ಪ್ರತಿದಿನ 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ಸಿಗುವ ಲಾಭಗಳು
ವೈದ್ಯರಿಂದ ದೂರವಿರ ಬೇಕಾದರೆ ದಿನಂಪ್ರತಿ ನಡೆಯುವುದು ಎಲ್ಲಕ್ಕೂ ಒಳ್ಳೆಯ ಔಷಧಿಯಾಗಿದೆ. ಮನುಷ್ಯನ ಒಳ್ಳೆಯ ಆರೋಗ್ಯಕ್ಕಾಗಿ ನಿದ್ರೆ, ಸಮತೋಲಿತ ಆಹಾರದ ಜೊತೆಗೆ ದಿನಂಪ್ರತಿ ವಾಕಿಂಗ್ ಈ ಮೂರು ಕೃತಿಗಳು ತುಂಬಾ ಮಹತ್ವದ್ದಾಗಿವೆ. ಪ್ರತಿದಿನ ನಡೆಯುವುದರಿಂದ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಿಸಲು ಸಹಾಯವಾಗುತ್ತದೆ.
ಪ್ರತಿಯೊಬ್ಬರಿಗೂ ಗೊತ್ತಿರುವ ಹಾಗೆ ಸದ್ಯ ವ್ಯಕ್ತಿಯ ಜೀವನಶೈಲಿಯು ಪರಿಪೂರ್ಣವಾಗಿ ಬದಲಾಗಿದೆ. ಈ ಬದಲಾವಣೆ ವ್ಯಕ್ತಿಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಕೆಲಸದ ಒತ್ತಡ, ಅನಿಯಮಿತ ಮತ್ತು ಜಂಕ್ ಫುಡ್ಸ್ ಗಳ ಸೇವನೆ, ವ್ಯಾಯಾಮದಿಂದ ದೂರ, ರಾತ್ರಿ ಬೇಗನೆ ಮಲಗಿ ಕೊಳ್ಳದೇ ಇರುವುದು, ಇವೆಲ್ಲ ವ್ಯಕ್ತಿಯ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳು ಬೀರುತ್ತವೆ.
ಎಷ್ಟೇ ಕೆಲಸದ ಒತ್ತಡಗಳಿದ್ದರೂ ನಮ್ಮ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಲು ನಾವು ಇಂದಿನ ದಿನಗಳಲ್ಲಿ ಪ್ರಯತ್ನಿಸಲೇಬೇಕಾಗಿದೆ. ಯಾಕೆಂದರೆ ಆರೋಗ್ಯವೇ ಭಾಗ್ಯ. ಒಂದು ವೇಳೆ ಆರೋಗ್ಯವೇ ಚೆನ್ನಾಗಿಲ್ಲದಿದ್ದರೆ ಹಣ ಎಷ್ಟೊಂದು ಗಳಿಸಿ ಯಾವುದಕ್ಕೆ ಉಪಯೋಗ ಮಾಡುವುದು? ನೀವೇ ಹೇಳಿ. ನಾವು ಮತ್ತು ನಮ್ಮ ಆರೋಗ್ಯ ಚೆನ್ನಾಗಿದ್ದರೆ ಈ ಜಗವು ಮತ್ತು ಈ ಜಗತ್ತಿನಲ್ಲಿ ಇರುವವರು ಹಾಗೂ ನಮ್ಮವರು ಎಲ್ಲರೂ ಚೆನ್ನಾಗಿ ಕಾಣುವರು. ಇಲ್ಲವಾದರೆ ಇಲ್ಲ.

ಆದ್ದರಿಂದ ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಅನೇಕ ವ್ಯಾಯಾಮಗಳನ್ನು ಮಾಡಬಹುದು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ದಿನಂಪ್ರತಿ 30 ನಿಮಿಷಗಳನ್ನು ವಾಕಿಂಗ್ ಸಲುವಾಗಿ ಕಾಯ್ದಿರಿಸಿದರೂ ಸಹ ನಮ್ಮ ಆರೋಗ್ಯಕ್ಕೆ ಅನೇಕ ಲಾಭಗಳು ಆಗುತ್ತವೆ. ಕಾರಣ ವಾಕಿಂಗ್ ನಿಂದ ಭವಿಷ್ಯದಲ್ಲಾಗಬಹುದಾದ ಅನೇಕ ರೋಗಗಳನ್ನು ಮೊದಲೇ ತಡೆಗಟ್ಟಬಹುದು. ದಿನಾಲು 30 ನಿಮಿಷಗಳ ವಾಕಿಂಗ್ ನಮ್ಮ ದೇಹಕ್ಕೆ ಯಾವ ಯಾವ ಲಾಭಗಳನ್ನು ನೀಡುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
- ಮೆದುಳಿನಲ್ಲಾಗುವ ಸಕಾರಾತ್ಮಕ ಬದಲಾವಣೆಗಳು:- ದಿನಂಪ್ರತಿ ವಾಕಿಂಗ್ ಮಾಡುವುದು ಮೆದುಳಿನ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ಇದರಿಂದ ಮಾನಸಿಕ ಆರೋಗ್ಯ ಸುಧಾರಣೆಯಾಗಲು ಸಹಾಯವಾಗುತ್ತದೆ. ವಾಕಿಂಗ್ ಮುಖಾಂತರ ಅಲ್ಝೈಮರ್ ರೋಗದಿಂದ ದೂರವಿರಲು ಸಾಧ್ಯವಾಗುತ್ತದೆ.
- ಹೃದಯ ರೋಗದಿಂದ ದೂರವಿರಲು ಸಾಧ್ಯ:- ಹೃದಯ ರೋಗದಿಂದ ದೂರವಿರಬೇಕೆಂದರೆ ವಾಕಿಂಗ್ ಇದು ತುಂಬಾ ಪರಿಣಾಮಕಾರಿಯಾದ ಅಸ್ತ್ರವಾಗಿದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಅವರು ಹೇಳುವ ಪ್ರಕಾರ, ಹೃದಯ ರೋಗ ಮತ್ತು ಸ್ಟ್ರೋಕ್ಸ್ ನಿಂದ ಬಚಾವ್ ಮಾಡಿಕೊಳ್ಳಬೇಕಾದರೆ ದಿನಂಪ್ರತಿ ವಾಕಿಂಗ್ ಮಾಡುವುದು ತುಂಬಾ ಸುಲಭ ಹಾಗೂ ಒಳ್ಳೆಯ ಉಪಾಯ. ನಿಯಮಿತವಾಗಿ ನಡೆದಾಡುವ ಈ ಪ್ರಕ್ರಿಯೆಯು ವ್ಯಕ್ತಿಯ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ ರಕ್ತ ಪರಿಚಲನೆಯನ್ನು ಸುಧಾರಿಸಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ.
- ಶ್ವಾಸಕೋಶಗಳಿಗೆ ಟ್ರೈನಿಂಗ್ ನೀಡುತ್ತದೆ:- ನಿಯಮಿತವಾಗಿ ನಡೆಯುವುದು ಇದೊಂದು ಏರೋಬಿಕ್ ವ್ಯಾಯಾಮ ಇದ್ದಂತೆ. ಇದರಿಂದ ರಕ್ತಪ್ರವಾಹದಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಾಗುತ್ತದೆ. ವಾಕಿಂಗ್ ಇದು ದೇಹದಲ್ಲಿ ಕಲ್ಮಶ ಮತ್ತು ವಿಷಯುಕ್ತ ಘಟಕಗಳನ್ನು ಹೊರಗೆ ಹಾಕಲು ಶ್ವಾಸಕೋಶಕ್ಕೆ ಒಂದು ರೀತಿಯ ಟ್ರೈನಿಂಗ್ ನೀಡುತ್ತದೆ. ನಿಯಮಿತವಾಗಿ ನಡೆದಾಡುವರಿಂದ ಶ್ವಾಸಕೋಶದ ಸಮಸ್ಯೆಗಳು ದೂರವಾಗುತ್ತದೆ.
- ಮೇದೋಜೀರಕಗ್ರಂಥಿಗಳಿಗೆ ಲಾಭದಾಯಕ:- ನಾವು ಹೇಳುವುದರ ಮೇಲೆ ಬಹುಶಃ ನಿಮಗೆ ವಿಶ್ವಾಸ ಕೂಡಲಿಕ್ಕಿಲ್ಲ. ಯಾಕೆಂದರೆ ಅಧ್ಯಯನದ ಪ್ರಕಾರ, ಓಡುವದು ಅಥವಾ ರನಿಂಗ್ ಮಾಡುವುದಕ್ಕಿಂತ ವಾಕಿಂಗ್ ಮಾಡುವುದು ಮಧುಮೇಹವನ್ನು ತಡೆಗಟ್ಟಲು ತುಂಬಾ ಪರಿಣಾಮಕಾರಿಯಾಗಿದೆ. ಆರು ತಿಂಗಳುಗಳ ಕಾಲಾವಧಿಯಲ್ಲಿ ರನ್ನಿಂಗ್ ಮತ್ತು ವಾಕಿಂಗ್ ಮಾಡುವ ಈ ಇಬ್ಬರ ರಕ್ತ ಪರೀಕ್ಷೆ ನಡೆಸಲಾಗಿ ವಾಕಿಂಗ್ ಮಾಡುವವರ ರಕ್ತವು ಗ್ಲುಕೊಜ್ ನ್ನು ಚೆನ್ನಾಗಿ ಶೋಷಿಸುತ್ತದೆ.
- ಪಚನ ಶಕ್ತಿ ಹೆಚ್ಚಿಸುವುದು:- ಪ್ರತಿನಿತ್ಯ ನಿಯಮಿತವಾಗಿ ಸುಮಾರು 30 ನಿಮಿಷಗಳ ಕಾಲ ನಡೆಯುವುದರಿಂದ ಭವಿಷ್ಯದಲ್ಲಿ ಹೊಟ್ಟೆಯ ಕ್ಯಾನ್ಸರ್ ರೋಗವನ್ನು ತಡೆಗಟ್ಟುವದರೊಂದಿಗೆ ಪಚನಕ್ರಿಯೆ ಹಾಗೂ ಮಲಬದ್ಧತೆಯನ್ನು ದೂರ ಮಾಡುತ್ತದೆ.
- ಕೀಲು ಮತ್ತು ಎಲುಬುಗಳನ್ನು ಬಲಿಷ್ಠ ಮಾಡುವುದು:- ದಿನನಿತ್ಯ ವಾಕಿಂಗ್ ಮಾಡುವ ಚಟ ಕೀಲುಗಳಲ್ಲಿ ಹೆಚ್ಚಿನ ಚಲನಶೀಲತೆಯನ್ನು ನಿರ್ಮಾಣ ಮಾಡುತ್ತದೆ. ಇದರಿಂದ ಎಲಬುಗಳ ಸವಕಳಿಯಾಗುವದನ್ನು ನಿಲ್ಲಿಸಲು ಸಾಧ್ಯವಾಗುತ್ತದೆ. ಫ್ಯಾಕ್ಚರ್ ಆಗುವ ಅಪಾಯ ತುಂಬಾ ಕಡಿಮೆಯಾಗಿರುತ್ತದೆ. ಕೀಲು ನೋವಿಗೆ ಸಂಬಂಧಿಸಿದ ವೈದ್ಯರಂತೂ ವ್ಯಕ್ತಿಗೆ ದಿನಾಲು 30 ನಿಮಿಷಗಳವರೆಗೆ ನಡೆಯಲು ಹೇಳುತ್ತಾರೆ. ಇದರಿಂದ ಕೀಳುಗಳಲ್ಲಿರುವ ಗಡಸುತನ ಮತ್ತು ಬಾವು ಕಡಿಮೆಯಾಗಲು ಸಹಾಯವಾಗುತ್ತದೆ.