೊಡೆತಕ್ಕೆ ಸಿಕ್ಕಿ ಅದು ಸಾಗರ ತೀರವನ್ನು ಬಂದು ಸೇರುತ್ತದೆ. ಮೇಣದಂತಹ ಈ ವಸ್ತು ವೇಲ್ ಗಳ ಕರುಳಿನಲ್ಲಿ ಉತ್ಪತ್ತಿಯಾಗಿ, ಕೆಲವು ಸಮುದ್ರ ಜೀವಿಗಳು ತಿಮಿಂಗಲ ಹೊಟ್ಟೆಯನ್ನು ಸೇರಿದಾಗ ಅದರಿಂದ ಕರುಳು ಹಾಳಾಗದಂತೆ ಇದು ತಿಮಿಂಗಲಕ್ಕೆ ರಕ್ಷಣೆಯನ್ನು ಕೂಡಾ ನೀಡುತ್ತದೆ ಎನ್ನಲಾಗಿದೆ. ಸಾಮಾನ್ಯವಾಗಿ ಇದು ಹೊಳೆಯುವ ಬಣ್ಣ ಅಥವಾ ಕಡು ಕಪ್ಪು ಬಣ್ಣದಲ್ಲಿ ಕಂಡು ಬರುತ್ತದೆ ಎನ್ನಲಾಗಿದೆ.

ಇನ್ನು ಈ ಮೀನಿನ ವಾಂತಿಗೆ ಇಷ್ಟೊಂದು ದುಬಾರಿ ಬೆಲೆ ಏಕೆ? ಎನ್ನುವುದಾದರೆ ಎಂಬರ್ ಗ್ರೀಸ್ ಅನ್ನು ಸುಗಂಧ ದ್ರವ್ಯಗಳ ಸುವಾಸನೆಯನ್ನು ದೀರ್ಘ ಕಾಲದವರೆಗೂ ಸಂರಕ್ಷಣೆ ಮಾಡಲು ಬಳಸುವರು. ನಾರಿಸ್ ಗೆ ದೊರೆತಿರುವ ಈ ಎಂಬರ್ ಗ್ರೀಸ್ ನ ತೂಕ 100 ಕೆಜಿ ಎನ್ನಲಾಗಿದ್ದು, ಥೈಲ್ಯಾಂಡ್ ನ ಒಬ್ಬ ವ್ಯಾಪಾರಿ ಆ ಗ್ರೀಸ್ ನ ಗುಣಮಟ್ಟ ಚೆನ್ನಾಗಿದ್ದರೆ, ಅದರ ಪ್ರತಿ ಕೆಜಿಗೆ 23740 ಪೌಂಡ್ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾರಂತೆ. ಆಗಿದೆ ಕೊಟ್ಟರೆ ಒಟ್ಟಾರೆ ಮೀನಿನ ವಾಂತಿಯು ನಾರಿ ಸ್ನ ಜೀವನದ ದಿಕ್ಕನ್ನೇ ಬದಲಿಸಿ ಹಾಕಿದೆ.