ದೊಡ್ಡ ಸಂಬಳದ ಉದ್ಯೋಗಕ್ಕೆ ಬೈ ಹೇಳಿ 40 ಹಸುಗಳ ಕೊಂಡು, 90 ಕೋಟಿ ಟರ್ನ್ ಓವರ್ ನ ಉದ್ಯಮ ಕಟ್ಟಿದ 4 ಜನ ಸ್ನೇಹಿತರು!

ಒಂದು ಉತ್ತಮವಾದ ಉದ್ಯೋಗ ಎಂದರೆ ಅದು ಒಳ್ಳೆ ಸಂಬಳವನ್ನು, ಇರಲು ಒಂದು ಆಶ್ರಯವನ್ನು, ಹೊಟ್ಟೆ ತುಂಬ ಊಟವನ್ನು ನೀಡಬಹುದು. ಆದರೆ ಅದು ಆತ್ಮ ತೃಪ್ತಿಯನ್ನು ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಮರಸ್ಯದಿಂದ ಇರುವುದಕ್ಕೆ ಹೊಂದಾಣಿಕೆ ಮಾಡಿಕೊಂಡು ಹೋಗುವುದಾದರೆ ಅದು ನಮ್ಮ ವಿವೇಕಕ್ಕೊಂದು ಸವಾಲನ್ನು ಹಾಕುವುದಿಲ್ಲ ಬದಲಿಗೆ ಒಂದು ನೀರಸ ಜೀವನವನ್ನು ನಮ್ಮ ಮುಂದೆ ಇರಿಸುತ್ತದೆ. ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಮಗ ಅಭಿನವ್ ಶಾಹ್ ಕೂಡಾ ಇಂತಹುದೊಂದು ನೀರಸ ಬದುಕಿನಿಂದ ಬೇಸತ್ತು ಅದರಿಂದ ಹೊರ ಬಂದು ತನ್ನದೇ ಆದ ಉದ್ಯಮವನ್ನು ಆರಂಭಿಸುವ ಯೋಚನೆ ಮಾಡಿದರು. ಒಂಬತ್ತರಿಂದ ಐದರ ಉದ್ಯೋಗ ಅವರಿಗೆ ಸಾಕೆನಿಸಿ ಹೋಗಿತ್ತು. ವೃತ್ತಿಯಿಂದ ಸಿಎ ಆಗಿದ್ದ ಅವರು ಕಡೆಗೂ ತನ್ನ ಹುದ್ದೆಯನ್ನು ಬಿಟ್ಟು ಹೊಸ ಉದ್ದಿಮೆಯ ಕಡೆ ಅಡಿಯಿಟ್ಟಾಗ ಅವರ ಜೊತೆಗೆ ಇನ್ನೂ ಕೆಲವು ಪಾರ್ಟ್ನರ್ ಗಳು ಸೇರಿಕೊಂಡರು.

2012 ರಲ್ಲಿ ಅವರು ಒಂದು ಡೈರಿ ಫಾರ್ಮ್ ಆರಂಭ ಮಾಡಿದರು. 2014 ರಲ್ಲಿ ಅಸ್ಸಾಮ್ ಡೈರೀಸ್ ಹೆಸರಿನಲ್ಲಿ ತಮ್ಮ ಉದ್ಯಮವನ್ನು ನೋಂದಣಿ ಮಾಡಿಸಿದರು. ಅಲ್ಲದೆ ಅವರ ಜೊತೆಗೆ ಅವರ ಇತರ ಪಾಲುದಾರರಾದ ಅಭಿಷೇಕ್ ರಾಜ್, ಹರ್ಷ್ ಠಕ್ಕರ್ ಮತ್ತು ರಾಕೇಶ್ ಶರ್ಮಾ ಅವರೊಂದಿಗೆ ವ್ಯವಹಾರ ನಡೆಸುತ್ತಿದ್ದಾರೆ. ಅಸ್ಸಾಂ ಡೈರೀಸ್ ಸ್ಥಾಪನೆಯ ಆಲೋಚನೆಯನ್ನು ಮಾಡಿದವರೇ ಅದರ ಸಹ ಸಂಸ್ಥಾಪಕನಾಗಿರುವ ಅಭಿನವ್. ಲಕ್ಸೆಂಬರ್ಗ್ ನಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಬೇರೆ ಬೇರೆ ದೇಶಗಳ ಡೈರಿ ಉದ್ಯಮವನ್ನು ಗಮನಿಸಿ ಅದರಿಂದ ಪ್ರೇರಿತರಾಗಿದ್ದರು. ಆದ್ದರಿಂದಲೇ ಅವರು ತಮ್ಮ ಒಂಬತ್ತು ವರ್ಷದ ಉದ್ಯೋಗವನ್ನು ತೊರೆದು ಭಾರತಕ್ಕೆ ಬಂದರು. ಡೈರಿ ಬ್ಯುಸಿನೆಸ್ ಅನ್ನು ಆರಂಭಿಸಲು ಅದರ ರೂಪುರೇಷೆಗಳನ್ನು ಅರಿಯಲು ಅವರು ಕಾನ್ಪುರ ದಲ್ಲಿ ಕಮರ್ಷಿಯಲ್ ಡೈರಿ ಫಾರ್ಮಿಂಗ್ ನ ಕೋರ್ಸ್ ಮಾಡಿದರು.

ತಮ್ಮ ವರ್ಕ್ ಶಾಪ್ ಮುಗಿದ ಕೂಡಲೇ ಅವರು ಪಂಜಾಬ್ ಗೆ ಹೋಗಿ 35 ಲಕ್ಷ ರೂಪಾಯಿಗಳನ್ನು ನೀಡಿ 40 ಹಸುಗಳನ್ನು ಖರೀದಿ ಮಾಡಿದರು. ಇದರಲ್ಲಿ ಎಲ್ಲಾ ಪಾಲುದಾರರ ಬಂಡವಾಳ ಕೂಡಾ ಸೇರಿತ್ತು. ಒಟ್ಟು ಒಂದು ಕೋಟಿ ರೂಪಾಯಿಯ ಬಂಡವಾಳದೊಂದಿಗೆ ಅವರು ಬ್ಯುಸಿನೆಸ್ ಆರಂಭ ಮಾಡಿದರು. ಆದರೆ ಅನುಭವದ ಕೊರತೆಯ ಕಾರಣದಿಂದಾಗಿ ಒಂದು ತಿಂಗಳು ಕಳೆಯುವ ವೇಳೆಗೆ ಅವರು ಖರೀದಿಸಿದ ಹಸುಗಳಲ್ಲಿ ಸಾಂಕ್ರಾಮಿಕ ರೋಗ ಹರಡಿ 26 ಹಸುಗಳು ಸಾವನ್ನಪ್ಪಿದ್ದವು‌. ಇದು ಅವರ ಹೊಸ ಉದ್ಯಮಕ್ಕೊಂದು ದೊಡ್ಡ ಹೊಡೆತವಾಗಿತ್ತು. ಆಗ ಈ ಕ್ಷೇತ್ರದಲ್ಲಿನ ವಿಶೇಷ ತಜ್ಞರನ್ನು ಭೇಟಿ ಮಾಡಿ, ಸಲಹೆ ಪಡೆಯಲು ಆಲೋಚಿಸಿದರು.‌

ಅನಂತರ ಅವರು ಐವತ್ತು ಲಕ್ಷ ಖರ್ಚು ಮಾಡಿ ನೂರು ಹೋಲ್ ಸ್ಟೀನ್ ಫ್ರೀಜಿಯನ್ ಹಸುಗಳನ್ನು ಖರೀದಿ ಮಾಡಿದರು‌. ಅಲ್ಲಿಗೆ ಅವರ ಬಂಡವಾಳ ಹೂಡಿಕೆ 1.5 ಕೋಟಿಗೆ ಏರಿಕೆಯಾಯಿತು. ಆದರೆ ಈ ರಿಸ್ಕ್ ನಿಂದಾಗಿ ಅವರಿಗೆ ಆರು ತಿಂಗಳೊಳಗೆ ಅವರು ಹೂಡಿದ ಬಂಡವಾಳ ವಾಪಸ್ಸು ಬಂದಿತ್ತು. ಅವರ ಪ್ರಾಡಕ್ಟ್ ನ ಬೇಡಿಕೆ ಹೆಚ್ಚಿತು. ಆಗಲೇ ಅವರು 2013 ರಲ್ಲಿ ಅಸ್ಸಾಂ ಡೇರಿಸ್ ಸ್ಥಾಪಿಸಲು ಯೋಚಿಸಿದರು. ಆದರೆ ಅದಕ್ಕೆ 20 ಕೋಟಿಗಳ ದೊಡ್ಡ ಬಂಡವಾಳದ ಅಗತ್ಯ ಇತ್ತು. ಆದರೆ ಬಹಳಷ್ಟು ಪ್ರಯತ್ನಗಳ ನಂತರ ಒಂದು ರಾಷ್ಟ್ರೀಕೃತ ಬ್ಯಾಂಕು ಅವರಿಗೆ ಏಳು ಕೋಟಿ ರೂಪಾಯಿಗಳ ಸಾಲ ನೀಡಲು ಮುಂದಾಯಿತು. ಅಸ್ಸಾಂ ಡೈರೀಸ್ ನಿರ್ಮಾಣ ಆರಂಭವಾಗಿ 2015 ದಲ್ಲಿ ಅದು ಪೂರ್ಣವಾಯಿತು.

ಹೀಗೆ ಉದ್ಯಮ ಬೆಳವಣಿಗೆ ಆದಂತೆ ಅದನ್ನು ಸಹಿಸದ ಸ್ಥಳೀಯ ಗೂಂಡಾಗಳು ಅವರಿಗೆ ಸಮಸ್ಯೆಯಾದರು. ಆದರೆ ಅಭಿನವ್ ಮತ್ತು ಅವರ ತಂಡ ಅದನ್ನು ದಿಟ್ಟವಾಗಿ ಎದುರಿಸಿದರು. ಇಂದು ಅವರ ಡೈರಿ ಉದ್ದಿಮೆಯು ದಿನವೊಂದಕ್ಕೆ ಸುಮಾರು 350 ಗ್ರಾಮಗಳಿಂದ 15 ಸಾವಿರ ರೈತರ ಬಳಿ ಹಾಲನ್ನು ಸಂಗ್ರಹ ಮಾಡುತ್ತಾರೆ. ಪ್ರಸ್ತುತ ಅವರ ಟರ್ನ್ ಓವರ್ ವರ್ಷವೊಂದಕ್ಕೆ 90 ಕೋಟಿಗೆ ತಲುಪಿದೆ. ಅಲ್ಲದೇ ಅವರು 180 ಜನರಿಗೆ ಉದ್ಯೋಗಾವಕಾಶವನ್ನು ಒದಗಿಸಿದೆ. 2013 ರಲ್ಲಿ ಜಾರ್ಖಂಡ್ ಸರ್ಕಾರವು ಇವರ ಉದ್ಯಮಕ್ಕೆ ದಿ ಬೆಸ್ಟ್ ಯಂಗ್ ಡೈರಿ ಅವಾರ್ಡ್ ನೀಡಿ ಸತ್ಕರಿಸಿದೆ.