ರಾತ್ರಿ ಕಾಣಿಸಿ ಮುಂಜಾನೆ ಮಾಯವಾಗುವ ಶಿವನ ದೇಗುಲ; ಈ ದೇವಾಲಯದ ದರ್ಶನ ಮಾಡಿದವರಿಗೆ ಅದೃಷ್ಟವಂತರು ಎಂದು ತಿಳಿಯಲಾಗುತ್ತದೆ!

ಜಗತ್ತಿನಲ್ಲಿ ಅತೀ ಪ್ರಾಚೀನ ಸಂಸ್ಕೃತಿ, ರೂಢಿ, ಪರಂಪರೆಗಳನ್ನು ಹೊಂದಿದ ದೇಶವೆಂದರೆ ನಮ್ಮ ಭಾರತ. ಈ ದೇಶದಲ್ಲಿ ಜಗತ್ತಿನ ಯಾವ ದೇಶಕ್ಕಿಂತಲೂ ಹೆಚ್ಚಿನ ಜಾತಿ, ಮತ, ಪಂಥ, ಧರ್ಮದವರು ಕೂಡಿಕೊಂಡು ಒಮ್ಮತದಿಂದ, ಶಾಂತತೆಯಿಂದ ಬಾಳುತ್ತಾರೆ. ಈ ದೇಶದಲ್ಲಿಯ ಭೌಗೋಳಿಕ ಪರಿಸ್ಥಿತಿ, ಹವಾಮಾನ ಮತ್ತು ವೈವಿಧ್ಯಪೂರ್ಣ ಶ್ರೀಮಂತ ಸಂಸ್ಕೃತಿಯನ್ನು ನೋಡಲು ಅನಾದಿಕಾಲದಿಂದಲೂ ಪ್ರವಾಸಿಗರು ಇಲ್ಲಿ ಆಗಮಿಸುತ್ತಾರೆ. ಇಲ್ಲಿ ಬರುವ ಪ್ರವಾಸಿಗರಿಗೆ ಮುಖ್ಯವಾಗಿ ಆಕರ್ಷಿಸುವ ಪ್ರವಾಸಿ ತಾಣಗಳೆಂದರೆ ಪ್ರಾಚೀನ ದೇಗುಲಗಳು. ಇಲ್ಲಿಯ ಮಂದಿರಗಳು ಮತ್ತು ಅವುಗಳ ವಿಶಿಷ್ಟವಾದ ರಚನೆ ಮಹತ್ವ ಹಾಗೂ ಅದರ ಹಿಂದಿನ ಇತಿಹಾಸವನ್ನು ಅರಿಯುವುದು ಅವರ ಮುಖ್ಯ ಉದ್ದೇಶವಾಗಿರುತ್ತದೆ. ಅಂಥದೇ ಒಂದು ತುಂಬಾ ವಿಶೇಷ ಮತ್ತು ವಿಚಿತ್ರವಾಗಿರುವಂಥ ಶಿವಮಂದಿರದ ಬಗ್ಗೆ ಈ ಲೇಖನದಲ್ಲಿ ತಿಳಿಯುವಾ.

ಗುಜರಾತ್ ರಾಜ್ಯದ ವಡೋದರಾರಿಂದ 300 ಮೈಲಿಗಳ ದೂರ ಅರಬ್ಬಿ ಸಮುದ್ರದಲ್ಲಿ ಈ ದೇಗುಲವಿದೆ. ಇದನ್ನು ಯಾವುದೇ ಸಪಾಟಾದ ಭೂಮಿಯ ಮೇಲೆ ಅಥವಾ ಬೆಟ್ಟ, ಗುಡ್ಡ, ಪರ್ವತದ ಶಿಖರದ ಮೇಲೆ ತಯಾರಿಸದೆ ಸಮುದ್ರದಲ್ಲಿ ನಿರ್ಮಾಣ ಮಾಡಲಾಗಿದೆ.

ಈ ಮಂದಿರದ ವಿಶೇಷತೆಯ ಬಗ್ಗೆ ಕೇಳಿದರೆ ನಿಜಕ್ಕೂ ಅಚ್ಚರಿಯಾಗುವುದು. ಯಾಕೆಂದರೆ ಇದು ದಿನಕ್ಕೆರಡು ಬಾರಿ ಅದೃಶ್ಯವಾಗುತ್ತದೆ. ಮತ್ತೆ ಸ್ವಲ್ಪ ಸಮಯದ ನಂತರ ಅಲ್ಲಿಯೇ ಗೋಚರಿಸುತ್ತದೆ.

ಏನಿದು ರಹಸ್ಯ?

ಈ ದೇಗುಲವು ಸಮುದ್ರದಲ್ಲಿ ನಿರ್ಮಾಣವಾಗಿರುವುದರಿಂದ ಹೀಗೆ ಆಗುತ್ತದೆ. ಯಾಕೆಂದರೆ ಸಮುದ್ರವು ಪೂರ್ಣ ಉಬ್ಬರದ ಸಮಯದಲ್ಲಿ ಈ ದೇಗುಲವು ತನ್ನ ಒಡಲಿನಲ್ಲಿ ಮುಳುಗಿಸಿ ಕೊಳ್ಳುತ್ತದೆ. ಆ ಸಂದರ್ಭದಲ್ಲಿ ಶಿವನ ದರ್ಶನ ಆಗುವುದಿಲ್ಲ. ಮತ್ತೆ ಸ್ವಲ್ಪ ಸಮಯದ ನಂತರ ಉಬ್ಬರವಿಳಿತದಿಂದ ಈ ದೇಗುಲವು ಮೊದಲಿನ ಸ್ಥಾನದಲ್ಲಿ ಮತ್ತೆ ಗೋಚರಿಸುತ್ತದೆ.

ಕೆಲವೊಂದು ಸಲ ಪೂರ್ಣ ಉಬ್ಬರದ ಸಮಯದಲ್ಲಿ ಈ ದೇಗುಲವು ಎಲ್ಲಿದೆ ಎಂಬುದೇ ತಿಳಿದುಬರುವುದಿಲ್ಲ. ಆ ರೀತಿ ಸಮುದ್ರದಲ್ಲಿ ಇದು ಅದೃಶ್ಯವಾಗಿರುತ್ತದೆ. ಮತ್ತೆ ಸ್ವಲ್ಪ ಸಮಯದ ನಂತರ ಸಮುದ್ರದ ನೀರು ಇಳಿಯುತ್ತ ಹೋದಂತೆ ಅದೃಶ್ಯವಾದ ದೇಗುಲವು ಮತ್ತೆ ನಮ್ಮ ಕಣ್ಣಿಗೆ ಗೋಚರಿಸಲು ಪ್ರಾರಂಭವಾಗುತ್ತದೆ. ಇಲ್ಲಿ ಮಹಾಶಿವರಾತ್ರಿಯ ಸಮಯದಲ್ಲಿ ದೊಡ್ಡ ಜಾತ್ರೆ ನೆರವೇರುತ್ತದೆ. ಈ ಪವಿತ್ರ ಮತ್ತು ಅದ್ಭುತ ಸ್ಥಾನವನ್ನು ನೋಡಲು ವಿದೇಶಗಳಿಂದಲೂ ಜನರು ಬರುತ್ತಾರೆ. ಇಲ್ಲಿಯ ಶಿವಲಿಂಗದ ದರ್ಶನ ಲಭಿಸುವ ವ್ಯಕ್ತಿ ನಿಜಕ್ಕೂ ಭಾಗ್ಯವಂತನೆಂದು ಹೇಳಲಾಗುತ್ತದೆ.