‘ಈ’ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು ಗಾನ ಕೋಗಿಲೆ ಲತಾ ದಿದಿ; ಒಂದೇ ಒಂದು ‘ವಚನದಿಂದ’ ಮದುವೆಯಾಗಲಿಲ್ಲ!
ತಮ್ಮ ಅದ್ಭುತ ಕಂಚಿನ ಕಂಠದಿಂದ ಭಾರತೀಯ ರಸಿಕರಿಗೆ ಮೋಡಿ ಮಾಡಿದ ಲತಾ ಮಂಗೇಶ್ಕರ್ ಅವರ ಪ್ರವಾಸ ಬಾಲಿವುಡ್ ನಲ್ಲಿ ತುಂಬಾ ದೀರ್ಘವಾದದ್ದು. ಬಾಲಿವುಡ್ ನ ಸುಮಾರು 100 ವರ್ಷಗಳ ಪಯಣದಲ್ಲಿ ಲತಾ ಅವರೇ70 ವರ್ಷಗಳ ಸುದೀರ್ಘ ದಾರಿ ಕ್ರಮಿಸಿದ್ದಾರೆ.
ದಿನಾನಾಥ್ ಮಂಗೇಶ್ಕರ್ ಅವರಿಗೆ ದೊಡ್ಡ ಮಗಳಾಗಿ ಹುಟ್ಟಿದ ಲತಾ ನಂತರ ಆಶಾ, ಉಷಾ, ಮೀನಾ ಮತ್ತು ಪ್ರಖ್ಯಾತ ಸಂಗೀತಗಾರರಾದ ಹೃದಯನಾಥ್ ಮಂಗೇಶ್ಕರ್ ಇವರೆಲ್ಲ ಲತಾ ಅವರ ಸೋದರಿ ಸೋದರರಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಜನ್ಮಿಸಿದ ಲತಾ ಅವರು ತಮ್ಮ ವಯಸ್ಸಿನ 5 ನೇ ವರ್ಷದಿಂದಲೇ ಸಂಗೀತವನ್ನು ಪ್ರಾರಂಭಿಸಿದರು. ಲತಾ ಅವರು 13 ವರ್ಷದವರಿದ್ದಾಗಲೇ ತಂದೆ ತೀರಿಕೊಂಡರು. ಮನೆಯ ಜವಾಬ್ದಾರಿ ಎಲ್ಲವೂ ಇವರ ಮೇಲೆ ಬಿತ್ತು. ಸೋದರ ಸೋದರಿಯರಿಗೆ ತಾಯಿಯ ಸ್ಥಾನದಲ್ಲಿ ನಿಂತರು. ಆಗಿನಿಂದಲೇ ಚಲನಚಿತ್ರದಲ್ಲಿ ಗಾಯನ ಮತ್ತು ನಟನೆಯ ಕೌಶಲ್ಯವನ್ನು ಪಣಕ್ಕಿಡಲು ಪ್ರಾರಂಭ ಮಾಡಿದರು.

ಅಲ್ಲಿಂದ ಶುರುವಾದ ಅವರ ಗಾಯನದ ಪಯಣದಲ್ಲಿ ಇಲ್ಲಿಯವರೆಗೆ 30 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಇಲ್ಲಿಯವರೆಗೆ ಅತೀ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ ಲತಾ ಅವರ ಹೆಸರಿಗೆ ಇದೆ. ಅವರ ಮಧುರ ಗಾಯನಕ್ಕಾಗಿ ಅನೇಕ ಪುರಸ್ಕಾರಗಳು ತಾನಾಗಿಯೇ ಅರಸಿ ಬಂದವು. 2001 ರಲ್ಲಿ ಭಾರತದ ಸರ್ವೋಚ್ಛ ಗೌರವದ ಭಾರತ ರತ್ನ ಪುರಸ್ಕಾರವು ಅವರಿಗೆ ಲಭಿಸಿದೆ. ಸದ್ಯ ಅವರ ವಯಸ್ಸು 90 ರ ಗಡಿ ದಾಟಿದೆ.
ಇಷ್ಟೆಲ್ಲಾ ಆದರೂ ಲತಾ ಅವರು ಇಲ್ಲಿಯವರೆಗೆ ವಿವಾಹವಾಗಲೇ ಇಲ್ಲ. ಏನಿದೆ ಇದರ ರಹಸ್ಯ, ಅವರು ಯಾರಿಗಾದರೂ ಪ್ರೀತಿಸಿದ್ರಾ? ಪ್ರೀತಿಸಿದರೆ ಅವರು ಯಾರು? ಮತ್ತು ಯಾಕೆ ಮದುವೆಯಾಗದೆ ಅವಿವಾಹಿತೆಯಾಗಿಯೇ ಉಳಿದರು ಎನ್ನುವ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಗಳನ್ನು ನಿಮಗಾಗಿ ತಂದಿದ್ದೇವೆ, ಓದಿ ಹಾಗಾದರೆ.

ಮೀಡಿಯಾ ರಿಪೋರ್ಟ್ ಗಳ ಪ್ರಕಾರ ರಾಜಸ್ಥಾನದ ಡುಂಗರಪೂರ ರಾಜವಂಶದ ರಾಜಸಿಂಗ್ ಹೆಸರಿನ ವ್ಯಕ್ತಿಗೆ ಲತಾ ಅವರು ಮನಸೋತಿದ್ದರು. ರಾಜಸಿಂಗ್ ಡುಂಗರಪೂರ್ ಇವರು ಕ್ರಿಕೆಟ್ ನಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ನೀವು ಸದ್ಯ ಮನದಲ್ಲಿ ಯೋಚನೆ ಮಾಡುತ್ತಿರುವ ಪ್ರಕಾರ ಇವರು ಭಾರತ ಕ್ರಿಕೆಟ್ ಬೋರ್ಡ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ್ದಾರೆ.
ರಾಜಸಿಂಗ್ ಅವರು ಲತಾ ಅವರ ಸೋದರ ಹೃದಯನಾಥ್ ಮಂಗೇಶ್ಕರ್ ಅವರ ಆತ್ಮೀಯ ಮಿತ್ರರಾಗಿದ್ದರು. ಇಬ್ಬರಲ್ಲಿ ಪ್ರೀತಿ ಮೂಡಲು ಕ್ರಿಕೆಟ್ ಸಹ ಮಹತ್ವದ ಪಾತ್ರವನ್ನು ವಹಿಸಿದೆ. ಒಂದು ಸಲ ಪ್ರಥಮ ದರ್ಜೆಯ ಕ್ರಿಕೆಟ್ ಆಡಲು ಮುಂಬಯಿಗೆ ಆಗಮಿಸಿದಾಗ ರಾಜಸಿಂಗ್ ಅವರು ಹೃದಯನಾಥ್ ಅವರ ಜೊತೆಗೆ ಮನೆಗೆ ಬಂದಿದ್ದರು. ಆ ಮೊದಲ ಭೇಟಿಯಲ್ಲಿ ಇಬ್ಬರಲ್ಲಿ ಅನುರಾಗ ಮೂಡಿತ್ತು. ಈ ಸಂಬಂಧ ಅನೇಕ ವರ್ಷಗಳ ವರೆಗೆ ನಡೆದರೂ ಮದುವೆ ಮಾತ್ರ ಮಾಡಿಕೊಳ್ಳಲಾಗಲಿಲ್ಲ.

ಅದಕ್ಕೆ ಕಾರಣ ರಾಜಸಿಂಗ್ ಅವರು ತಮ್ಮ ತಂದೆಗೆ ನೀಡಿದ ಒಂದೇ ಒಂದು ಮಾತು. ರಾಜಸಿಂಗ್ ಅವರ ತಂದೆ ಎಂದಿಗೂ ಸಾಮಾನ್ಯ ಕುಟುಂಬದ ಹುಡುಗಿಯ ಜೊತೆಗೆ ಮದುವೆ ಆಗಬೇಡ ಎಂದು ರಾಜಸಿಂಗ್ ಅವರಿಂದ ವಚನ ತೆಗೆದುಕೊಂಡಿದ್ದರು. ಈ ಒಂದು ಕಾರಣದಿಂದ ರಾಜಸಿಂಗ್ ಅವರು ತಂದೆಯ ಮಾತು ಉಳಿಸಿಕೊಳ್ಳಲು ಲತಾ ಅವರ ಜೊತೆಗೆ ಮದುವೆಯಾಗಲಿಲ್ಲ. ಅಷ್ಟೇ ಅಲ್ಲ ರಾಜಸಿಂಗ್ ಅವರೂ ಸಹ ಕೊನೆಯವರೆಗೆ ಅವಿವಾಹಿತವಾಗಿಯೇ ಉಳಿದರು. ಆ ಸಮಯದಲ್ಲಿ ರಾಜವಂಶ ಮತ್ತು ಸಾಮಾನ್ಯ ಕುಟುಂಬದಲ್ಲಿ ತುಂಬಾ ಅಂತರವಿತ್ತು. ಹೀಗಾಗಿ ತಂದೆಗೆ ನೀಡಿದ ವಚನವನ್ನು ಪಾಲಿಸಲು ಇಬ್ಬರು ಮದುವೆಯಾಗದೆ ಹಾಗೆಯೇ ಉಳಿದುಕೊಂಡರು. ಆದರೆ ಇಬ್ಬರ ಸ್ನೇಹ ಮಾತ್ರ ಕೊನೆಯವರೆಗೆ ಉಳಿದಿತ್ತು.