ಅಂತರಿಕ್ಷದಲ್ಲಿ ಆರಂಭವಾಗಲಿದೆ ಐಶಾರಾಮೀ ಹೊಟೇಲ್: ರೆಸ್ಟೋರೆಂಟ್, ಸ್ಪಾ, ಸಿನಿಮಾ, ಇನ್ನೂ ಹತ್ತು ಸೌಲಭ್ಯಗಳು ಇಲ್ಲಿ ಲಭ್ಯ

ಭೂಮಿಯ ಮೇಲೆ ಬೇರೆ ಬೇರೆ ದೇಶಗಳಲ್ಲಿ ಒಂದಕ್ಕಿಂತ ಇನ್ನೊಂದು ಎನ್ನುವಂತಹ ಐಷಾರಾಮಿ ಹೋಟೆಲ್ ಗಳು ಸಾಕಷ್ಟಿದೆ. ಆದರೆ ಇದೀಗ ಭೂಮಿಯಿಂದ ಹೊರಗೆ ನಿರ್ಮಾಣವಾಗಲಿರುವ ಐಷಾರಾಮಿ ಹೋಟೆಲ್ ಬಗ್ಗೆ ಕೂಡ ತಿಳಿದುಕೊಳ್ಳಲು ಸಿದ್ಧರಾಗಿ. ಇಂದಿನಿಂದ ನಾಲ್ಕು ವರ್ಷಗಳ ನಂತರ ಅಂದರೆ 2025 ರಲ್ಲಿ ಭೂಮಿಯ ಕೆಳಗಿನ ಕಕ್ಷೆಯಲ್ಲಿ ಈ ವಿಸ್ಮಯಕಾರಿ ಹೋಟೆಲ್ ನಿರ್ಮಾಣ ಕಾರ್ಯವು ಆರಂಭವಾಗಲಿದೆ. ಈ ಹೋಟೆಲ್ ನಲ್ಲಿ ಒಂದು ರೆಸ್ಟೋರೆಂಟ್, ಸಿನಿಮಾ ಥಿಯೇಟರ್ ಹಾಗೂ 400 ಮಂದಿ ಉಳಿದುಕೊಳ್ಳಲು ಕೊಠಡಿಗಳನ್ನು ಕೂಡಾ ಹೊಂದಿರುತ್ತದೆ ಎನ್ನಲಾಗಿದೆ. ಆರ್ಬಿಟಲ್ ಅಸೆಂಬ್ಲಿ ಕಾರ್ಪೊರೇಷನ್ ವೊಯೇಜರ್ ಸ್ಟೇಷನ್ 2027ರ ವೇಳೆಗೆ ಪೂರ್ಣವಾಗಲಿದೆ ಎನ್ನಲಾಗಿದ್ದು, ಈ ಬಾಹ್ಯಕಾಶ ಕೇಂದ್ರವು ಒಂದು ವೃತ್ತವಾಗಿದ್ದು ಕೃತಕವಾದ ಗುರುತ್ವಾಕರ್ಷಣ ಶಕ್ತಿಯನ್ನು ಉತ್ಪಾದಿಸಲು ಸದಾ ತಿರುಗುತ್ತಿರುತ್ತದೆ ಎನ್ನಲಾಗಿದೆ. ಈ ಗುರುತ್ವಾಕರ್ಷಣೆಯು ಚಂದ್ರನ ಗುರುತ್ವಾಕರ್ಷಣೆಗೆ ಸರಿ ಸಮನಾಗಿರುತ್ತದೆ ಎನ್ನಲಾಗಿದೆ.

ವೊಯೆಜರ್ ಸ್ಟೇಷನ್ ಹೋಟೆಲ್ ನಲ್ಲಿ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ ಎನ್ನಲಾಗಿದ್ದು, ಇದು ನಮಗೆ ಕ್ರೂಜ್ ಶಿಪ್ ನಲ್ಲಿ ದೊರೆಯುವ ಸೌಲಭ್ಯಗಳನ್ನು ನೆನಪಿಸುತ್ತದೆ. ಈ ವಿಶಾಲವಾದ ರಿಂಗ್ ನ ಹೊರಭಾಗದಲ್ಲಿ ಹಲವಾರು ಬೀಜಕೋಶ ಗಳಂತಹ ನಿರ್ಮಾಣಗಳನ್ನು ಅಳವಡಿಸಲಾಗುವುದು ಎನ್ನಲಾಗಿದ್ದು, ಇವುಗಳಲ್ಲಿ ಕೆಲವನ್ನು ನಾಸಾ ಅಥವಾ ಎಸಾ ಗೆ ಅವುಗಳ ಬಾಹ್ಯಾಕಾಶ ಸಂಶೋಧನೆಗಾಗಿ ಮಾರಾಟ ಮಾಡುವ ಸಾಧ್ಯತೆ ಕೂಡ ಇದೆ. ಎಸಿ ಪ್ರಕಾರ ಸ್ಪೇಸ್ ಎಕ್ಸ್ ಫಾಲ್ಕನ್ ನೈನ್ ಮತ್ತು ಸ್ಟಾರ್ ಶಿಪ್ ನಂತಹ ಉಡಾವಣಾ ವಾಹನಗಳಿಂದ ಇದನ್ನು ನಿರ್ಮಾಣ ಮಾಡುವುದು ಸ್ವಲ್ಪ ಕಡಿಮೆ ವೆಚ್ಚವಾಗುವುದು ಎನ್ನಲಾಗಿದೆ. ಕಕ್ಷೆಯಲ್ಲಿ ಪರಿಭ್ರಮಿಸುವ ಬಾಹ್ಯಾಕಾಶ ಕೇಂದ್ರದ ಕಲ್ಪನೆಯ 1950 ರಲ್ಲಿ ನಾಸಾದ ಅಪೋಲೋ ಕಾರ್ಯಕ್ರಮದ ಜೊತೆ ಬೆಸೆದುಕೊಂಡಿದ್ದ ವಾರ್ನರ್ ವನ್ ಬ್ರನ್ ಅವರ ಪರಿಕಲ್ಪನೆ ಎನ್ನಲಾಗಿದೆ. ಆದರೆ ಈ ವೊಯೇಜರ್ಸ್ ಸ್ಟೇಷನ್ ಅವರ ಪರಿಕಲ್ಪನೆ ಗಿಂತಲೂ ದೊಡ್ಡದಾಗಿದೆ ಎನ್ನಲಾಗಿದ್ದು, ಗೇಟ್ ವೇ ಫೌಂಡೇಶನ್ ಪ್ರಾರಂಭದೊಂದಿಗೆ 2012 ರಲ್ಲಿ ಈ ಪರಿಕಲ್ಪನೆ ಮೊದಲ ಬಾರಿಗೆ ಜನರ ಮುಂದೆ ಬಂದಿತ್ತು.

ಒಂದು ವೇಳೆ ವೊಯೇಜರ್ಸ್ ಸ್ಟೇಷನ್ ನಿಜವೇ ಆದಲ್ಲಿ ಮಾನವರಿಂದ ಬಾಹ್ಯಾಕಾಶಕ್ಕೆ ಕಳುಹಿಸಿದ ಎಲ್ಲದಕ್ಕಿಂತ ದೊಡ್ಡ ಆಬ್ಜೆಕ್ಟ್ ಇದಾಗುತ್ತದೆ. ಬಹಳ ವರ್ಷಗಳಿಂದಲೂ ಅಂತರಿಕ್ಷಕ್ಕೆ ವಸ್ತುಗಳನ್ನು ಕಳುಹಿಸಲು ಪ್ರತಿ ಕೆಜಿಗೆ $8000 ಖರ್ಚಾಗುತ್ತಿತ್ತು. ಆದರೆ ಫಾಲ್ಕನ್ ನೈನ್ ಮರುಬಳಕೆಯ ನಂತರ ಈ ವೆಚ್ಚ ಪ್ರತಿ ಕೆಜಿಗೆ $2000 ಗಳಿಗೆ ಇಳಿದಿದೆ. ಇನ್ನು ಸ್ಪೇಸ್ ಎಕ್ಸ್ ನ ಸ್ಟಾರ್ ಶಿಪ್ ಬಳಕೆ ಮಾಡುವುದರಿಂದ ಈ ವೆಚ್ಚವನ್ನು ಇನ್ನಷ್ಟು ಕಡಿಮೆ ಮಾಡಲು ಸಾಧ್ಯವಿದೆ ಎನ್ನಲಾಗಿದೆ. ಇವುಗಳ ಸಹಾಯದಿಂದ ಭೂಮಿ ಹಾಗೂ ವೊಯೇಜರ್ಸ್ ಸ್ಟೇಷನ್ ನೊಂದಿಗೆ ನಿರಂತರ ಹಾಗೂ ವೇಗವಾದ ಸಂಪರ್ಕವನ್ನು ಸಾಧಿಸಲು ಕೂಡ ಸಾಧ್ಯವಿದೆ ಎನ್ನಲಾಗಿದೆ. ಇದನ್ನು ರಚಿಸುವ ತಂಡದಲ್ಲಿ ನಾಸಾದ ಅನುಭವಿ ಸದಸ್ಯರು, ಪೈಲಟ್ ಗಳು, ವಿಜ್ಞಾನಿಗಳು, ಇಂಜಿನಿಯರ್ ಗಳು ಮತ್ತು ಆರ್ಕಿಟೆಕ್ಟ್ ಗಳು ಇದ್ದಾರೆ ಎನ್ನಲಾಗಿದೆ.

ಈ ಸ್ಟೇಷನ್ ಪ್ರತಿ 90 ನಿಮಿಷಗಳಿಗೊಮ್ಮೆ ಭೂಮಿಯ ಸುತ್ತ ತನ್ನ ಪರಿಕ್ರಮ ವನ್ನು ಪೂರ್ಣಗೊಳಿಸುತ್ತದೆ. ಮೊದಲು ಇದರ ಪ್ರೋಟೋಟೈಪ್ ಸ್ಟೇಷನ್ ಟೆಸ್ಟ್ ಮಾಡಲಾಗುವುದು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ದಂತೆ ಮುಕ್ತವಾಗಿ ಹಾರುವ ಮೈಕ್ರೋ ಗ್ರಾವಿಟಿ ಸೌಲಭ್ಯವನ್ನು ಪರೀಕ್ಷಿಸಬೇಕಾಗಿದೆ. ಇಲ್ಲಿ ಹೆಚ್ಚು ದಿನಗಳ ಕಾಲ ಇರುವವರಿಗೆ ಗುರುತ್ವಾಕರ್ಷಣೆಯ ಅವಶ್ಯಕತೆ ಇರುತ್ತದೆ ಆದ್ದರಿಂದಲೇ ರೊಟೇಶ‌ನ್ ಬಹಳ ಮುಖ್ಯವಾಗಿದೆ. ರೊಟೇಶನ್ ಅನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಮೂಲಕ ಗುರುತ್ವಾಕರ್ಷಣ ಶಕ್ತಿಯನ್ನು ಕೂಡಾ ಹೆಚ್ಚು ಅಥವಾ ಕಡಿಮೆ ಮಾಡಬಹುದು ಎನ್ನಲಾಗಿದೆ.

ಎಲ್ಲಾ ಪರೀಕ್ಷೆಗಳು ಸಂಪೂರ್ಣಗೊಂಡ ಮೇಲೆ ಸ್ಟಾರ್ ( ಸ್ಟ್ರಕ್ಚರ್ ಟ್ರೂಸ್ ಅಸೆಂಬ್ಲಿ ರೋಬೊಟ್) ಇದರ ಫ್ರೇಮ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಸಿದ್ಧಪಡಿಸಲು ಭೂಮಿಯ ಮೇಲೆ ಎರಡು ವರ್ಷಗಳ ಕಾಲಾವಕಾಶ ಬೇಕಿತ್ತು ಸ್ಪೇಸ್ ನಲ್ಲಿ ಮೂರು ದಿನಗಳು ಬೇಕಾಗುತ್ತದೆ ಎನ್ನಲಾಗಿದೆ. ಒಟ್ಟಾರೆ ಭೂಮಿಯ ಹೊರಗೆ ಒಂದು ಐಶಾರಾಮೀ ಹೊಟೇಲ್ ಎನ್ನುವ ಪರಿಕಲ್ಪನೆ ಹಾಲಿವುಡ್ ಸಿನಿಮಾಗಳಲ್ಲಿ ನೋಡಿದ್ದಾಗಿತ್ತು. ಆದರೆ ಅದು ಇನ್ನು ಕೆಲವೇ ವರ್ಷಗಳಲ್ಲಿ ಕಾರ್ಯಗತವಾಗಲಿದೆ ಎನ್ನುವ ವಿಷಯ ಅದ್ಭುತ ಎನಿಸುವುದು ಮಾತ್ರವಲ್ಲದೇ ಬಹಳ ವಿಸ್ಮಯ ಕೂಡಾ ಎನಿಸುತ್ತದೆ. ಇದೊಂದು ಅನೂಹ್ಯ ಪರಿಕಲ್ಪನೆ ಎಂಬುದು ಶೀಘ್ರದಲ್ಲೇ ದೂರಾಗಲಿದೆ.