ಇಬ್ಬರಿಗೂ ಒಂದೇ ಅಕೌಂಟ್ ನಂಬರ್ ನೀಡಿದ SBI, ಒಬ್ಬ ಹಣ ಜಮೆ ಮಾಡುತ್ತಿದ್ದರೆ ಇನ್ನೊಬ್ಬ ಮೋದಿಜಿ ಕಳಿಸಿದ್ದಾರೆಂದು ತೆಗೆಯುತ್ತಿದ್ದ!

ವ್ಯಕ್ತಿ ತನ್ನ ಹಣ ಯಾವತ್ತೂ ಸುರಕ್ಷಿತವಾಗಿ ಇರಬೇಕು ಎಂದು ಕಾಳಜಿ ವಹಿಸುತ್ತಾನೆ. ತಾನು ಗಳಿಸಿದ ಹಣ ಸುರಕ್ಷಿತವಾಗಿರಲೆಂದು ಆತ ಬ್ಯಾಂಕಿನಲ್ಲಿ ಇಡುತ್ತಾನೆ. ಆದರೆ ಬ್ಯಾಂಕಿನ ಕುರುಡು ಕಾರುಬಾರುನಿಂದಲೇ ವ್ಯಕ್ತಿಯ ಹಣ ಗುಳುಂ ಆದಾಗ ದಿನಾಲು ದುಡಿದು ಗಳಿಸುವ ಬಡವನ ಪರಿಸ್ಥಿತಿಯ ಬಗ್ಗೆ ವಿಚಾರ ಮಾಡಿ ಹೇಗಾಗಿರಬೇಡ.

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಆಲಂಪೂರ್ ಶಾಖೆಯಲ್ಲಿ ದೇಶದ ಅಗ್ರಗಣ್ಯ ಬ್ಯಾಂಕ್ ಗಳಲ್ಲಿ ಗಣನೆಯಾಗುವ SBI ನಲ್ಲಿ ಈ ಘಟನೆ ನಡೆದಿದೆ. ಇಲ್ಲಿಯ ಒಂದು ಬ್ಯಾಂಕ್ ನಲ್ಲಿ ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿಗೆ ಒಂದೇ ಅಕೌಂಟ್ ನಂಬರ್ ನೀಡಿದ್ದಾರೆ. ಹೀಗಾಗಿ ಇಬ್ಬರಿಗೂ ಆರ್ಥಿಕ ಸಮಸ್ಯೆ ಮತ್ತು ಮಾನಸಿಕ ವೇದನೆಯನ್ನು ಸಹಸಿಕೊಳ್ಳಬೇಕಾಗಿ ಬಂದಿದೆ. ಅಷ್ಟೇ ಅಲ್ಲ ಈ ಪ್ರಕರಣದಿಂದಾಗಿ ಹಣ ತೆಗೆದ ವ್ಯಕ್ತಿಯೊಂದಿಗೆ ಬ್ಯಾಂಕ್ ಅಧಿಕಾರಿಗಳು ಸಹ ಪೇಚಿಗೆ ಸಿಲುಕಿದ್ದಾರೆ.

ರಿಪೋರ್ಟ್ ಗಳ ಪ್ರಕಾರ ಆಲಂಪೂರ್ ನಗರದ ಸಮೀಪದ ರುರಯಿ ಮತ್ತು ರೋನಿ ಊರುಗಳ ನಿವಾಸಿಗಳಾದ ಹುಕುಮ್ ಸಿಂಗ್(ಇಬ್ಬರ ಹೆಸರು ಒಂದೇಯಾಗಿದೆ) ಹೆಸರಿನ ಇಬ್ಬರು ವ್ಯಕ್ತಿಗಳು ಬ್ಯಾಂಕ್ ಖಾತೆಯನ್ನು ಓಪನ್ ಮಾಡಿದ್ದಾರೆ. ಬ್ಯಾಂಕಿನವರು ಇಬ್ಬರಿಗೂ ಒಂದೇ ಖಾತೆ ಸಂಖ್ಯೆಯನ್ನು ನೀಡಿದ್ದಾರೆ. ಇದರಿಂದ ಖಾತೆ ಒಂದು ಅದರ ಮಾಲೀಕರು ಮಾತ್ರ ಇಬ್ಬರು.

ಖಾತೆಯನ್ನು ತೆರೆದ ನಂತರ ರುರಯಿ ನಿವಾಸಿ ಹುಕುಮ್ ಸಿಂಗ್ ಕುಷವಾಹ್ ದುಡಿದು ತಿನ್ನಲು ಹರಿಯಾಣಕ್ಕೆ ಹೋಗಿದ್ದಾನೆ. ಅಲ್ಲಿ ದುಡಿದು ಗಳಿಸಿದ ಹಣದಲ್ಲಿಯೇ ಸ್ವಲ್ಪ ಸ್ವಲ್ಪ ಉಳಿತಾಯ ಮಾಡಿದ ಹಣವನ್ನು ತನ್ನ ಖಾತೆಗೆ ಹಾಕಿದ್ದಾನೆ. ಇತ್ತ ರೋನಿ ಗ್ರಾಮದ ನಿವಾಸಿ ಹುಕುಮ್ ಸಿಂಗ್ ಪ್ರಧಾನಮಂತ್ರಿಯೇ ತನಗೆ ಹಣ ಕಳಿಸುತ್ತಿದ್ದಾರೆಂದು ತಿಳಿದು ಬ್ಯಾಂಕಿನಿಂದ ಹಣ ತೆಗೆದು ಉಪಯೋಗಿಸುತ್ತಿದ್ದ. ಈ ರೀತಿ ಒಂದೆರಡಲ್ಲ ಆರು ತಿಂಗಳುಗಳವರೆಗೆ ಸತತ ಹಾಗೆಯೇ ನಡೆದೇ ಇದೆ. ಈ ಆರು ತಿಂಗಳುಗಳ ಕಾಲಾವಧಿಯಲ್ಲಿ ರೋನಿ ಊರಿನ ನಿವಾಸಿ ಹುಕುಮ್ ಸಿಂಗ್ ಒಟ್ಟು 89 ಸಾವಿರ ರೂಪಾಯಿಗಳನ್ನು ಬ್ಯಾಂಕ್ ನಿಂದ ತೆಗೆದು ಖರ್ಚು ಮಾಡಿದ್ದಾನೆ.

ಮುಂದೆ ಕಳೆದ ನವಂಬರ್ ತಿಂಗಳಿನಲ್ಲಿ ಜಮೀನು ಖರೀದಿ ಮಾಡುವ ಸಲುವಾಗಿ ಹರಿಯಾಣದಲ್ಲಿ ದುಡಿಯುವ ಹುಕುಮ್ ಸಿಂಗ್ ನಿಗೆ ಹಣದ ಅವಶ್ಯಕತೆ ಬಿದ್ದಾಗ ಹಣ ತೆಗೆಯಲು ಬ್ಯಾಂಕಿಗೆ ಹೋದಾಗ ಈ ಮೇಲಿನ ಪ್ರಕರಣ ಬೆಳಕಿಗೆ ಬಂದಿದೆ. ಅಕೌಂಟ್ ನಲ್ಲಿ ಬರೀ 34 ಸಾವಿರ ರೂಪಾಯಿಗಳನ್ನು ನೋಡಿ ಪ್ರಜ್ಞೆ ತಪ್ಪುವದೊಂದೆ ಬಾಕಿ ಉಳಿದಿತ್ತು.

ಇದರ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಮ್ಯಾನೇಜರ್ ಗೆ ಕೇಳಿದಾಗ ಮೊದಮೊದಲು ಉದ್ಧಟತನದ ಉತ್ತರವನ್ನು ನೀಡಿದ್ದಾರೆ. ಆದರೆ ಹಣ ಕಳೆದುಕೊಂಡ ಹುಕುಮ್ ಸಿಂಗ್ ಅಷ್ಟಕ್ಕೇ ಬಿಡದಾದಾಗ ನಂತರದ ಚೌಕಾಶಿಯಲ್ಲಿ ಸತ್ಯ ಹೊರಬಿದ್ದಿದೆ.

ಬ್ಯಾಂಕಿನಿಂದಲೇ ಗೈರು ಕಾರುಬಾರು ನಡೆದಿದೆ ಎಂದು ತಿಳಿದಾಗ ಮ್ಯಾನೇಜರ್ ರಾಜೇಶ್ ಸೊನಕರ್ ಅವರು ಪ್ರಕರಣದ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಂಡು ರೋನಿ ಊರಿನ ಹುಕುಮ್ ಸಿಂಗ್ ನಿಗೆ ಕರೆಸಿ ಹಂತ ಹಂತವಾಗಿ ತೆಗೆದ 89 ಸಾವಿರ ರೂಪಾಯಿಗಳನ್ನು ಬೇಗನೆ ಮರುಪಾವತಿಸಲು ಹೇಳಿದೆ. ಜೊತೆಗೆ ಹರಿಯಾಣದಲ್ಲಿ ದುಡಿದು ಹಣವನ್ನು ಬ್ಯಾಂಕಿಗೆ ತುಂಬಿದ ಹುಕುಮ್ ಸಿಂಗ್ ನಿಗೆ ಬ್ಯಾಂಕಿನವರು ನಿನ್ನ ಎಲ್ಲ ಹಣವನ್ನು ಮರಳಿ ದೊರಕಿಸಿ ಕೊಡುವ ಬಗ್ಗೆ ವಿಶ್ವಾಸ ನೀಡಿದ್ದಾರೆ.

ಈ ಬಗ್ಗೆ ಹಣವನ್ನು ತೆಗೆದು ಉಪಯೋಗಿಸಿದ ರೋನಿ ಊರಿನ ನಿವಾಸಿ ಹುಕುಮ್ ಸಿಂಗ್ ನಿಗೆ ಕೇಳಿದಾಗ, ಇದರಲ್ಲಿ ನನ್ನ ಯಾವ ತಪ್ಪೂ ಇಲ್ಲ, ಮತ್ತು ಇಷ್ಟೊಂದು ಹಣ ಮರಳಿ ಪಾವತಿಸುವ ಶಕ್ತಿಯೂ ನನ್ನಲ್ಲಿಲ್ಲ. ನನ್ನ ಖಾತೆ ಬ್ಯಾಂಕ್ ನಲ್ಲಿ ಇದ್ದು ಅದರಲ್ಲಿ ಹಣ ಬಂತು. ಪ್ರಧಾನಿಯವರೇ ಹಣ ಕಳಸಿರಬಹುದೆಂದು ತಿಳಿದು ಆ ಹಣವನ್ನು ತೆಗೆದು ನಾನು ಖರ್ಚು ಮಾಡಿದೆ. ಸದ್ಯ ನನ್ನ ಹತ್ತಿರ ಹಣವಿಲ್ಲ, ಹಾಗೂ ಇಷ್ಟೊಂದು ಹಣವನ್ನು ಮರಳಿ ಪಾವತಿಸುವುದು ನನ್ನಿಂದ ಅಸಾಧ್ಯವೆಂದು ಹೇಳುತ್ತಾನೆ.