ಯಾವ ಕೋರ್ಟ್ ನಲ್ಲಿ ತಂದೆ ಜವಾನನಾಗಿದ್ದರೋ ಇಂದು ಅದೇ ಕೋರ್ಟ್ ನಲ್ಲಿ ಮಗಳು ಜಡ್ಜ್ : ಸಾಧನೆಯ ಈ ಕಥೆ ಸ್ಪೂರ್ತಿಯ ಸೆಲೆ ಎಂದರೆ ತಪ್ಪಾಗದು
ಜೀವನದಲ್ಲಿ ಗುರಿಯನ್ನು ಸಾಧಿಸಲು ಬೇಕಾಗಿರುವುದು ಪ್ರಯತ್ನ ಹಾಗೂ ಸಾಧನೆಯ ಕಡೆಗೆ ನಡೆಯುವ ಧೈರ್ಯ ಮತ್ತು ಆತ್ಮವಿಶ್ವಾಸ. ಅನೇಕ ಸಂದರ್ಭಗಳಲ್ಲಿ ಇವುಗಳ ಕೊರೆತೆಯ ಕಾರಣದಿಂದಾಗಿಯೇ ಅನೇಕರು ಗುರಿ ತಲುಪುವಲ್ಲಿ ವಿಫಲರಾಗಿ ಬಿಡುತ್ತಾರೆ. ಆದರೆ ಈ ಗುಣಗಳು ಇದ್ದವರು ತಮ್ಮ ಗುರಿಯನ್ನು ಖಚಿತವಾಗಿ ತಲುಪಿಯೇ ತೀರುತ್ತಾರೆ. ಒಮ್ಮೆ ಊಹಿಸಿ ನೋಡಿ ತಂದೆ ಜವಾನನಾಗಿ ಕೆಲಸ ಮಾಡಿದ ಕೋರ್ಟ್ ನಲ್ಲೇ ಆತನ ಮಗಳು ಇಂದು ತನ್ನ ಸಾಧನೆಯ ಮೂಲಕ ನ್ಯಾಯಾಧೀಶೆಯ ಸ್ಥಾನವನ್ನು ಪಡೆಯುತ್ತಾರೆ ಎಂದು. ಬಹುಶಃ ಊಹಿಸಿಕೊಂಡರೆ ಅದ್ಭುತವೆನಿಸುವ ಈ ವಿಷಯ ಯಾವುದೇ ಕಥೆ ಅಥವಾ ಕಲ್ಪನೆಯಲ್ಲ, ಬದಲಿಗೆ ನಿಜ ಜೀವನದಲ್ಲಿ ಇಂತಹದೊಂದು ಸಾಧನೆಯನ್ನು ಮೆರೆದು ಅನೇಕರಿಗೆ ಇಂದು ಸ್ಫೂರ್ತಿಯಾಗಿದ್ದಾರೆ ಪಾಟ್ನಾದ ಅರ್ಚನಾ ಕುಮಾರಿ.
ಬಿಹಾರದ ಸೋನ್ ಪುರ ಸಿವಿಲ್ ಕೋರ್ಟ್ ನಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ ಗೌರಿನಂದನ್ ಅವರ ಮಗಳು ಅರ್ಚನಾ ಕುಮಾರಿ. ಈಕೆ ಓದಿದ್ದು ಸರ್ಕಾರಿ ಶಾಲೆಯ ಹಿಂದಿ ಮಾಧ್ಯಮದಲ್ಲಿ. ಶಾಸ್ತ್ರಿ ನಗರದ ಕನ್ಯಾ ಹೈಸ್ಕೂಲ್ನಲ್ಲಿ 12ನೇ ತರಗತಿಯವರೆಗೆ ಶಿಕ್ಷಣವನ್ನು ಪಡೆದ ಅರ್ಚನ ಕುಮಾರಿಯವರು, ಪಾಟ್ನಾದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. ಆದರೆ ತಂದೆಯ ಅ ಕಾಲಿಕ ಮೃ ತ್ಯು ವಿನಿಂದ ಮನೆಯ ಜವಾಬ್ದಾರಿಯನ್ನು ಕೂಡಾ ಹೆಗಲಿಗೇರಿಸಿ ಕೊಂಡ ಅರ್ಚನಾ ಕುಮಾರಿ ಕುಟುಂಬವನ್ನು ನಿಭಾಯಿಸುವುದರ ಜೊತೆಗೆ ಶಿಕ್ಷಣವನ್ನು ಮುಂದುವರಿಸಿದರು. ಇವರಿಗೆ ಪಾಟ್ನಾ ಮೆಡಿಕಲ್ ಕಾಲೇಜಿನಲ್ಲಿ ಕ್ಲರ್ಕ್ ಆಗಿದ್ದ ರಾಜೀವ್ ರಂಜನ್ ಅವರೊಡನೆ ವಿವಾಹವಾಯಿತು.
ವಿವಾಹದ ನಂತರ ಅವರ ಪತಿಯೇ ಅರ್ಚನ ಅವರನ್ನು ಪುಣೆ ವಿಶ್ವವಿದ್ಯಾಲಯದಲ್ಲಿ ಎಲ್ ಎಲ್ ಬಿ ಕೋರ್ಸ್ ಗೆ ದಾಖಲಾತಿಯನ್ನು ಮಾಡಿಸಿದರು. ಹಿಂದಿ ಮಾಧ್ಯಮದಿಂದ ಬಂದ ಅರ್ಚನ ಅವರು ಬಹಳ ಶ್ರಮಪಟ್ಟು ಆಂಗ್ಲಮಾಧ್ಯಮದಲ್ಲಿದ್ದ ಎಲ್ ಎಲ್ ಬಿ ಯನ್ನು ಮುಗುಸಿದರು. ಅನಂತರ ಬಿಎಂಟಿ ಲಾ ಕಾಲೇಜಿನಲ್ಲಿ ತಮ್ಮ ಎಲ್ಎಲ್ಎಂ ಪದವಿಯನ್ನು ಕೂಡ ಪಡೆದುಕೊಂಡರು. ಇದಾದನಂತರ ಅವರು ತಮ್ಮ ಎರಡನೇ ಪ್ರಯತ್ನದಲ್ಲೇ ಬಿಹಾರದ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಸಫಲತೆಯನ್ನು ಸಾಧಿಸಿ, ಜಡ್ಜ್ ಆದವರು. ಅರ್ಚನಾ ಅವರು ಮಾತನಾಡುತ್ತಾ ಸೋನ್ಪುರದಲ್ಲಿ ಒಂದು ಸಣ್ಣ ಮನೆಯಲ್ಲಿ ವಾಸಿಸುವಾಗ ತಾನು ಜಡ್ಜ್ ಆಗಬೇಕೆಂಬ ಕನಸನ್ನು ಕಂಡಿದ್ದಾಗಿ ಹೇಳಿದ್ದಾರೆ.

ತಂದೆಯ ಸಾ ವಿ ನ ನಂತರದ ದಿನಗಳಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗಿತ್ತು. ಆದರೂ ಕೂಡ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನವನ್ನು ಮಾತ್ರ ಕೈಬಿಡಲು ತಾನು ಬಯಸಲಿಲ್ಲ ಎನ್ನುವ ಅರ್ಚನಾ ಕುಮಾರಿ ಅವರು, ತಾನು ಮದುವೆಯ ನಂತರ ಎಲ್ ಎಲ್ ಬಿ ಹಾಗೂ ಎಲ್ಎಲ್ಎಂ ಪದವಿಗಳನ್ನು ಪೂರ್ಣಗೊಳಿಸಿದೆ ಹಾಗೂ ಜುಡಿಷಿಯರಿ ಪರೀಕ್ಷೆಗಳಿಗೆ ತಯಾರಿಯಲ್ಲಿ ಇದ್ದಂತಹ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೆಲಸವನ್ನು ಕೂಡಾ ಮಾಡಿದೆ. ಇನ್ನು ತನ್ನ ಜೀವನದ ಪ್ರತಿ ತಿರುವಿನಲ್ಲೂ ಕೂಡಾ ತನ್ನ ತಾಯಿ ತನಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳುತ್ತಾರೆ.
ಅಲ್ಲದೇ ಮದುವೆ ನಂತರ ತಮ್ಮ ಪತಿ ಕೂಡಾ ತನ್ನ ಗುರಿಯನ್ನು ತನಗೆ ಸಂಪೂರ್ಣ ಸಹಯೋಗವನ್ನು ನೀಡಿದರು. ತನ್ನ ಒಡಹುಟ್ಟಿದವರು ಗುರಿ ತಲುಪಲು ಬೇಕಾದ ಹುಮ್ಮಸ್ಸನ್ನು ನೀಡಿದರು ಎಂದು ಎಲ್ಲರ ಸಹಕಾರ ವನ್ನು ಸ್ಮರಿಸುತ್ತಾ, ಮಹಿಳೆಯು ಏನಾದರೂ ಸಾಧಿಸಬೇಕೆಂದು ನಿರ್ಧರಿಸಿದರೆ, ಅವಳು ಖಂಡಿತವಾಗಿ ಅದನ್ನು ಸಾಧಿಸಬಲ್ಲಳು. ಆದರೆ ಸಾಧನೆಯ ಹಾದಿಯಲ್ಲಿ ಎಂದೂ ಕೂಡಾ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದು ಅರ್ಚನಾ ಕುಮಾರಿ ಅವರು ಹೇಳುತ್ತಾರೆ. ಹೌದಲ್ಲವೇ ಸ್ನೇಹಿತರೇ ಜೀವನದಲ್ಲಿ ಸಾಧಿಸುವ ಛಲ ಹಾಗೂ ಮುನ್ನಡೆಯುವ ಆತ್ಮ ವಿಶ್ವಾಸ ನಮ್ಮಲ್ಲಿ ಇದ್ದರೆ ಯಾವುದೇ ತಡೆಗೋಡೆಗಳು ನಮ್ಮನ್ನು ತಡೆಯುವುದು ಅಸಾಧ್ಯ.