ಚಳಿಯ ಮುಂಜಾನೆ ಮನೆಯಿಂದ ಹೊರಗೆ ಬಂದ ಬಾತುಕೋಳಿಗಳು, ಚಳಿಗೆ ಹೆದರಿ ಮಾಡಿದ ಕೆಲಸ ನೋಡಿ ಆಶ್ಚರ್ಯ ಪಟ್ಟ ನೆಟ್ಟಿಗರು

ನಾವು ಯಾವುದೋ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಬೇಕಾದರೆ ನಮ್ಮೊಡನೆ ಯಾವ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇದೆ ಎಂಬುದನ್ನು ಗಮನಿಸಿ ಅವೆಲ್ಲವೂ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಂಡು ಹೊರಗಡೆ ಹೋಗುತ್ತೇವೆ. ಆದರೆ ಅನೇಕ ಸಂದರ್ಭಗಳಲ್ಲಿ ಹಾಗೆ ಹೊರಗೆ ಹೋದಾಗ ಒಂದಷ್ಟು ದೂರ ಹೋದ ಮೇಲೆ ಪರ್ಸನ್ನೋ, ಕರವಸ್ತ್ರವನ್ನೋ ಅಥವಾ ಇನ್ಯಾವುದೋ ಅಗತ್ಯ ವಸ್ತುಗಳನ್ನು ಮರೆತು ಬಂದಿದ್ದೇವೆ ಎಂಬುದು ನೆನಪಾಗಿ ಮತ್ತೆ ಮನೆಗೆ ವಾಪಸ್ಸು ಬರುವಂತಹ ಪ್ರಸಂಗಗಳು ಎಷ್ಟೋ ಬಾರಿ ನಡೆದಿರುತ್ತದೆ. ಇಂತಹ ಘಟನೆಗಳು ಅನೇಕರ ಜೀವನದ ಅನುಭವ ಗಳಲ್ಲಿ ಇದ್ದೇ ಇರುತ್ತದೆ. ವಿಚಿತ್ರ ಏನೆಂದರೆ ಇದು ಅನೇಕರ ದೈನಂದಿನ ಜೀವನದಲ್ಲಿ ಇದು ಒಂದು ರೀತಿ ಸಾಮಾನ್ಯ ಕೂಡ ಎನಿಸಿಬಿಟ್ಟಿದೆ.

ಆದರೆ ಪ್ರಾಣಿ-ಪಕ್ಷಿಗಳ ವಿಚಾರದಲ್ಲಿ ಇಂತಹುದೊಂದು ಸಮಸ್ಯೆ ಅವುಗಳಿಗೆ ಎದುರಾಗುವುದಿಲ್ಲ. ಏಕೆಂದರೆ ಅವುಗಳು ಹೊರಗೆ ಹೋಗುವಾಗ ನಮ್ಮಂತೆ ಅಗತ್ಯ ವಸ್ತುಗಳನ್ನು ಜೊತೆಗಿಟ್ಟುಕೊಂಡು ಹೋಗುವ ಅವಶ್ಯಕತೆ ಅಥವಾ ಅನಿವಾರ್ಯತೆ ಇಲ್ಲ. ಆದರೆ ಇಲ್ಲೊಂದು ಸುಂದರವಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಪಕ್ಷಿಗಳ ಪ್ರವರ್ತನೆಯನ್ನು ಮನೆಯಿಂದ ಹೊರಗೆ ಹೋಗಿ ಏನೋ ಮರೆತು ಮನೆಗೆ ವಾಪಸಾಗುವ ಮಂದಿಗೆ ಹೋಲಿಕೆಯನ್ನು ಮಾಡಿದ್ದು ವಿಡಿಯೋವನ್ನು ನೋಡಿದಾಗ ನಮಗೂ ಕೂಡ ಹೌದಲ್ಲವೇ ಅನ್ನಿಸದೇ ಇರಲಾರದು ಹಾಗೂ ಅನೇಕರು ಅದಕ್ಕೆ ತಮ್ಮ ಅನುಭವಗಳ ಪ್ರತಿಕ್ರಿಯೆಗಳನ್ನು ಕೂಡಾ ನೀಡುತ್ತಿದ್ದಾರೆ.

ಇಷ್ಟಕ್ಕೂ ಈ ವಿಡಿಯೋ ದಲ್ಲಿ ಇರುವ ಆ ಸುಂದರವಾದ ಸನ್ನಿವೇಶ ಏನು ಎನ್ನುವುದಾದರೆ, ಒಂದು ಮುಂಜಾನೆ ಶೀತ ಪ್ರದೇಶದಲ್ಲಿ ಸುತ್ತಲೂ ಹಿಮ ಬಿದ್ದಿರುವ ಜಾಗದಲ್ಲಿ ಮನೆಯೊಂದರಲ್ಲಿನ ಬಾತುಕೋಳಿಗಳನ್ನೆಲ್ಲ ಒಟ್ಟಾಗಿ ಹೊರಗಡೆ ಬಿಟ್ಟಿದ್ದಾರೆ. ಮನೆಯ ಬಾಗಿಲು ತೆರೆದ ಕೂಡಲೇ ಬಾತುಕೋಳಿಗಳ ಗುಂಪು ಒಂದರ ಹಿಂದೆ ಒಂದು ಮನೆಯ ಹೊರಗಿನ ಅಂಗಳಕ್ಕೆ ಬಂದಿದೆ. ಹೀಗೆ ಬಂದ ಬಾತುಕೋಳಿಗಳು ಸುತ್ತಲಿನ ಶೀತ ವಾತಾವರಣವನ್ನು ಗಮನಿಸಿವೆ, ಅಲ್ಲದೇ ತೀವ್ರವಾದ ಚಳಿಯ ಅನುಭವ ಆದ ಕೂಡಲೇ ಹೊರಗೆ ಹೋಗುವ ಬದಲು ಆ ಬಾತುಕೋಳಿಗಳೆಲ್ಲಾ ಮನೆಯೊಳಗೆ ಓಡಿವೆ.

ಬಹುಶಃ ಮನೆಯೊಳಗೇ ಬೆಚ್ಚಗೆ, ಬಹಳ ಆರಾಮವಾಗಿದೆಯೇನೋ ಎನ್ನುವಂತೆ ಅವು ತರಾತುರಿಯಲ್ಲಿ ಮತ್ತೆ ಮನೆಯೊಳಕ್ಕೆ ಓಡಿ ಹೋಗಿವೆ. ಬಾತುಕೋಳಿಗಳ ಈ ವರ್ತನೆಯು ನೆಟ್ಟಿಗರ ಕಣ್ಣಿಗೆ ಬಹಳ ಮುದ್ದಾಗಿ ಕಂಡಿದೆ. ಈ ವೀಡಿಯೋ ಶೇರ್ ಮಾಡಿಕೊಂಡ ಸುಶಾಂತ್ ನಂದಾ ಅವರು “ಓಹ್ ಅವು ತಮ್ಮ ಕೋಟ್ ಮರೆತು ಬಂದಿರುವ ಹಾಗಿದೆ” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಹೊರಗೆ ಚಳಿಯನ್ನು ಮರೆತು ಕೋಟ್ ಧರಿಸದೇ ಬಂದರೆ ಮತ್ತೆ ಮನೆಗೆ ಓಡಬೇಕಾದ ಪರಿಸ್ಥಿತಿ ಎನ್ನುವ ಹಾಗೆ ಬಾತುಕೋಳಿಗಳ ವರ್ತನೆ ಕಂಡಿದೆ ಎಂದು ಅವರು ಹೇಳಿದ್ದಾರೆ.

ವಿಡಿಯೋ ನೋಡಿ

12 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿರುವ ಈ ವೀಡಿಯೋವನ್ನು ಒಂದು ಸಾವಿರಕ್ಕೂ ಅಧಿಕ ಮಂದಿ ಮೆಚ್ಚಿದ್ದಾರೆ. ನೆಟ್ಟಿಗರೊಬ್ಬರು ನಾನು ಕೂಡಾ ಹೀಗೆ, ಮನೆಯಿಂದ ಹೊರಗೆ ಬಂದ ಮೇಲೆ ಒಂದಷ್ಟು ದೂರ ಹೋದಾದ ಹೆಲ್ಮೆಟ್ ನೆನಪಾಗಿ ಮನೆಗೆ ವಾಪಸ್ಸು ಬರುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಒಂಬತ್ತು ತಿಂಗಳ ರಜೆಯ ನಂತರ ಕಾಲೇಜಿಗೆ ಹೋದಾಗ ಆನ್ಲೈನ್ ತರಗತಿಗಳ ಅಸೈನ್ಮೆಂಟ್ ಕೇಳಿದರೆ ಇದೇ ಪರಿಸ್ಥಿತಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮತ್ತೊಬ್ಬರು ಚಳಿಗಾಲದಲ್ಲಿ ಆ ಬಾತುಕೋಳಿಗಳಿಗೆ ಮನೆಯಲ್ಲೇ ಆಶ್ರಯ ನೀಡಿರುವ ಮನೆ ಮಾಲಿಕನಿಗೆ ಹ್ಯಾಟ್ಸಾಫ್ ಎಂದಿದ್ದಾರೆ.