ಕಾರು ಕೊಳ್ಳುವವರಿಗೆ 65 ಸಾವಿರ ರೂ.ಗಳ ವರೆಗೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದ ಟಾಟಾ ಮೋಟಾರ್ಸ್: ಆಸಕ್ತಿಯುಳ್ಳವರಿಗೆ ಕಾರು ಕೊಳ್ಳಲು ಇದೇ ಸಕಾಲ

ಟಾಟಾ ಮೋಟರ್ಸ್ ತನ್ನ ಸ್ಟಾಕನ್ನು ಖಾಲಿ ಮಾಡಲು ವರ್ಷಾಂತ್ಯದ ದೊಡ್ಡ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಈ ರೀತಿಯ ರಿಯಾಯಿತಿಯ ಪ್ರಮುಖವಾದ ಉದ್ದೇಶವು ಹೊಸ ಗ್ರಾಹಕರನ್ನು ಹೆಚ್ಚು ಹೆಚ್ಚು ಆಕರ್ಷಿಸುವುದು ಹಾಗೂ ಉಳಿದಿರುವ ದಾಸ್ತಾನನ್ನು ಆದಷ್ಟು ಬೇಗ ಖಾಲಿ ಮಾಡುವುದಾಗಿದೆ. ದೇಶಿಯ ವಾಹನ ತಯಾರಕ ಕಂಪನಿಗಳಲ್ಲಿ ಅಗ್ರಮಾನ್ಯ ಕಂಪನಿಯಾಗಿರುವ ಟಾಟಾ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ವರ್ಷಾಂತ್ಯದ ಬೆನಿಫಿಟ್ ಗಳ ಕುರಿತಾದ ಪಟ್ಟಿಯೊಂದನ್ನು ಹೊರಡಿಸಿದೆ. ಕಂಪನಿ ತನ್ನ ಕೆಲವು ಆಯ್ದ ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ಅದರಲ್ಲಿ ಕಂಪನಿಯು ಬಿಎಸ್6 ಎಂಜಿನ್ ಕಾರುಗಳಾದ ಟೊಯಾಗೋ, ಟಿಗಾರ್ರ್, ನೆಕ್ಸನ್, ಹ್ಯಾರಿಯರ್ ಫ್ಲ್ಯಾಗ್‌ಶಿಪ್ ಎಸ್‌ಯುವಿಗಳಿಗೆ 65 ಸಾವಿರ ರೂಪಾಯಿಗಳವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

ಟಾಟಾ ಕಂಪನಿಯು ತನ್ನ ಕಾರುಗಳ ಮೇಲಿನ ಈ ರಿಯಾಯಿತಿಯ ಆಫರ್ ಡಿಸೆಂಬರ್ 1, 2020 ರಿಂದಲೇ ಆರಂಭವಾಗಿದೆ. ಇದರಲ್ಲಿ ಗ್ರಾಹಕರ ಸ್ಕೀಂ, ಎಕ್ಸ್ಚೇಂಜ್ ಆಫರ್ ಹಾಗೂ ಕಾರ್ಪೊರೇಟ್ ಆಫರ್ ಗಳು ಕೂಡಾ ಸೇರಿವೆ. ಟಾಟಾ ಹ್ಯಾರಿಯರ್ ಫ್ಲಾಗ್ ಶಿಪ್ ನಲ್ಲಿ ಕಂಪನಿಯು ಗ್ರಾಹಕರಿಗೆ 65 ಸಾವಿರ ರೂಪಾಯಿಗಳ ಬೆನಿಫಿಟ್ ಅನ್ನು ನೀಡುತ್ತಿದೆ. ಇದರಲ್ಲಿ 25 ಸಾವಿರ ರೂಪಾಯಿಗಳ ಗ್ರಾಹಕರ ಯೋಜನೆ ಮತ್ತು 40 ಸಾವಿರ ಮೌಲ್ಯದ ಎಕ್ಸ್ಚೇಂಜ್ ಆಫರನ್ನು ನೀಡಲಾಗಿದೆ. ಈ ರಿಯಾಯಿತಿ ಆಫರ್ ಗಳು CAMO ಮತ್ತು ಡಾರ್ಕ್ ಎಡಿಷನ್ ಗಳಿಗೆ ನೀಡಲಾಗಿಲ್ಲ ಎನ್ನಲಾಗಿದೆ.

ಆದಾಗ್ಯೂ ಗ್ರಾಹಕರು ವಿಶೇಷ ಎಡಿಷನ್ ಅನ್ನು ಕೊಳ್ಳಲು ಬಯಸಿದರೆ ಅವರಿಗೆ 40 ಸಾವಿರ ರೂಪಾಯಿಗಳ ಬೆನಿಫಿಟ್ ಮಾತ್ರ ಪಡೆಯುವ ಅವಕಾಶವನ್ನು ನೀಡಲಾಗಿದೆ. ‌ನೆಕ್ಸನ್ ಸಬ್ ಕಾಂಪಾಕ್ಟ್ ಎಸ್ ಯು ವಿ ಗಳ ಮೇಲೆ ಕೂಡಾ ಟಾಟಾ ವರ್ಷಾಂತ್ಯದ ರಿಯಾಯತಿಯ ಮೂಲಕ ಮಾರಾಟಕ್ಕೆ ಅವಕಾಶವನ್ನು ನೀಡಲಾಗಿದೆ. ಈ ಆಫರ್ ನಲ್ಲಿ ಎಸ್ ಯು ವಿ ಯನ್ನು 15 ಸಾವಿರ ರೂಪಾಯಿಗಳ ವಿನಿಮಯ ಆಫರ್ ನ ಅಡಿಯಲ್ಲಿ ಕೊಳ್ಳುವ ಅವಕಾಶವನ್ನು ನೀಡಲಾಗಿದೆ‌. ಆದರೆ ಈ ಆಫರ್ ಕೇವಲ ಡೀಸೆಲ್ ವೇರಿಯಂಟ್ ವಾಹನಕ್ಕೆ ಮಾತ್ರವೇ ಹೊರತು ಪೆಟ್ರೋಲ್ ವೇರಿಯಂಟ್ ವೆಹಿಕಲ್ ಗೆ ನೀಡಲಾಗುವುದಿಲ್ಲ ಎನ್ನುವ ನಿಯಮ ಕೂಡಾ ಇದೆ.

ಟಾಟಾದ ಟಿಯಾಗೋ ಹ್ಯಾಚ್ ಬ್ಯಾಕ್ ಮೇಲೆ 25 ಸಾವಿರ ರೂಪಾಯಿಗಳ ವರೆಗೆ ರಿಯಾಯಿತಿಯನ್ನು ಪಡೆಯುವ ಸದವಕಾಶವನ್ನು ಈಗ ಕಲ್ಪಿಸಲಾಗಿದೆ. ಅಲ್ಲದೇ ಇದರಲ್ಲಿ 25 ಸಾವಿರದ ಗ್ರಾಹಕರ ಸ್ಕೀಂ ಹಾಗೂ 15 ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಆಫರನ್ನು ಕೂಡಾ ಶಾಮೀಲು ಮಾಡಲಾಗಿದೆ. ಟಿಗಾರ್ ಸೆಡಾನ್ ಮೇಲೆ ಅಧಿಕ ಅಂದರೆ 30 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ 15 ಸಾವಿರದ ಗ್ರಾಹಕ ಸ್ಕೀಂ ಮತ್ತು 15 ಸಾವಿರದ ಎಕ್ಸ್ಚೇಂಜ್ ಆಫರ್ ಎರಡನ್ನೂ ಕೂಡಾ ಸೇರಿಸಲಾಗಿದೆ ಎಂದು ತಿಳಿಸಲಾಗಿದೆ.

ಕಾರನ್ನು ಖರೀದಿ ಮಾಡುವ ಇಚ್ಛೆ ಇರುವವರಿಗೆ ಟಾಟಾ ಕಂಪನಿಯು ಇದೀಗ ವರ್ಷಾಂತ್ಯದ ಬೆನಿಫಿಟ್ ಗಳನ್ನು ಘೋಷಣೆಯ ಮಾಡಿದ್ದು, ನಿಜಕ್ಕೂ ಇದು ಕಾರು ಖರೀದಿ ಮಾಡುವವರಿಗೆ ಇದು ಸದವಕಾಶ ಎಂದು ಹೇಳಬಹುದಾಗಿದೆ. ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಕೂಡಾ ಇತ್ತೀಚಿಗೆ ಕ್ರ್ಯಾಷ್ ಟೆಸ್ಟ್ ನಲ್ಲಿ ಕೂಡಾ ಟಾಟಾ ಕಂಪನಿಯ ಕಾರುಗಳು ಉತ್ತಮ ಸ್ಟಾರ್ ರೇಟಿಂಗ್ ಕೂಡಾ ಪಡೆದಿರುವ ವಿಚಾರಗಳು ಸುದ್ದಿಯಾಗಿದ್ದನ್ನು ಕೂಡಾ ನಾವಿಲ್ಲಿ ಸ್ಮರಿಸಬಹುದಾಗಿದೆ. ಒಟ್ಟಾರೆ ಕಾರು ಖರೀದಿಯ ಆಸಕ್ತಿಯುಳ್ಳವರು ಒಂದು ಪ್ರಯತ್ನವನ್ನು ಖಂಡಿತ ಈಗ ಮಾಡಬಹುದಾಗಿದೆ.‌