ಮತ್ತೆ ಚಿನ್ನದ ಬೆಲೆಯಲ್ಲಿ ಕುಸಿತ, ಹತ್ತು ತಿಂಗಳ ಹಿಂದಿನ ಬೆಲೆಗೆ ಇಳಿದ ಬೆಲೆ: ಇನ್ನೇಕೆ ತಡ ಖರೀದಿಗೆ ಇಲ್ಲಿದೆ ಸುವರ್ಣಾವಕಾಶ

ಚಿನ್ನವನ್ನು ಖರೀದಿ ಮಾಡಲು ಯೋಚಿಸುತ್ತಿರುವಿರಾ? ಹಾಗಾದರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ ಲಭ್ಯವಿದೆ. ಏಕೆಂದರೆ ಚಿನ್ನದ ಬೆಲೆಯಲ್ಲಿನ ಇಳಿಕೆ ಹಾಗೆ ಮುಂದುವರೆದಿದೆ. MCX ನಲ್ಲಿ ಚಿನ್ನದ ಬೆಲೆಯು ಬುಧವಾರದಂದು ಕಳೆದ ಹತ್ತು ತಿಂಗಳ ಅವಧಿಯಲ್ಲೇ ಕಾಣದ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಎಂಸಿಎಕ್ಸ್ ನಲ್ಲಿ ಬುಧವಾರ ಚಿನ್ನದ ಮೇಲೆ 24 ರೂಪಾಯಿಗಳಷ್ಟು ಕಡಿಮೆಯಾಗಿ ಅದು ಪ್ರತಿ ಹತ್ತು ಗ್ರಾಂ ಗೆ 45,524 ರೂಪಾಯಿಗಳನ್ನು ತಲುಪಿದೆ. ಮಂಗಳವಾರದ ದಿನ ವಹಿವಾಟು ಕೊನೆಗೊಂಡಾಗ ಚಿನ್ನದ ಬೆಲೆ 45,548 ರೂಪಾಯಿಗಳಿತ್ತು. ಇಂದು ಬೆಳಿಗ್ಗೆ 10:30 ರ ಸಮಯದಲ್ಲಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂ ಗೆ 45,460 ರೂಪಾಯಿ ಇತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಡು ಬಂದಂತಹ ದುರ್ಬಲ ಪ್ರವೃತ್ತಿ ಹಾಗೂ ಭಾರತೀಯ ರೂಪಾಯಿ ಯಲ್ಲಿ ಆದಂತಹ ಸುಧಾರಣೆಯ ಪರಿಣಾಮವಾಗಿ ರಾಷ್ಟ್ರ ರಾಜಧಾನಿ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು 679 ರೂಪಾಯಿಗಳ ಕುಸಿತದೊಂದಿಗೆ ಪ್ರತಿ ಹತ್ತು ಗ್ರಾಂ ಗೆ 44,760 ರೂಪಾಯಿಗಳಿಗೆ ತಲುಪಿತ್ತು. ಅದರ ಹಿಂದಿನ ವಹಿವಾಟಿನಲ್ಲಿ ಚಿನ್ನದ ಬೆಲೆಯು ಪ್ರತಿ ಹತ್ತು ಗ್ರಾಂ 45,439 ರೂಪಾಯಿಗಳಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಂಗಳವಾರ
ಚಿನ್ನದ ಬೆಲೆಯಲ್ಲಿನ ಕುಸಿತದಿಂದಾಗಿ ಅದರ ಬೆಲೆಯು
ಪ್ರತಿ ಔನ್ಸ್ ಗೆ 1719 ಡಾಲರ್ ಗಳಷ್ಟಿದ್ದರೆ, ಚಿನ್ನದ ಸ್ಪಾಟ್ ಬೆಲೆ ಸೋಮವಾರ ಮತ್ತೊಮ್ಮೆ 241 ರೂ ಗಳಷ್ಟು ಏರಿಕೆಯಾಗಿತ್ತಾದರೂ ಮತ್ತೆ ಬೆಲೆಗಳು ಇಳಿಯಲಾರಂಭಿಸಿದವು.

ಚಿನ್ನದ ಬೆಲೆಯಲ್ಲಿ ಅದರ ಸರ್ವಕಾಲಿಕ ಗರಿಷ್ಠ ಮಟ್ಟ ಅಂದರೆ ಸುಮಾರು 11,500 ರೂ ಗಳಷ್ಟು ಕುಸಿತವನ್ನು ಕಂಡಿದೆ. ಇನ್ನು ಕೇವಲ ಈ ವರ್ಷವೇ ಚಿನ್ನದ ಬೆಲೆಯಲ್ಲಿ ಸುಮಾರು 5000 ಸಾವಿರ ರೂಪಾಯಿಗಳಷ್ಟು ಕುಸಿತವನ್ನು ಕಂಡಿದೆ. ಚಿನ್ನದ ಬೆಲೆ ಕಳೆದ ಆಗಸ್ಟ್ ನಲ್ಲಿ ಸರ್ವಕಾಲಿಕ ಗರಿಷ್ಠ ಅಂದರೆ 56,200 ರೂಗಳನ್ನು ತಲುಪಿತ್ತು. ಆದರೆ ಅದೇ ಚಿನ್ನದ ಬೆಲೆಯು ಈಗ 10 ಗ್ರಾಂಗೆ 44,760 ರೂ.ಗಳ ಬೆಲೆಗೆ ಕುಸಿದಿದೆ. ಪ್ರಸ್ತುತ ಶೇರು ಮಾರುಕಟ್ಟೆಯಲ್ಲಿ ಒಂದು ದಾಖಲೆ ನಿರ್ಮಾಣವಾಗುತ್ತದೆ. ಆದರೆ ಚಿನ್ನದ ಬೆಲೆ ಮಾತ್ರ ಅತ್ಯಂತ ಕೆಳ‌ಮಟ್ಟವನ್ನು ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಕೂಡಾ ಎಲ್ಲಿ ಹೂಡಿಕೆಯನ್ನು ಮಾಡುವುದು ಎನ್ನುವ ಗೊಂದಲಕ್ಕೆ ಈಡಾಗಿದ್ದಾರೆ. ಜನರಿಗೆ ಚಿನ್ನದ ಮೇಲೆ ಹೂಡಿಕೆ ಮಾಡುವುದೋ ಅಥವಾ ಶೇರ್ ಗಳ ಮೇಲೆ ಹೂಡಿಕೆ ಮಾಡುವುದೋ ತಿಳಿಯದಂತಾಗಿದೆ.

ಕೆಲವರಿಗೆ ಈ ಎರೆಡರ ಬದಲಾಗಿ ಫಿಕ್ಸೆಟ್ ಡೆಪಾಸಿಟ್ ಗಳಲ್ಲಿ ಹಣವನ್ನು ತೊಡಗಿಸುವುದು ಉತ್ತಮ ಎನಿಸಿತೊಡಗಿದೆ ಎನ್ನುವುದು ಕೂಡಾ ಸತ್ಯವಾದ ಮಾತಾಗಿದೆ. ಶೇರ್ ಮಾರುಕಟ್ಟೆ ಪ್ರಸ್ತುತ ಗರಿಷ್ಠ ಮಟ್ಟದಲ್ಲಿದೆ. ಆದರೆ ಇದೇ ಸಮಯದಲ್ಲಿ ಹೂಡಿಕೆ ಮಾಡುವುದು ಕೂಡಾ ಅಷ್ಟು ಸೂಕ್ತವಲ್ಲ ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ. ಅಲ್ಲದೇ ಫಿಕ್ಸೆಡ್ ಡಿಪಾಸಿಟ್ ಗಳಲ್ಲಿ ದೊರೆಯುವ ಬಡ್ಡಿಯ ಮೊತ್ತ ಕೂಡಾ ಕಡಿಮೆ ಎನ್ನುವ ಕಾರಣಕ್ಕೆ ಕೆಲವರು ಅಲ್ಲಿ ಕೂಡಾ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ.
ಮತ್ತೊಂದು ಕಡೆ ನೀವು ಚಿನ್ನದ ವಿಷಯಕ್ಕೆ ಬಂದರೆ ಚಿನ್ನವು ಕಳೆದ ವರ್ಷ ತನ್ನ ವಹಿವಾಟಿನಿಂದಾಗಿ ಅದು 28% ಲಾಭವನ್ನು ನೀಡಿತ್ತು. ಅದರ ಹಿಂದಿನ ವರ್ಷವೂ ಚಿನ್ನದ ಆದಾಯವು ಶೇಕಡಾ 25 ರಷ್ಟಿತ್ತು.

ಆದ ಕಾರಣ ನೀವೇನಾದರೂ ದೀರ್ಘಕಾಲದವರೆಗೆ ಹೂಡಿಕೆಯನ್ನು ಮಾಡುತ್ತಿದ್ದರೆ, ನಿಮ್ಮ ಹೂಡಿಕೆಗೆ ಚಿನ್ನವು ಅತ್ಯಂತ ಸುರಕ್ಷಿತ ಮತ್ತು ಉತ್ತಮ ಆಯ್ಕೆಯಾಗಿದೆ ಎನ್ನುವುದಕ್ಕೆ ಅನುಮಾನವಿಲ್ಲ ಹಾಗೂ ಇದು ಖಚಿತವಾಗಿ ಅತ್ಯುತ್ತಮ ಲಾಭವನ್ನು ನೀಡುತ್ತದೆ. ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡಾ ಬಜೆಟ್ ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಮೇಲಿನ ಆಮದು ಶುಲ್ಕವನ್ನು ತಗ್ಗಿಸುವ ಘೋಷಣೆಯನ್ನು ಮಾಡಿದ್ದರು. ಅದರಂತೆ ಅವರೆಡರ ಮೇಲಿನ ಆಮದು ಶುಲ್ಕದಲ್ಲಿ 5% ಕಡಿತಗೊಳಿಸಲಾಗಿದೆ. ಪ್ರಸ್ತುತ, ಚಿನ್ನ ಮತ್ತು ಬೆಳ್ಳಿಯ ಮೇಲೆ 12.5% ​​ಆಮದು ಸುಂಕವನ್ನು ಪಾವತಿಸಬೇಕಾಗಿತ್ತು, ಆದರೆ ಸರ್ಕಾರದ ಘೋಷಣೆಯ ನಂತರ ಚಿನ್ನ ಮತ್ತು ಬೆಳ್ಳಿಯ ಮೇಲೆ ಕೇವಲ 7.5% ಆಮದು ಸುಂಕವನ್ನು ಪಾವತಿಸಲಾಗುವುದು.