ಈ ಲೇಖನದ ಮುಖಾಂತರ ‘ನಿರಾಕರಣೆ’ ಮಾಡುವ ಕಲೆಯನ್ನು ಕಲಿತುಕೊಳ್ಳಿ
ಭಾರತೀಯ ಸಂಸ್ಕೃತಿಯಲ್ಲಿ ಸಂಬಂಧಗಳಿಗೆ ತುಂಬಾ ಬೆಲೆ ಉಂಟು. ಈ ಸಂಬಂಧಗಳಲ್ಲಿ ನೆಂಟರಿಷ್ಟರು, ಮಿತ್ರರು, ಆಫೀಸ್ ವರ್ಗದವರು, ಅಕ್ಕ-ಪಕ್ಕದವರು ಹೀಗೆ ಬೇರೆ ಬೇರೆ ವರ್ಗದವರು ಶಾಮಿಲಾಗುತ್ತಾರೆ.
ಯಾವುದೇ ವಿಷಯಗಳ ಸಂಬಂಧವಾಗಿ ಇವರ ಜೊತೆಗೆ ಬೇಡ ಎನ್ನಲು ಅಥವಾ ನಿರಾಕರಣೆ ಮಾಡಲು ತುಂಬಾ ಭಾರವೆನಿಸಿ ಯೋಚಿಸಿ ಯೋಚಿಸಿ ಕೊನೆಗೆ ಕೆಲವೊಂದು ಸಂದರ್ಭಗಳಲ್ಲಿ ಮುಲಾಜಿಗೆ ಬಿದ್ದು ಹೂ ಎನ್ನುವ ಪ್ರಸಂಗ ಬರುತ್ತದೆ.
ನಮಗೆ ಯಾರಾದರೂ ಸಹಾಯ ಬೇಡಿದರೆ ಯಾವುದೇ ವಿಚಾರ ಮಾಡದೆ ಥಟ್ಟನೆ yes ಎಂದು ಬಿಡುತ್ತೇವೆ. ನಮಗೆ ಒಂದು ವೇಳೆ ಅದು ಸಹಜ ಸಾಧ್ಯವಿದ್ದರೆ ಯಾವುದೇ ಅಡ್ಡಿಯಿಲ್ಲ. ಆದರೆ ಕೆಲವೊಂದು ಸಮಯದಲ್ಲಿ ಸಹಾಯ ನಮ್ಮಿಂದ ಸಾಧ್ಯವಿಲ್ಲದೆ ಇದ್ದಾಗ್ಯೂ ನಿರಾಕರಣೆಯನ್ನು ಹೇಗೆ ಮಾಡಲಿ ಎಂಬ ಮುಲಾಜಿಗೆ ಬಿದ್ದು ಹೂ ಅಥವಾ yes ಎಂದುಬಿಡುತ್ತೇವೆ. ಇದರಿಂದ ನಾವು ಸಮಸ್ಯೆಯಲ್ಲಿ ಸಿಕ್ಕಿ ಬೀಳುತ್ತೇವೆ. ಈ ರೀತಿ ಮೇಲಿಂದ ಮೇಲೆ ಆಗುತ್ತಿದ್ದರೆ ನಾವು ಮೇಲಿಂದ ಮೇಲೆ ಕಷ್ಟದಲ್ಲಿ ಸಿಲುಕುತ್ತಾ ಹೋಗುತ್ತೇವೆ. ಯಾಕೆಂದರೆ ಬೇಡ ಎನ್ನಲು ಅಥವಾ ನಿರಾಕರಣೆ ಮಾಡಲು ನಮ್ಮಿಂದ ಸಾಧ್ಯವಾಗದೆ ಇದ್ದಾಗ ಸಮಸ್ಯೆಗಳು ತುಂಬಾ ಬೆಳೆಯುತ್ತ ಹೋಗುತ್ತವೆ.
ಇಂಥ ಸಂದರ್ಭಗಳಲ್ಲಿ ಎದುರಿನವರಿಗೆ ಬೇಡ ಎನ್ನಲು ಅಥವಾ ನಿರಾಕರಣೆ ಮಾಡಲು ತುಂಬಾ ಸಮಸ್ಯೆ ಆಗುತ್ತಿದ್ದರೆ ಅಂತಹ ಸಮಯದಲ್ಲಿ ಅದನ್ನು ನಿರಾಕರಿಸುವ ಕೆಲವೊಂದು ಉಪಾಯಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ. ನೋಡಿ ಅವು ಯಾವವು ಅಂತ….
- ನಿರಾಕರಣೆ ಮಾಡುವ ಪದ್ಧತಿಯನ್ನು ಬದಲಾಯಿಸಿಕೊಳ್ಳಿ:- ಯಾವುದೇ ಒಂದು ವ್ಯಕ್ತಿಗೆ ಯಾವುದೋ ಒಂದು ಕೆಲಸಕ್ಕೆ ಸಂಬಂಧಿಸಿದ ಸಹಾಯಕ್ಕಾಗಿ ನೇರವಾಗಿ ನಿರಾಕರಿಸುವದಕ್ಕಿಂತ ” ನನಗೆ ನಿಜವಾಗಿಯೂ ನಿಮಗೆ ಸಹಾಯ ಮಾಡಲು ಇಷ್ಟವಿದೆ ಆದರೆ…. ಎಂಬ ಮಾತುಗಳಿಂದ ನಿಮ್ಮ ಅಸಹಾಯಕತೆಯನ್ನು ಒತ್ತಿ ಹೇಳಲು ಪ್ರಯತ್ನಿಸಿ. ಇದರಿಂದ ಎದುರಿನ ವ್ಯಕ್ತಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಯತ್ನಿಸುವನು, ಹಾಗೂ ನಿಮ್ಮ ಮೇಲೆ ಆತನಿಗೆ ರೋಷವೂ ಬರುವುದಿಲ್ಲ.
- ನೀವು ನಿಮ್ಮ ಯೋಗ್ಯ ಕಾರಣವನ್ನು ನೀಡಿ:- ಎದುರಿನ ವ್ಯಕ್ತಿಗೆ ಯಾವುದೇ ಒಂದು ಕೆಲಸಕ್ಕಾಗಿ ಒಂದು ವೇಳೆ ನಿಮ್ಮಲ್ಲಿ ಸಹಾಯ ಮಾಡುವ ಇಚ್ಛೆ ಇಲ್ಲದಿದ್ದರೆ ಅದಕ್ಕೆ ಸಂಬಂಧ ಪಟ್ಟ ಯೋಗ್ಯ ಕಾರಣವನ್ನು ವಿವರಿಸಿ ಹೇಳಿ. ಇದರಿಂದ ನಿಮ್ಮ ಸಮಸ್ಯೆಯ ಅರಿವು ಎದುರಿನ ವ್ಯಕ್ತಿಗೆ ಆಗುವುದು. ಇದರಿಂದ ನಿಮ್ಮ ಬಗ್ಗೆ ಇರುವ ತಪ್ಪು ಗ್ರಹಿಕೆ ದೂರಾಗುವುದು.
ಎದುರಿನ ವ್ಯಕ್ತಿ ಬಯಸುವ ಕಾರ್ಯ ನಿಮ್ಮಿಂದ ಆಗದೇ ಇದ್ದಾಗ ಅದಕ್ಕೆ ಸರಿಯಾದ ಕಾರಣವನ್ನು ನೀಡಿದಾಗ, ನೀವು ಬೇರೆ ಕೆಲಸದಲ್ಲಿ ತೊಡಗಿರುವ ಬಗ್ಗೆ ವ್ಯಕ್ತಿಗೆ ಅರಿವಾಗುವುದು. ಇದರಿಂದ ನಿಮ್ಮ ಸಮಸ್ಯೆಯ ಅರಿವು ಆತನಿಗೆ ಮಾಡಿಕೊಡುವುದರಿಂದ ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುವುದು.

- ಸ್ವಲ್ಪದರಲ್ಲಿ ನಿರಾಕರಿಸಿ:– ಒಂದು ಕೆಲಸಕ್ಕಾಗಿ ವ್ಯಕ್ತಿಯೊಬ್ಬ ಅಥವಾ ಸಂಬಂಧಿಕ ಸಹಾಯ ಬೇಡಿ ಬಂದಾಗ ನಿರಾಕರಿಸುವುದು ತುಂಬಾ ದೊಡ್ಡ ಸಮಸ್ಯೆಯಾಗುತ್ತದೆ. ಆದರೂ ಅಂಥ ಸಂದರ್ಭಗಳಲ್ಲಿ ನಿಮ್ಮ ಸಮಸ್ಯೆಯನ್ನು ಅಥವಾ ನಿಮ್ಮ ಕಾರಣವನ್ನು ಯೋಗ್ಯವಾಗಿಯೇ ಹಾಗೂ ಸರಿಯಾಗಿ ಸ್ವಲ್ಪದರಲ್ಲಿ ಹೇಳಲು ಯತ್ನಿಸಿ. ಕಾರಣ ನಿರಾಕರಿಸುವ ಭರದಲ್ಲಿ ಅನೇಕ ಕಾರಣಗಳನ್ನು ನೀಡುವುದು ಸರಿಯಲ್ಲ. ಏಕೆಂದರೆ ಎದುರಿನ ವ್ಯಕ್ತಿಯು ದೂರ್ತ ನಾಗಿದ್ದರೆ ನಿಮ್ಮನ್ನು ಮಾತಿನಲ್ಲಿ ಹಿಡಿಯಬಹುದು. ಆದ್ದರಿಂದ ಅತಿಯಾದ ಕಾರಣಗಳನ್ನು ಹೇಳುವ ಬದಲಾಗಿ ಸ್ವಲ್ಪದರಲ್ಲಿ ಹಾಗೂ ಸ್ಪಷ್ಟವಾದ ಶಬ್ದಗಳಲ್ಲಿ ನಿರಾಕರಿಸಿ ಮುಗಿಸಿ ಬಿಡಿ.
- ಬೇರೆ ಮಾರ್ಗವನ್ನು ಸೂಚಿಸಿ:- ಒಂದು ಕೆಲಸಕ್ಕಾಗಿ ಸ್ಪಷ್ಟವಾಗಿ ಬೇಡ ಎನ್ನಲು ಸಮಸ್ಯೆ ಆಗುತ್ತಿದ್ದರೆ ಆ ಕೆಲಸಕ್ಕಾಗಿ ನನಗೆ ಈಗ ಸಮಯವಿಲ್ಲ ಬೇರೆ ಸಮಯ ಬಂದಾಗ ನಾನು ಆ ಕೆಲಸವನ್ನು ಮಾಡಿಕೊಡುವೆ ಎಂದು ಹೇಳಿ. ಇಲ್ಲವಾದರೆ ನಿಮ್ಮ ಪರಿಚಯದವರಿಂದ ಕೆಲಸವು ಸಾಧ್ಯವಾಗುವ ಹಾಗಿದ್ದರೆ ಅವರಿಂದ ಮಾಡಿ ಕೊಡಿಸುತ್ತೇನೆ ಅಥವಾ ಅವರ ಹೆಸರುಗಳನ್ನು ಸೂಚಿಸುವ ಹಾಗಿದ್ದರೆ ಸೂಚಿಸಬಹುದು.
ಇದರಿಂದ ಸಮಸ್ಯೆ ಬಗೆಹರಿಯುವ ಜೊತೆಗೆ ಎದುರಿನ ವ್ಯಕ್ತಿಗೂ ಸಹಿತ ಸಮಾಧಾನ ವಾಗುವುದು.
- ಒಮ್ಮೆಲೆ ನಿರಾಕರಿಸ ಬೇಡಿ:- ಯಾವುದೇ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಬೇಡವೆನ್ನಲು ಅಥವಾ ನಿರಾಕರಿಸಲು ಮೊದಲೇ ನಿರ್ಧರಿಸಿದ್ದರೆ ಹಾಗೆ ಥಟ್ಟನೆ ನಿರಾಕರಿಸಲು ಹೋಗಬೇಡಿ. ಆ ಸಮಯದಲ್ಲಿ ಈ ಬಗ್ಗೆ ನಾನು ಸಮಯ ಬಂದಾಗ ಹೇಳುತ್ತೇನೆ ಅಥವಾ ನಂತರ ತಿಳಿಸುತ್ತೇನೆ ಇಲ್ಲವಾದರೆ ಮನೆಯವರ ಜೊತೆ ಚರ್ಚೆ ಮಾಡಿ ಆಮೇಲೆ ಹೇಳುತ್ತೇನೆ ಎನ್ನುವ ಮಾತುಗಳನ್ನು ಆಡಿ. ಇಷ್ಟಾದ ನಂತರ ಒಂದು ಅಥವಾ ಎರಡು ದಿವಸಗಳ ನಂತರ ನಿಮ್ಮ ನಿರಾಕರಣೆಯನ್ನು ತಿಳಿಸಿಬಿಡಿ. ಏಕೆಂದರೆ ಒಂದು ವೇಳೆ ಯಾವುದೇ ರಿಪ್ಲೈ ಕೊಡದೆ ಇದ್ದರೆ ಅದು ಸಹ ಸರಿಯೆನಿಸುವುದಿಲ್ಲ.
- ಫೋನ್ ಕಾಲ್ ಅಥವಾ ಮೆಸೇಜ್ ಮುಖಾಂತರ ನಿರಾಕರಿಸಿ:- ಕೆಲವೊಂದು ಸಂದರ್ಭಗಳಲ್ಲಿ ಸ್ಪಷ್ಟವಾಗಿ ಮುಖದ ಮುಂದೆಯೆ ನಿರಾಕರಿಸುವುದು ಅಷ್ಟೊಂದು ಸರಿಯೆನಿಸುವುದಿಲ್ಲ.ಅಂಥ ಸಂದರ್ಭಗಳಲ್ಲಿ ಸ್ವಲ್ಪ ಸಮಯದ ನಂತರ ಇದರ ಬಗ್ಗೆ ಯೋಚಿಸಿ ಹೇಳುತ್ತೇನೆಂದು ನಂತರ ಫೋನ್ ಕಾಲ್ ಮತ್ತು ಮೆಸೇಜ್ ಮುಖಾಂತರ ನಿಮ್ಮ ನಿರ್ಣಯವನ್ನು ತಿಳಿಸಬಹುದು.
- ನಿರಾಕರಿಸಿದ ನಂತರ ಸಾರಿ ಎನ್ನಿ:- ಒಂದು ಸಹಾಯ ಬೇಡಿ ಬಂದಾಗ ಅದನ್ನು ನಿರಾಕರಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಆದರೆ ನಮ್ಮಿಂದ ಸಹಾಯವನ್ನು ಮಾಡಲು ಸಾಧ್ಯವಾಗದೇ ಇದ್ದಾಗ ನಿರಾಕರಿಸುವುದೇ ಒಳ್ಳೆಯದು. ಹಾಗಂತ ಥಟ್ಟನೆ ಏಕ್ ಮಾರ್ ದೋ ತುಕಡಾ ಎಂಬಂತೆ ನಿರಾಕರಿಸಿದರೆ ಎದುರಿನ ವ್ಯಕ್ತಿಗೆ ನಮ್ಮ ಬಗ್ಗೆ ತಾತ್ಸಾರ ಮನೋಭಾವನೆ ನಿರ್ಮಾಣವಾಗುವುದು. ಅದಕ್ಕಾಗಿಯೇ ನಿರಾಕರಿಸಿದ ನಂತರ ಮೆತ್ತಗೆ ಸಾರೀ ಎನ್ನಲು ಮಾತ್ರ ಮರೆಯಬೇಡಿ.
ಈ ಮೇಲಿನ ಕೆಲವು ಉಪಾಯಗಳ ಮುಖಾಂತರ ನಾವು ನಮ್ಮನ್ನು ಹಾಗೂ ನಮ್ಮ ಮನಸ್ಸಿಗೆ ವಿರುದ್ಧವಾಗಿ ಮಾಡುವ ಕೆಲಸಗಳಿಂದ ಬಂಧುಮಿತ್ರರ ಮುಲಾಜಿಗೆ ಬೀಳದೆ ಜಾಗ್ರತೆಯಿಂದ ಉಳಿದುಕೊಳ್ಳಬಹುದು.